ADVERTISEMENT

ವಿಶ್ಲೇಷಣೆ: ಉದ್ಯೋಗಾವಕಾಶ ಸೃಷ್ಟಿ ಈ ಕ್ಷಣದ ತುರ್ತು

ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಮಾರ್ಗೋಪಾಯ ಶೋಧಿಸಬೇಕಿದೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 0:24 IST
Last Updated 19 ಅಕ್ಟೋಬರ್ 2024, 0:24 IST
   

ಒಂದು ದೇಶದ ನಿರುದ್ಯೋಗದ ಸ್ಥಿತಿ ಆ ದೇಶದ ಆರ್ಥಿಕತೆಯ ನೈಜ ಸ್ಥಿತಿಗೆ ಕನ್ನಡಿ ಇದ್ದ ಹಾಗೆ. ನಿರುದ್ಯೋಗ, ಅಸಮಾನತೆ, ಬಡತನ, ಹಸಿವು ವ್ಯಾಪಕವಾಗಿದ್ದರೆ ಆ ದೇಶದಲ್ಲೇನೋ ಮೂಲಭೂತ ಸಮಸ್ಯೆ ಇದೆ ಅಂತಲೇ ಅರ್ಥ. ಅರ್ಥಶಾಸ್ತ್ರಜ್ಞರಿಗೆ, ಜನಪ್ರತಿನಿಧಿಗಳಿಗೆ ಮತ್ತು ನಾಗರಿಕರಿಗೆ ಇವು ಅತ್ಯಂತ ಕಾಳಜಿಯ ವಿಷಯಗಳಾಗಿರು ತ್ತವೆ. ಭಾರತದಲ್ಲೂ ನಿರುದ್ಯೋಗ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ಸೂಕ್ತ ನೀತಿಗಳನ್ನು ರೂಪಿಸಲು ಸರ್ಕಾರಗಳು ನಿಯಮಿತವಾಗಿ ಸಮೀಕ್ಷೆಗಳನ್ನು ನಡೆಸಿ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಲೇ ಇವೆ.

ನಮ್ಮ ಕೇಂದ್ರ ಸರ್ಕಾರವು ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಎನ್‌ಎಸ್‌ಎಸ್‌ಒ) ಮೂಲಕ ‘ಪೀರಿಯಾಡಿಕ್‌ ಲೇಬರ್‌ ಫೋರ್ಸ್‌ ಸರ್ವೆ’ (ಪಿಎಲ್‌ಎಫ್‌ಎಸ್) ಮಾಡಿಸುತ್ತದೆ. ವಾರ್ಷಿಕ ಹಾಗೂ ಸಾಪ್ತಾಹಿಕ ವರದಿಯನ್ನು ಎನ್‌ಎಸ್‌ಎಸ್‌ಒ ಬಿಡುಗಡೆ ಮಾಡುತ್ತದೆ. ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ) ಎಂಬ ಸ್ವತಂತ್ರ ಸಂಸ್ಥೆ ಕೂಡ ಉದ್ಯೋಗದ ಸ್ಥಿತಿಗತಿ ಬಗ್ಗೆ ಪ್ರತಿ ತಿಂಗಳೂ ಮಾಹಿತಿಯನ್ನು ಪ್ರಕಟಿಸುತ್ತದೆ. ಹಾಗೆಯೇ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಸಹ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡುತ್ತದೆ.

ನಿರುದ್ಯೋಗದ ಸ್ಥಿತಿಯನ್ನು ಅಳೆಯುವುದು ಕಷ್ಟದ ಕೆಲಸ. ಸಾಮಾನ್ಯವಾಗಿ ಒಂದು ವಾರದಲ್ಲಿ, ತಿಂಗಳಲ್ಲಿ ಅಥವಾ ವರ್ಷದಲ್ಲಿ ಎಷ್ಟು ಕಾಲ ಕೆಲಸದಲ್ಲಿ ನಿರತರಾಗಿದ್ದರು ಅನ್ನುವುದನ್ನು ಆಧರಿಸಿ ಉದ್ಯೋಗ
ನಿರತರೋ ಅಲ್ಲವೋ ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಬೇರೆ ಬೇರೆ ಸಂಸ್ಥೆಗಳು ನಿರುದ್ಯೋಗವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತವೆ.  ಉದಾಹರಣೆಗೆ, ಪಿಎಲ್‌ಎಫ್‌ಎಸ್ ವಾರ್ಷಿಕ ಸಮೀಕ್ಷೆಗೆ ವರ್ಷದಲ್ಲಿ ಜನ ಎಷ್ಟು ದಿನ ಉದ್ಯೋಗನಿರತರು ಅನ್ನುವುದು ಆಧಾರ. ಅದನ್ನು ಆಧರಿಸಿ ಉದ್ಯೋಗಿಯೋ ನಿರುದ್ಯೋಗಿಯೋ ಅನ್ನುವುದನ್ನು ನಿರ್ಧರಿಸಲಾಗುತ್ತದೆ. ಗೃಹಕೃತ್ಯದಲ್ಲಿ ಸಂಬಳವಿಲ್ಲದೆ ದುಡಿಯುವ ಮಹಿಳೆಯರನ್ನೂ ಆ ಸಮೀಕ್ಷೆಯು ಉದ್ಯೋಗಿಗಳ ಪಟ್ಟಿಗೆ ಸೇರಿಸುತ್ತದೆ. ವರಮಾನವಿಲ್ಲದ ದುಡಿಮೆಯನ್ನು ಉದ್ಯೋಗ ಎಂದು ಐಎಲ್‌ಒ ಹಾಗೂ ಸಿಎಂಐಇ ಪರಿಗಣಿಸುವುದಿಲ್ಲ. ಹಾಗಾಗಿ, ಸ್ವಾಭಾವಿಕವಾಗಿಯೇ ಇವುಗಳ ಅಂಕಿಅಂಶಗಳಲ್ಲೂ ವ್ಯತ್ಯಾಸವಿರುತ್ತದೆ.  

ADVERTISEMENT

ಇಂತಹ ವ್ಯತ್ಯಾಸಗಳನ್ನು ಗಮನದಲ್ಲಿಟ್ಟು ಈ ಸಮೀಕ್ಷೆಗಳನ್ನು ಪರಿಶೀಲಿಸಿದರೆ, ನಿರುದ್ಯೋಗ ಪ್ರಮಾಣ ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತದೆ. ಆಹಾರಧಾನ್ಯಗಳ ತಲಾ ಬಳಕೆ, ಕೊಳ್ಳುವ ಶಕ್ತಿ ಕಮ್ಮಿಯಾಗಿ
ರುವಂತಹ ಮಾಹಿತಿಗಳು ಕೂಡ ನಿರುದ್ಯೋಗ ಹೆಚ್ಚಳದ ಸಾಧ್ಯತೆಯನ್ನು ಪರೋಕ್ಷವಾಗಿ ಸೂಚಿಸುತ್ತವೆ. ಜಾಗತಿಕವಾಗಿ ನೋಡಿದರೆ ಭಾರತದಲ್ಲಿ ದುಡಿಮೆಯಲ್ಲಿ ಪಾಲ್ಗೊಳ್ಳುತ್ತಿರುವ ಕಾರ್ಮಿಕರ ಶೇಕಡಾವಾರು ಪ್ರಮಾಣ ಕಡಿಮೆ ಇದೆ. ಆರ್ಥಿಕ ಬೆಳವಣಿಗೆಯಲ್ಲಿ ನಮ್ಮ ಮಟ್ಟದಲ್ಲೇ ಇರುವ ದೇಶಗಳಿಗೆ ಹೋಲಿಸಿದರೂ ಇದು ಕಡಿಮೆಯೇ. ಅದರಲ್ಲಿ ಅರ್ಧಕ್ಕೂ ಹೆಚ್ಚು ಜನ ಸ್ವಉದ್ಯೋಗದಲ್ಲಿ ನಿರತರಾಗಿರುವವರು. ಅದರಲ್ಲೂ ಕೌಟುಂಬಿಕ ಉದ್ದಿಮೆಗಳಲ್ಲಿ ವೇತನವಿಲ್ಲದೆ ದುಡಿಯುತ್ತಿರುವ ಮಹಿಳೆಯರ ಪ್ರಮಾಣ ಗಣನೀಯ. ಅಷ್ಟೇ ಅಲ್ಲ, ಅಂತಹವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. 2017– 18 ಹಾಗೂ 2022– 23ರ ಅವಧಿಯಲ್ಲಿ ಅದು ಶೇ 18ರಷ್ಟು ಹೆಚ್ಚಾಗಿದೆ.

ಹತ್ತು ಮಹಿಳೆಯರಲ್ಲಿ ಒಬ್ಬರ ದುಡಿಮೆಗೆ ವೇತನ ಸಿಗುತ್ತಿದೆ. ಈ ಅವಧಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುವುದಕ್ಕೆ ಹಲವು ವಿವರಣೆಗಳು ಸಾಧ್ಯ. ಇದು, ಆರ್ಥಿಕ ಅಭಿವೃದ್ಧಿ ಕುಸಿತ ಕಂಡಿದ್ದ ಸಮಯ. ಕುಟುಂಬದ ವರಮಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮಹಿಳೆಯರೂ ದುಡಿಯುವುದು ಅನಿವಾರ್ಯವಾಗಿತ್ತು. ವೇತನ ಸಿಗುವ ಉದ್ಯೋಗವನ್ನಷ್ಟೇ ಪರಿಗಣಿಸಿದರೆ, ಹಿಂದಿನ ದಶಕದಲ್ಲಿ ಉದ್ಯೋಗ ಅವಕಾಶಗಳ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ಇನ್ನೂ ಆತಂಕದ ವಿಷಯವೆಂದರೆ, ಭಾರತದಲ್ಲಿ ಯುವಕ–ಯುವತಿಯರು ಹೆಚ್ಚೆಚ್ಚು ನಿರುದ್ಯೋಗಿಗಳಾಗುತ್ತಿದ್ದಾರೆ, ಕೆಲಸ ಸಿಗುವ ಭರವಸೆಯನ್ನೂ ಕಳೆದುಕೊಳ್ಳುತ್ತಿದ್ದಾರೆ.

ಉದ್ಯೋಗದ ಬಿಕ್ಕಟ್ಟು ತೀವ್ರವಾಗುತ್ತಿರುವುದಕ್ಕೆ ಹಲವು ವಿವರಣೆಗಳು ಗ್ರಹಿಕೆಗೆ ನಿಲುಕುತ್ತವೆ. ಮೊದಲನೆಯದಾಗಿ, ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಿಂದ ಜನ ಕೆಲಸ ಹುಡುಕಿಕೊಂಡು ನಗರಗಳಿಗೆ ಬರುತ್ತಿದ್ದಾರೆ. ಉತ್ಪಾದನಾ ಕ್ಷೇತ್ರದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗದೆ ಅಲ್ಲೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ನಿರ್ಮಾಣ ಹಾಗೂ ಸೇವಾ ಕ್ಷೇತ್ರದಲ್ಲೂ ಇವರಿಗೆಲ್ಲಾ ಅವಕಾಶ ಮಾಡಿಕೊಡುವಷ್ಟು ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಕಾರ್ಮಿಕರು ಸಿಕ್ಕ ಕೆಲಸಕ್ಕೆ ಸೇರಿಕೊಳ್ಳುವುದು ಅನಿವಾರ್ಯ ಆಗುತ್ತದೆ. ಇಂದು ಒಟ್ಟಾರೆ ಉದ್ಯೋಗಸ್ಥರಲ್ಲಿ ದಿನಗೂಲಿ ಕಾರ್ಮಿಕರು, ಸ್ವ-ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರೊಂದಿಗೆ ಸಾಮಾಜಿಕ ಅಭದ್ರತೆಯೂ ಹೆಚ್ಚುತ್ತಿದೆ. ಸಿಎಂಐಇ ಅಂಕಿ ಅಂಶಗಳನ್ನು ಗಮನಿಸಿದರೆ ಇನ್ನೂ ಒಂದು ಅಂಶ ಕಾಣುತ್ತದೆ. ಹಿಂದಿನ 5 ವರ್ಷಗಳಲ್ಲಿ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಸುಮಾರಾಗಿ 40 ಕೋಟಿ ಇದೆ. ಹೆಚ್ಚು– ಕಡಿಮೆ ಆಗುತ್ತಿಲ್ಲವೆಂದರೆ ಹೊಸ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದೇ ಅರ್ಥ. ಆದರೆ ಕೆಲಸ ಹುಡುಕುತ್ತಿರುವವರ ಪಟ್ಟಿಗೆ ಹೊಸಬರು ಸೇರ್ಪಡೆ ಆಗುತ್ತಲೇ ಇದ್ದಾರೆ. ಅವರಿಗೆ ಉದ್ಯೋಗವನ್ನು ಒದಗಿ ಸುವುದಕ್ಕೆ ನಮ್ಮ ಆರ್ಥಿಕತೆಗೆ ಸಾಧ್ಯವಾಗುತ್ತಿಲ್ಲ.

ನಿರಂತರವಾಗಿ ಏರುತ್ತಿರುವ ಉದ್ಯೋಗದ ಬೇಡಿಕೆಗೆ ಸ್ಪಂದಿಸುವುದು ಹೇಗೆ? ಹಲವರ ದೃಷ್ಟಿಯಲ್ಲಿ ಆರ್ಥಿಕ ಪ್ರಗತಿಯೊಂದೇ ಪರಿಹಾರ. ಆದರೆ ಆರ್ಥಿಕ ಪ್ರಗತಿಯು ನಿರುದ್ಯೋಗ ನಿವಾರಣೆಗೆ ಪರಿಹಾರವಾಗುತ್ತದೆ ಅನ್ನುವ ಖಾತರಿಯಿಲ್ಲ. 2018– 19ಕ್ಕೆ ಹೋಲಿಸಿದರೆ 2022– 23ರಲ್ಲಿ ಜಿಡಿಪಿ ಪ್ರಮಾಣದಲ್ಲಿ ಶೇ 12.95ರಷ್ಟು ಹೆಚ್ಚಳವಾಗಿದೆ. ಆದರೆ ಉದ್ಯೋಗಸ್ಥರ ಸಂಖ್ಯೆ ಆ ಪ್ರಮಾಣದಲ್ಲಿ ಏರಿಲ್ಲ. ಅದಕ್ಕೆ ಎರಡು ಕಾರಣಗಳಿರಬಹುದು. ಒಂದು, ಬೆಳವಣಿಗೆಯ ಪ್ರಕ್ರಿಯೆಯಲ್ಲೇ ಸಮಸ್ಯೆ ಇರಬಹುದು. ಅಂದರೆ ಬೆಳವಣಿಗೆಯು ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸದಿರುವ ಕ್ಷೇತ್ರಗಳಿಗೆ ಸೀಮಿತವಾಗಿದೆ. ಹೆಚ್ಚು ಉದ್ಯೋಗ ಸೃಷ್ಟಿಸುವ ಸಣ್ಣ ಹಾಗೂ ಕಿರು ಪ್ರಮಾಣದ ಉದ್ದಿಮೆಗಳಲ್ಲಿ ಬೆಳವಣಿಗೆ
ಆಗಿಲ್ಲ. ಹಾಗಾಗಿ, ಬೆಳವಣಿಗೆ ಯಾವ ಕ್ಷೇತ್ರದಲ್ಲಿ ಆಗುತ್ತದೆ ಅನ್ನುವುದೂ ಮುಖ್ಯವಾಗುತ್ತದೆ.

ಉದ್ಯೋಗದ ಪ್ರಮಾಣ ಕಡಿಮೆಯಾಗುವುದಕ್ಕೆ ಇನ್ನೂ ಒಂದು ಕಾರಣ ಇರಬಹುದು. ಬೇಡಿಕೆಯ ಕೊರತೆಯಿಂದ ಅಥವಾ ಸರ್ಕಾರದ ನೀತಿಯಿಂದ ಕೆಲಸಗಾರರು ಕೆಲಸ ಕಳೆದುಕೊಂಡಿರಬಹುದು. ಉದಾಹರಣೆಗೆ, 2019– 20ರಲ್ಲಿ ಒಟ್ಟು ಉದ್ಯೋಗದಲ್ಲಿದ್ದವರ ಸಂಖ್ಯೆ 40.89 ಕೋಟಿ ಇತ್ತು. 2023ರ ಮಾರ್ಚ್‌ನಲ್ಲಿ ಅದು 40.76 ಕೋಟಿಗೆ ಇಳಿಯಿತು. ಹಾಗಾಗಿ, ದೊಡ್ಡ ಉದ್ದಿಮೆಗಳಿಗೆ ತೆರಿಗೆ ಕಡಿತ, ಸಬ್ಸಿಡಿಯಂತಹ ಉತ್ತೇಜನಗಳಿಂದ ಹೂಡಿಕೆ ಹೆಚ್ಚಿದರೂ ಜಿಡಿಪಿ ಬೆಳೆಯಬಹುದೇ ವಿನಾ ಉದ್ಯೋಗ ಸೃಷ್ಟಿಯಾಗುವ, ಹೂಡಿಕೆ ಹೆಚ್ಚುವ ಸಾಧ್ಯತೆ ಕಡಿಮೆ. ಯಾಕೆಂದರೆ ಹೂಡಿಕೆಯು ಬಹುಮಟ್ಟಿಗೆ ಆರ್ಥಿಕತೆಯಲ್ಲಿನ ಬೇಡಿಕೆಯನ್ನು ಆಧರಿಸಿರುತ್ತದೆ. ಬೇಡಿಕೆ ಹೆಚ್ಚದೆ ಹೂಡಿಕೆ ಹೆಚ್ಚುವುದಿಲ್ಲ. ಬದಲಿಗೆ ತೆರಿಗೆ ಕಡಿತದಿಂದ ಒಟ್ಟಾರೆ ತೆರಿಗೆ ಸಂಗ್ರಹ ಕಡಿಮೆಯಾಗುತ್ತದೆ. ಕೊರತೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಜನಕಲ್ಯಾಣ ಕಾರ್ಯಕ್ರಮಗಳಿಗೆ ಕತ್ತರಿ ಬೀಳುವುದರಿಂದ ಜನರ ಕೊಳ್ಳುವ ಶಕ್ತಿ ಇನ್ನಷ್ಟು ಕಡಿಮೆಯಾಗಿ ಸಮಗ್ರ ಬೇಡಿಕೆ ಮತ್ತೂ ಕಡಿಮೆಯಾಗಬಹುದು.

ಪರ್ಯಾಯವೆಂದರೆ, ಬೇಡಿಕೆ ಹೆಚ್ಚಿಸುವುದಕ್ಕೆ ಸರ್ಕಾರವು ಯೋಜನೆಗಳನ್ನು ರೂಪಿಸಬೇಕು, ಉದ್ಯೋಗಾವಕಾಶ ಹೆಚ್ಚಿಸಬೇಕು. ಮೊದಲಿಗೆ, ಖಾಲಿ ಹುದ್ದೆಗಳನ್ನು ತುಂಬಬೇಕು. ಶಿಕ್ಷಣ, ಆರೋಗ್ಯದಂತಹ ಅವಶ್ಯಕ ಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು. ನಗರಗಳಲ್ಲೂ ಉದ್ಯೋಗ ಖಾತರಿ ಯೋಜನೆಗಳನ್ನು ರೂಪಿಸಬೇಕು. ಕಿರು ಹಾಗೂ ಸಣ್ಣ ಉದ್ದಿಮೆಗಳನ್ನು ಅಭಿವೃದ್ಧಿಪಡಿಸಬೇಕು. ನಿರ್ಮಾಣ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಕಡಿಮೆ ವರಮಾನದ ಮನೆಗಳು ಹಾಗೂ ಮೂಲಸೌಕರ್ಯ ನಿರ್ಮಾಣ, ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವ ಸೇವಾ ಕ್ಷೇತ್ರಗಳಂತಹ ಉದ್ಯೋಗವನ್ನು ಹೆಚ್ಚಿಸುವ ಕ್ಷೇತ್ರಗಳನ್ನು ಬೆಳೆಸುವುದು ಸರ್ಕಾರಗಳ ಆದ್ಯತೆಯಾಗಬೇಕು. ಇವೆಲ್ಲ ಖಾಸಗಿ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತವೆ.

ಉತ್ತಮ ಗುಣಮಟ್ಟದ ಉದ್ಯೋಗವು ಆರ್ಥಿಕತೆಯ ಗುರಿ. ಘೋಷಣೆಗಳಿಂದ ಅದನ್ನು ಸಾಧಿಸುವುದಕ್ಕೆ ಸಾಧ್ಯವಿಲ್ಲ. ಗಂಭೀರ ಚರ್ಚೆಯಿಂದ, ಇತರರ ಅನುಭವದಿಂದ, ಪ್ರಯೋಗಗಳಿಂದ ಹಾದಿಯನ್ನು ಕಂಡುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.