ADVERTISEMENT

ಅನುಭವ ಮಂಟಪ | ಪಶ್ಚಿಮ ಘಟ್ಟ: ರಾಜ್ಯಗಳ ಸ್ಥಿತಿಗತಿ ಏನು?

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 21:00 IST
Last Updated 1 ಆಗಸ್ಟ್ 2022, 21:00 IST
ಕೇರಳದಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ವಯನಾಡ್‌ನ ಹಳ್ಳಿಯೊಂದರ ಮಹಿಳೆ ಸೌದೆ ಹೊತ್ತು ಸಾಗಿದರು
ಕೇರಳದಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ವಯನಾಡ್‌ನ ಹಳ್ಳಿಯೊಂದರ ಮಹಿಳೆ ಸೌದೆ ಹೊತ್ತು ಸಾಗಿದರು   

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಘೋಷಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಕರಡು ಅಧಿಸೂಚನೆಗೆ ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೀಗೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಮತ್ತು ಗೋವಾ ನಂತರದಲ್ಲಿವೆ.

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸುವುದಕ್ಕೆ ಸಂಬಂಧಿಸಿದ ಅಧ್ಯಯನವು 2010ರಲ್ಲಿ ಆರಂಭವಾಗಿತ್ತು. ಆದರೆ, ಈ ಅಧ್ಯಯನಕ್ಕೆ 2001ರ ಜನಗಣತಿಯನ್ನು ದತ್ತಾಂಶಗಳನ್ನು ಆಧಾರವಾಗಿ ಪರಿಗಣಿಸಲಾಗಿತ್ತು. ಅಧ್ಯಯನ ಆರಂಭಿಸಿದಾಗಲೇ 10 ವರ್ಷಗಳಷ್ಟು ಹಳೆಯ ದತ್ತಾಂಶಗಳನ್ನು ಬಳಸಿಕೊಳ್ಳಲಾಗಿತ್ತು. ಅದರ ಆಧಾರದಲ್ಲಿಯೇ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸುವ ಕರಡು ಅಧಿಸೂಚನೆ ಯನ್ನು ಹೊರಡಿಸಲಾಗಿತ್ತು. ಕರಡು ಅಧಿಸೂಚನೆ ಬರುವ ಹೊತ್ತಿಗಾಗಲೇ, ಅದಕ್ಕೆ ಆಧಾರವಾಗಿ ಬಳಸಿಕೊಂಡಿದ್ದ ದತ್ತಾಂಶವು 14 ವರ್ಷಗಳಷ್ಟು ಹಳೆಯದಾಗಿತ್ತು. ಕಳೆದ ಬಾರಿ ಕರಡು ಅಧಿಸೂಚನೆ ಹೊರಡಿಸಿದಾಗ ದತ್ತಾಂಶವು 18 ವರ್ಷಗಳಷ್ಟು ಹಳತಾಗಿತ್ತು ಎಂದು ಈ ರಾಜ್ಯಗಳು ಹೇಳಿವೆ.

ಈಗ ಆ ದತ್ತಾಂಶವು 22 ವರ್ಷಗಳಷ್ಟು ಹಳೆಯದಾಗಿದೆ. ವಾಸ್ತವ ಸ್ಥಿತಿ ಅದಕ್ಕಿಂತಲೂ ಭಿನ್ನವಾಗಿದೆ. 2001ರಲ್ಲಿ ಇದ್ದುದ್ದಕ್ಕಿಂತ, ಆ ಎಲ್ಲಾ ಪ್ರದೇಶಗಳು ಅಭಿವೃದ್ಧಿಯಲ್ಲಿ ಮುಂದೆ ಸಾಗಿವೆ. ಜನಸಂಖ್ಯೆಯೂ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ 22 ವರ್ಷಗಳಷ್ಟು ಹಳೆಯ ದತ್ತಾಂಶಗಳ ಆಧಾರದಲ್ಲಿ ಮಾಡಿದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವುದು ಎಷ್ಟು ಸರಿ ಎಂಬುದು ರಾಜ್ಯ ಸರ್ಕಾರಗಳ ಪ್ರಮುಖ ಆಕ್ಷೇಪಗಳಲ್ಲಿ ಒಂದು. ಇವುಗಳ ಹೊರತಾಗಿ ರಾಜ್ಯಗಳು ತಮ್ಮದೇ ಆದ ಪ್ರತ್ಯೇಕ ಆಕ್ಷೇಪಗಳನ್ನು ವ್ಯಕ್ತಪಡಿಸಿವೆ ಮತ್ತು ತಿದ್ದುಪಡಿಗಳನ್ನು ಬಯಸಿವೆ. ಇವು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭಿನ್ನವಾಗಿವೆ.

ADVERTISEMENT

ಮಹಾರಾಷ್ಟ್ರ: ವ್ಯಾಪಕ ಪ್ರತಿರೋಧ

2018ರಲ್ಲಿ ಹೊರಡಿಸಲಾಗಿದ್ದ ಕರಡು ಅಧಿಸೂಚನೆಯಲ್ಲಿ ರಾಜ್ಯದ 17,340 ಚದರ ಕಿ.ಮೀ.ನಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿತ್ತು. ಆ ಕರಡು ಅಧಿಸೂಚನೆಗೆ ಆಕ್ಷೇಪವನ್ನು ಸಲ್ಲಿಸಿದ್ದ ಮಹಾರಾಷ್ಟ್ರ ಸರ್ಕಾರವು, ರಾಜ್ಯದಲ್ಲಿನ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು 15,359 ಚದರ ಕಿ.ಮೀ.ಗೆ ಇಳಿಸುವಂತೆ ಮನವಿ ಮಾಡಿಕೊಂಡಿತ್ತು. ಆದರೆ ಈಗ ಹೊರಡಿಸಲಾಗಿರುವ ಕರಡು ಅಧಿಸೂಚನೆಯಲ್ಲೂ 17,340 ಚದರ ಕಿ.ಮೀ. ಪ್ರದೇಶವನ್ನೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಈ ಅಧಿಸೂಚನೆಗೂ, ಈ ಹಿಂದಿನಂತೆಯೇ ಆಕ್ಷೇಪಗಳನ್ನು ಮಹಾರಾಷ್ಟ್ರ ಸರ್ಕಾರವು ಸಲ್ಲಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಈ ಹಿಂದಿನ ಅಧಿಸೂಚನೆಯಲ್ಲಿ ರಾಜ್ಯದ 2,133 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿದ್ದವು. ಈ ಪಟ್ಟಿಯಿಂದ 388 ಗ್ರಾಮಗಳನ್ನು ಕೈಬಿಡಬೇಕು ಎಂದು ರಾಜ್ಯ ಸರ್ಕಾರವು ಹೇಳಿತ್ತು. ಜತೆಗೆ ಹೆಚ್ಚುವರಿಯಾಗಿ 347 ಬೇರೆ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವಂತೆ ಕೋರಿತ್ತು. ಈಗ ಹೊರಡಿಸಲಾಗಿರುವ ಅಧಿಸೂಚನೆಯಲ್ಲೂ 2,133 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಈ ಬಗ್ಗೆಯೂ ಮತ್ತೆ ಆಕ್ಷೇಪ ಸಲ್ಲಿಸಲು ರಾಜ್ಯ ಸರ್ಕಾರವು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಮಹಾರಾಷ್ಟ್ರ ಸರ್ಕಾರವು ಕೈಬಿಡುವಂತೆ ಸೂಚಿಸಿದ್ದ 388 ಗ್ರಾಮಗಳಲ್ಲಿ, 55 ಗ್ರಾಮಗಳು ‘ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ’ದ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಈ ಗ್ರಾಮಗಳಲ್ಲಿ ನಿಗಮವು ಈಗಾಗಲೇ ಹಲವು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮೂಲಕ, ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. ಇವುಗಳನ್ನು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಿದರೆ, ಕೈಗಾರಿಕೆಗಳ ಬೆಳವಣಿಗೆಗೆ ಅಡಚಣೆಯಾಗುತ್ತದೆ ಎಂದು ರಾಜ್ಯ ಸರ್ಕಾರವು ಪ್ರತಿಪಾದಿಸಿತ್ತು. ಈ ಗ್ರಾಮಗಳನ್ನೂ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಈ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ.

ಗೋವಾ: ಬದಲಾವಣೆಗೆ ಒತ್ತಾಯ

ಕೇಂದ್ರ ಸರ್ಕಾರವು ಹೊರಡಿಸಿರುವ ‍ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಯನ್ನು ತಿರಸ್ಕರಿಸುವುದಾಗಿ ಗೋವಾದ ಹಲವು ಶಾಸಕರು ಹೇಳಿದ್ದಾರೆ. ರಾಜ್ಯದ 99 ಗ್ರಾಮಗಳನ್ನು ಈ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದರೆ ಈ ಗ್ರಾಮಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತವಾಗಲಿವೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರಡು ಅಧಿಸೂಚನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಆಕ್ಷೇಪಗಳನ್ನು ಸಲ್ಲಿಸಲಾಗುವುದು ಎಂದು ಆಡಳಿತ ಪಕ್ಷದ ನಾಯಕರು ಹೇಳಿದ್ದಾರೆ.

ಗೋವಾ ಅರಣ್ಯ ಸಹಕಾರ ನಿಗಮದ ಅಧ್ಯಕ್ಷೆ ದಿವ್ಯಾ ರಾಣೆ ಅವರು ಕರಡು ಅಧಿಸೂಚನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ವಿಧಾನಸಭಾ ಕ್ಷೇತ್ರದ 55 ಹಳ್ಳಿಗಳು ಉದ್ದೇಶಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಈ ಹಳ್ಳಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಣಿಗಾರಿಕೆ ಪ್ರಧಾನ ಉದ್ಯೋಗವಾಗಿದೆ. ಅವುಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದರೆ, ಅವಧಿ ಮುಗಿದ ನಂತರ ಗಣಿಗಾರಿಕೆ ನಿಲ್ಲಿಸಬೇಕಾಗುತ್ತದೆ. ಹೀಗಾಗಿಯೇ ಇಲ್ಲಿ ವಿರೋಧ ವ್ಯಕ್ತವಾಗುತ್ತಿದೆ ಎಂದು ‘ದಿ ಗೋವನ್’ ಪತ್ರಿಕೆ ವರದಿ ಮಾಡಿದೆ.

*ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗುರುತಿಸಿರುವ ರಾಜ್ಯದ ಪ್ರದೇಶದ
ವಿಸ್ತೀರ್ಣ:1,461ಚದರ ಕಿ.ಮೀ.

*ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವಗ್ರಾಮಗಳ ಸಂಖ್ಯೆ:99

ಗುಜರಾತ್‌ನಲ್ಲಿ ಆಕ್ಷೇಪವಿಲ್ಲ

ಉದ್ದೇಶಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲೇ, ಅತ್ಯಂತ ಕಡಿಮೆ ವಿಸ್ತೀರ್ಣದ ಪ್ರದೇಶ ಹೊಂದಿರುವ ರಾಜ್ಯ ಗುಜರಾತ್. ಆರು ರಾಜ್ಯಗಳಲ್ಲಿ ಹರಡಿರುವ ಪಶ್ಚಿಮ ಘಟ್ಟದ ಒಟ್ಟು ಉದ್ದೇಶಿತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ, ಗುಜರಾತ್‌ನಲ್ಲಿ ಗುರುತಿಸಲಾಗಿರುವ ಪ್ರದೇಶದ ಪ್ರಮಾಣ ಶೇ 0.80ರಷ್ಟು ಮಾತ್ರ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ದಕ್ಷಿಣ ಗುಜರಾತ್‌ನ ಮೂರು ಜಿಲ್ಲೆಗಳಲ್ಲಷ್ಟೇ ಪಶ್ಚಿಮ ಘಟ್ಟ ವ್ಯಾಪಿಸಿದೆ. ಅದೂ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಪಶ್ಚಿಮ ಘಟ್ಟವಿದೆ. ರಾಜ್ಯದ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆ ಕೇಂದ್ರಗಳಲ್ಲಿ ಒಂದಾಗಿರುವ ಸೂರತ್‌ನ ಕೆಲವು ಪ್ರದೇಶಗಳು ಸಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತವೆ. ಈವರೆಗಿನ ಮೂರೂ ಕರಡು ಅಧಿಸೂಚನೆಗಳಿಗೆ ಗುಜರಾತ್ ಸರ್ಕಾರವು ಯಾವುದೇ ಆಕ್ಷೇಪ ಸಲ್ಲಿಸಿಲ್ಲ.

*ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗುರುತಿಸಿರುವ ರಾಜ್ಯದ ಪ್ರದೇಶದ ವಿಸ್ತೀರ್ಣ:449 ಚದರ ಕಿ.ಮೀ.

*ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಂಖ್ಯೆ:64

ತಮಿಳುನಾಡು

ಪಶ್ಚಿಮ ಘಟ್ಟದ ಉದ್ದೇಶಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ತಮಿಳುನಾಡಿನ ಪ್ರದೇಶದ ಪ್ರಮಾಣ 6,914 ಚದರ ಕಿ.ಮೀ. ಇಷ್ಟು ವಿಸ್ತಾರವಾದ ಪ್ರದೇಶವು ಉದ್ದೇಶಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಇದ್ದರೂ, 138 ಗ್ರಾಮಗಳಷ್ಟೇ ಅದರಲ್ಲಿ ಬರುತ್ತವೆ. ಇದರಲ್ಲಿ ಗುರುತಿಸಲಾಗಿರುವ ಪ್ರದೇಶದಲ್ಲಿ ಹೆಚ್ಚಿನ ಪಾಲು ಅರಣ್ಯವಾಗಿದೆ. ಈವರೆಗಿನ ಕರಡು ಅಧಿಸೂಚನೆಗಳಿಗೆ ತಮಿಳುನಾಡು ಸರ್ಕಾರವು ಗಣನೀಯವಾದ ಆಕ್ಷೇಪವನ್ನು ಸಲ್ಲಿಸಿಲ್ಲ. ಮೊದಲ ವರದಿಗೆ ಸಲ್ಲಿಸಿದ್ದ ಆಕ್ಷೇಪದಲ್ಲಿ, ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಲು ಕೋರಿತ್ತು.

*ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗುರುತಿಸಿರುವ ರಾಜ್ಯದ ಪ್ರದೇಶದ ವಿಸ್ತೀರ್ಣ:6,914ಚದರ ಕಿ.ಮೀ.

*ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಂಖ್ಯೆ:138

ಭೌತಿಕ ಗಡಿ ಗುರುತು ಮಾಡಿದ ಕೇರಳ

ಕಸ್ತೂರಿರಂಗನ್ ವರದಿ ಪ್ರಕಾರ, ಕೇರಳದ 13,108 ಚದರ ಕಿಲೋಮೀಟರ್ ವ್ಯಾಪ್ತಿಯ 123 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ (ಇಎಸ್‌ಎ) ಬರುತ್ತವೆ. ಉಳಿದ ರಾಜ್ಯಗಳಿಗಿಂತ ಮೊದಲೇ, ಭೌತಿಕವಾಗಿ ಗಡಿ ಗುರುತಿಸುವ ಕೆಲಸವನ್ನು ಕೇರಳ ಸರ್ಕಾರ ಮಾಡಿ ಮುಗಿಸಿದೆ. ರಾಜ್ಯ ಜೀವವೈವಿಧ್ಯ ಮಂಡಳಿ ಮುಖ್ಯಸ್ಥ ಉಮ್ಮನ್ ವಿ. ಉಮ್ಮನ್ ನೇತೃತ್ವದ ಮೂವರು ತಜ್ಞರ ಸಮಿತಿಯು ಸೂಕ್ಷ್ಮ ಪ್ರದೇಶಕ್ಕೆ ಒಳಪಡುವ ಎಲ್ಲ ಗ್ರಾಮಗಳಲ್ಲಿ ಭೌತಿಕ ಪರಿಶೀಲನೆ ನಡೆಸಿ ವರದಿ ನೀಡಿದೆ. ಇದನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಭೌತಿಕ ಪರಿಶೀಲನೆಯಲ್ಲಿ 9,993.7 ಚದರ ಕಿಲೋಮೀಟರ್‌ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಇದರಲ್ಲಿ 9,107 ಚ.ಕಿ.ಮೀ ಅರಣ್ಯ ಪ್ರದೇಶ, 886.7 ಚ.ಕಿ.ಮೀ ಅರಣ್ಯೇತರ ಪ್ರದೇಶ ಸೇರಿದೆ. ಈ ಸಮಿತಿಯು 3,115 ಚ.ಕಿ.ಮೀ ಪ್ರದೇಶವನ್ನು ಇಎಸ್‌ಎಯಿಂದ ಕೈಬಿಡುವಂತೆ ಶಿಫಾರಸು ಮಾಡಿತು. ಕೋಟಯಂ ಜಿಲ್ಲೆಯ ನಾಲ್ಕು ಗ್ರಾಮಗಳನ್ನು ಕೈಬಿಟ್ಟಿದ್ದು, ಗ್ರಾಮಗಳ ಸಂಖ್ಯೆ 119ಕ್ಕೆ ಇಳಿಕೆಯಾಗಿದೆ. ಇಡುಕ್ಕಿ ಜಿಲ್ಲೆಯಲ್ಲಿ (58) ಅತಿಹೆಚ್ಚು ಗ್ರಾಮಗಳು ಈ ವ್ಯಾಪ್ತಿಯಲ್ಲಿವೆ. ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಶಿಫಾರಸುಗಳ ಬದಲಾಗಿ, ಕೇರಳ ಸರ್ಕಾರವು ಭೌತಿಕವಾಗಿ ಗಡಿ ಗುರುತು ಮಾಡಿರುವ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಕೇಂದ್ರ ಪರಿಸರ ಸಚಿವಾಲಯ ಪರಿಗಣಿಸಿ ಕರಡು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.

ಕೇಂದ್ರದ ಅಧಿಸೂಚನೆಗೆ ಕೇರಳದಲ್ಲಿ ತೋಟ ಹೊಂದಿರುವವರು ಮತ್ತು ಕ್ವಾರಿ ಮಾಲೀಕರಿಂದ ಭಾರಿ ವಿರೋಧವಿದೆ. ಜನವಸತಿ, ಕೃಷಿ ಹಾಗೂ ತೋಟಗಳು ಇರುವ ಪ್ರದೇಶಗಳನ್ನು ಸೂಕ್ಷ್ಮ ವಲಯದಿಂದ ಕೈಬಿಡುವ ನಿರ್ಣಯವನ್ನು ಕೇರಳ ವಿಧಾನಸಭೆ 2014ರಲ್ಲಿ ಅವಿರೋಧವಾಗಿ ಅನುಮೋದಿಸಿತ್ತು. ಮುಖ್ಯವಾಗಿ ಇಡುಕ್ಕಿ, ವಯನಾಡ್ ಹಾಗೂ ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಭಾರಿ ವಿರೋಧವಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಕೇರಳ ವಿಧಾನಸಭೆಯು ಅವಿರೋಧವಾಗಿ ನಿರ್ಣಯ ಅಂಗೀಕರಿಸಿದೆ. ಇದರ ಜೊತೆಗೆ, ಸಂರಕ್ಷಿತ ಪ್ರದೇಶಗಳಾದ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಸಂರಕ್ಷಣಾ ತಾಣಗಳು ಹಾಗೂ ಅಭಯಾರಣ್ಯಗಳ ಒಂದು ಕಿಲೋಮೀಟರ್ ಸುತ್ತಳತೆಯನ್ನು ಬಫರ್ ಝೋನ್ (ನಿರ್ಬಂಧಿತ ಪ್ರದೇಶ) ಎಂದು ಘೋಸಿಸುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೂಚಿಸಿರುವುದಕ್ಕೂ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಪರಿಸರ ಸೂಕ್ಷ್ಮ ವಲಯ ಆದೇಶ ಜಾರಿಯಾದರೆ, ಸುಮಾರು 25 ಸಾವಿರ ಜನರು ತಮ್ಮ ವಾಸಸ್ಥಳಗಳನ್ನು ತೊರೆಯಬೇಕಾಗುತ್ತದೆ ಎಂಬ ಆತಂಕವೂ ವ್ಯಕ್ತವಾಗಿದೆ.

*ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗುರುತಿಸಿರುವ ರಾಜ್ಯದ ಪ್ರದೇಶದ ವಿಸ್ತೀರ್ಣ:9,993ಕಿ.ಮೀ.ಚದರ

*ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಂಖ್ಯೆ:119

ಚಳವಳಿಗೆ 35 ವರ್ಷ

‘ಪಶ್ಚಿಮ ಘಟ್ಟ ರಕ್ಷಿಸಿ’ ಎಂಬ ಕೂಗಿಗೆ ಹಲವು ದಶಕಗಳ ಇತಿಹಾಸವಿದೆ. ಗಣಿಗಾರಿಕೆ, ನಗರೀಕರಣ, ತೋಟಗಾರಿಕೆ, ಜಲವಿದ್ಯುತ್ ಯೋಜನೆಗಳಿಂದ ಪಶ್ಚಿಮ ಘಟ್ಟಕ್ಕೆ ಧಕ್ಕೆಯಾಗುತ್ತಿದೆ ಎಂಬ ಕೂಗು 1980ರ ದಶಕದಲ್ಲೇ ಕೇಳಿಬಂದಿತ್ತು. ಆ ಕೂಗಿಗೆ ಒಂದು ಚಳವಳಿ ರೂಪ ಬಂದಿದ್ದು 1986ರಲ್ಲಿ.

ಗೋವಾದ, ‘ಪೀಸ್‌ಫುಲ್‌ ಸೊಸೈಟಿ’ ಎಂಬ ಸ್ವಯಂಸೇವಾ ಸಂಸ್ಥೆಯು ‘ಪಶ್ಚಿಮ ಘಟ್ಟ ರಕ್ಷಿಸಿ ಚಳವಳಿ’ಯನ್ನು ಆಯೋಜಿಸಿತ್ತು. ಪಶ್ಚಿಮ ಘಟ್ಟ ವ್ಯಾಪಿಸಿರುವ ಆರೂ ರಾಜ್ಯಗಳಿಂದ ಕಾಲ್ನಡಿಗೆ ಜಾಥಾ ಹೊರಟು, ಗೋವಾದಲ್ಲಿ ಸಮ್ಮೇಳನ ನಡೆಸುವುದು ಈ ಚಳವಳಿಯ ಯೋಜನೆಯಾಗಿತ್ತು. ದಕ್ಷಿಣದ ಕೇರಳದಿಂದ ಒಂದು ತಂಡ ಮತ್ತು ಗುಜರಾತ್‌ನಿಂದ ಒಂದು ತಂಡ ಕಾಲ್ನಡಿಗೆ ಆರಂಭಿಸಿದ್ದವು. 95 ದಿನಗಳ ಕಾಲ್ನಡಿಗೆಯ ನಂತರ ಗೋವಾದಲ್ಲಿ 5 ದಿನಗಳ ಸಮ್ಮೇಳನ ನಡೆದಿತ್ತು.

100 ದಿನಗಳ ಈ ಚಳವಳಿಯು, ಚಿಪ್ಕೋ ಚಳವಳಿ ಮತ್ತು ನರ್ಮದಾ ರಕ್ಷಿಸಿ ಚಳವಳಿಯ ನಂತರದ ದೇಶದ ಅತ್ಯಂತ ದೊಡ್ಡ ಪರಿಸರ ಚಳವಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಶ್ಚಿಮ ಘಟ್ಟ ರಕ್ಷಿಸಿ ಎಂಬ ಕೂಗಿಗೆ ಜಾಗತಿಕ ಮಟ್ಟದಲ್ಲಿ ವೇದಿಕೆ ಒದಗಿಸಿದ ಚಳವಳಿ ಇದು. ಈ ಚಳವಳಿಯ ನಂತರ ಪಶ್ಚಿಮ ಘಟ್ಟಗಳ ರಕ್ಷಣೆಗೆ ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಪಶ್ಚಿಮ ಘಟ್ಟವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸುವ ಕಾರ್ಯ ಮಾತ್ರ ನನೆಗುದಿಗೆ ಬಿದ್ದಿದೆ.

ಆಧಾರ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ–2022, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.