ADVERTISEMENT

ಭಾರತದ ಸಮರ ತಂತ್ರದಲ್ಲಿ ಕಾರವಾರ ಸೀಬರ್ಡ್ ನೌಕಾನೆಲೆ ಪಾತ್ರ ಮಹತ್ವದ್ದೇಕೆ?

ವಿಶೇಷ ಲೇಖನ

ಗಿರೀಶ್ ಲಿಂಗಣ್ಣ
Published 9 ಆಗಸ್ಟ್ 2022, 12:09 IST
Last Updated 9 ಆಗಸ್ಟ್ 2022, 12:09 IST
ಕಾರವಾರದ ಸೀಬರ್ಡ್‌ ನೌಕಾನೆಲೆ
ಕಾರವಾರದ ಸೀಬರ್ಡ್‌ ನೌಕಾನೆಲೆ   

ಭಾರತೀಯ ನೌಕಾಪಡೆಯ ಐಎನ್ಎಸ್ ಕದಂಬ ನೌಕಾನೆಲೆ ಕರ್ನಾಟಕದ ಕಾರವಾರದ ಸನಿಹದಲ್ಲಿದೆ. ಈ ಯೋಜನೆಯ ಪ್ರಥಮ ಹಂತದ ಅಭಿವೃದ್ಧಿಯನ್ನು ಸೀಬರ್ಡ್ ಎಂದು ಕರೆಯಲಾಗಿದ್ದು, ಈ ಕಾರ್ಯ 2005ರಲ್ಲಿ ಪೂರ್ಣಗೊಂಡಿತು. ನೌಕಾನೆಲೆ ಮೇ 31, 2005ರಲ್ಲಿ ಲೋಕಾರ್ಪಣೆಗೊಂಡಿತು. ಈ ಯೋಜನೆಯ ಎರಡನೇ ಹಂತದ ಅಭಿವೃದ್ಧಿ ಕಾರ್ಯಗಳು 2011ರಲ್ಲಿ ಆರಂಭಗೊಂಡವು.

ಐಎನ್‌ಎಸ್ ಕದಂಬ ಭಾರತದ ಮೂರನೇ ಅತಿದೊಡ್ಡ ನೌಕಾನೆಲೆಯಾಗಿದ್ದು, II-ಬಿ ಹಂತದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ಬಳಿಕ ಇದು ಪೂರ್ವಾರ್ಧ ಗೋಳದ ಅತಿದೊಡ್ಡ ನೌಕಾನೆಲೆ ಎನಿಸಿಕೊಳ್ಳಲಿದೆ. ಈ ಹಂತದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ಬಳಿಕ, ಐಎನ್‌ಎಸ್ ಕದಂಬ 50 ಹಡಗುಗಳನ್ನು ನಿಯೋಜಿಸಲು ಸಮರ್ಥವಾಗಲಿದೆ. ಆ ಮೂಲಕ ಇದು ಸೂಯೆಜ್ ಕಾಲುವೆಯ ಪೂರ್ವದ ಅತಿದೊಡ್ಡ ನೌಕಾನೆಲೆ ಎನಿಸಿಕೊಳ್ಳಲಿದೆ.

1971ರ ಭಾರತ - ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಪಶ್ಚಿಮ ಪಡೆಗಳಿಗೆ ಮುಂಬೈ ಬಂದರಿನಲ್ಲಿ ಸಾಕಷ್ಟು ಭದ್ರತಾ ಸಮಸ್ಯೆಗಳು ಎದುರಾದವು. ಇದಕ್ಕೆ ಪ್ರಮುಖ ಕಾರಣಗಳೆಂದರೆ ಅಪಾರವಾದ ವಾಣಿಜ್ಯ ಹಡಗುಗಳು, ಮೀನುಗಾರಿಕೆಯ ಬೋಟುಗಳು, ಹಾಗೂ ಪ್ರವಾಸಿ ಹಡಗುಗಳು ಜಲ ಕಾಲುವೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಟ್ಟಣೆ ಉಂಟುಮಾಡಿದ್ದೇ ಆಗಿತ್ತು. 1971ರ ಯುದ್ಧದ ನಂತರ ಈ ರೀತಿಯ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ಉಪಾಯಗಳನ್ನು ಕಂಡುಹಿಡಿಯಲಾಯಿತು. ಭಾರತದ ಪಶ್ಚಿಮ ಕರಾವಳಿಯಲ್ಲಿ ನೌಕಾಪಡೆಗಳ ನೆಲೆಗಾಗಿ ತಿರುವನಂತಪುರಂ, ಕಣ್ಣೂರು ಹಾಗೂ ತೂತುಕುಡಿಗಳನ್ನು ಸಂಭಾವ್ಯ ತಾಣಗಳನ್ನಾಗಿ ಗುರುತಿಸಲಾಯಿತು.

ADVERTISEMENT

ಮೊದಲನೇ ಹಂತ

ಭಾರತದ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಪ್ರಸ್ತುತ ಕಾರವಾರದಲ್ಲಿ ನೆಲೆಯಾಗಿದೆ. ಅದರೊಡನೆ ಲ್ಯಾಂಡಿಂಗ್ ಹಡಗುಗಳು, ಸರ್ವೆ ಹಡಗುಗಳು ಹಾಗೂ ಲಾಜಿಸ್ಟಿಕ್ಸ್ ಬೆಂಬಲದ ಹಡಗುಗಳು ಇಲ್ಲಿರುವ ಇತರ ಪ್ರಮುಖ ಯುದ್ಧ ನೌಕೆಗಳಾಗಿವೆ.

ಕಾರವಾರದ ನೌಕಾನೆಲೆಯಲ್ಲಿ ಒಂದು ನೌಕಾಪಡೆಯ ಹಡಗು ರಿಪೇರಿ ಯಾರ್ಡ್ ಇದ್ದು, ಇಲ್ಲಿ ಒಂದು ಶಿಪ್ ಲಿಫ್ಟ್ ವ್ಯವಸ್ಥೆಯನ್ನು 2006 ಸೆಪ್ಟೆಂಬರ್ ತಿಂಗಳಲ್ಲಿ ಉದ್ಘಾಟಿಸಲಾಯಿತು. ಈ ಲಿಫ್ಟ್ 10,000 ಟನ್ ತನಕ ತೂಕವಿರುವ ಹಡಗುಗಳನ್ನು ಮೇಲೆತ್ತುವ ಸಾಮರ್ಥ್ಯ ಹೊಂದಿದೆ. ಈ ನೌಕಾನೆಲೆಯಲ್ಲಿ ಹಡಗುಗಳಿಗೆ ನೇರವಾಗಿ ಇಂಧನ ತುಂಬಿಸುವ ವ್ಯವಸ್ಥೆಯೂ ಸಹ ನಿರ್ಮಾಣಗೊಂಡಿದೆ. ಇಲ್ಲಿನ ಮೂಲಭೂತ ಸೌಕರ್ಯಗಳಲ್ಲಿ 7 ಕಿಲೋಮೀಟರ್ ದೂರದ ಪೈಪ್ ಲೈನ್ ವ್ಯವಸ್ಥೆಯೂ ಸೇರಿದ್ದು, ಇದು ಬೈತ್ ಕೋಲ್‌ನಲ್ಲಿರುವ ಐಒಸಿಎಲ್ ಬಂದರು ಮತ್ತು ನೌಕಾನೆಲೆಯನ್ನು ಸಂಪರ್ಕಿಸುತ್ತದೆ.

ಎರಡನೇ ಹಂತ

2010ನೇ ಇಸವಿಯಲ್ಲಿ ಎಂ/ಎಸ್ ಎಸ್‌ಕೆಎಂ, ಎಂಬ ಆಸ್ಟ್ರೇಲಿಯಾದ ಸಂಸ್ಥೆಯೊಡನೆ ಹಂತ IIರ ನಿರ್ಮಾಣದ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಹಂತದ ಅಭಿವೃದ್ಧಿ ಯೋಜನೆ ಮುಂದಿನ ವರ್ಷದಲ್ಲಿ ಆರಂಭಗೊಂಡಿತು. ಈ ಯೋಜನೆ ನೌಕಾನೆಲೆಯಲ್ಲಿರುವ ಸೌಲಭ್ಯಗಳನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಹಂತದಲ್ಲಿ ಒಂದು ನೌಕಾಪಡೆಯ ವಾಯು ನಿಲ್ದಾಣ ಕಾಮಗಾರಿಯೂ ನಡೆಯಲಿದ್ದು, ಈ ನಿಲ್ದಾಣ 6,000 ಅಡಿಗಳ ರನ್‌ವೇಯನ್ನೂ ಒಳಗೊಳ್ಳಲಿದೆ. 2012ರಲ್ಲಿ ಹಂತ IIಎ ಅಭಿವೃದ್ಧಿ ಕಾಮಗಾರಿಗಾಗಿ ಸಿಸಿಎಸ್ ಅನುಮತಿ ಪಡೆಯಲಾಯಿತು. 2014 ಜೂನ್ ತಿಂಗಳಲ್ಲಿ ಹಂತ IIಎ ಮತ್ತು IIಬಿ ಕಾಮಗಾರಿಗಾಗಿ ಆದ್ಯತೆಯ ಆಧಾರದಲ್ಲಿ ಪರಿಸರ ಅನುಮತಿಯನ್ನೂ ನೀಡಲಾಯಿತು. ನವೆಂಬರ್ 2014 ರಲ್ಲಿ ಎಂ/ಎಸ್ ಎಇಸಿಒಎಂ ಇಂಡಿಯಾ ಸಂಸ್ಥೆಯು ಈ ಯೋಜನೆಯ ನಿರ್ವಹಣಾ ಸಲಹೆಗಾರನಾಗಿ ನೇಮಕಗೊಂಡಿತು.

ಆಧುನಿಕ ಕ್ಷಿಪಣಿ ಹಾಗೂ ಆಯುಧ ನೆಲೆಯಾಗಿರುವ ಐಎನ್‌ಎಸ್ ವಜ್ರಕೋಶವನ್ನು 2015 ಸೆಪ್ಟೆಂಬರ್ ನಲ್ಲಿ ಸೇವೆಗೆ ನಿಯೋಜಿಸಲಾಯಿತು. ಕಾರವಾರದಲ್ಲಿ ಸ್ಥಾಪಿತವಾಗಿರುವ ನೌಕಾಸೇನೆಯ ಪಡೆಗಳು ಆಧುನಿಕ ಆಯುಧಗಳು ಮತ್ತು ಕ್ಷಿಪಣಿಗಳನ್ನು ಹೊಂದಿರಬೇಕಾಗಿದೆ. ಕಾರವಾರದ ಮೂರನೇ ನೌಕಾನೆಲೆಯಾಗಿ ಸ್ಥಾಪನೆಗೊಂಡ ಐಎನ್‌ಎಸ್ ವಜ್ರಕೋಶ ಭಾರತೀಯ ನೌಕಾಸೇನೆಯ ನೆಲೆಗಳ ಆಕ್ರಮಣ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಸಮರ್ಥವಾಗಿ ಹೆಚ್ಚಿಸಲಿದೆ. ಈ ಗುರಿಯನ್ನು ತಲುಪುವ ಸಲುವಾಗಿ ಐಎನ್‌ಎಸ್ ವಜ್ರಕೋಶ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ನೌಕಾಪಡೆಯಿಂದ ನಿರ್ವಹಿಸಲ್ಪಡಲಿದೆ.

ಐಎನ್‌ಎಸ್ ವಜ್ರಕೋಶ ಈಗಾಗಲೇ ಒಂದು ನೌಕಾ ವಾಯುನೆಲೆಯ ಸ್ಥಾಪನೆಯನ್ನು ಉದ್ದೇಶಿಸಿದ್ದು, ಇದು ಬೋಯಿಂಗ್ ಪಿ-8ಐ ಅಥವಾ 'ಪೋಸೆಡಿಯೋನ್' ಎಂದೂ ಖ್ಯಾತವಾಗಿರುವ ಕಡಲಿನ ವಿಚಕ್ಷಣಾ ವಿಮಾನದ ನೆಲೆಯೂ ಆಗಿರಲಿದೆ. ಈ ಸಂಕೀರ್ಣದಲ್ಲಿ ಒಂದು ಹೆಲಿಕಾಪ್ಟರ್ ನೆಲೆಯೂ ನಿರ್ಮಾಣಗೊಳ್ಳಲಿದೆ.

ಇದರ ನಿರ್ಮಾಣ ಪೂರ್ಣಗೊಂಡ ಬಳಿಕ, 9,000 ಎಕರೆ ಪ್ರದೇಶದಲ್ಲಿ ಹರಡಿರುವ ಈ ಸಂಕೀರ್ಣವು ಒಂದು ಸುಸಜ್ಜಿತ ವಿಮಾನ ನಿಲ್ದಾಣ, ನೌಕಾಪಡೆಯ ಡಾಕಿಂಗ್ ಮತ್ತು ಲ್ಯಾಂಡಿಂಗ್ ವ್ಯವಸ್ಥೆಗಳು, ಒಂದು ಆಸ್ಪತ್ರೆ, ಶಾಲೆ, ತರಬೇತಿ ವ್ಯವಸ್ಥೆ, ಹಾಗೂ 18,000 ನೌಕಾಪಡೆಯ ಸಿಬ್ಬಂದಿಗಳು ಮತ್ತು ಕುಟುಂಬಸ್ತರಿಗೆ ವಸತಿ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ. ಮುಂಬೈ ಮತ್ತು ವಿಶಾಖಪಟ್ಟಣಂ ಬಳಿಕ ಕಾರವಾರ ಭಾರತದ ಮೂರನೇ ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖವಾದ ನೌಕಾನೆಲೆಯಾಗಿದೆ.

ಕಾರ್ಯತಂತ್ರದಲ್ಲಿ ಪ್ರಮುಖವಾದ ನೌಕಾನೆಲೆ

1980ರ ದಶಕದಲ್ಲಿ ಭಾರತೀಯ ನೌಕಾಪಡೆಗಳ ಮುಖ್ಯಸ್ಥರಾಗಿದ್ದ ಅಡ್ಮಿರಲ್ ಆಸ್ಕರ್ ಸ್ಟಾನ್ಲಿ ಡಾಸನ್ ಅವರು ಪಶ್ಚಿಮ ಘಟ್ಟಗಳ ಪರ್ವತಗಳ ಮತ್ತು ಅರಬ್ಬೀ ಸಮುದ್ರದ ಮಧ್ಯ ಭಾಗದಲ್ಲಿ, ಕರ್ನಾಟಕದ ಕಾರವಾರದಲ್ಲಿ ನೌಕಾಪಡೆಗೆ ಸೀಮಿತವಾದ ನೌಕಾನೆಲೆಯ ನಿರ್ಮಾಣವಾಗಬೇಕೆಂದು ಯೋಚಿಸಿದ್ದರು. ಮುಂಬೈ ಮತ್ತು ಗೋವಾದಲ್ಲಿನ ನೌಕಾ ನೆಲೆಗಳ ದಕ್ಷಿಣಕ್ಕೆ ಮತ್ತು ಕೊಚ್ಚಿಯ ಉತ್ತರಕ್ಕೆ ನೆಲೆಗೊಂಡಿರುವ ಈ ಸ್ಥಳವು ಪರ್ಷಿಯನ್ ಕೊಲ್ಲಿ ಮತ್ತು ಪೂರ್ವ ಏಷ್ಯಾದ ನಡುವಿನ, ಜಗತ್ತಿನ ಅತ್ಯಂತ ನಿಬಿಡವಾದ ಹಡಗು ಮಾರ್ಗಕ್ಕೆ ಬಹಳ ಹತ್ತಿರದಲ್ಲಿದ್ದು, ಗಮನಾರ್ಹ ಪ್ರಯೋಜನಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ ಈ ಪ್ರಾಂತ್ಯ ಸುತ್ತಮುತ್ತಲಿನ ಶತ್ರು ರಾಷ್ಟ್ರಗಳ ಯುದ್ಧ ವಿಮಾನಗಳ ದಾಳಿಯ ವ್ಯಾಪ್ತಿಯಿಂದಲೂ ಹೊರಭಾಗದಲ್ಲಿದೆ. ಇದರ ನಿರ್ಮಾಣಕ್ಕಾಗಿ ನೈಸರ್ಗಿಕವಾದ, ಆಳವಾದ ನೀರಿನ ಬಂದರು ಸೌಲಭ್ಯ ಸಿಕ್ಕಿದ್ದು, ಅದರೊಡನೆ ಹೆಚ್ಚಿನ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಈ ನೌಕಾನೆಲೆಯಲ್ಲಿ ವಿಮಾನವಾಹಕ ನೌಕೆಗಳೂ ಲಂಗರು ಹಾಕಬಹುದಾಗಿದೆ.

ಕಾರವಾರದ ನೌಕಾನೆಲೆಗೆ ಇರುವ ನೈಸರ್ಗಿಕ ಕರಾವಳಿ ಹಾಗೂ ಗುಪ್ತ ಕೊಲ್ಲಿಗಳು ಹಾಗೂ ಕಾರ್ಯತಂತ್ರದ ಪ್ರಮುಖ ತಾಣಗಳು, ಹಾಗೂ ಅರಣ್ಯ ಪ್ರದೇಶಗಳು ಪ್ರಸ್ತುತ ನೌಕಾಪಡೆಯ ಮುಂಬೈ ಪ್ರಧಾನ ನೌಕಾನೆಲೆಗಿಂತಲೂ ಹೆಚ್ಚಿನ ಸುರಕ್ಷತೆ ಒದಗಿಸಿವೆ. ಮುಂಬೈ ನೌಕಾನೆಲೆ ವ್ಯಾಪಾರಿ ಹಡಗುಗಳ ಓಡಾಟಕ್ಕೂ ಅನುವು ಮಾಡಿಕೊಡಬೇಕಾಗಿದೆ.

ಈ ನೌಕಾನೆಲೆಯ ಶಿಪ್ ರಿಪೇರ್ ಯಾರ್ಡ್‌ನಲ್ಲಿ ಲಭ್ಯವಿರುವ ಡ್ರೈ ಡಾಕಿಂಗ್ಗೆ ಬೇಕಾದ ಶಿಪ್ ಲಿಫ್ಟ್ ಹಾಗೂ ಶಿಪ್ ಟ್ರಾನ್ಸ್‌ಫರ್ ವ್ಯವಸ್ಥೆ ಒಂದು ವಿಶೇಷ ಅಂಶವಾಗಿದೆ. ಈ ಶಿಪ್ ಲಿಫ್ಟ್ 175 ಮೀಟರ್ × 28 ಮೀಟರ್ ವ್ಯಾಪ್ತಿ ಹೊಂದಿದ್ದು, 10,000 ಟನ್ ತೂಕದ ತನಕ ಅತಿದೊಡ್ಡ ಹಡಗುಗಳನ್ನು ಮೇಲೆತ್ತಬಲ್ಲ ಸಾಮರ್ಥ್ಯ ಹೊಂದಿದೆ. ಈ ಲಿಫ್ಟನ್ನು ಸಮುದ್ರದ ಒಳಗೆ ನೇರವಾಗಿ ಇಳಿಸಬಹುದಾಗಿದ್ದು, ಹಡಗನ್ನು ನೆಲದ ಮೇಲಿನ ಒಣ ರಿಪೇರಿ ಜಾಗಕ್ಕೆ ಸ್ಥಳಾಂತರಿಸಲು ಅವಕಾಶ ಮಾಡಿಕೊಡುತ್ತದೆ. ವಿಮಾನವಾಹಕ ನೌಕೆಗಳು ಮತ್ತು ಸರಕು ಸಾಗಣೆ ಹಡಗುಗಳನ್ನು ಹೊರತುಪಡಿಸಿ, ಈ ಶಿಪ್ ಲಿಫ್ಟ್ ಭಾರತದ ಮಿಕ್ಕೆಲ್ಲ ಯುದ್ಧ ವಿಮಾನಗಳನ್ನು ಮೇಲೆತ್ತುವ ಸಾಮರ್ಥ್ಯ ಹೊಂದಿದೆ. ಈ ನೌಕಾನೆಲೆಯು 42 ಹಡಗುಗಳಿಗೆ ನೆಲೆ ಒದಗಿಸುವ ಸಾಮರ್ಥ್ಯ ಹೊಂದಿದೆ. ಕಾರವಾರ ನೌಕಾನೆಲೆ ಪಶ್ಚಿಮ ಕರಾವಳಿಯಲ್ಲಿ ಬಹುದೊಡ್ಡ ವಿಮಾನವಾಹಕ ನೌಕೆಗಳು ಮತ್ತು ನ್ಯೂಕ್ಲಿಯರ್ ಸಬ್‌ಮರೀನ್‌ಗಳಿಗೆ ನೆಲೆ ಒದಗಿಸುವ ಏಕೈಕ ನೌಕಾನೆಲೆಯಾಗಿದೆ.

ಪೂರ್ವ ಕರಾವಳಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಇದಕ್ಕೆ ಸಮನಾಗಬಲ್ಲ ಇನ್ನೊಂದು ನೌಕಾನೆಲೆ

ಭಾರತೀಯ ನೌಕಾಪಡೆ ತನ್ನ ಬಹುತೇಕ ಪಡೆಗಳನ್ನು ಪೂರ್ವ ಕರಾವಳಿಯಲ್ಲಿ, 'ಪ್ರಾಜೆಕ್ಟ್ ವರ್ಷ' ಎಂದು ಕರೆಯಲಾಗುವ, ವಿಶಾಖಪಟ್ಟಣಂನಿಂದ ಅಂದಾಜು 50 ಕಿಲೋಮೀಟರ್ ದೂರದಲ್ಲಿ, ಪ್ರಸ್ತುತ ಪೂರ್ವ ನೌಕಾಪಡೆಯ ಕೇಂದ್ರ ತಾಣದಲ್ಲಿ ನೆಲೆಯಾಗಿಸುವ ಗುರಿ ಹೊಂದಿದೆ. ಪ್ರಾಜೆಕ್ಟ್ ವರ್ಷ ಎನ್ನುವುದು ರಂಬಿಲಿಯಲ್ಲಿ ಎರಡನೇ ಮಹಾಯುದ್ಧದ ವೇಳೆ ಅಮೆರಿಕಾ ನಿರ್ಮಿಸಿದ ಏರ್‌ಫೀಲ್ಡಿನ ಮರುಸ್ಥಾಪನಾ ಕಾರ್ಯವಾಗಿದೆ.

ಪಶ್ಚಿಮದ ಭದ್ರ ಕೋಟೆ

ಅರಬ್ಬಿ ಸಮುದ್ರದ ಉತ್ತರದಲ್ಲಿ ಏನಾದರೂ ದಾಳಿ ಸಂಭವಿಸಿದರೆ ಮುಂಬೈ ಮತ್ತು ಗುಜರಾತ್ ನೌಕಾನೆಲೆಗಳು ಅದಕ್ಕೆ ಮೊದಲನೆಯದಾಗಿ ಉತ್ತರಿಸುತ್ತವೆ. ಆದರೆ ಒಂದು ಸಲ ಆರಂಭಿಕ ದಾಳಿಗಳು ಮುಗಿದ ಬಳಿಕ ಅಥವಾ ಇನ್ನೂ ಹೆಚ್ಚಿನ ದಾಳಿಗಳಾದ ಸಂದರ್ಭದಲ್ಲಿ, ಕಾರವಾರ ನೌಕಾನೆಲೆ ಕಾರ್ಯಾಚರಣೆಗಳಿಗೆ ಪ್ರಮುಖ ನೆಲೆಯಾಗಿ ಕಾರ್ಯ ನಿರ್ವಹಿಸಲಿದೆ. ಸರಳವಾಗಿ ಹೇಳಬೇಕೆಂದರೆ, ಕಾರವಾರ ಅರಬ್ಬಿ ಸಮುದ್ರಕ್ಕೆ ಪ್ರವೇಶವನ್ನು ನಿಯಂತ್ರಿಸಲಿದ್ದು, ಕೇಪ್ ಆಫ್ ಗುಡ್ ಹೋಪ್ ತನಕ ಹಾಗೂ ಅಗತ್ಯ ಬಿದ್ದರೆ ಅದನ್ನೂ ಮೀರಿ, ಭಾರತೀಯ ನೌಕಾಪಡೆಯ ಕಾರ್ಯಾಚರಣೆಗಳಿಗೆ ಪ್ರಮುಖ ಕೇಂದ್ರವಾಗಿ ಕಾರವಾರದ ನೌಕಾನೆಲೆ ಕಾರ್ಯ ನಿರ್ವಹಿಸಲಿದೆ.

–ಲೇಖನ

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.