ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ತಂತ್ರಜ್ಞಾನ ಆಧಾರಿತ ನವೋದ್ಯಮಗಳ ಪೈಕಿ ‘ಓಯೊ’ ಕೂಡ ಒಂದಾಗಿತ್ತು. ಈಗ ಅದು ತ್ವರಿತಗತಿಯಲ್ಲಿ ತನ್ನ ವಹಿವಾಟನ್ನು ಕಿರಿದಾಗಿಸಿಕೊಳ್ಳುತ್ತಿದೆ. ಈಚಿನ ವಾರಗಳಲ್ಲಿ ಇದು ದೇಶದ ಡಜನ್‌ಗಟ್ಟಲೆ ನಗರಗಳಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿದೆ. ತನ್ನ ಮೂಲಕ ಲಭ್ಯವಿದ್ದ ಹೋಟೆಲ್ ಕೊಠಡಿಗಳ ಸಂಖ್ಯೆ ಕಡಿತಗೊಳಿಸಿದೆ. ತನ್ನ ನೌಕರರನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಆರಂಭಿಸಿದೆ. ಓಯೊ ಅನುಭವಿಸುತ್ತಿರುವ ನಷ್ಟವನ್ನು ತಗ್ಗಿಸುವಂತೆ ಅದರಲ್ಲಿ ಅತಿಹೆಚ್ಚಿನ ಹೂಡಿಕೆ ಮಾಡಿರುವ ಜಪಾನಿನ ಸಾಫ್ಟ್‌ಬ್ಯಾಂಕ್ ಒತ್ತಡ ಹಾಕುತ್ತಿದೆ.
ಇವೆಲ್ಲ ಬಹಳ ತ್ವರಿತವಾಗಿ, ವ್ಯಾಪಕವಾಗಿ ಆಗುತ್ತಿವೆ. ಈ ಕಂಪನಿಯ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ನೀಡಿರುವ ಮಾಹಿತಿ ಅನ್ವಯ, ಇದು ಪ್ರವಾಸಿಗರಿಗೆ ಒದಗಿಸುತ್ತಿದ್ದ ಕೊಠಡಿಗಳ ಸಂಖ್ಯೆಯಲ್ಲಿ ಅಕ್ಟೋಬರ್ ತಿಂಗಳ ನಂತರ 65 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಕಡಿತ ಕಂಡುಬಂದಿದೆ.
ಕಂಪನಿಯ ದಾಖಲೆಗಳು, ಮಾಜಿ ಹಾಗೂ ಹಾಲಿ ಉದ್ಯೋಗಿಗಳ ಅಭಿಪ್ರಾಯದ ಅನುಸಾರ ಓಯೊ ಕಂಪನಿಯು ಭಾರತದ 200ಕ್ಕೂ ಹೆಚ್ಚಿನ ಸಣ್ಣ ನಗರಗಳಲ್ಲಿ ಹೋಟೆಲ್ ಕೊಠಡಿ ಸೇವೆ ಒದಗಿಸುವುದನ್ನು ಈ ತಿಂಗಳಲ್ಲಿ ನಿಲ್ಲಿಸಿದೆ. ಈ ನಡುವೆ ಕಂಪನಿಯು ವಿಶ್ವದಾದ್ಯಂತ 2,000ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದೆ. ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಕ್ಕೂ ಮುನ್ನ ಓಯೊ ಒಟ್ಟು 80 ದೇಶಗಳಲ್ಲಿ ಅಂದಾಜು 20 ಸಾವಿರ ಉದ್ಯೋಗಿಗಳನ್ನು ಹೊಂದಿತ್ತು. ‘ದಿ ನ್ಯೂಯಾರ್ಕ್ ಟೈಮ್ಸ್’ ಬಳಿ ಇರುವ ಕೆಲವು ಅಂಕಿ–ಅಂಶಗಳು ತಪ್ಪು ಎಂದು ಓಯೊ ಹೇಳಿದೆಯಾದರೂ, ನಿರ್ದಿಷ್ಟವಾಗಿ ಯಾವುದು ಎಂಬುದನ್ನು ತಿಳಿಸಿಲ್ಲ.
ಓಯೊ ಕಂಪನಿಯು ಸುಸ್ಥಿರ ಬೆಳವಣಿಗೆ ಹಾಗೂ ಲಾಭದಾಯಕ ಆಗುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದೆ– ಅಂದರೆ ನೌಕರರನ್ನು ಕೆಲಸದಿಂದ ತೆಗೆಯುವುದು– ಎಂದು ಕಂಪನಿಯ ಮುಖ್ಯ ಕಾರ್ಯ
ನಿರ್ವಾಹಕ ರಿತೇಶ್ ಅಗರ್ವಾಲ್ ಅವರು ಉದ್ಯೋಗಿಗಳಿಗೆ ಬರೆದ ಇ–ಮೇಲ್‌ನಲ್ಲಿ ಹೇಳಿದ್ದಾರೆ. ‘ಕಂಪನಿಯಲ್ಲಿನ ಕೆಲವು ಹುದ್ದೆಗಳು ಈಗ ಅನಗತ್ಯವಾಗಿವೆ’ ಎಂದು ಅವರು ಇ–ಮೇಲ್‌ನಲ್ಲಿ ಬರೆದಿದ್ದಾರೆ.
ಸಾಫ್ಟ್‌ಬ್ಯಾಂಕ್ ಹೂಡಿಕೆ ಮಾಡಿರುವ ನವೋದ್ಯಮಗಳಲ್ಲಿ ಕಾಣುತ್ತಿರುವ ಉದ್ಯೋಗ ಕಡಿತದ ಒಂದು ಭಾಗ ಓಯೊದಲ್ಲಿನ ಬೆಳವಣಿಗೆ. ವಿಷನ್ ಫಂಡ್ ಹೆಸರಿನಲ್ಲಿ ನಿಧಿಯೊಂದನ್ನು ಸ್ಥಾಪಿಸಿರುವ ಸಾಫ್ಟ್‌ಬ್ಯಾಂಕ್, ಈಚಿನ ವರ್ಷಗಳಲ್ಲಿ ವಿಶ್ವದ ಎಲ್ಲೆಡೆ ನವೋದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದೆ. ಇದು ಹಲವು ಹೊಸ ಕಂಪನಿಗಳಿಗೆ ವಹಿವಾಟು ವಿಸ್ತರಿಸಲು ನೆರವಾಗಿದೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ಈ ವಿಸ್ತರಣೆಯು ಲಾಭದ ಕುರಿತ ಆಲೋಚನೆಯೇ ಇಲ್ಲದೆ ನಡೆದಿದೆ. ಸಾಫ್ಟ್‌ಬ್ಯಾಂಕ್‌ನಿಂದ ಹಣಕಾಸಿನ ನೆರವು ಪಡೆದ ಕೆಲವು ನವೋದ್ಯಮಗಳು ಕಳೆದ ವರ್ಷ ತೊಂದರೆಗೆ ಸಿಲುಕಿದವು. ಅವುಗಳಲ್ಲಿ ಮುಖ್ಯವಾದದ್ದು ಕಚೇರಿ ಕೆಲಸಗಳಿಗೆ ಸ್ಥಳಾವಕಾಶ ಒದಗಿಸುವ ‘ವಿ–ವರ್ಕ್’ ಕಂಪನಿ. ಈ ಕಂಪನಿ ತನ್ನ ಮುಖ್ಯ ಕಾರ್ಯನಿರ್ವಾಹಕನನ್ನು ಹೊರಹಾಕಿ, ತನ್ನ ಮಾರುಕಟ್ಟೆ ಮೌಲ್ಯವನ್ನು ತಗ್ಗಿಸಬೇಕಾಯಿತು. ವಿ–ವರ್ಕ್‌ನಲ್ಲಿ ನಡೆದ ಬೆಳವಣಿಗೆಗಳ ಪರಿಣಾಮವಾಗಿ, ಸಾಫ್ಟ್‌ಬ್ಯಾಂಕ್‌ನಿಂದ ಹಣಕಾಸಿನ ನೆರವು ಪಡೆದ ಇತರ ನವೋದ್ಯಮಗಳು ಲಾಭ ಮಾಡಿಕೊಳ್ಳಬಲ್ಲವೇ ಎಂಬ ಪ್ರಶ್ನೆಗಳು ಮೂಡಿದವು.
ಸಾಫ್ಟ್‌ಬ್ಯಾಂಕ್ ಹೂಡಿಕೆ ಮಾಡಿರುವ ಕಟ್ಟಡ ನಿರ್ಮಾಣ ಕ್ಷೇತ್ರದ ನವೋದ್ಯಮ ಕಟೆರಾ ಕೂಡ ತನ್ನ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡಿತು. ಸಾಫ್ಟ್‌ಬ್ಯಾಂಕ್‌ನ ಹೂಡಿಕೆ ಇರುವ ನವೋದ್ಯಮಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುವ ಪ್ರಕ್ರಿಯೆ ಈ ತಿಂಗಳಲ್ಲಿ ವೇಗ ಪಡೆದುಕೊಂಡಿದೆ. ವಸ್ತುಗಳನ್ನು ಮನೆಗೆ ತಂದುಕೊಡುವ ನವೋದ್ಯಮ, ದಕ್ಷಿಣ ಅಮೆರಿಕದ ರ್‍ಯಾಪಿ ಮತ್ತು
ಸ್ಯಾನ್‌ಫ್ರಾನ್ಸಿಸ್ಕೊದ ಒಂದು ನವೋದ್ಯಮ ಕೂಡ ತಾವು ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುತ್ತಿರು
ವುದಾಗಿ ಹೇಳಿವೆ. ರೋಬೊಗಳ ಸಹಾಯದಿಂದ ಪಿಜ್ಜಾ ಸಿದ್ಧಪಡಿಸುವ ಕಂಪನಿಯೊಂದು ತನ್ನಲ್ಲಿನ ಉದ್ಯೋಗಿಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡಿದೆ. ಅದು ಪಿಜ್ಜಾ ಮಾಡುವುದನ್ನು ಸ್ಥಗಿತಗೊಳಿಸಿದೆ.
ನವೋದ್ಯಮಗಳಿಗೆ ಹಣ ನೀಡಲು ಸಾಫ್ಟ್‌ಬ್ಯಾಂಕ್ ಸ್ಥಾಪಿಸಿರುವ ನಿಧಿಯ ವಿಚಾರವಾಗಿ ಈಗ ಕೆಲವು ಹೂಡಿಕೆ
ದಾರರು ಹಾಗೂ ನವೋದ್ಯಮಗಳು ಎಚ್ಚರಿಕೆಯ ಹೆಜ್ಜೆ ಇರಿಸಲು ಆರಂಭಿಸಿವೆ. ಕೆಲವು ಸಂದರ್ಭಗಳಲ್ಲಿ, ಈ ನಿಧಿಯಸಹವಾಸವೇ ಬೇಡ ಎಂದು ಕೆಲವರು ಹೇಳಿದ್ದೂ ಇದೆ.
‘ಸಾಫ್ಟ್‌ಬ್ಯಾಂಕ್‌ನಿಂದ ದೂರ ಇರಿ ಎಂದು ನಾವು ನಮ್ಮ ಬಹುತೇಕ ಕಂಪನಿಗಳಿಗೆ ಸಲಹೆ ನೀಡಿದ್ದೇವೆ’ ಎನ್ನುತ್ತಾರೆ ನವೋದ್ಯಮಗಳಲ್ಲಿ ಹೂಡಿಕೆ ಮಾಡುವ ಉದ್ದೇಶದ ಹಣದ ನಿರ್ವಹಣೆ ನಡೆಸುವ ಲಕ್ಸ್ ಕ್ಯಾಪಿಟಲ್ ಸಂಸ್ಥೆಯ ಹೂಡಿಕೆದಾರ ಜೋಶ್ ವಾಲ್ಫ್. ಇವರು ಸಾಫ್ಟ್‌ಬ್ಯಾಂಕ್‌ನ ವಿಚಾರದಲ್ಲಿ ಕಟು ನಿಲುವನ್ನು ಹೊಂದಿದ್ದಾರೆ. ‘ಸತ್ಯವನ್ನು ಹೇಳಲು ಎಲ್ಲರೂಭಯಪಡುತ್ತಿದ್ದರು’ ಎಂದು ಅವರು ಹೇಳುತ್ತಾರೆ. ತಾನು ಹೂಡಿಕೆ ಮಾಡಿರುವ ಓಯೊ ಹಾಗೂ ಇತರ ನವೋದ್ಯಮಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಫ್ಟ್‌ಬ್ಯಾಂಕ್ ನಿರಾಕರಿಸಿದೆ.
ಅಗರ್ವಾಲ್ ಅವರು ಓಯೊ ಕಂಪನಿಯನ್ನು 2013ರಲ್ಲಿ ಸ್ಥಾಪಿಸಿದರು. ಇದರ ಉದ್ದೇಶ ಭಾರತದ ಸಣ್ಣ ಹಾಗೂ ಸ್ವತಂತ್ರ ಹೋಟೆಲ್‌ಗಳ ಸೇವೆಗಳನ್ನು ಒಂದೇ ಸೂರಿನ ಅಡಿ ತರುವುದು. ಈ ಹೋಟೆಲ್‌ಗಳಲ್ಲಿ ಲಭ್ಯವಿರುವ ಕೊಠಡಿಗಳನ್ನು ಕಾಯ್ದಿರಿಸುವ ಸೇವೆಯನ್ನು ಓಯೊ, ಆನ್‌ಲೈನ್ ವೇದಿಕೆಯ ಮೂಲಕ ಗ್ರಾಹಕರಿಗೆ ಕಲ್ಪಿಸುತ್ತದೆ. ಅದಕ್ಕೆ ಪ್ರತಿಯಾಗಿ ಗ್ರಾಹಕರು ನೀಡುವ ಕೊಠಡಿ ಶುಲ್ಕದಲ್ಲಿ ಒಂದು ಪಾಲನ್ನು ತಾನು ತೆಗೆದುಕೊಳ್ಳುತ್ತದೆ. ಆದರೆ, ತನ್ನ ಚಟುವಟಿಕೆಗಳನ್ನು ವಿಶ್ವ ಮಟ್ಟದಲ್ಲಿ ವಿಸ್ತರಿಸಲು ಪ್ರಯತ್ನ ಮಾಡಿದಂತೆಲ್ಲ, ಓಯೊ ಕಂಪನಿಯು ಹೆಚ್ಚಿನ ಹೋಟೆಲ್ ಮಾಲೀಕರನ್ನು ಹಾಗೂ ಗ್ರಾಹಕರನ್ನು ಸೆಳೆಯಲು ಹೆಚ್ಚೆಚ್ಚು ಕೊಡುಗೆಗಳನ್ನು ನೀಡಲಾರಂಭಿಸಿತು. ಇದರ ಪರಿಣಾಮವಾಗಿ ಭಾರತದಲ್ಲಿ ಅದು ನಷ್ಟ ಅನುಭವಿಸಿತು.
ಸಾಫ್ಟ್‌ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಮಸಾಯೊಶಿ ಸನ್ ಅವರು 2015ರಲ್ಲಿ ಓಯೊದಲ್ಲಿ ಹೂಡಿಕೆ ಆರಂಭಿಸಿದರು. ಈಗ ಸಾಫ್ಟ್‌ಬ್ಯಾಂಕ್ ಮತ್ತು ಅದರ ನವೋದ್ಯಮ ನಿಧಿಯು ಓಯೊದಲ್ಲಿ ಅರ್ಧದಷ್ಟು ಪಾಲು ಹೊಂದಿವೆ. ಓಯೊ ಕಂಪನಿ ಒಂದು ಆಭರಣದಂತೆ ಎಂದು ಸನ್ ಬಣ್ಣಿಸಿದ್ದರು, ಅದು ಬೇಗಬೇಗ ಬೆಳವಣಿಗೆ ಕಾಣಬೇಕು ಎಂದೂ ಹೇಳಿದ್ದರು. ಆದರೆ ಈಗ ಅವರು ತಮ್ಮ ನಿಲುವು ಬದಲಿಸಿದ್ದಾರೆ. 2020ರ ಮಧ್ಯಭಾಗದ ವೇಳೆಗೆ ಲಾಭ ಕಾಣುವಂತೆ ಆಗಬೇಕು ಎಂದು ಸಾಫ್ಟ್‌ಬ್ಯಾಂಕ್ ಹೇಳಿದೆ ಎಂದು ಓಯೊ ಕಂಪನಿಯ ಹಿರಿಯ ಅಧಿಕಾರಿಗಳು ಇತರ ಉದ್ಯೋಗಿಗಳಲ್ಲಿ ಹೇಳಿದ್ದಾರೆ ಎಂದು ಕೆಲವು ಹಾಲಿ ಮತ್ತು ಮಾಜಿ ಉದ್ಯೋಗಿಗಳು ಹೇಳುತ್ತಾರೆ.
ಓಯೊ ಭಾರತದಲ್ಲಿ ಈಗ ಇನ್ನೊಂದು ಸಮಸ್ಯೆಗೆ ಸಿಲುಕಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಂಪನಿಯಿಂದ ಹತ್ತು ಹಲವು ದಾಖಲೆಗಳನ್ನು ಕೇಳಿದ್ದಾರೆ. ಓಯೊ ಕಂಪನಿಯು ಅನುಮತಿ ಇಲ್ಲದ ಹೋಟೆಲ್‌ಗಳ ಕೊಠಡಿಗಳನ್ನು ಕೂಡ ನೀಡಿದೆ ಎಂದು ಈಚೆಗೆ ವರದಿಯಾಗಿದೆ. ಅಲ್ಲದೆ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಕಂಪನಿಯು ಕೆಲವು ಬಾರಿ ಸರ್ಕಾರಿ ಅಧಿಕಾರಿಗಳಿಗೆ ಉಚಿತವಾಗಿ ಕೂಡ ಕೊಠಡಿಗಳನ್ನು ನೀಡಿದೆ ಎಂದು ವರದಿಯಾಗಿದೆ.
ದಿ ನ್ಯೂಯಾರ್ಕ್ ಟೈಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.