‘ಅಮ್ಮ ಹೇಳುತ್ತಿದ್ದಳು– ಜೀವನ ಅಂದರೆ ಒಂದು ಚಾಕೊಲೇಟ್ ಬಾಕ್ಸ್ ಇದ್ದ ಹಾಗೆ. ಕೈ ಹಾಕಿದಾಗ ನಿನಗೆ ಎಷ್ಟು ಸಿಗುತ್ತದೋ ಅಷ್ಟು ನಿನ್ನದು...’
–26 ವರ್ಷಗಳ ಹಿಂದೆ ಬಂದ ಅಮೆರಿಕನ್ ಸಿನಿಮಾ ‘ಫಾರೆಸ್ಟ್ ಗಂಪ್’ನಲ್ಲಿ ಹೀರೊ ಟಾಮ್ ಹ್ಯಾಂಕ್ಸ್ ಹೇಳುವ ಡೈಲಾಗ್ ಇದು. ಮಗುವಾಗಿದ್ದಾಗಲೇ ಬಾಗಿದ ಬೆನ್ನಿನ, ನೆಟ್ಟಗೆ ನಡೆಯಲಾಗದ, ಮಂದಬುದ್ಧಿಯ ಫಾರೆಸ್ಟ್‌ನನ್ನು ಅಮ್ಮ ಸ್ವಾಭಿಮಾನಿಯಾಗಿ ಬೆಳೆಸಿದ್ದಳು. ನೇರನಡೆಯ ಫಾರೆಸ್ಟ್, ಮಾತು ಕೊಟ್ಟರೆ ಮುಗಿಯಿತು; ಜೀವ ಹೋದರೂ ಉಳಿಸಿಕೊಳ್ಳದೆ ಬಿಡುವುದಿಲ್ಲ.
ಪ್ರಾಂಶುಪಾಲರು ‘ಈ ಮಗುವನ್ನು ಇಲ್ಲಿ ಸೇರಿಸಲಾಗದು, ಸ್ಪೆಷಲ್ ಸ್ಕೂಲಿಗೆ ಸೇರಿಸಿ’ ಎಂದಾಗ ಅಮ್ಮ ಒಪ್ಪುವುದಿಲ್ಲ. ‘ಐಕ್ಯೂ ಸ್ವಲ್ಪವಷ್ಟೇ ಕಡಿಮೆ ಇದೆ’ ಎಂದು ಹಟ ಹಿಡಿದು ಅಲ್ಲೇ ಸೇರಿಸುತ್ತಾಳೆ.
ಆತನಿಗೆ ಬಾಲ್ಯದಿಂದ ಇದ್ದ ಒಬ್ಬಳೇ ಗೆಳತಿ ಜೆನ್ನಿ. ಓರಗೆಯ ಹುಡುಗರು ಲೇವಡಿ ಮಾಡುತ್ತಾರೆ. ಕಂಡರೆ ಕಲ್ಲು ತೂರುತ್ತಾರೆ. ಕಲ್ಲು ತೂರಿದಾಗೆಲ್ಲ ಜೆನ್ನಿ ಕೂಗುತ್ತಾಳೆ– ಓಡು ಫಾರೆಸ್ಟ್... ಓಡು! ಹಾಗೆ ಓಡಲು ಶುರು ಮಾಡಿದಾತ ಗಂಪ್. ಜೀವನದ ಓಟದಲ್ಲಿ ಎಷ್ಟೊಂದು ಮುಂದೆ ಬರುತ್ತಾನೆಂದರೆ, ರಗ್ಬಿ ಆಟದಲ್ಲಿ ಮಿಂಚಿನ ಓಟದಿಂದ ರಾಜ್ಯಕ್ಕೇ ಕೀರ್ತಿ ತರುತ್ತಾನೆ. ಸೈನಿಕನಾಗಿ, ವಿಯೆಟ್ನಾಂ ಯುದ್ಧದಲ್ಲಿ ಕರ್ನಲ್ ಸಹಿತ ಐದಾರು ಸೈನಿಕರ ಪ್ರಾಣ ಉಳಿಸಿ ರಾಷ್ಟ್ರಾಧ್ಯಕ್ಷರ ಪದಕ ಪಡೆಯುತ್ತಾನೆ. ಯುದ್ಧದಲ್ಲಿ ಕಣ್ಣ ಮುಂದೆಯೇ ಸತ್ತ ಗೆಳೆಯನ ಕನಸನ್ನು ನನಸು ಮಾಡಲು, ಸೀಗಡಿ ಮೀನುಗಾರಿಕೆಯ ಬೋಟ್ ಖರೀದಿಸಿ ದೊಡ್ಡದೊಂದು ಉದ್ಯಮ ಸ್ಥಾಪಿಸುತ್ತಾನೆ. ಪಿಂಗ್‌ಪಾಂಗ್ ಆಟದಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೆಲ್ಲುತ್ತಾನೆ. ಇಷ್ಟೆಲ್ಲ ಆದರೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಜೆನ್ನಿ ಮದುವೆಗೆ ಒಪ್ಪುವುದಿಲ್ಲ. ಅವಳಿಗೆ ಗಾಯಕಿಯಾಗುವ ಹುಚ್ಚು. ದುಃಖ ಮರೆಯಲು ಗಂಪ್ ನಿರಂತರ ಮೂರು ವರ್ಷ, ಎರಡು ತಿಂಗಳ ಕಾಲ ದೇಶದುದ್ದಕ್ಕೂ ಓಡುತ್ತಾನೆ. ಕೊನೆಗೆ ಅದೂ ಸಾಕಾಗಿ ವಾಪಸಾಗುತ್ತಾನೆ. ಸಿನಿಮಾದ ಕೊನೆಯಲ್ಲಿ ಜೆನ್ನಿಯೂ ಆತನ ಮನೆ ಸೇರುತ್ತಾಳೆ– ಆತನಿಂದಲೇ ಹುಟ್ಟಿದ ಮಗು ಮತ್ತು ಗುಣವಾಗದ ವೈರಸ್ ಕಾಯಿಲೆಯೊಂದರ ಜೊತೆಗೆ. ಕೊನೆಗೆ ಜೆನ್ನಿಯನ್ನೂ ಕಳೆದುಕೊಂಡು ಪುಟ್ಟ ಮಗುವನ್ನು ಸಾಕುತ್ತಾ ಬದುಕು ಸಾಗಿಸುತ್ತಾನೆ ಗಂಪ್.
‘ಅಮ್ಮ ಹೇಳುತ್ತಿದ್ದಂತೆ ಈ ಬದುಕು ಪೂರ್ವನಿರ್ಧರಿತ ವಿಧಿ ಲಿಖಿತವೇ? ಅಥವಾ ಕರ್ನಲ್ ಹೇಳುತ್ತಿದ್ದಂತೆ ಅಯಾಚಿತವಾಗಿ ತೇಲಿ ಹೋಗುವ ಗಾಳಿಯಂತೆಯೇ? ನನಗೆ ಗೊತ್ತಾಗುತ್ತಿಲ್ಲ...’ ಎನ್ನುತ್ತಾನೆ ಗಂಪ್.ಈ ಚಿತ್ರ 1994ರ ‘ಅತ್ಯುತ್ತಮ ಚಿತ್ರ’ವೆಂದು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತು. ಟಾಮ್ ಹ್ಯಾಂಕ್ಸ್‌ಗೆ ‘ಶ್ರೇಷ್ಠ ನಟ’ ಪ್ರಶಸ್ತಿ. ರಾಬರ್ಟ್ ಝೆಮೆಕಿಸ್ ನಿರ್ದೇಶಿಸಿದ ಈ ಚಿತ್ರಕ್ಕೆ, ವಿನ್‌ಸ್ಟನ್ ಗ್ರೂಮ್ ಬರೆದ ಕಾದಂಬರಿಯೇ ಆಧಾರ.
ಈಗ ಅದೇ ಸಿನಿಮಾವನ್ನು ಅಮೀರ್ ಖಾನ್ ಹಿಂದೀಕರಿಸಿ ‘ಲಾಲ್‌ಸಿಂಗ್ ಛಡ್ಡಾ’ ಎಂಬ ಹೆಸರಿನಲ್ಲಿ ಮಾಡುತ್ತಿದ್ದಾರೆ. ವಿಯೆಟ್ನಾಂ ಯುದ್ಧದ ಬದಲಿಗೆ ಈ ಚಿತ್ರದಲ್ಲಿ ದೆಹಲಿ ಸಿಖ್‌ವಿರೋಧಿ ಗಲಭೆಯ ಚಿತ್ರಣ ಇದೆಯಂತೆ. ಹಿಂದೆ ‘ಪೀಕೆ’ ಸೃಷ್ಟಿಸಿದಂತೆ, ಈ ಚಿತ್ರವೂ ವಿವಾದ ಸೃಷ್ಟಿಸಬಹುದು. ಅದು ಬೇರೆ ವಿಷಯ. ಇಲ್ಲಿ ಪ್ರಸ್ತಾಪಿಸಲು ಹೊರಟಿರುವುದು ನಮ್ಮವರ ‘ಆಸ್ಕರ್’ ಮೋಹದ ಕುರಿತು.
2001ರಲ್ಲಿ ಅಮೀರ್ ನಿರ್ಮಿಸಿ, ನಟಿಸಿದ ‘ಲಗಾನ್’ (ನಿರ್ದೇಶನ: ಅಶುತೋಷ್ ಗೋವರಿಕರ್) ಆಸ್ಕರ್‌ನ ‘ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರ’ ವಿಭಾಗದಲ್ಲಿ ಅಂತಿಮ ಐದರ ಘಟ್ಟಕ್ಕೆ ಬಂದು, ಕೊನೆಗೆ ಬೋಸ್ನಿಯಾದ ‘ನೋ ಮ್ಯಾನ್ಸ್ ಲ್ಯಾಂಡ್’ ಎದುರು ಸೋಲಪ್ಪಿತು. ಅದಾಗಿ 11 ವರ್ಷಗಳ ಬಳಿಕ ಹರ್ಷ ಭಟ್ಕಳ ಬರೆದ ‘ಸ್ಪಿರಿಟ್ ಆಫ್ ಲಗಾನ್’ ಪುಸ್ತಕ, ಬೆಂಗಳೂರಿನಲ್ಲಿ ಕೆಲವೇ ಆಹ್ವಾನಿತರ ಮುಂದೆ ಬಿಡುಗಡೆ ಕಂಡಿತು. ಅವತ್ತು ಅಮೀರ್ ಖಾನ್ ತಮ್ಮ ಹೋಟೆಲ್ ಕೊಠಡಿಯಲ್ಲಿ ಅರ್ಧ ಗಂಟೆ ಮಾತಿಗೆ ಸಿಕ್ಕಿದ್ದರು. ಆಸ್ಕರ್ ಪ್ರಸ್ತಾಪ ಬಂದಾಗ ‘ಅದೃಷ್ಟ ಇರಲಿಲ್ಲ ಬಿಡಿ’ ಎಂದು ಹೆಬ್ಬೆರಳನ್ನು ಹಣೆಗೆ ಅಡ್ಡಲಾಗಿ ತೀಡಿದ್ದರು.ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಒಟ್ಟು ಐದು ಸಲ ಅಮೀರ್ ಖಾನ್ ನಟಿಸಿದ ಚಿತ್ರಗಳು ಎಂಟ್ರಿಯಾಗಿವೆ. ಅದರಲ್ಲಿ ಅವರೇ ನಿರ್ದೇಶಿಸಿದ ‘ತಾರೆ ಜಮೀನ್ ಪರ್’ ಕೂಡಾ ಸೇರಿದೆ. ಈ ವರ್ಷ ಆಸ್ಕರ್ ಮೋಹವನ್ನು ಬದಿಗೆ ಸರಿಸಿ, ಆಸ್ಕರ್ ಗೆದ್ದ ಚಿತ್ರದ ರಿಮೇಕ್‌ಗೆ ಅವರು ಮುಂದಾದಂತಿದೆ!
ಭಾರತೀಯರ ಆಸ್ಕರ್ ಮೋಹ ಇಂದು ನಿನ್ನೆಯದಲ್ಲ. ಅಮೆರಿಕದ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್’ ಆರಂಭಿಸಿದ ಈ ಪ್ರಶಸ್ತಿಯು ಆಸ್ಕರ್ ಎಂದೇ ಜನಪ್ರಿಯ. 1955ರವರೆಗೆ ಅಮೆರಿಕದಲ್ಲಿ ಬಿಡುಗಡೆಯಾದ ವಿದೇಶಿ ಚಿತ್ರಗಳಿಗೆಂದು ಸ್ಪರ್ಧೆಯಿಲ್ಲದ ಗೌರವ ಪ್ರಶಸ್ತಿ ಇತ್ತು. ಬಳಿಕ ‘ಬೆಸ್ಟ್ ಫಾರಿನ್ ಲ್ಯಾಂಗ್ವೇಜ್ ಫಿಲ್ಮ್’ಗೆ ಜಗತ್ತಿನ ಎಲ್ಲ ದೇಶಗಳಿಂದ ಎಂಟ್ರಿ ಪಡೆದು ಸ್ಪರ್ಧೆ ಶುರು ಮಾಡಿದರು. ಈಗ ಅದು ‘ಬೆಸ್ಟ್ ಇಂಟರ್ ನ್ಯಾಷನಲ್ ಫೀಚರ್ ಫಿಲ್ಮ್’ ಎಂದಾಗಿದೆ.
1957ರಲ್ಲಿ ಮೆಹಬೂಬ್ ಖಾನ್ ನಿರ್ದೇಶನದ ‘ಮದರ್ ಇಂಡಿಯಾ’ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿತ್ತು. ಆಗ ‘ನೈಟ್ಸ್ ಆಫ್ ಕ್ಯಾಬೆರಿಯ’ ಚಿತ್ರದ ವಿರುದ್ಧ ಫೈನಲ್‌ನಲ್ಲಿ ಒಂದು ವೋಟ್‌ನಿಂದ ‘ಮದರ್ ಇಂಡಿಯಾ’ ಸೋತಿತ್ತು.1988ರಲ್ಲಿ ಆಸ್ಕರ್ ಅಂತಿಮ ಸುತ್ತಿಗೆ ಬಂದದ್ದು ಮೀರಾ ನಾಯರ್ ನಿರ್ದೇಶನದ ‘ಸಲಾಂ ಬಾಂಬೆ’. ಮೂರನೆಯದ್ದು ‘ಲಗಾನ್’. ಆದರೆ ಮೂರೂ ಫಲ ನೀಡಲಿಲ್ಲ.
ಭಾರತ ಈವರೆಗೆ ಆಸ್ಕರ್ ಪ್ರಶಸ್ತಿಗೆ 50ಕ್ಕೂ ಹೆಚ್ಚು ಎಂಟ್ರಿಗಳನ್ನು ಕಳಿಸಿದೆ. ಸತ್ಯಜಿತ್ ರೇ ನಿರ್ದೇಶನದ ‘ಅಪೂರ್ ಸಂಸಾರ್’, ‘ಮಹಾನಗರ್’ ಮತ್ತು ‘ಶತ್ರಂಜ್ ಕೆ ಖಿಲಾಡಿ’ ಎಂಟ್ರಿ ಪಡೆದಿದ್ದವು. ಎಂಟ್ರಿ ಪಡೆದ ಒಂಬತ್ತು ತಮಿಳು ಚಿತ್ರಗಳಲ್ಲಿ ಏಳು ಕಮಲಹಾಸನ್ ನಟಿಸಿದವು.
ಮೂರು ಸಲ ಮರಾಠಿ, ಎರಡು ಸಲ ಬಂಗಾಳಿ ಮತ್ತು ಮಲಯಾಳಿ, ತಲಾ ಒಂದು ಸಲ ತೆಲುಗು, ಗುಜರಾತಿ, ಕೊಂಕಣಿ ಮತ್ತು ಅಸ್ಸಾಮಿ ಚಿತ್ರಗಳು ಭಾರತದಿಂದ ಹೋಗಿವೆ. ಆದರೆ ಯಾವ ಕನ್ನಡ ಚಿತ್ರವೂ ಈವರೆಗೆ ಭಾರತದಿಂದ ಆಸ್ಕರ್‌ಗೆ ಎಂಟ್ರಿ ಪಡೆದಿಲ್ಲ. ಕನ್ನಡಿಗ ಎಂ.ಎಸ್.ಸತ್ಯು ನಿರ್ದೇಶನದ ಉರ್ದು ಚಿತ್ರ ‘ಗರಂ ಹವಾ’ 1974ರಲ್ಲಿ ಎಂಟ್ರಿ ಪಡೆದಿತ್ತು.
ಆಸ್ಕರ್ ಜ್ಯೂರಿಗಳಿಗೆ ಭಾರತೀಯರ ‘ಸಿನಿಮಾ ಭಾಷೆ’ ಅರ್ಥವಾಗುವುದಿಲ್ಲ ಎನ್ನುವವರಿದ್ದಾರೆ. ಸಮಿತಿಯಲ್ಲಿರುವ 2ರಿಂದ 3 ಸಾವಿರ ಸದಸ್ಯರು ನಮ್ಮ ಸಿನಿಮಾ ನೋಡುವಂತೆ ಲಾಬಿ ಮಾಡಲು ₹ 2–3 ಕೋಟಿ ಖರ್ಚಾಗುತ್ತದಂತೆ.
ಫಿಲಂ ಫೆಡರೇಷನ್ ಆಫ್ ಇಂಡಿಯಾ (ಎಫ್‌ಎಫ್‌ಐ) ನಮ್ಮ ಚಿತ್ರಗಳನ್ನು ಆಯ್ಕೆ ಮಾಡುವಾಗಲೂ ‘ಗುರು’, ‘ನಾಯಗನ್’ ಮುಂತಾದ ನಕಲು ಕಥೆಗಳ ಚಿತ್ರಗಳನ್ನೇ ಕಳಿಸಿ ಎಡವಿದ್ದಿದೆ.
ಸತ್ಯಜಿತ್ ರೇ ಅವರ ಚಾರುಲತಾ, ಶಾಜಿಯವರ ‘ಪಿರವಿ’ ಮುಂತಾದ ಅತ್ಯುತ್ತಮ ಚಿತ್ರಗಳು ಹೋಗಲೇ ಇಲ್ಲ. ಆಸ್ಕರ್‌ಗಿಂತ ಕಾನ್ ಫೆಸ್ಟಿವಲ್‌ನಲ್ಲಿ ಆಯ್ಕೆಯಾಗುವ ಚಿತ್ರಗಳೇ ಶ್ರೇಷ್ಠ ಎನ್ನುವವರಿದ್ದಾರೆ.
‘ಜಾಸ್’, ‘ಟೈಟಾನಿಕ್’ ಮುಂತಾಗಿ ಆಸ್ಕರ್ ಗೆದ್ದ ಚಿತ್ರಗಳು ‘ಕಾನ್ ಫೆಸ್ಟಿವಲ್’ನಲ್ಲಿ ಬೋರ್ಡಿಗೇ ಬರಲಿಲ್ಲ ಎನ್ನುವುದೂ ನಿಜ. ಹಾಗೆಂದು ನಮ್ಮ ಚಿತ್ರಬ್ರಹ್ಮರಿಗೆ ಇವತ್ತಿಗೂ ಆಸ್ಕರ್‌ನ ಮೋಹ ಕಡಿಮೆಯಾಗಿಲ್ಲ. ಆಸ್ಕರ್ ಎಂಬ ‘ಚಾಕೊಲೇಟ್ ಬಾಕ್ಸ್’ ಅವರನ್ನು ಮಾಯಾಜಿಂಕೆಯಂತೆ ಕಾಡುತ್ತಲೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.