ಒಂದು ಸಮುದಾಯ ಏನೆಂಬುದು ಅಲ್ಲಿರುವ ಶಾಲೆಯನ್ನು ನೋಡಿದರೆ ತಿಳಿಯುತ್ತದೆ. ತಾಳಿಕೋಟೆಯ ಈ ಶಾಲೆ ಒಂದೊಮ್ಮೆ ಮನಬಂದುದನ್ನು ಮಾಡುವುದಕ್ಕೆ ತೆರೆದ ಜಾಗವಾಗಿ, ಶಿಕ್ಷಣಕ್ಕೆ ಮಾತ್ರ ಸಲ್ಲದಂತಿತ್ತು. ಹಂಪಿಯ ಪಾಳನ್ನು ನೆನೆದರೆ ಅದು ಮನಸ್ಸನ್ನು ಕಾಡುತ್ತದೆ. ಅಲ್ಲಿಯ ಹಾದಿಗಳಲ್ಲಿ ಕಾಣುವ ಮಹಾ ಬಂಡೆಗಳ ಅಸಾಧಾರಣವೆನ್ನುವ ಸಮತೋಲನ, ನಡುನಡುವೆ ಅಲ್ಲಲ್ಲಿ ಚೆಲ್ಲಿಕೊಂಡಿರುವ ಹಸಿರು ತುಂಬಿದ ಭತ್ತದ ಗದ್ದೆಗಳು, ಪ್ರಶಾಂತವಾಗಿ ಹರಿಯುವ ತುಂಗಭದ್ರಾ ನದಿ, ಅಸಾಧ್ಯವಾದುದೇನೋ ಅಲ್ಲಿ ಸಂಭವಿಸಿದೆ ಎಂಬ ಭಾವನೆಯಲ್ಲಿ ನಿಮ್ಮನ್ನು ತೋಯಿಸುತ್ತವೆ. ಹಂಪಿ, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯ ಕೊನೆಗೊಂಡ ನಿಖರ ದಿನ 1565, ಜನವರಿ 26. ಆ ದಿನ ಸಾಮ್ರಾಜ್ಯದ ಸೇನೆಯು ನೆರೆಯ ಸುಲ್ತಾನ ರಾಜ್ಯಗಳ ಜಂಟಿ ಸೇನೆಯ ಎದುರು, ಹಂಪಿಯಿಂದ 180 ಕಿ.ಮೀ. ದೂರದ ತಾಳಿಕೋಟೆಯಲ್ಲಿ ನಡೆದ ಯುದ್ಧದಲ್ಲಿ ಸೋತುಹೋಯಿತು. ಚರಿತ್ರೆಯಲ್ಲಿ ನಡೆದ ಈ ರೀತಿಯ ಎಲ್ಲ ಪ್ರಮುಖ ಯುದ್ಧಗಳಲ್ಲೂ ಸಾಮಾನ್ಯವಾಗಿರುವಂತೆ ಆ ದುರಂತದ ದಿನ ಏನಾಯಿತು ಎಂಬುದರ ಕುರಿತು ಪರ– ವಿರೋಧದ ಉಲ್ಲೇಖಗಳಿವೆ. ಆದರೆ ತಾಳಿಕೋಟೆಯ ಯುದ್ಧ ಅಸಾಮಾನ್ಯವಾಗಿದ್ದ ಒಂದು ಸಾಮ್ರಾಜ್ಯಕ್ಕೆ ಕೊನೆ ಹಾಡಿತು ಎಂಬುದು ಮಾತ್ರ ವಿವಾದಾತೀತವಾಗಿ ಉಳಿದಿದೆ.
ಇವತ್ತು ತಾಳಿಕೋಟೆಯಲ್ಲಿ ಅದು ಭಾರತದ ಚರಿತ್ರೆಯಲ್ಲಿ ವಹಿಸಿದ ಮುಖ್ಯ ಪಾತ್ರವನ್ನು ತೋರುವ ಯಾವ ಗುರುತೂ ಉಳಿದಿಲ್ಲ. ಸ್ಮರಣಿಕೆಗಳಿಲ್ಲ, ಹಾಳು ಕುರುಹುಗಳಿಲ್ಲ, ಭಾರತದ ಇನ್ನಾವುದೇ ಪುಟ್ಟ ಪಟ್ಟಣದಂತೆ ಇಲ್ಲೂ ವಿಶಾಲವಾದ ಮೈದಾನದ ಹರಹು ಮಾತ್ರವಿದೆ. ಆದರೆ, 500 ವರ್ಷಗಳು ಕಳೆದರೂ ನೆನಪುಗಳು ಮರೆಯಾಗುವುದಿಲ್ಲ. ಪರಊರಿನವರೊಂದಿಗೆ ಇಲ್ಲಿನವರು ನಡೆಸುವ ಮಾತುಕತೆಗಳೆಲ್ಲದರಲ್ಲೂ ಯುದ್ಧದ ನೆನಪು ಇಣುಕುತ್ತದೆ. ತಾಳಿಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಅಮೀನ್‍ಸಾಬ್ ಮೆಹಬೂಬ್‍ಸಾಬ್ ನಜ್‌ಕಟ್ಟಿ ಅವರೂ ಮಾತನ್ನು ತಾಳಿಕೋಟೆಯ ಯುದ್ಧದಿಂದಲೇ ಪ್ರಾರಂಭಿಸಿದರು. ಆದರೆ, ಬಲುಬೇಗ ಬೇರೆ ವಿಷಯಕ್ಕೆ ಹೊರಳಿ ಅವರ ಕಥೆಯನ್ನು ನಮಗೆ ಹೇಳಿದರು.
ನಜ್‌ಕಟ್ಟಿ 2015ರ ಪ್ರಾರಂಭದಲ್ಲಿ ಈ ಶಾಲೆಗೆ ವರ್ಗಾವಣೆ ಕೋರಿದರು. ಅದು ಯಾವುದೇ ವೈಯಕ್ತಿಕ ಕಾರಣದಿಂದಲ್ಲ. ಅವರು ಸ್ವತಃ ಓದಿದ ಈ ಶಾಲೆಯಲ್ಲಿ ಸೇವೆ ಸಲ್ಲಿಸುವುದು ಅವರ ಇಚ್ಛೆಯಾಗಿತ್ತು. ಅದು 1876ರಲ್ಲಿ ಸ್ಥಾಪಿತವಾಗಿ, ಆ ಪ್ರದೇಶದ ನಿರ್ಣಾಯಕ ಶೈಕ್ಷಣಿಕ ಸಂಸ್ಥೆಯಾಗಿ, ದೊಡ್ಡ ಚರಿತ್ರೆಯನ್ನೇ ಸೃಷ್ಟಿಸಿಕೊಂಡಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಕಳೆಗುಂದಿತ್ತು. ಬೋಧನೆ ಮತ್ತು ಕಲಿಕೆ ಅಕ್ಷರಶಃ ಶೂನ್ಯವನ್ನು ತಲಪಿದ್ದವು. ಅಷ್ಟೇ ಅಲ್ಲ, ಶಾಲೆಯು ಪುಂಡರ ಹೀನ ಕೆಲಸಗಳಿಗೆ ದುರ್ಬಳಕೆಯಾಗುತ್ತಿತ್ತು. ಮದ್ಯದ ಬಾಟಲಿಗಳು ಮತ್ತು ನಾರುವ ಕಸದ ರಾಶಿಗಳು ದಂಡಿಯಾಗಿದ್ದವು.
ಶಾಲೆಯ ಶಿಕ್ಷಣ ತಮಗೇನು ಮಾಡಿತು ಎಂಬ ಪ್ರಜ್ಞೆಯಿದ್ದ ನಜ್‌ಕಟ್ಟಿ ಮತ್ತು ಅವರಂಥ ಇತರರಿಗೆ, ಶಾಲೆ ಪಾತಾಳಸ್ಥಿತಿಗೆ ತಲಪುವುದನ್ನು ನೋಡುತ್ತಾ ಕೂರುವುದಕ್ಕಾಗಲಿಲ್ಲ. ನಿವೃತ್ತಿಗೆ ನಜ್‌ಕಟ್ಟಿ ಅವರಿಗಿನ್ನೂ ನಾಲ್ಕು ವರ್ಷಗಳ ಅವಧಿಯಿತ್ತು. ಹಾಗಾಗಿ, ಅಲ್ಲಿಯ ಪರಿಸ್ಥಿತಿಯನ್ನು ಪ್ರಯತ್ನಪಟ್ಟು ಸುಧಾರಿಸುವ ಇಚ್ಛೆಯಿಂದ ಅವರು ತಮ್ಮನ್ನು ಆ ಶಾಲೆಗೆ ವರ್ಗಾಯಿಸುವಂತೆ ಕೋರಿದ್ದರು.
ಅಲ್ಲಿಗೆ ಬಂದ ಮೇಲೆ, ಅಲ್ಲಿಯ ಗುಪ್ತ ಚೋದಕಶಕ್ತಿಗಳ ಪ್ರಭಾವ ತಾವು ಊಹಿಸಿದ್ದಕ್ಕಿಂತ ಕ್ಲಿಷ್ಟವಾಗಿರುವುದು ಗಮನಕ್ಕೆ ಬಂತು. ಶಾಲೆಯು ಸಲ್ಲದ ಸಾಮಾಜಿಕ ಚಟುವಟಿಕೆಗಳ ಸ್ಥಳವಾಗಿ ಎಲ್ಲರಿಗೂ ಸ್ವಚ್ಛಂದವಾದ, ಆದರೆ ಶಿಕ್ಷಣಕ್ಕೆ ಮಾತ್ರ ಗಮನ ನೀಡದ ತಾಣವಾಗಿ ಹೋಗಿತ್ತು. ಅದರ ಹಾಳುಬಿದ್ದ ಕಟ್ಟಡಗಳು, ಅಲ್ಲಿಯ ಸಂಸ್ಕೃತಿ ಏನೆಂಬುದನ್ನು ಎತ್ತಿ ತೋರುತ್ತಿದ್ದವು.
ಸ್ವಲ್ಪ ದಿನಗಳವರೆಗೆ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದ ಅವರು, ರಾಜಕೀಯ ಮತ್ತು ಜಾತಿ ಗುಂಪುಗಾರಿಕೆಯನ್ನು ಮೀರಿ, ಸ್ಥಳೀಯ ಸಮುದಾಯದ ನಾಯಕರನ್ನು ಒಟ್ಟು ಸೇರಿಸಿದರು. ಅದೇನೂ ಬಾಯಲ್ಲಿ ಹೇಳುವಷ್ಟು ಸುಲಭದ್ದಾಗಿರಲಿಲ್ಲ. ಅದಕ್ಕೊಂದು ಅಸಾಧ್ಯವೆನ್ನುವ ಜಿಗುಟುತನ ಬೇಕಿತ್ತು. ಒಂದು ಸಲ ಅವರನ್ನೆಲ್ಲ ಸೇರಿಸಿದ ಮೇಲೆ, ನಜ್‌ಕಟ್ಟಿ ಅವರು ಕೇಳಿದ ಪ್ರಶ್ನೆ, ‘ಈ ಶಾಲೆ ತಲುಪಿರುವ ಸ್ಥಿತಿ, ಸಮುದಾಯ ತಲುಪಿರುವ ಸ್ಥಿತಿಯನ್ನೇ ಬಿಂಬಿಸುವಂತಿರಬೇಕೇ?’ ಎಂದು. ಶಾಲೆಯಲ್ಲಿ ಏನೇನು ನಡೆಯುತ್ತದೆ ಎಂಬುದು ಸುತ್ತೆಲ್ಲ ಜನಜನಿತವಾಗಿತ್ತು. ಅವರ ಮಾತು ಸರಳವಿತ್ತು, ನೇರವಿತ್ತು. ಯಾರೂ ಪ್ರತ್ಯುತ್ತರ ನೀಡಲಿಲ್ಲ. ಅವರು ಸುಮ್ಮನಿದ್ದುದಕ್ಕೆ ವೈವಿಧ್ಯ ಕಾರಣಗಳಿದ್ದವು. ಅವು ನೈಜ ನೋವಿನಿಂದ ಹಿಡಿದು ಗಾಸಿಗೊಂಡ ಅಹಂವರೆಗೂ ಚಾಚಿಕೊಂಡಿದ್ದವು. ಹಾಗಿದ್ದೂ ಏನಾದರೂ ಮಾಡೋಣ ಅನಿಸಿದ್ದು ಮಾತ್ರ ನಿಜವಾಗಿತ್ತು. ಮತ್ತೂ ಸ್ವಲ್ಪ ಚರ್ಚೆಯ ನಂತರ, ಪರಿಸ್ಥಿತಿಯನ್ನು ಬದಲಾಯಿಸುವುದಕ್ಕೆ ಕೆಲವು ಯುವ ನಾಯಕರನ್ನು ತೊಡಗಿಸಿಕೊಳ್ಳಬೇಕು. ಅವರು, ಶಾಲೆಯ ಸಮಸ್ಯೆಗಳಿಗೆ ಕಾರಣರಾಗುತ್ತಿರುವವರ ಸಂಗಡ ಒಡನಾಟವಿರುವವರೂ ಆಗಿರಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು. ಇಷ್ಟಾದ ಮೇಲೆ, ತಳಮಟ್ಟದ ಕಾರ್ಯಾಚರಣೆ ಪ್ರಾರಂಭವಾಯಿತು. ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯು ನಿರ್ಣಾಯಕ ಪಾತ್ರಕ್ಕೆ ಮುಂದಾಯಿತು. ಆದ್ಯತೆಯ ಒಂದು ಕೆಲಸ, ಶಾಲೆಯನ್ನು ಹೊರಗಿನವರ ಹಸ್ತಕ್ಷೇಪದಿಂದ ಮುಕ್ತಗೊಳಿಸುವುದಾಗಿತ್ತು. ಇನ್ನೊಂದು ಕೆಲಸ, ಶಾಲೆಯ ಬಗೆಗೆ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಭದ್ರಪಡಿಸುವುದಾಗಿತ್ತು.
ಅಂತಹ ಆರಂಭಿಕ ಕ್ರಮಗಳಿಂದ ಕೆಲವು ಶಿಕ್ಷಕರಿಗೆ ಹೊಣೆಯರಿತು ತಾವೇನು ಮಾಡಬೇಕು ಎಂಬ ಸೂಚನೆ ಸಿಕ್ಕಿದರೆ, ಉಳಿದವರಿಗೆ ಕೆಲಸ ಮಾಡುವ ಮಾನಸಿಕ ಸ್ಥೈರ್ಯ ಬಂತು. ಸಮುದಾಯವು ಶಾಲಾ ವಠಾರವನ್ನು ಸ್ವಚ್ಛಗೊಳಿಸಲು ನೆರವಾಯಿತು. 6 ಅಡಿಗಳೆತ್ತರದ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿತು. ಇನ್ನೂ ಎಷ್ಟೋ ಕೆಲಸಗಳಾಗಿ ವಿದ್ಯಾರ್ಥಿಗಳು ಸಮುದಾಯದ ಮುಂದೆ ದೊಡ್ಡ ಮಟ್ಟದ ಸಾಂಸ್ಕೃತಿಕ ಮೇಳವನ್ನು ಪ್ರಸ್ತುತಪಡಿಸುವಷ್ಟು ಬೆಳವಣಿಗೆಗಳಾದವು. ಪ್ರತಿಯೊಬ್ಬರೂ ತಮ್ಮ ಮಕ್ಕಳ ಸಾಧನೆಗೆ ಅಭಿಮಾನಪಟ್ಟು ಬೀಗಿದರು.
ನಾವು ಶಾಲೆಯ ಸುತ್ತ ನಡೆದಾಡುತ್ತಿದ್ದಾಗ, ಬಿಸಿಯೂಟದ ಅಡುಗೆ ಸಹಾಯಕಿ ನಮ್ಮೊಂದಿಗೆ ಮಾತಿಗೆ ತೊಡಗಿದರು. ನಡುವೆ ಭಾವುಕರಾದ ಅವರು, ‘ನಾನು ಪ್ರತಿದಿನ ನಜ್‍ಕಟ್ಟಿಯವರಿಗಾಗಿ ಪ್ರಾರ್ಥಿಸುತ್ತೇನೆ. ಅವರು ಇನ್ನೂ ಬಹಳ ವರ್ಷ ಶಾಲೆಯಲ್ಲಿ ಮುಂದುವರಿಯಬೇಕು ಎಂಬುದು ನನ್ನ ಆಸೆ’ ಎಂದರು. ಪ್ರಾರಂಭದಲ್ಲಿ ಪುಂಡರು ತನ್ನನ್ನು ಹೇಗೆ ವಿನಾಕಾರಣ ಸತಾಯಿಸುತ್ತಿದ್ದರು ಮತ್ತು ಈಗ ಹೇಗೆ ಖುಷಿಯಿಂದ ಇದ್ದೇನೆ ಎಂದುಸಂತೋಷದಿಂದ ಹೇಳಿಕೊಂಡರು. ಶಾಲೆಯನ್ನು ಹದ್ದು ಬಸ್ತಿಗೆ ತಂದು ಶಿಸ್ತನ್ನು ರೂಪಿಸಿದ ಮೇಲೆ, ಮುಖ್ಯ ಶಿಕ್ಷಕರು ಈಗ ಮುಂದಿನ ನಡೆಗೆ ಮುಂದಾಗಿದ್ದಾರೆ. ಉಳಿದಿರುವ ತಮ್ಮ ಸೇವಾವಧಿಯಲ್ಲಿ ಮಕ್ಕಳ ಕಲಿಕೆಯನ್ನು ಸುಧಾರಿಸುವ ಕ್ರಮಕ್ಕೆ ಶಿಕ್ಷಕರ ಜೊತೆ ಬದ್ಧತೆಯಿಂದ ದುಡಿಯುತ್ತಿದ್ದಾರೆ. ಸಮುದಾಯದವರ ನೇತೃತ್ವದಲ್ಲಿ ಶಾಲೆಯ ಖಾಲಿ ಕೊಠಡಿಯೊಂದನ್ನು ಅಣಿಗೊಳಿಸಿ ಅನೌಪಚಾರಿಕ ಪೂರ್ವ ಪ್ರಾಥಮಿಕ ತರಗತಿ ನಡೆಸುವ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಹಲವು ವರ್ಷಗಳ ನಂತರ ಶಾಲೆಯ ದಾಖಲಾತಿ 170ರಿಂದ 230ಕ್ಕೇರಿದೆ.
ಭಾರತಕ್ಕೆ ಹೀರೊಗಳ ಅವಶ್ಯಕತೆ ಇಲ್ಲದಿದ್ದರೆ ಚೆನ್ನಾಗಿರುತ್ತಿತ್ತು! ಆದರೆ ಅಗತ್ಯವಿದೆ! ಅದೃಷ್ಟವಶಾತ್ ಅಂಥವರು ತುಂಬಾ ಮಂದಿ ಇದ್ದಾರೆ! ಅವರಲ್ಲಿ ಒಬ್ಬರು ತೆಳು ದೇಹದವರು, ಕುರುಚಲು ಬಿಳಿಗಡ್ಡದವರು ಮತ್ತು ಮಾಸಲು ಬಿಳಿ ಉಡುಪಿನವರು. ಈ ಬಾಹ್ಯ ರೂಪ ಅವರು ತಾಳಿಕೋಟೆಯಲ್ಲಿ ನಡೆಸುತ್ತಿರುವ ಹೋರಾಟವನ್ನು ಸುಳ್ಳು ಎನಿಸುವಂತೆ ಕಾಣಿಸಬಹುದು. 1565ರ ಆ ದಿನಕ್ಕೆ ತದ್ವಿರುದ್ಧವಾಗಿ ಇದು ಒಂದು ಅಸಾಮಾನ್ಯವಾದದ್ದರ ಪ್ರಾರಂಭವೇ ಹೌದು.
ಲೇಖಕ: ಕುಲಪತಿ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.