ಭಾರತ ಕ್ರಿಕೆಟ್ ತಂಡವು ಈ ಸಲ ಟಿ20 ವಿಶ್ವಕಪ್ ಜಯಿಸಲು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆಯನ್ನು ಯಾರಿಗಾದರೂ ಕೇಳಿದರೆ ‘ಸಂಘಟಿತ ಆಟ’ದಿಂದ ಎಂಬ ಉತ್ತರ ಬರುತ್ತದೆ. ಇದು ನಿಜವೂ ಹೌದು. ಈ ಬಾರಿಯ ಟೂರ್ನಿಯ ಎಲ್ಲ ಪಂದ್ಯಗಳನ್ನು ಅವಲೋಕಿಸುತ್ತ ಹೋದರೆ ಬರೀ ಒಬ್ಬ ಆಟಗಾರನ ಪ್ರದರ್ಶನದ ಮೇಲೆ ತಂಡ ಅವಲಂಬಿತವಾಗಿರಲಿಲ್ಲ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟು ತಂಡದ ಗೆಲುವಿಗೆ ಕಾಣಿಕೆ ನೀಡಿದ್ದಾರೆ. ಇದರ ಶ್ರೇಯ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರಿಗೇ ಸಲ್ಲಬೇಕು.
ಸುಮಾರು ಎರಡು ವರ್ಷಗಳ ಹಿಂದೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ನೇಮಕ ಮಾಡಿದಾಗ ಅವರು ಮತ್ತು ವಿರಾಟ್ ಕೊಹ್ಲಿ ನಡುವಿನ ವೈಮನಸ್ಸು ಕುರಿತು ಮಾತುಗಳು ಕೇಳಿಬಂದಿದ್ದವು. ವಿಶ್ವದ ಅಗ್ರಮಾನ್ಯ ಬ್ಯಾಟರ್‌ಗಳಾದ ವಿರಾಟ್ ಮತ್ತು ರೋಹಿತ್ ಮನೋಭಾವ ತದ್ವಿರುದ್ಧ ಎಂದು ಹೇಳಲಾಗಿತ್ತು. ಆದರೆ ಅವರಿಬ್ಬರೂ ತಮಗಿಂತ ಆಟ ದೊಡ್ಡದು ಎಂದು ಅರಿತು ಕೈಜೋಡಿಸಿದ್ದು ತಂಡಕ್ಕೆ ಲಾಭವಾಯಿತು. 2022ರ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಎರಡು ಅಮೋಘ ಸಿಕ್ಸರ್‌ಗಳನ್ನು ಹೊಡೆದಿದ್ದ ವಿರಾಟ್ ಆ ಪಂದ್ಯದ ಗೆಲುವಿನ ರೂವಾರಿಯಾಗಿದ್ದರು. ಪಿಚ್‌ಗೆ ಓಡೋಡಿ ಬಂದಿದ್ದ ರೋಹಿತ್ ಅವರು ಕೊಹ್ಲಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದರು. ಆ ಮೂಲಕ ತಾವಿಬ್ಬರೂ ‘ಗೆಳೆಯರು’ ಎಂಬ ಸಂದೇಶ ಸಾರಿದ್ದರು.
ವಿರಾಟ್ ಫಾರ್ಮ್ ಕುರಿತು ರೋಹಿತ್ ಅವರನ್ನು ಪತ್ರಿಕಾಗೋಷ್ಠಿಗಳಲ್ಲಿ ಕೆಣಕಿದ ಪತ್ರಕರ್ತರಿಗೆ ಅವರು ಬಯಸಿದ್ದ ಅಥವಾ ವಿವಾದಾತ್ಮಕ ಉತ್ತರಗಳು ದೊರೆಯಲೇ ಇಲ್ಲ. ರೋಹಿತ್ ಕುರಿತ ಪ್ರಶ್ನೆಗಳು ತಮಗೆ ಎದುರಾದಾಗಲೂ ವಿರಾಟ್ ತೋರಿದ ಸಂಯಮವೇ ಸುದ್ದಿಯಾಯಿತು. ಇದು ತಂಡದ ಡ್ರೆಸ್ಸಿಂಗ್ ರೂಮ್ ಸ್ವಾಸ್ಥ್ಯವನ್ನು ಉತ್ತಮಗೊಳಿಸಿತು. ತಂಡವನ್ನು ಒಂದುಗೂಡಿಸಿತು. ಐಪಿಎಲ್‌ನಲ್ಲಿಯೂ ರೋಹಿತ್ ಮತ್ತು ವಿರಾಟ್ ಅವರು ಎದುರಾಳಿಗಳು. ಆದರೆ ರಾಷ್ಟ್ರೀಯ ತಂಡಕ್ಕೆ ಬಂದಾಗ ಅದರ ಛಾಯೆ ಬೀಳದಂತೆ ನೋಡಿಕೊಂಡರು.
ಈ ವಿಶ್ವಕಪ್ ಟೂರ್ನಿಯಲ್ಲಂತೂ ಇಬ್ಬರೂ ಸೇರಿ ಇನಿಂಗ್ಸ್ ಆರಂಭಿಸಿದರು. ಫೈನಲ್ ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿಯೂ ವಿರಾಟ್ ವೈಫಲ್ಯ ಅನುಭವಿಸಿದರು. ಆದರೆ ಆ ಕೊರತೆಯನ್ನು ರೋಹಿತ್ ತುಂಬಿದರು. ವಿರಾಟ್ ಕ್ರಮಾಂಕ ಬದಲಿಸಬೇಕು ಅಥವಾ ಕೈಬಿಡಬೇಕು ಎಂಬ ಒತ್ತಡಗಳು ಬಂದರೂ ರೋಹಿತ್ ಜಗ್ಗಲಿಲ್ಲ. ಅವರೊಂದಿಗೆ ದ್ರಾವಿಡ್ ಕೂಡ ಗಟ್ಟಿಯಾಗಿ ನಿಂತರು. ದಕ್ಷಿಣ ಆಫ್ರಿಕಾ ಎದುರಿನ ಫೈನಲ್‌ನಲ್ಲಿ ವಿರಾಟ್ ತಮ್ಮ ಮೇಲೆ ತಂಡವು ಇಟ್ಟ ವಿಶ್ವಾಸವನ್ನು ಉಳಿಸಿಕೊಂಡರು. ಇದು ವಿರಾಟ್ ಮತ್ತು ರೋಹಿತ್ ಅವರಿಬ್ಬರ ಸ್ನೇಹಕ್ಕೆ ಸಿಕ್ಕ ಜಯವೂ ಹೌದು.
ಎರಡು ತಿಂಗಳ ಹಿಂದೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿದ್ದ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಟೂರ್ನಿಯುದ್ದಕ್ಕೂ ಪ್ರೇಕ್ಷಕರಿಂದ ನಿಂದನೆಗೊಳಗಾಗಿದ್ದರು. ಮುಂಬೈ ತಂಡ ಲೀಗ್ ಹಂತದಲ್ಲೇ ನಿರ್ಗಮಿಸಿತ್ತು. ಮುಂಬೈ ತಂಡಕ್ಕೆ ಐದು ಐಪಿಎಲ್ ಪ್ರಶಸ್ತಿ ಜಯಿಸಿಕೊಟ್ಟಿದ್ದ ರೋಹಿತ್ ಅವರು ಹಾರ್ದಿಕ್ ನಾಯಕತ್ವದಡಿ ಆಡಿದ್ದರು. ಆದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಹಳೆಯದನ್ನೆಲ್ಲ ಮರೆತರು. ಹಾರ್ದಿಕ್ ಮೇಲೆ ಸಂಪೂರ್ಣ ವಿಶ್ವಾಸವಿಟ್ಟರು. ಹಾರ್ದಿಕ್ ಕೂಡ ತಮ್ಮ ಮೇಲಿಟ್ಟ ನಂಬಿಕೆ ಹುಸಿಮಾಡಲಿಲ್ಲ. ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿ, ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದರು. ರೋಹಿತ್ ಅವರನ್ನು ಅಪ್ಪಿಕೊಂಡು ಕಣ್ಣೀರುಗರೆದರು.
ಮೂರು ವರ್ಷಗಳ ಹಿಂದೆ ವಿರಾಟ್ ಮತ್ತು ಸೂರ್ಯಕುಮಾರ್ ಯಾದವ್ ಅವರ ನಡುವೆ ಐಪಿಎಲ್ ಪಂದ್ಯವೊಂದರಲ್ಲಿ ನಡೆದಿದ್ದ ಜಟಾಪಟಿ ಬಹಳಷ್ಟು ಸುದ್ದಿಯಾಗಿತ್ತು. ಆಗಿನ್ನೂ ಸೂರ್ಯ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರಲಿಲ್ಲ. ವಿರಾಟ್ ಜೊತೆಗಿನ ವಿರಸ ಅವರ ಭವಿಷ್ಯಕ್ಕೆ ತುಟ್ಟಿಯಾಗಬಹುದು ಎಂದೂ ಹೇಳಲಾಗಿತ್ತು. ಆದರೆ, ಸೂರ್ಯ ಭಾರತ ತಂಡಕ್ಕೆ ಬಂದರು. ಅವರನ್ನು ಹೆಚ್ಚು ಬೆಂಬಲಿಸಿದವರು ವಿರಾಟ್ ಅವರೇ. ಫೈನಲ್ ಪಂದ್ಯದಲ್ಲಿ ಸೂರ್ಯ ಪಡೆದ ಕ್ಯಾಚ್ ತಂಡದ ಗೆಲುವಿಗೆ ಕಾರಣವಾಯಿತು.
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ನಿದರ್ಶನಗಳು ಮತ್ತು ಸ್ನೇಹದ ಕತೆಗಳಿಗೆ ಕೊರತೆ ಇಲ್ಲ. ಕಪಿಲ್ ದೇವ್–ಸುನಿಲ್ ಗಾವಸ್ಕರ್, ಮಹೇಂದ್ರಸಿಂಗ್ ಧೋನಿ–ಯುವರಾಜ್ ಸಿಂಗ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧದ ಕುರಿತ ಚರ್ಚೆಗಳು ಈಗಲೂ ನಡೆಯುತ್ತವೆ. ಸ್ವಭಾವ ಮತ್ತು ಆಟದ ಶೈಲಿಗಳು ಬದಲಾದರೂ ಕಣಕ್ಕಿಳಿದಾಗ ತಂಡವಾಗಿ ಆಡಿದ್ದರಿಂದಲೇ ಯಶಸ್ವಿಯಾದರು. ಅವರು ಕ್ರಿಕೆಟ್ ಲೋಕದ ದಿಗ್ಗಜರಾಗಿ ಬೆಳಗಿದರು.
ರಿಲೆ ಓಟದಲ್ಲಿ ಒಬ್ಬ ಅಥ್ಲೀಟ್, ಇನ್ನೊಬ್ಬನಿಗೆ ಬೇಟನ್ ಹಸ್ತಾಂತರಿಸುವ ರೀತಿ ಭಾರತದ ಕ್ರಿಕೆಟ್‌ನಲ್ಲಿಯೂ ಇಂತಹ ಸ್ನೇಹದ ಪರಂಪರೆಯನ್ನು ಹಿರಿಯರು, ಕಿರಿಯರಿಗೆ ಹಸ್ತಾಂತರಿಸಿದ್ದಾರೆ. ಮೊದಲ ನಾಯಕ ಸಿ.ಕೆ. ನಾಯ್ಡು ಅವರಿಂದ ರೋಹಿತ್ ಶರ್ಮಾ ಅವರವರೆಗೂ ಈ ಭವ್ಯ ಪರಂಪರೆ ಸಾಗಿಬಂದಿದೆ. ಇದರ ಕೊಂಡಿಯಾಗಿದ್ದ ರೋಹಿತ್, ವಿರಾಟ್ ಮತ್ತು ರವೀಂದ್ರ ಜಡೇಜ ಅವರು ಈಗ ಟಿ20 ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ ಉಗಮಕ್ಕೂ ಮುಂಚಿನ ‘ಸಾಂಪ್ರದಾಯಿಕ ಕ್ರಿಕೆಟ್ ಶಾಲೆ’ಯಿಂದ ಬಂದ ಆಟಗಾರರ ಯುಗ ಮುಗಿದಂತಾಗಿದೆ.
ಏಕೆಂದರೆ ಸದ್ಯ ಭಾರತ ತಂಡದಲ್ಲಿರುವ ಎಲ್ಲ ಆಟಗಾರರೂ ಟಿ20 ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಾಲದಿಂದ ಬೆಳೆದು ಬಂದವರು. ಚುಟುಕು ಕ್ರಿಕೆಟ್‌ನ ನೆರಳಲ್ಲಿಯೇ ಆಡಿದವರು. ತಂಡದ ಭಾವಿ ನಾಯಕರೆಂದೇ ಹೇಳಲಾಗುತ್ತಿರುವ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಅವರೆಲ್ಲರೂ ಭವಿಷ್ಯದಲ್ಲಿ ಭಾರತದ ಕ್ರಿಕೆಟ್ ರಥವನ್ನು ಮುನ್ನಡೆಸುವ ಭರವಸೆ ಮೂಡಿಸಿದ್ದಾರೆ. ಆದರೆ ಇವರೆಲ್ಲರೂ ತಮಗಿಂತ ಹಿಂದಿನ ಪೀಳಿಗೆಯ ಆಟಗಾರರು ಬಿಟ್ಟು ಹೋದ ಪರಂಪರೆಯನ್ನು ಮುಂದುವರಿಸಬಲ್ಲರೇ?
ಭೀಕರ ಅಪಘಾತದಿಂದಾಗಿ ಸಾವು–ಬದುಕಿನ ಜೊತೆ ಹೋರಾಡಿ ಪುನರಾಗಮನ ಮಾಡಿದ ಮೇಲೂ ಅಮೋಘ ಆಟವಾಡಿದ ರಿಷಭ್ ಪಂತ್ ಭರವಸೆಯ ಆಟಗಾರ. ಅಕ್ಷರ್ ಪಟೇಲ್ ಆಲ್‌ರೌಂಡರ್ ಆಗಿ ರವೀಂದ್ರ ಜಡೇಜ ಅವರ ಸ್ಥಾನ ತುಂಬಬಲ್ಲರು. ಜಸ್‌ಪ್ರೀತ್ ಬೂಮ್ರಾ ವೇಗದ ತಾರೆಯಾಗಿ ಬೆಳಗುತ್ತಿದ್ದಾರೆ. ಆದರೆ ಐಪಿಎಲ್ ಪ್ರಭಾವ, ಡಿಜಿಟಲ್ ಯುಗದ ಹವ್ಯಾಸಗಳಿಂದಾಗಿ ತಂಡದಲ್ಲಿ ಪರಸ್ಪರ ಬಾಂಧವ್ಯ ಬೆಳೆಸುವುದು ಸವಾಲಾಗಿದೆ ಎಂದು ಕೆಲವು ಕೋಚ್‌ಗಳು ಹೇಳುತ್ತಾರೆ.
ಇಂತಹ ಸಂದರ್ಭದಲ್ಲಿ ವಿರಾಟ್ ಮತ್ತು ರೋಹಿತ್ ಅವರ ಸ್ನೇಹದ ಕತೆಯೇ ಸ್ಫೂರ್ತಿಯಾಗಬಹುದು. ಈಗ ಟಿ20 ಮಾದರಿಗೆ ವಿದಾಯ ಹೇಳಿರುವ ಇವರು, ಇನ್ನು ಕೆಲವೇ ತಿಂಗಳುಗಳಲ್ಲಿ ಟೆಸ್ಟ್ ಮತ್ತು ಏಕದಿನ ಮಾದರಿಯಿಂದಲೂ ನಿವೃತ್ತಿ ಘೋಷಿಸಬಹುದು. ಇವರು ಪೇರಿಸಿ ಹೋಗುವ ಆಟದ ದಾಖಲೆಗಳಿಗಿಂತ ಸ್ನೇಹದ ಮಾದರಿಯನ್ನು ಉಳಿಸಿಕೊಂಡು ಹೋಗುವ ವಾರಸುದಾರರು ಬೇಕು. ಮುಂಬೈನ ಗಲ್ಲಿ ಕ್ರಿಕೆಟ್‌ನಿಂದ ಬಂದ ರೋಹಿತ್, ದೆಹಲಿಯ ಅಂಗಳದಲ್ಲಿ ಪ್ರತಿಭೆ ತೋರುತ್ತ ಬೆಳೆದ ವಿರಾಟ್ ಅವರು ಬ್ಯಾಟಿಂಗ್‌ನಲ್ಲಿ ಮತ್ತು ನಾಯಕತ್ವದಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಅವರ ವೃತ್ತಿಜೀವನದ ಸಂಧ್ಯಾಕಾಲದಲ್ಲಿ ಸ್ನೇಹ ಮತ್ತು ತಂಡಸ್ಫೂರ್ತಿಗೆ ನೀಡಿದ ಆದ್ಯತೆಯಿಂದ ವಿಶ್ವಕಪ್ ವಿಜೇತರಾಗಿದ್ದಾರೆ. ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.