ADVERTISEMENT

ನಾಯಕನಿಲ್ಲದ ಸ್ಥಿತಿಯತ್ತ ವಿಶ್ವ?

ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ದೇಶಗಳ ಸಮುದಾಯ ವಿಘಟನೆ ಆದರೆ 21ನೇ ಶತಮಾನಕ್ಕೆ ಬೇಕಿರುವ ಹೊಸ ನಿಯಮಗಳನ್ನು ರೂಪಿಸುವವರು ಯಾರು?

ಥಾಮಸ್ ಎಲ್ ಫ್ರೀಡ್ಮನ್
Published 10 ಆಗಸ್ಟ್ 2018, 19:51 IST
Last Updated 10 ಆಗಸ್ಟ್ 2018, 19:51 IST
   

ರಾತ್ರಿಯ ಭೋಜನಕೂಟ ಎಲ್ಲೇ ನಡೆಯುತ್ತಿದ್ದರೂ ಅದನ್ನು ಹಾಳು ಮಾಡುವ ಶಕ್ತಿ ನನಗೆ ಇದೆ ಎಂಬುದನ್ನು ತಡವಾಗಿ ಅರ್ಥ ಮಾಡಿಕೊಂಡಿದ್ದೇನೆ. ಇದೊಂದು ರೀತಿಯಲ್ಲಿ ಜಾದೂ ಇದ್ದಂತೆ. ಟ್ರಂಪ್, ಪುಟಿನ್ ಅಥವಾ ಹವಾಮಾನ ಬದಲಾವಣೆ ಬಗ್ಗೆ ಆಕ್ರೋಶದಿಂದ ಮಾತನಾಡಿದರೆ ಆಯಿತು. ಆಗ ಎಲ್ಲರ ಮುಖದಲ್ಲೂ ಅಸಮ್ಮತಿಯ ಅಥವಾ ಸಿಟ್ಟಿನ ಭಾವನೆ ಕಾಣಿಸಲು ಆರಂಭವಾಗುತ್ತದೆ. ಹಾಗೆಯೇ, ಬೇಸರದ ಭಾವ ಕೂಡ ಕಾಣಬಹುದು.

ಅದಿರಲಿ, ನಾನು ರಿಸೊಟೊ (ಇಟಲಿಯಲ್ಲಿ ದೊರೆಯುವ ಒಂದು ಬಗೆಯ ಖಾದ್ಯ) ಸವಿಯಲು ಹಾಗೂ ಸೂರ್ಯನ ಶಾಖಕ್ಕೆ ಮೈ ಒಡ್ಡಿಕೊಳ್ಳಲು ಇಟಲಿಗೆ ಹೋಗೋಣ ಎಂದು ಆಲೋಚಿಸಿದ್ದೆ. ಆದರೆ, ಐರೋಪ್ಯ ಒಕ್ಕೂಟವನ್ನು ಒಡೆದುಹಾಕುತ್ತಿರುವ ನಿರಾಶ್ರಿತರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿರುವ ಇಟಲಿಯ ಸರ್ಕಾರ ಮತ್ತು ಅಂತರರಾಷ್ಟ್ರೀಯ ತಜ್ಞರ ಜೊತೆ ಕೆಲವು ದಿನಗಳನ್ನು ಕಳೆಯುವ ತಪ್ಪು ಕೆಲಸ ಮಾಡಿದೆ. ನಿರಾಶ್ರಿತರ ಸಮಸ್ಯೆಗಳ ಪೈಕಿ ಹಲವು ಸಮಸ್ಯೆಗಳ ಮೂಲ ಇರುವುದು ಇಟಲಿಯಲ್ಲಿ. ಈಗ ಏನಾಗಿದೆ ಊಹಿಸಬಲ್ಲಿರಾ? ನಾನು ಈಗ ನಿಮ್ಮ ಭೋಜನಕೂಟ ಅಥವಾ ಬೆಳಗ್ಗಿನ ಉಪಾಹಾರದ ಸಂತಸವನ್ನು ಸಹ ಹಾಳುಗೆಡವಬಲ್ಲೆ.

ಇಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ತೀವ್ರ ಚಿಂತೆಗೆ ಕಾರಣವಾಗಬಲ್ಲ ಸಂಗತಿಗಳು ಕಾಣಿಸುತ್ತವೆ. ನಾನು ಜನಿಸಿದ್ದು 1953ರಲ್ಲಿ. ನಾನು ನನ್ನ ಇದುವರೆಗಿನ ಜೀವನ ಕಳೆದಿರುವುದು ‘ಪ್ರಜಾತಂತ್ರ ವ್ಯವಸ್ಥೆ’ ಹೊಂದಿರುವ ಸಮುದಾಯಗಳ ನಡುವೆ. ಇವು ‘ಪಾಶ್ಚಿಮಾತ್ಯ ಜಗತ್ತು’ ಎಂಬ ಹೆಸರು ಪಡೆದವು. ನಂತರದ ದಿನಗಳಲ್ಲಿ ಈ ಜಗತ್ತು ಭಾರತ, ಜಪಾನ್, ಬ್ರೆಜಿಲ್ ಮತ್ತು ದಕ್ಷಿಣ ಕೊರಿಯಾ ದೇಶಗಳ ಪ್ರಜಾತಂತ್ರವನ್ನೂ ಒಳಗೊಂಡು ವಿಶ್ವದ ಇತರೆಡೆಗಳಿಗೆ ವ್ಯಾಪ್ತಿ ವಿಸ್ತರಿಸಿಕೊಂಡಿತು. ಈ ಸಮುದಾಯದ ಕೇಂದ್ರ ಭಾಗದಲ್ಲಿ ಎರಡು ಕಂಬಗಳು ಇದ್ದವು: ಐರೋಪ್ಯ ಒಕ್ಕೂಟ ಎಂಬ ರೂಪ ಪಡೆದ ಯುರೋಪಿನ ಪ್ರಜಾತಂತ್ರ ವ್ಯವಸ್ಥೆಗಳು ಒಂದು ಕಂಬ, ಅಮೆರಿಕ ಇನ್ನೊಂದು ಕಂಬ.

ADVERTISEMENT

‘ಪಾಶ್ಚಿಮಾತ್ಯ ಜಗತ್ತು’ ಎಂಬುದು ಒಂದು ಮಾನಸಿಕತೆ ಮಾತ್ರವೇ ಆಗಿರಲಿಲ್ಲ. ಅದು ಸಮಾನ ಹಿತಾಸಕ್ತಿಗಳು, ಸಮಾನ ಆಶಯಗಳನ್ನು ಸಾರುವ ಸಂಸ್ಥೆಗಳು ಹಾಗೂ ಸಮಾನ ಮೌಲ್ಯಗಳನ್ನು ಹೊಂದಿದ ದೇಶಗಳ ಒಕ್ಕೂಟವೂ ಹೌದಾಗಿತ್ತು. ಅದರಲ್ಲೂ ಮುಖ್ಯವಾಗಿ, ಉದಾರವಾದ, ಪ್ರಜಾತಂತ್ರ, ಮುಕ್ತ ಮಾರುಕಟ್ಟೆ ಹಾಗೂ ಕಾನೂನಿಗೆ ಅನುಗುಣವಾದ ಆಡಳಿತ ಎನ್ನುವ ಮೌಲ್ಯಗಳನ್ನು ಪಾಲಿಸುವ ದೇಶಗಳ ಒಕ್ಕೂಟ ಇದಾಗಿತ್ತು. ಈ ಮೌಲ್ಯಗಳು ಎರಡನೆಯ ಮಹಾಯುದ್ಧದ ನಂತರದ ವಿಶ್ವವನ್ನು ಹೆಚ್ಚೆಚ್ಚು ಜನರ ಪಾಲಿಗೆ ಪರಿಪೂರ್ಣ ಅಲ್ಲದಿದ್ದರೂ ಇನ್ನಷ್ಟು ಸಮೃದ್ಧವಾದ, ಮುಕ್ತವಾದ ಹಾಗೂ ಸೌಮ್ಯವಾದ ತಾಣವನ್ನಾಗಿಸಿದವು. ಪ್ರಜಾತಂತ್ರ ಇರುವ ಸಮುದಾಯಗಳು ನಂಬಿರುವ ಮೌಲ್ಯಗಳಿಗೆ ಹಂಬಲಿಸಿದ ಇತರ ದೇಶಗಳಲ್ಲಿನ ಜನರ ಪಾಲಿಗೆ ಈ ಜಗತ್ತು ಮಾರ್ಗದರ್ಶಕನ ರೀತಿಯಲ್ಲಿ, ಆಶ್ರಯ ತಾಣದಂತೆ, ಸೂಜಿಗಲ್ಲಿನಂತೆ ಇತ್ತು.

ಆದರೆ, ಪ್ರಜಾತಂತ್ರ ವ್ಯವಸ್ಥೆಗಳ ಸಮುದಾಯದ ಪಾಲಿನ ‘ಐರೋಪ್ಯ ಆಧಾರ ಸ್ತಂಭ’ ಹಿಂದೆಂದಿಗಿಂತಲೂ ಹೆಚ್ಚಿನ ದಾಳಿಯನ್ನು ಎದುರಿಸುತ್ತಿದೆ – ಆ ದಾಳಿ ಅದೆಷ್ಟು ತೀವ್ರವಾಗಿದೆಯೆಂದರೆ ಈ ಸ್ತಂಭ ಕುಸಿದುಹೋಗುತ್ತದೆಯೇ ಎಂಬ ಪ್ರಶ್ನೆಯನ್ನು ನಾನು ಇದೇ ಮೊದಲ ಬಾರಿಗೆ ಕೇಳಿಕೊಳ್ಳುತ್ತಿದ್ದೇನೆ.

ಇಟಲಿಯಲ್ಲಿ ನಿಂತುಕೊಂಡರೆ ಎಲ್ಲ ದಿಕ್ಕುಗಳಿಂದ ನಡೆಯುತ್ತಿರುವ ಆಕ್ರಮಣಗಳನ್ನು ನೀವು ಕಾಣಬಹುದು. ಡೊನಾಲ್ಡ್ ಟ್ರಂಪ್ ಅವರು ಪಶ್ಚಿಮದ ಕಡೆಯಿಂದ, ವ್ಲಾದಿಮಿರ್ ಪುಟಿನ್ ಅವರು ಪೂರ್ವದ ಕಡೆಯಿಂದ ಹಾಗೂ ಪರಿಸರ ಮತ್ತು ರಾಜಕೀಯ ಕೋಲಾಹಲಗಳು ದಕ್ಷಿಣದ ಕಡೆಯಿಂದ (ಅಂದರೆ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಿಂದ) ನಡೆಸುವ ಆಕ್ರಮಣಗಳನ್ನು ಕಾಣಬಹುದು. ಫ್ರಾನ್ಸ್‌, ಬ್ರಿಟನ್ ಹಾಗೂ ಅಮೆರಿಕ ಒಟ್ಟಾಗಿ ಲಿಬಿಯಾದ ಬಲಿಷ್ಠ ನಾಯಕ ಮುಅಮ್ಮರ್ ಗಡಾಫಿ ಅವರನ್ನು 2011ರಲ್ಲಿ ಭಂಡ ಧೈರ್ಯದಿಂದ ಅಧಿಕಾರದಿಂದ ಕೆಳಗಿಳಿಸಿ, ಅಲ್ಲಿ ಒಂದು ಹೊಸ ವ್ಯವಸ್ಥೆ ನಿರ್ಮಾಣ ಆಗಲು ಸಹಾಯ ಮಾಡದೆ ಇದ್ದುದರ ಪರಿಣಾಮವನ್ನು ಇಟಲಿ ಈಗ ಅನುಭವಿಸುತ್ತಿದೆ.

ಹೊಸದೊಂದ ವ್ಯವಸ್ಥೆಯನ್ನು ಕಟ್ಟದೆಯೇ ಗಡಾಫಿ ಅವರನ್ನು ಪದಚ್ಯುತಗೊಳಿಸಿದ್ದು ನೇಟೊ ಒಕ್ಕೂಟ ಕೈಗೊಂಡ ಇದುವರೆಗಿನ ಅತಿಮೂರ್ಖ ಕ್ರಮವಾಗಿ ದಾಖಲಾಗಬಹುದು.

ಈ ಕ್ರಮದ ಪರಿಣಾಮವಾಗಿ ಆಫ್ರಿಕಾದಿಂದ ಅಂದಾಜು ಆರು ಲಕ್ಷ ಜನ ಆಶ್ರಯ ಬೇಡಿ ಇಟಲಿಯ ಸಮುದ್ರ ತೀರಗಳತ್ತ ಈಚಿನ ವರ್ಷಗಳಲ್ಲಿ ಬಂದರು. ಅವರಲ್ಲಿ ಮೂರು ಲಕ್ಷ ಜನ ಅಲ್ಲೇ ಉಳಿದುಕೊಂಡರು. ಇನ್ನುಳಿದವರು ಐರೋಪ್ಯ ಒಕ್ಕೂಟದ ಇತರ ದೇಶಗಳತ್ತ ಹೊರಟರು. ಒಕ್ಕೂಟದ ಯಾವ ದೇಶ ಎಷ್ಟು ಜನ ವಲಸಿಗರಿಗೆ ನೆಲೆ ಕಲ್ಪಿಸಬೇಕು ಎಂಬ ವಿಚಾರವಾಗಿ ಒಕ್ಕೂಟದ ದೇಶಗಳ ನಡುವೆ ತಕರಾರು ಉಂಟಾಗಲು ಈ ವಲಸೆ ಕಾರಣವಾಯಿತು. ಅಲ್ಲದೆ, ಐರೋಪ್ಯ ಒಕ್ಕೂಟದ ಬಹುತೇಕ ಎಲ್ಲ ದೇಶಗಳಲ್ಲೂ ಈಗ ವಲಸೆಗೆ ಪ್ರತಿರೋಧದ ರೀತಿಯಲ್ಲಿ ರಾಷ್ಟ್ರೀಯವಾದದ ನೆಲೆ ಹೊಂದಿರುವ, ಜನಬೆಂಬಲ ಗಿಟ್ಟಿಸಿರುವ ದನಿಗಳು ಕೇಳಿಬರುತ್ತಿವೆ.

ಪುಟಿನ್ ಅವರದ್ದು ರಾಷ್ಟ್ರದ ಸಂಪತ್ತನ್ನು ಬಳಸಿ ತನ್ನ ಸಂಪತ್ತು ಹೆಚ್ಚಿಸಿಕೊಳ್ಳುವ, ರಾಷ್ಟ್ರೀಯವಾದಿ ಸರ್ವಾಧಿಕಾರದ ಆಡಳಿತ ವ್ಯವಸ್ಥೆ. ಈ ವ್ಯವಸ್ಥೆಗೆ ಇರುವ ಚಲನಶೀಲ ಪರ್ಯಾಯ ಐರೋಪ್ಯ ಒಕ್ಕೂಟ. ಹಾಗೆಯೇ, ಹಿಂದಿನ ಸೋವಿಯತ್ ಒಕ್ಕೂಟದ ಉಕ್ರೇನ್‌ನಂತಹ ದೇಶಗಳಿಗೆ ಕೂಡ ಐರೋಪ್ಯ ಒಕ್ಕೂಟ ಒಂದು ಸ್ಫೂರ್ತಿ. ಐರೋಪ್ಯ ಒಕ್ಕೂಟ ಈ ರೀತಿಯಲ್ಲಿ ಇರಬಾರದು ಎಂದು ಪುಟಿನ್ ಅವರು, ಒಕ್ಕೂಟವನ್ನು ದುರ್ಬಲಗೊಳಿಸುವ ಹಾಗೂ ಅದಕ್ಕೆ ಕೆಟ್ಟ ಹೆಸರು ತರುವ ವಿದೇಶಾಂಗ ನೀತಿಯನ್ನು ಅನುಸರಿಸುತ್ತ ಬಂದಿದ್ದಾರೆ. ಪುಟಿನ್ ಅವರು ಐರೋಪ್ಯ ಒಕ್ಕೂಟದ ಪರಿಕಲ್ಪನೆಯನ್ನು ವಿರೋಧಿಸುವ ರಾಜಕೀಯ ಪಕ್ಷಗಳಿಗೆ ಇಟಲಿಯಲ್ಲಿ ಉತ್ತೇಜನ ನೀಡುತ್ತಿರುವುದು ಹಾಗೂ ಬ್ರಿಟನ್ನಿನಲ್ಲಿ ‘ಬ್ರೆಕ್ಸಿಟ್‌’ಗೆ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯುವ ಪ್ರಕ್ರಿಯೆ) ಬೆಂಬಲ ನೀಡಿರುವುದು ಆಶ್ಚರ್ಯ ತರುವ ಸಂಗತಿಯೇನೂ ಅಲ್ಲ.

ಇತ್ತ ಟ್ರಂಪ್‌ ಅವರು, ‘ಬ್ರಿಟನ್ನಿಗೆ ಅಮೆರಿಕದ ಜೊತೆ ಮುಕ್ತ ವ್ಯಾಪಾರದ ಒಪ್ಪಂದ ಇಟ್ಟುಕೊಳ್ಳಬೇಕು ಎಂದಾದರೆ ಬ್ರೆಕ್ಸಿಟ್ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು’ ಎಂದು ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರ ಮೇಲೆ ಒತ್ತಡ ತಂದರು. ಇಷ್ಟೇ ಅಲ್ಲ, ಟ್ರಂಪ್ ಅವರು ವ್ಯಾಪಾರದ ವಿಚಾರದಲ್ಲಿ ಐರೋಪ್ಯ ಒಕ್ಕೂಟವನ್ನು ಸ್ನೇಹಿತನಂತೆ ಕಾಣದೆ, ವಿರೋಧಿಯ ರೀತಿಯಲ್ಲಿ ಕಾಣುತ್ತಿದ್ದಾರೆ. ಐರೋಪ್ಯ ಒಕ್ಕೂಟದಲ್ಲಿ ಬಿರುಕು ಮೂಡಲಿ, ಆಗ ಅದರ ಸದಸ್ಯ ದೇಶಗಳ ಜೊತೆ ಪ್ರತ್ಯೇಕವಾಗಿ, ಹೆಚ್ಚು ಉತ್ತಮವಾದ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಯತ್ನಿಸಬಹುದು ಎಂದು ಟ್ರಂಪ್ ಅವರು ಭಾವಿಸಿರುವಂತೆ ತೋರುತ್ತಿದೆ. ಹೀಗಲ್ಲದೆ, ಈ ಅತಾರ್ಕಿಕ ಕ್ರಮಗಳನ್ನು ಇನ್ನು ಯಾವ ರೀತಿಯಲ್ಲಿ ವ್ಯಾಖ್ಯಾನಿಸಬೇಕು?

ಇಟಲಿ ಸರ್ಕಾರ, ನೇಟೊ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿಕೊಂಡವರು ಹಾಗೂ ವಲಸೆ ವಿರೋಧಿ ನಿಲುವು ಹೊಂದಿರುವವರ ಜೊತೆ ಕೈಕುಲುಕಲು ಬಂದಿದ್ದ ಟ್ರಂಪ್ ಅವರ ಮಾಜಿ ಸಲಹೆಗಾರ ಸ್ಟೀವ್‌ ಬ್ಯಾನನ್‌ ಅವರು ಆಡಳಿತಾರೂಢ ಮೈತ್ರಿಕೂಟದ ಬಗ್ಗೆ, ‘ಇದು ಇಟಲಿಯಲ್ಲಿ ಸಾಧ್ಯವಾಗುತ್ತದೆ ಎಂದಾದರೆ, ಎಲ್ಲ ಕಡೆಯೂ ಸಾಧ್ಯವಾಗುತ್ತದೆ ಎಂದು ಅರ್ಥ. ಇದು ಜಾಗತೀಕರಣದ ಪರ ಇರುವವರ ಬೆನ್ನು ಮೂಳೆ ಮುರಿಯಲಿದೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.

ಇದು ಮೂರ್ಖತನದ ಮಾತು. ಕಮ್ಯುನಿಸಮ್ಮನ್ನು ಓಡಿಸುವ ಕೆಲಸ ಮಾತ್ರವೇ ಅಲ್ಲದೆ, ಎರಡನೆಯ ವಿಶ್ವಯುದ್ಧದ ನಂತರ ಜಾಗತಿಕ ವಿಷಯಗಳನ್ನು ನಿಭಾಯಿಸಿದ ಸಂಸ್ಥೆಗಳನ್ನು ಆರಂಭಿಸಿದ್ದು, ಅದಕ್ಕೆ ಬೇಕಿರುವ ನಿಯಮಗಳನ್ನು ರೂಪಿಸುವ ಕೆಲಸದಲ್ಲಿ ಮುಂಚೂಣಿಯಲ್ಲಿ ಇದ್ದಿದ್ದು ಅಮೆರಿಕ ಹಾಗೂ ಈಗಿನ ಐರೋಪ್ಯ ಒಕ್ಕೂಟ. ವ್ಯಾಪಾರ, ವಾಣಿಜ್ಯ, ವಲಸೆ, ಪರಿಸರ ಹಾಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಈ ಸಂಸ್ಥೆಗಳು ಕೆಲಸ ಮಾಡಿದವು. ಅಲ್ಲದೆ, ಜಗತ್ತಿನ ಎಲ್ಲೆಡೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೆಂದಿಗಿಂತಲೂ ವೇಗವಾಗಿ ಬಡತನದ ಹಿಡಿತದಿಂದ ಪಾರಾಗಲು ನೆರವಾದವು.

ಆಗ ಮಾಡಿದಂಥದ್ದೇ ಕೆಲಸವನ್ನು ಇಂದು ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಜಿ–20 ಗುಂಪಿನ ದೇಶಗಳು ಈಗ ಒಟ್ಟಾಗಿ ಮಾಡಬೇಕು. ಹವಾಮಾನ ಬದಲಾವಣೆ, ಜಾಗತೀಕರಣದಲ್ಲಿನ ಬದಲಾವಣೆಗಳು ಹಾಗೂ ತಂತ್ರಜ್ಞಾನದಲ್ಲಿನ ಬದಲಾವಣೆಗಳು ಸಂಪೂರ್ಣವಾಗಿ ಹೊಸ ಬಗೆಯ ಸಮಸ್ಯೆಗಳನ್ನು ಸೃಷ್ಟಿಸಿವೆ. ಹವಾಮಾನ ವೈಪರೀತ್ಯ, ಸೈಬರ್ ಅಪರಾಧಗಳು, ಕ್ರಿಪ್ಟೊ ಕರೆನ್ಸಿಗಳು, ಸಾಮಾಜಿಕ ಜಾಲತಾಣಗಳು, ಸ್ವಯಂಚಾಲಿತ ವಾಹನಗಳು, ಕೃತಕ ಬುದ್ಧಿಮತ್ತೆ, ನಿರಾಶ್ರಿತರು ಯಾರು, ಆರ್ಥಿಕ ಕಾರಣಗಳಿಗಾಗಿ ವಲಸೆ ಬರುತ್ತಿರುವವರು ಯಾರು ಎಂಬುದನ್ನು ಗುರುತಿಸುವ ಸವಾಲು... ಇವೆಲ್ಲ ಹೊಸ ಕಾಲದ ಸಮಸ್ಯೆಗಳು. ಇವನ್ನೆಲ್ಲ ನಿಭಾಯಿಸಬೇಕು ಎಂದರೆ ಜಾಗತಿಕ ಸಹಕಾರ ಹಾಗೂ ಹೊಸ ನಿಯಮಗಳು ಬೇಕೇಬೇಕು.

ಪ್ರಜಾತಂತ್ರ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳ ಸಮುದಾಯ ವಿಘಟನೆ ಆದರೆ, ನಾವು 19 ಹಾಗೂ 20ನೆಯ ಶತಮಾನದಲ್ಲಿನ ನಡೆದಂತಹ ಶಕ್ತಿಪ್ರದರ್ಶನದ ಸ್ಪರ್ಧೆಗೆ ಪುನಃ ಇಳಿದರೆ, 21ನೆಯ ಶತಮಾನಕ್ಕೆ ಬೇಕಿರುವ ಹೊಸ ನಿಯಮಗಳನ್ನು ರೂಪಿಸುವವರು ಯಾರು? ಲಿಬಿಯಾ ಅಥವಾ ಸಹಾರಾ ಮರುಭೂಮಿಯ ಕೆಳಗೆ ಇರುವ, ಸಂಕಷ್ಟ ಎದುರಿಸುತ್ತಿರುವ ಆಫ್ರಿಕಾದ ದೇಶಗಳಿಗೆ ಹೊಸ ಸರ್ಕಾರ ರಚಿಸಲು, ಅಲ್ಲಿನ ಮಾನವ ಸಂಪನ್ಮೂಲವನ್ನು ಪೋಷಿಸಲು ಸಹಾಯ ಮಾಡುವವರು ಯಾರು? ಬದುಕುಳಿಯಬೇಕು ಎಂದಾದರೆ ವಲಸೆ ಹೋಗಬೇಕು ಎನ್ನುವ ಸ್ಥಿತಿಯಿಂದ ಅಲ್ಲಿನ ಜನರನ್ನು ಪಾರು ಮಾಡುವವರು ಯಾರು? ರಷ್ಯಾ? ಚೀನಾ? ಅವುಗಳಿಂದ ಸಾಧ್ಯ ಎಂದು ನನಗೆ ಅನಿಸುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ನಾಯಕತ್ವ ಇಲ್ಲದಿರುವ ಸ್ಥಿತಿಯೊಂದನ್ನು ನಾವು ತಲುಪುತ್ತೇವೆ. ಇದರ ಪರಿಣಾಮಗಳು ಗಂಭೀರವಾಗಿ ಇರಲಿವೆ.

ಈ ಎಲ್ಲ ಸಮಸ್ಯೆಗಳನ್ನು ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ದೇಶಗಳ ಒಕ್ಕೂಟವಾಗಿ ನಿಭಾಯಿಸುವುದು ಕೂಡ ಕಷ್ಟದ ಕೆಲಸವೇ. ಆದರೆ, ಟ್ರಂಪ್‌, ಪುಟಿನ್‌ ಅಥವಾ ಬ್ಯಾನನ್‌ ಅವರಂತಹ ವ್ಯಕ್ತಿಗಳು ಒಡೆಯುವ ಕೆಲಸದಲ್ಲಿ ಯಶಸ್ಸು ಕಂಡರೆ ಈ ಸವಾಲನ್ನು ನಿಭಾಯಿಸುವುದು ಅಸಾಧ್ಯವಾಗಿಬಿಡುತ್ತದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.