‘ಸತ್ಯದ ಅನ್ವೇಷಣೆ ಮತ್ತು ಸತ್ಯಸಂಗತಿಗಳ ವರದಿಗಾರಿಕೆ...’
– ಬಹಳ ಹಿಂದಿನ ಕಾಲದಿಂದಲೂ ಇದು ಪತ್ರಿಕೋದ್ಯಮದ ಏಕಮಾತ್ರ ಧ್ಯೇಯ.
‘ಸತ್ಯವೇ ಅವರ (ಪತ್ರಕರ್ತರ) ಆರಾಧ್ಯ ದೈವವಾಗಿರಬೇಕು ಮತ್ತು ಯಾವಾಗಲೂ ಸತ್ಯವೇ ಅವರ ಮೊದಲ ಮತ್ತು ಕೊನೆಯ ಧ್ಯಾನವಾಗಿರಬೇಕು’ ಎಂದು 1853ರಲ್ಲಿ ಸೈಂಟಿಫಿಕ್ ಅಮೆರಿಕನ್ ಮ್ಯಾಗಜೀನ್‌ನಲ್ಲಿ ಪ್ರಕಟವಾದ ‘ಪತ್ರಿಕೋದ್ಯಮದಲ್ಲಿ ಸತ್ಯ’ ಎಂಬ ಲೇಖನದಲ್ಲಿ ಹೇಳಲಾಗಿತ್ತು.
‘ಸತ್ಯವನ್ನು ಪತ್ತೆಹಚ್ಚಿ ಮತ್ತು ಅದನ್ನು ವರದಿ ಮಾಡಿ’ ಎಂಬುದು ವೃತ್ತಿಪರ ಪತ್ರಕರ್ತರ ಸೊಸೈಟಿಯು 1926ರಲ್ಲಿ ಸಿದ್ಧಪಡಿಸಿದ್ದ ಕರಡು ‘ನೀತಿ ಸಂಹಿತೆ’ಯಲ್ಲಿ ಪಟ್ಟಿ ಮಾಡಿದ್ದ ಮೊದಲ ಅಂಶ.
‘ಪತ್ರಿಕೋದ್ಯಮದ ಮೊದಲ ಜವಾಬ್ದಾರಿಯೇ ಸತ್ಯವನ್ನು ಹೇಳುವುದು’ ಎಂದು ಪ್ರತಿಪಾದಿಸುತ್ತದೆ ಪತ್ರಕರ್ತರ ಮೂಲ ಜವಾಬ್ದಾರಿಗಳ ಬಗ್ಗೆ ವಿವರಿಸುವ ‘ಎಲಿಮೆಂಟ್ಸ್ ಆಫ್ ಜರ್ನಲಿಸಂ’ನ ಮೊದಲ ತತ್ವ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸೃಷ್ಟಿಸುತ್ತಿರುವ ಡಿಜಿಟಲ್ ಮಾಹಿತಿಯ ಈ ಯುಗದಲ್ಲಿ ಸುಳ್ಳುಗಳೇ ಸತ್ಯವಾಗುತ್ತಿವೆ. ದ್ವೇಷ ಕಾರುವ, ದುರುದ್ದೇಶಪೂರಿತ ತಪ್ಪು ಮಾಹಿತಿಯನ್ನು ಹರಡುವವರೂ ಇಲ್ಲಿದ್ದಾರೆ. ಹೀಗಿರುವಾಗ, ನಿಜವಾದ ಸುದ್ದಿಗಳು ಮತ್ತು ವದಂತಿಗಳ ನಡುವೆ ವ್ಯತ್ಯಾಸ ಗುರುತಿಸುವುದು ಜನರ ಮುಂದಿರುವ ಬಹುದೊಡ್ಡ ಸವಾಲು. ಇಂತಹ ಸನ್ನಿವೇಶದಲ್ಲಿ ವಾಸ್ತವ ಸಂಗತಿಗಳನ್ನು ಕೂಲಂಕಷವಾಗಿ ದೃಢೀಕರಿಸಿ ಸತ್ಯವಾದ ಮಾಹಿತಿಯನ್ನು ಜನರ ಮುಂದಿಡುವ ಪತ್ರಕರ್ತರ ಜವಾಬ್ದಾರಿ ಈಗ ಎರಡು ಪಟ್ಟು ಹೆಚ್ಚಿದೆ.
ಪ್ರಜಾಪ್ರಭುತ್ವ ಮತ್ತು ನಾಗರಿಕರಿಗೆ ಮೌಲ್ಯಯುತ ಸುದ್ದಿಗಳನ್ನು ನೀಡುವುದರಲ್ಲಿ ಪತ್ರಕರ್ತರು ನಿರ್ವಹಿಸುವ ಪಾತ್ರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆರಂಭಿಸಿರುವ ಜಾಗತಿಕ ಕಾರ್ಯಕ್ರಮ ‘ವಿಶ್ವ ಸುದ್ದಿ ದಿನ’ದ ಅಂಗವಾಗಿ ಈ ವರ್ಷ ‘ಸತ್ಯವನ್ನೇ ಆಯ್ಕೆ ಮಾಡಿ’ ಎಂದು ನಾವೆಲ್ಲರೂ ಜಗತ್ತಿಗೆ ಕರೆ ನೀಡುತ್ತಿದ್ದೇವೆ.
ಪ್ರತಿವರ್ಷ ಸೆಪ್ಟೆಂಬರ್ 28ರಂದು ಆಚರಿಸಲಾಗುವ ಈ ದಿನವನ್ನು 2018ರಲ್ಲಿ ಕೆನಡಾದ ಪತ್ರಿಕೋದ್ಯಮ ಪ್ರತಿಷ್ಠಾನ (ಸಿಜೆಎಫ್) ಆರಂಭಿಸಿತ್ತು. ಸುದ್ದಿ ಉದ್ಯಮ ಮತ್ತು ಅದರ ಓದುಗರು, ವೀಕ್ಷಕರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶ ‘ವಿಶ್ವ ಸುದ್ದಿ ದಿನ’ ಆಚರಣೆಯ ಹಿಂದಿದೆ.
ಒಟ್ಟಾರೆಯಾಗಿ, ತಪ್ಪು, ಸುಳ್ಳು ಮಾಹಿತಿಗಳಿಂದ ಮಲಿನವಾಗಿರುವ ಈ ಜಗತ್ತಿನಲ್ಲಿ ಗುಣಮಟ್ಟದ ಪತ್ರಿಕೋದ್ಯಮ ಏಕೆ ಮುಖ್ಯ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನದ ಮುಖ್ಯ ಗುರಿ.
ಈ ವರ್ಷದ ‘ವಿಶ್ವ ಸುದ್ದಿ ದಿನ’ದ ಧ್ಯೇಯವಾಕ್ಯ ‘ಸತ್ಯವನ್ನೇ ಆಯ್ಕೆ ಮಾಡಿ’.
ಜಗತ್ತಿನಾದ್ಯಂತ ಪತ್ರಿಕೋದ್ಯಮ ಅಥವಾ ಮಾಧ್ಯಮಗಳು ನಿರ್ವಹಿಸುವ ನಿರ್ಣಾಯಕ ಪಾತ್ರವನ್ನು ಪುನರ್‌ದೃಢೀಕರಿಸುವುದಕ್ಕಾಗಿ ಡೈಲಿ ಮ್ಯಾವೆರಿಕ್ ಪತ್ರಿಕೆಯ ಸಂಸ್ಥಾಪಕ ಮತ್ತು ಮುಖ್ಯ ಸಂಪಾದಕ ಬ್ರಾಂಕೊ ಬರ್ಕಿಚ್ ಅವರು ಸ್ಥಾಪಿಸಿರುವ ‘ಪ್ರಾಜೆಕ್ಟ್ ಕಿಂಟಿನುಮ್’ ಸಂಸ್ಥೆ ಆರಂಭಿಸಿರುವ ಮೊದಲ ಜಾಗತಿಕ ಅಭಿಯಾನ ‘ಸತ್ಯವನ್ನೇ ಆಯ್ಕೆ ಮಾಡಿ’.
ಈಗಿನ ದಿನಮಾನದಲ್ಲಿ ಈ ಸಂದೇಶವು ಈಗಿನದ್ದಕ್ಕಿಂತ ಹೆಚ್ಚು ಸಮಯೋಚಿತ ಹಾಗೂ ನಿರ್ಣಾಯಕವಾಗಿರಲು ಸಾಧ್ಯವೇ ಇಲ್ಲ.
ಪ್ರವಾಹವಾಗಿ ಹರಿದುಬರುತ್ತಿರುವ ಸುಳ್ಳು ಮಾಹಿತಿ ಮತ್ತು ಸತ್ಯ ಸಂಗತಿಗಳ ನಡುವಿನ ಘರ್ಷಣೆ ಹೆಚ್ಚುತ್ತಿರುವ ಈ ಜಗತ್ತಿನಲ್ಲಿ, ಸತ್ಯವನ್ನು ಆಯ್ಕೆ ಮಾಡುವುದು ಬಹುಶಃ ಈವರೆಗೂ ಈಗಿನಷ್ಟು ಹೆಚ್ಚು ಮುಖ್ಯ ಅಥವಾ ಹೆಚ್ಚು ಕಷ್ಟಕರ ಆಗಿರಲಿಲ್ಲ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸೃಷ್ಟಿಸುತ್ತಿರುವ ಡಿಜಿಟಲ್ ಮಾಹಿತಿಯ ಈ ಯುಗದಲ್ಲಿ ಸುಳ್ಳುಗಳೇ ಸತ್ಯವಾಗುತ್ತಿವೆ. ದ್ವೇಷ ಕಾರುವ, ದುರುದ್ದೇಶಪೂರಿತ ತಪ್ಪು ಮಾಹಿತಿಯನ್ನು ಹರಡುವವರೂ ಇಲ್ಲಿದ್ದಾರೆ. ಹೀಗಿರುವಾಗ, ನಿಜವಾದ ಸುದ್ದಿಗಳು ಮತ್ತು ವದಂತಿಗಳ ನಡುವೆ ವ್ಯತ್ಯಾಸ ಗುರುತಿಸುವುದು ಜನರ ಮುಂದಿರುವ ಬಹುದೊಡ್ಡ ಸವಾಲು. ಇಂತಹ ಸನ್ನಿವೇಶದಲ್ಲಿ ವಾಸ್ತವ ಸಂಗತಿಗಳನ್ನು ಕೂಲಂಕಷವಾಗಿ ದೃಢೀಕರಿಸಿ ಸತ್ಯವಾದ ಮಾಹಿತಿಯನ್ನು ಜನರ ಮುಂದಿಡುವ ಪತ್ರಕರ್ತರ ಜವಾಬ್ದಾರಿ ಈಗ ಎರಡು ಪಟ್ಟು ಹೆಚ್ಚಿದೆ.
‘ಸತ್ಯವನ್ನೇ ಆಯ್ಕೆ’ ಮಾಡಬೇಕಾದರೆ ಜನರು ಮತ್ತು ಪತ್ರಕರ್ತರ ನಡುವಿನ ಬಾಂಧವ್ಯ ನಂಬಿಕೆಯ ಮೇಲೆ ನಿಂತಿರಬೇಕು. ಆದರೆ, ‘ಜಗತ್ತಿನಾದ್ಯಂತ ಬಹುತೇಕ ಜನರು ಹೆಚ್ಚಿನ ಸಂದರ್ಭಗಳಲ್ಲಿ ಸುದ್ದಿಗಳನ್ನು ನಂಬುವುದಿಲ್ಲ’ ಎಂದು ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರಾಯಿಟರ್ಸ್ ಇನ್‌ಸ್ಟಿಟ್ಯೂಟ್, ಈ ವರ್ಷ ನಡೆಸಿರುವ ಅಧ್ಯಯನ ವರದಿ ಹೇಳಿದೆ.
ಸತ್ಯದ ಅನ್ವೇಷಣೆ ಮತ್ತು ಅದನ್ನು ವರದಿ ಮಾಡುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಹೊಣೆಗಾರಿಕೆ ಏನು?
ಜನರ ನಂಬಿಕೆಗೆ ಅರ್ಹರಾಗಲು ಪತ್ರಕರ್ತರಾದವರು ನಿಷ್ಠೆ ಮತ್ತು ಬದ್ಧತೆ ಹೊಂದಿರಬೇಕು. ವಾಸ್ತವ ಸಂಗತಿಗಳನ್ನು ಪರಿಶೀಲನೆಗೆ ಒಳಪಡಿಸುವಾಗ ಕರಾರುವಾಕ್ಕಾಗಿ ಮತ್ತು ನ್ಯಾಯಸಮ್ಮತವಾಗಿರಬೇಕು. ಸತ್ಯವನ್ನು ಖಚಿತಪಡಿಸಿಕೊಳ್ಳುವ ಸಂದರ್ಭದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಓದುಗರು, ವೀಕ್ಷಕರಿಗೆ ಮಾಹಿತಿ ನೀಡುವಾಗ, ನಮ್ಮ ಮೂಲಗಳ ಬಗ್ಗೆ ಸ್ಪಷ್ಟತೆ ಇರಬೇಕು. ನಮಗೆ ಏನು ತಿಳಿದಿದೆ ಮತ್ತು ಅದು ಹೇಗೆ ತಿಳಿಯಿತು ಎಂಬುದನ್ನೂ ವಿವರಿಸಬೇಕು.
ಯಾವುದೇ ವಿಚಾರಕ್ಕೆ ಸಂಬಂಧಿಸಿದ ಸತ್ಯ ಸಂಗತಿಗಳೆಲ್ಲವೂ ಒಂದೇ ದಿನಕ್ಕೆ ಸಿಗಬಹುದು ಎಂದು ಹೇಳಲು ಸಾಧ್ಯವಿಲ್ಲ. ನಮಗೆ ಸಿಕ್ಕ ಅಧಿಕೃತ ಮಾಹಿತಿಗಳ ಆಧಾರದಲ್ಲಿ ನಡೆದಿರುವ ವಿಚಾರವನ್ನು ನಾವು ಜನರ ಮುಂದಿಡುತ್ತೇವೆ. ಇದುವೇ ಅಂತಿಮವಲ್ಲ. ವರದಿ ಬರೆದು ಸುಮ್ಮನಿರದೆ, ನೈಜ ಸಂಗತಿಗಳನ್ನು ಕಲೆ ಹಾಕುತ್ತಲೇ ಇರಬೇಕು. ಅದನ್ನು ಜನರಿಗೆ ತಿಳಿಸುತ್ತಲೇ ಇರಬೇಕು. ನಾವು ಈ ಹಿಂದೆ ನೀಡಿದ್ದ ಮಾಹಿತಿಯಲ್ಲಿ ತಪ್ಪಾಗಿದ್ದರೆ, ಅದನ್ನು ತಿದ್ದಿಕೊಳ್ಳಬೇಕು.
ಸತ್ಯವು ಕಾಲಾತೀತ ಮತ್ತು ಅತ್ಯಂತ ಸಂಕೀರ್ಣ. ಅದು ಯಾವಾಗಲೂ ತನ್ನನ್ನು ತಾನು ಸತ್ಯ ಎಂದು ಬಿಂಬಿಸಿಕೊಳ್ಳುವುದಿಲ್ಲ. ಪತ್ರಿಕೋದ್ಯಮವು ದೋಷಾತೀತವೂ ಅಲ್ಲ.
ಧ್ರುವೀಕರಣಗೊಂಡಿರುವ ಈ ಜಗತ್ತಿನಲ್ಲಿ ಹಲವರು ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ‘ಸತ್ಯ ಸತ್ತುಹೋಗಿದೆ’ ಎಂದೂ ವಾದಿಸುತ್ತಾರೆ. ಇಂತಹ ಮನೋಭಾವ, ಜವಾಬ್ದಾರಿಯುತ ಪತ್ರಕರ್ತರು ಮತ್ತು ಜನರಿಗೆ ನಂಬಿಕೆಗೆ ಅರ್ಹವಾದ ಮತ್ತು ಸಾಕ್ಷ್ಯ ಆಧಾರಿತ ಮಾಹಿತಿಗಳು ಯಾವುವು ಎಂದು ಅರ್ಥೈಸಿಕೊಳ್ಳುವುದನ್ನು ಸಂಕೀರ್ಣಗೊಳಿಸಿದೆ.
ಪತ್ರಿಕೋದ್ಯಮ ಎಂದರೆ ಸುದ್ದಿಗಳನ್ನು ನೀಡುವ ಅಥವಾ ಓದುವ ಅಥವಾ ವೀಕ್ಷಿಸುವಂತಹ ಸರಳ ವಿಚಾರವಲ್ಲ. ಬದಲಿಗೆ, ಸತ್ಯ ಸಂಗತಿಗಳ ಮೂಲಕ ಜನರನ್ನು ಸಬಲೀಕರಣಗೊಳಿಸುವುದಾಗಿದೆ. ಜನರ ಹಿತದೃಷ್ಟಿಯಿಂದ ಸತ್ಯ ಮತ್ತು ಗುಣಮಟ್ಟದ ಪತ್ರಿಕೋದ್ಯಮ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿ ವಾಸ್ತವ ಸಂಗತಿ, ಸತ್ಯ ಮುಖ್ಯವಾಗುತ್ತದೆ. ‘ವಿಶ್ವ ಸುದ್ದಿ ದಿನ’ದ ಸಂದರ್ಭದಲ್ಲಿ ಪತ್ರಕರ್ತರಾದ ನಾವೆಲ್ಲರೂ ಮತ್ತು ನಾಗರಿಕರು ‘ಸತ್ಯವನ್ನೇ ಆಯ್ಕೆ’ ಮಾಡಿಕೊಳ್ಳಬೇಕು.
ಲೇಖಕಿ: ಕೆನಡಿಯನ್ ಜರ್ನಲಿಸಮ್ ಫೌಂಡೇಷನ್ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.