ADVERTISEMENT

ವಿಶ್ವ ಸುದ್ದಿ ದಿನ: ಮಾಧ್ಯಮಕ್ಕೆ ‘ಬೆಂಬಲ ಶುಲ್ಕ’ ನೀಡಿ

ಸ್ವತಂತ್ರ ಪತ್ರಿಕೋದ್ಯಮಕ್ಕೆ ಬೇಕಿದೆ ಬೆಂಬಲ

ಪ್ರಜಾವಾಣಿ ವಿಶೇಷ
Published 28 ಸೆಪ್ಟೆಂಬರ್ 2024, 2:31 IST
Last Updated 28 ಸೆಪ್ಟೆಂಬರ್ 2024, 2:31 IST
ಮಾರ್ಸೆಲೊ ರೆಶ್‌
ಮಾರ್ಸೆಲೊ ರೆಶ್‌   

ವಿಷಯ ಅಥವಾ ಕಂಟೆಂಟ್‌ ಬಗ್ಗೆ ನೀವು ಏಕೆ ಗಮನ ಕೊಡುತ್ತೀರಿ? ಅದು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ್ದೇ ಆಗಿರಬಹದು ಅಥವಾ ಮನರಂಜನಾ ಕ್ಷೇತ್ರದ್ದೇ ಆಗಿರಬಹುದು. ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಯಾವುದು ನಿಮ್ಮ ಗಮನವನ್ನು ಸೆಳೆಯುತ್ತದೆ? ಯಾವುದು ನಿಮ್ಮ ಗಮನವನ್ನು ಬೇರೆಡೆಗೆ ತಿರುಗುವಂತೆ ಮಾಡುತ್ತದೆ? ವಿಷಯಗಳೊಂದಿಗೆ ನೀವು ಯಾವಾಗ ಸಂಬಂಧ ಕಲ್ಪಿಸುತ್ತೀರಿ? ಯಾವಾಗ ಸಂಪರ್ಕ ಕಡಿದುಕೊಳ್ಳುತ್ತೀರಿ ಮತ್ತು ಏಕೆ?

ಮೇಲಿನ ಎಲ್ಲಾ ಪ್ರಶ್ನೆಗಳು ನಮ್ಮ ಕಾಲದ ಅತ್ಯಂತ ಬೆಲೆಬಾಳುವ ಆಸ್ತಿಯೊಂದಕ್ಕೆ ಸಂಬಂಧಿಸಿದಂಥವು. ಆ ಆಸ್ತಿ ಬೇರೆ ಯಾವುದೂ ಅಲ್ಲ; ಸಮಯ. ಕೃತಕ ಬುದ್ಧಿಮತ್ತೆ, 5ಜಿ, 8ಕೆ ಅಥವಾ 1000 ಎಂಬಿಪಿಎಸ್‌ ವೇಗದ ಇಂಟರ್‌ನೆಟ್‌ ಸೇರಿದಂತೆ ತಂತ್ರಜ್ಞಾನ ಮಿತಿಗಳಿಲ್ಲದೇ ಮುಂದುವರಿಯುತ್ತಿದೆ. ಆದರೆ, ಇವೆಲ್ಲವೂ ಜೀವನದ ಸರಳ ಮತ್ತು ಎಂದೂ ಬದಲಾಗದ, ‘ದಿನಕ್ಕೆ 24 ಗಂಟೆಗಳೇ ಇರುವುದು, ಅದನ್ನು ವಿಸ್ತರಿಸಲು ಸಾಧ್ಯವಿಲ್ಲ’ ಎಂಬ ಸತ್ಯದ ವಿರುದ್ಧವಾಗಿಯೇ ಬರುತ್ತಿವೆ. ಹಾಗಾಗಿ, ಇಂತಹ ಅತ್ಯಮೂಲ್ಯ ಸಮಯವನ್ನು ಬಳಸುವಾಗ ಒಂದು ತರ್ಕ ಇರಬೇಕು. ಅದು ನಿಮ್ಮ ಜೀವನಕ್ಕೆ ಅರ್ಥ ಕಲ್ಪಿಸಬೇಕು. ಅಷ್ಟೇ ಅಲ್ಲ, ಬದುಕು ಮತ್ತು ಸಮಾಜವನ್ನು ಸಕಾರಾತ್ಮಕವಾಗಿ ಬದಲಾಯಿಸಬೇಕು.

ಸ್ವತಂತ್ರ ಪತ್ರಿಕೋದ್ಯಮ ನಡೆಸುವವರೇನೂ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಅವರ ಚಟುವಟಿಕೆಗಳು ಸುಸ್ಥಿರವಾಗಿ ನಡೆಯುವುದರಿಂದ ಮೊದಲುಗೊಂಡು ಸಮಸ್ಯೆಗಳ ಸಂಕಷ್ಟ ಶುರುವಾಗುತ್ತದೆ. ಗಂಭೀರ ಮಾಧ್ಯಮಗಳು ಬದುಕುಳಿಯಲು ತಮ್ಮದೇ ಆದ ವ್ಯಾಪಾರಿ ಮಾದರಿಗಳನ್ನು ಹೊಂದಿರುತ್ತವೆ. ಆದರೆ, ಅಸಮತೋಲನದಿಂದ ಕೂಡಿದ ತಂತ್ರಜ್ಞಾನ ವೇದಿಕೆಗಳ ನಿಯಂತ್ರಣದಿಂದ ಅವುಗಳು ಬಸವಳಿಯುತ್ತವೆ. ನೈತಿಕತೆ ಅಥವಾ ಸತ್ಯಾಸತ್ಯತೆಯ ಪರಿಕಲ್ಪನೆಗಳನ್ನು ಕೈಬಿಟ್ಟು ಯಾವ ಸಂಸ್ಥೆಯೂ ಉಳಿಯುವುದಕ್ಕೆ ಸಾಧ್ಯವಿಲ್ಲ. ಆದರೆ, ದೈತ್ಯ ತಂತ್ರಜ್ಞಾನ ಸಂಸ್ಥೆಗಳು ಬಯಸುವುದು ಮಾಧ್ಯಮ ಸಂಸ್ಥೆಗಳು ಇಂತಹ ಮೌಲ್ಯಗಳನ್ನು ತ್ಯಜಿಸಬೇಕೆಂಬುದೇ ಆಗಿದೆ.

ಇಂತಹ ಆಲೋಚನೆಗಳು ಮುಂದೆ ನಾವು ನಡೆಸುವ ಜೀವನದ ಹಾದಿಯಲ್ಲಿ ಅತ್ಯಂತ ಮಹತ್ವದ್ದಾಗಿವೆ. ಇದು ಕೇವಲ ನಮ್ಮ ಶತಮಾನದ ಉಳಿದ ಅವಧಿಯನ್ನು ವ್ಯಾಖ್ಯಾನಿಸುವ ಸತ್ಯ ಮತ್ತು ಸುಳ್ಳುಗಳ ನಡುವಿನ ಹಾಗೂ ವಾಸ್ತವತೆ ಮತ್ತು ಕಲ್ಪನೆಯ ನಡುವಿನ ವಿಭಜನೆಯಲ್ಲ. ಇವುಗಳು ನಮ್ಮ ವ್ಯಾವಹಾರಿಕ ಜೀವನದಲ್ಲಿ ಪ್ರಜಾಪ್ರಭುತ್ವ ಮತ್ತು ನಿರಂಕುಶ ಪ್ರಭುತ್ವ, ಜನರ ಓಲೈಕೆ ಮತ್ತು ಪ್ರಾಮಾಣಿಕತೆ, ಸ್ಥಿರತೆ ಮತ್ತು ಸಾಮಾಜಿಕ ಸಾಮರಸ್ಯ ಇಲ್ಲದಿರುವಿಕೆಯ ನಡುವಿನ ಆಯ್ಕೆಯಾಗಿವೆ.

ADVERTISEMENT

ನಮ್ಮ ಕಾಲದಲ್ಲಿರುವ ಎಲ್ಲ ಸಂದಿಗ್ಧತೆಗಳಿಗೆ ಮಾಧ್ಯಮ ಪರಿಹಾರವಲ್ಲ. ಆದರೆ, ಮಾಧ್ಯಮ ಇಲ್ಲದ ಜಗತ್ತನ್ನು ಊಹಿಸಿ ನೋಡಿ. ಮಾಧ್ಯಮಗಳು ಇಲ್ಲದೇ ಇದ್ದರೆ ಸತ್ಯ ಸಂಗತಿ ಮತ್ತು ವದಂತಿಗಳನ್ನು ಯಾರು ಹೊರಗೆಳೆಯುತ್ತಾರೆ? ಗಂಭೀರವಾದ ಅಥವಾ ಸ್ವತಂತ್ರವಾದ ಪತ್ರಿಕಾ ವರದಿಗಳು ವಿಶ್ವಾಸಾರ್ಹತೆಯ ಪ್ರಮಾಣಪತ್ರ ನೀಡದೇ ಇದ್ದರೆ ಯಾವುದನ್ನಾದರೂ ಅಥವಾ ಯಾವುದೇ ಸಂಸ್ಥೆಯನ್ನು ನೀವು ಹೇಗೆ ನಂಬುತ್ತೀರಿ?

ಜನರಿಗೆ ಹಣವನ್ನು ವಂಚಿಸುವ ಹೊಸ ಸೈಬರ್‌ ಅಪರಾಧಗಳು ಹುಟ್ಟಿಕೊಂಡಿವೆ ಎಂಬುದನ್ನು ವರದಿ ಮಾಡುವವರು ಯಾರು? ಸರ್ಕಾರಿ ತನಿಖಾ ಸಂಸ್ಥೆಗಳು ವಿಳಂಬ ಧೋರಣೆ ಅನುಸರಿಸಿದಾಗ ಅಥವಾ ನಿರ್ಲಕ್ಷ್ಯ ವಹಿಸಿದಾಗ ಭ್ರಷ್ಟಾಚಾರ ಮತ್ತು ಇತರ ಅಪರಾಧ ಪ್ರಕರಣಗಳ ಬಗ್ಗೆ ತನಿಖೆ ನಡೆಸುವವರು ಯಾರು? ದೈತ್ಯ ತಂತ್ರಜ್ಞಾನ ಕಂಪನಿಗಳ ಅನೀತಿಗಳ ಬಗ್ಗೆ, ಭಾವನಾತ್ಮಕ, ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಸಾಮಾಜಿಕ ಜಾಲತಾಣಗಳು ತಂದೊಡ್ಡುವ ಅಪಾಯಗಳ ಬಗ್ಗೆ ಮಾತನಾಡುವವರು ಯಾರು? ಕೊನೆಯದಾಗಿ, ಅಧಿಕಾರದಲ್ಲಿರುವ ಭ್ರಷ್ಟ ನಿರಂಕುಶವಾದಿಗಳು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವರು ಒಡ್ಡುತ್ತಿರುವ ಬೆದರಿಕೆಯನ್ನು ಬಯಲಿಗೆ ಎಳೆಯುವವರು ಯಾರು?

ಮಾಹಿತಿಗಳನ್ನು ಪಡೆಯುತ್ತಿರುವ ಸಂದರ್ಭದಲ್ಲಿ ನಿಮ್ಮ ಸಮಯವನ್ನು ವ್ಯವಸ್ಥಿತವಾಗಿ ಬಳಕೆ ಮಾಡುವುದು ಹೇಗೆ ಎಂಬುದು ಒಂದು ಪ್ರಶ್ನೆ. ತಂತ್ರಜ್ಞಾನ ವೇದಿಕೆಗಳಲ್ಲಿ ಮಿತಿ ಮೀರಿ ಭಾಗಿಯಾಗುವುದನ್ನು ತಪ್ಪಿಸುವುದೋ ಅಥವಾ ನಮಗೆ ಸಂಬಂಧಿಸದ ಅನಗತ್ಯ ವಿಚಾರಗಳಲ್ಲಿ ತೊಡಗಿಕೊಂಡು ನಮ್ಮ ಕುತೂಹಲಗಳನ್ನು ವ್ಯರ್ಥವಾಗುವುದನ್ನು ತಪ್ಪಿಸುವುದೋ ಎಂಬ ಪ್ರಶ್ನೆಯನ್ನೂ ನಾವೇ ನಿರಂತರವಾಗಿ ಕೇಳಿಕೊಳ್ಳುತ್ತಿರಬೇಕು.

ಸ್ವತಂತ್ರ ಪತ್ರಿಕೋದ್ಯಮ ನಡೆಸುವವರೇನೂ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಅವರ ಚಟುವಟಿಕೆಗಳು ಸುಸ್ಥಿರವಾಗಿ ನಡೆಯುವುದರಿಂದ ಮೊದಲುಗೊಂಡು ಸಮಸ್ಯೆಗಳ ಸಂಕಷ್ಟ ಶುರುವಾಗುತ್ತದೆ. ಗಂಭೀರ ಮಾಧ್ಯಮಗಳು ಬದುಕುಳಿಯಲು ತಮ್ಮದೇ ಆದ ವ್ಯಾಪಾರಿ ಮಾದರಿಗಳನ್ನು ಹೊಂದಿರುತ್ತವೆ. ಆದರೆ, ಅಸಮತೋಲನದಿಂದ ಕೂಡಿದ ತಂತ್ರಜ್ಞಾನ ವೇದಿಕೆಗಳ ನಿಯಂತ್ರಣದಿಂದ ಅವುಗಳು ಬಸವಳಿಯುತ್ತವೆ. ನೈತಿಕತೆ ಅಥವಾ ಸತ್ಯಾಸತ್ಯತೆಯ ಪರಿಕಲ್ಪನೆಗಳನ್ನು ಕೈಬಿಟ್ಟು ಯಾವ ಸಂಸ್ಥೆಯೂ ಉಳಿಯುವುದಕ್ಕೆ ಸಾಧ್ಯವಿಲ್ಲ. ಆದರೆ, ದೈತ್ಯ ತಂತ್ರಜ್ಞಾನ ಸಂಸ್ಥೆಗಳು ಬಯಸುವುದು ಮಾಧ್ಯಮ ಸಂಸ್ಥೆಗಳು ಇಂತಹ ಮೌಲ್ಯಗಳನ್ನು ತ್ಯಜಿಸಬೇಕೆಂಬುದೇ ಆಗಿದೆ.

ದೈತ್ಯ ತಂತ್ರಜ್ಞಾನ ಕಂಪನಿಗಳು ಮತ್ತು ಜಾಗತಿಕ ತಾಪಮಾನ ಏರಿಕೆಯ ವಿದ್ಯಮಾನದ ನಡುವೆ ಒಂದು ಸಾದೃಶ್ಯವನ್ನು ಸೃಷ್ಟಿಸಬಹುದು. ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳು ಅನುಸರಿಸುವ ವ್ಯಾಪಾರ ಮಾದರಿಗಳ ಅಡ್ಡ ಪರಿಣಾಮವಾಗಿ ಸಾಮಾಜಿಕ ಮಾಲಿನ್ಯ ಉಂಟಾಗುತ್ತಿದ್ದು, ಇದು ಜನರ ಮಾನಸಿಕ ಆರೋಗ್ಯ ಮತ್ತು ಭೂಮಿಯ ಸ್ಥಿರತೆಗೆ ಬೆದರಿಕೆ ಒಡ್ಡುತ್ತಿದೆ. ತಂತ್ರಜ್ಞಾನ ಕಂಪನಿಗಳು ತಮ್ಮ ಲಾಭದ ಒಂದು ಭಾಗವನ್ನು ವೃತ್ತಿಪರ ಪತ್ರಿಕೋದ್ಯಮಕ್ಕೆ ‘ಬೆಂಬಲ ಶುಲ್ಕ’ವನ್ನಾಗಿ ನೀಡಬೇಕಿರುವುದು ನ್ಯಾಯಸಮ್ಮತವಾಗಿದೆ. ಏಕೆಂದರೆ, ಪತ್ರಿಕೋದ್ಯಮವು ಸಾಮಾಜಿಕ ಮಾಲಿನ್ಯದ ಬಹುಪಾಲನ್ನು ಶುಚಿಗೊಳಿಸುತ್ತದೆ. ಇದರ ತರ್ಕ ಸರಳವಾಗಿದೆ: ಪರಿಸರ ವ್ಯವಸ್ಥೆಯನ್ನು ಹಾಳುಮಾಡುವವರು ತಮ್ಮ ಭಾರೀ ಲಾಭದ ಕನಿಷ್ಠ ಒಂದು ಭಾಗವನ್ನಾದರೂ ಅದನ್ನು ಶುಚಿಗೊಳಿಸುವವರಿಗೆ ನೀಡಬೇಕು.

ಆಲ್ಗರಿದಮ್‌ಗಳ ಜಗತ್ತಿನಲ್ಲಿರುವ ಲೋಪದೋಷಗಳ ಲಾಭ ಪಡೆಯುದು ಹೇಗೆ ಎಂಬುದನ್ನು ಅರಿತಿರುವ ಕಪಟಿಗಳು ಮತ್ತು ವಂಚಕರು ಇಲ್ಲಿ ಸಾಕಷ್ಟಿದ್ದಾರೆ. ಮಾನವೀಯತೆ ಪ್ರಪಾತಕ್ಕೆ ಕುಸಿಯುತ್ತಿದೆ. ಇಂತಹ ಹೊತ್ತಿನಲ್ಲಿ ದೈತ್ಯ ತಂತ್ರಜ್ಞಾನ ಕಂಪನಿಗಳು ವೈವಿಧ್ಯಮಯ, ಹೆಚ್ಚು ಪ್ರಬಲವಾದ ಮತ್ತು ಸ್ವತಂತ್ರ ಪತ್ರಿಕೋದ್ಯಮಕ್ಕೆ ಹಣಕಾಸಿನ ನೆರವು ನೀಡುವುದರ ಮೂಲಕ ಮಾನವೀಯತೆಯನ್ನು ಉಳಿಸಿದರೆ ಅದು ಈ ಕಂಪನಿಗಳು ಜಗತ್ತಿನ ಭವಿಷ್ಯಕ್ಕೆ ನೀಡುವ ಬಹುದೊಡ್ಡ ಕೊಡುಗೆಯಾಗಬಹುದು.

ಲೇಖಕ: ಬ್ರೆಜಿಲ್‌ ವೃತ್ತಪತ್ರಿಕೆಗಳ ಒಕ್ಕೂಟದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.