ADVERTISEMENT

ವಿಶ್ವ ಸುದ್ದಿ ದಿನ: ‘ಅಲ್ಲಿ’ ನಿಂತು, ‘ಇಲ್ಲಿ’ಯ ಸುದ್ದಿ ಹೆಕ್ಕಿ

ದೇಶದಿಂದ ಹೊರದೂಡಲಾದ ಪತ್ರಿಕೋದ್ಯಮದ ಸವಾಲುಗಳು

ಪ್ರಜಾವಾಣಿ ವಿಶೇಷ
Published 28 ಸೆಪ್ಟೆಂಬರ್ 2024, 2:30 IST
Last Updated 28 ಸೆಪ್ಟೆಂಬರ್ 2024, 2:30 IST
ಕಾರ್ಲೋಸ್‌ ಎಫ್‌.ಚಾಮರೊಮ್‌
ಕಾರ್ಲೋಸ್‌ ಎಫ್‌.ಚಾಮರೊಮ್‌   

ಮನಗುವಾದ ಸೇನಾ ನೆಲೆಯಲ್ಲಿ ರಷ್ಯಾ ಗುಪ್ತಚರ ಕೇಂದ್ರ ಕಾರ್ಯಾಚರಣೆ’, ‘ಡೇನಿಯಲ್ ಒರ್ಟೆಗಾ ಅಂಗರಕ್ಷಕರ ಮುಖ್ಯಸ್ಥನ ವಜಾ’, ಬಹುಕೋಟಿ ಡಾಲರ್‌ ಯೋಜನೆಗಳಲ್ಲಿ ಭ್ರಷ್ಟಾಚಾರ: ಎಂಇಎಫ್‌ಸಿಸಿಎ ಸಚಿವರ ತಲೆದಂಡ’, ‘ದೇಶದ ‘ಪುನರ್‌ರಚನೆ’ಯ ಘೋಷಣೆ ಬಳಿಕ ಸರ್ಕಾರಿ ನೌಕರರಲ್ಲಿ ಆತಂಕ‌, ಮೌನ’, ‘ಸೇನೆಯ ‘ರಾಜಕೀಯ ಗುಪ್ತಚರ’ ವಿಭಾಗದ ಮುಖ್ಯಸ್ಥನ ವಜಾಕ್ಕೆ ರೊಸಾರಿಯೋ ಮುರಿಲ್ಲೋ ಆದೇಶ...’

28 ವರ್ಷಗಳ ಹಿಂದೆ ನಿಕರಾಗುವಾದಲ್ಲಿ ನಾನು ಸ್ಥಾಪನೆ ಮಾಡಿದ್ದ ಸ್ವತಂತ್ರ ಮಾಧ್ಯಮ ಸಂಸ್ಥೆ ಕಾನ್ಫಿಡೆನ್ಶಿಯಲ್‌.ಡಿಜಿಟಲ್‌ನಲ್ಲಿ (Confidencial.digital) ಇತ್ತೀಚಿನ ವಾರಗಳಲ್ಲಿ ನಾವು ಪ್ರಕಟಿಸಿರುವ ತನಿಖಾ ವರದಿಗಳ ತಲೆ ಬರಹಗಳಿವು. ನಾನೀಗ ನಿಕರಾಗುವಾದಿಂದ ಗಡಿಪಾರುಗೊಂಡು ಕೋಸ್ಟರಿಕಾದಲ್ಲಿ ಸಂಸ್ಥೆ ನಡೆಸುತ್ತಿದ್ದೇನೆ.

ಕ್ಯೂಬಾ ಮತ್ತು ವೆನೆಜುವೆಲಾದಲ್ಲಿ ಇತಿಹಾಸ ಪುನರಾವರ್ತನೆಯಾಗುತ್ತಿದೆ. ದೇಶದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿರುವ ಸ್ವತಂತ್ರ ಪತ್ರಿಕೋದ್ಯಮವು, ಲ್ಯಾಟಿನ್‌ ಅಮೆರಿಕದಲ್ಲಿ ಮಾಧ್ಯಮಗಳಿಗೆ ಬೆದರಿಕೆ ಒಡ್ಡುವ ನಿರಂಕುಶ ಪ್ರಭುತ್ವಗಳ ನಡವಳಿಕೆಯನ್ನು, ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಅತ್ಯುತ್ತಮ ಪತ್ರಿಕೋದ್ಯಮ ಚೇತರಿಸಿಕೊಳ್ಳುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆಯೂ ಹೌದು. ಕಾನೂನು ಸುವ್ಯವಸ್ಥೆ ಕುಸಿದಿದಿರುವ, ನಾಗರಿಕ ಸಮಾಜ ದಿಗ್ಬಂಧನ ಎದುರಿಸುತ್ತಿರುವ ಅಥವಾ ಅಳಿವಿನ ಅಂಚಿನಲ್ಲಿರುವ ಕಡೆಗಳಲ್ಲಿ ಸ್ವತಂತ್ರ ಮಾಧ್ಯಮಗಳ ರಕ್ಷಣೆಗೆ ಇರುವ ಏಕೈಕ ಅಸ್ತ್ರ ಎಂದರೆ ಅವುಗಳ ವಿಶ್ವಾಸಾರ್ಹತೆ.

2018ರಲ್ಲಿ ನಿಕರಾಗುವಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯ ಅಲೆಗಳು ಎದ್ದ ನಂತ‌ರ ಪೊಲೀಸರು ಕೋರ್ಟ್‌ ಆದೇಶ ಇಲ್ಲದೆಯೇ ನಮ್ಮ ಸಂಪಾದಕೀಯ ಕಚೇರಿಯ ಮೇಲೆ ಎರಡು ಬಾರಿ ದಾಳಿ ನಡೆಸಿದ್ದರು. 2021ರಲ್ಲಿ ಡೇನಿಯಲ್‌ ಒರ್ಟೆಗಾ ಅವರ ಸರ್ವಾಧಿಕಾರಿ ಆಡಳಿತ ನಮ್ಮ ಸಂಸ್ಥೆಯನ್ನು ಅಕ್ರಮವಾಗಿ ಜಪ್ತಿ ಮಾಡಿತ್ತು. ಸ್ವತಂತ್ರವಾಗಿ ಪತ್ರಿಕೋದ್ಯಮ ನಡೆಸುವುದಕ್ಕಾಗಿ ನಮ್ಮ ಎಲ್ಲ ಪತ್ರಕರ್ತರು ಬಲವಂತವಾಗಿ ದೇಶದಿಂದ ಗಡಿಪಾರಾಗಬೇಕಾಯಿತು. ನಮ್ಮ ಸ್ವತಂತ್ರ ಮಾಹಿತಿ ಮೂಲಗಳನ್ನು ವಿಚಾರಣೆಗೆ ಒಳಪಡಿಸಲಾಯಿತಲ್ಲದೇ, ಬೆದರಿಕೆಯನ್ನೂ ಒಡ್ಡಲಾಯಿತು.

ADVERTISEMENT

ಹಾಗಿದ್ದರೂ, ಸಾರ್ವಜನಿಕ ಭ್ರಷ್ಟಾಚಾರ, ದೇಶದ ಆಡಳಿತದಲ್ಲಿನ ಆಂತರಿಕ ಸಂಘರ್ಷ, ಶೇ 10ರಷ್ಟು ಜನರ ಸಾಮೂಹಿಕ ವಲಸೆ, ವಲಸಿಗರನ್ನು ಅಮೆರಿಕಕ್ಕೆ ಅಕ್ರಮವಾಗಿ ಕಳುಹಿಸಲು ನಿಕರಾಗುವಾವನ್ನು ಚಿಮ್ಮುಹಲಗೆಯನ್ನಾಗಿ ಬಳಸುತ್ತಿರುವುದರ ಬಗ್ಗೆ ನಾವು ನಿರಂತರವಾಗಿ ವರದಿಗಳನ್ನು ಪ್ರಕಟಿಸುತ್ತಲೇ ಇದ್ದೇವೆ. ಇಂತಹ ವರದಿಗಳನ್ನು ಅಧಿಕೃತ ಮಾಧ್ಯಮದಲ್ಲಿ ಯಾರೊಬ್ಬರೂ ನೋಡುತ್ತಿಲ್ಲ, ಕೇಳುತ್ತಲೂ ಇಲ್ಲ. ‌

ಇಂತಹ ಪರಿಸ್ಥಿತಿಯಲ್ಲಿ, ನಿಕರಾಗುವಾ ಅಥವಾ ಹೊರದೇಶಗಳಲ್ಲಿ ಇರಬಹುದಾದ, ಆಡಳಿತದ ಬೆಂಬಲಿಗರು ಅಥವಾ ವಿರೋಧಿಗಳೂ ಆಗಿರಬಹುದಾದ ನಮ್ಮ ವೀಕ್ಷಕರಿಗೆಲ್ಲರಿಗೂ ಸರ್ಕಾರದ ನಿರ್ಬಂಧದಿಂದ ಮುಕ್ತವಾಗಿರುವ ಪರ್ಯಾಯ ಮಾಹಿತಿಗಳು ದೇಶದಿಂದ ಹೊರದಬ್ಬಿಸಿಕೊಂಡ ಪತ್ರಿಕೋದ್ಯಮದಿಂದ ಸಿಗುತ್ತಿವೆ. ಅಲ್ಲ‌ದೇ, ಅಂತರರಾಷ್ಟ್ರೀಯ ವೀಕ್ಷಕರಿಗೂ ಗುಣಮಟ್ಟದ ಪತ್ರಿಕೋದ್ಯಮವನ್ನು ಇದು ನೀಡುತ್ತಿದೆ.

ಈ ಪ್ರತಿಯೊಂದು ತನಿಖಾ ವರದಿಯ ಹಿಂದೆ ಯುವ ಪ್ರತಿಭಾವಂತ ಪತ್ರಕರ್ತರಿದ್ದಾರೆ. ಅವರು ತಮ್ಮ ವರದಿಗಳನ್ನು ಸರ್ಕಾರದ ನಿರ್ಬಂಧಕ್ಕೆ ಒಳಪಡಿಸುವುದಿಲ್ಲ. ಸ್ವತಃ ನಿರ್ಬಂಧಕ್ಕೆ ಒಳಗಾಗಿಲ್ಲ. ಇವೆಲ್ಲಕ್ಕಿಂತಲೂ ಹೆಚ್ಚಾಗಿ, ದೇಶದಿಂದ ಹೊರದೂಡಿದ ಮಾಧ್ಯಮದೊಂದಿಗೆ ಉತ್ತಮ ವಿಶ್ವಾಸವನ್ನು ಹೊಂದಿರುವ ಸರ್ಕಾರಿ ನೌಕರರು, ನಾಗರಿಕರು, ಸೇನೆಯಲ್ಲಿರುವವರೂ ಸೇರಿದಂತೆ ಹಲವು ಮೂಲಗಳ ಕೊಡುಗೆಯೂ ವರದಿಗಳ ಹಿಂದಿದೆ.

ಕ್ಯೂಬಾ ಮತ್ತು ವೆನೆಜುವೆಲಾದಲ್ಲಿ ಇತಿಹಾಸ ಪುನರಾವರ್ತನೆಯಾಗುತ್ತಿದೆ. ದೇಶದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿರುವ ಸ್ವತಂತ್ರ ಪತ್ರಿಕೋದ್ಯಮವು, ಲ್ಯಾಟಿನ್‌ ಅಮೆರಿಕದಲ್ಲಿ ಮಾಧ್ಯಮಗಳಿಗೆ ಬೆದರಿಕೆ ಒಡ್ಡುವ ನಿರಂಕುಶ ಪ್ರಭುತ್ವಗಳ ನಡವಳಿಕೆಯನ್ನು, ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಅತ್ಯುತ್ತಮ ಪತ್ರಿಕೋದ್ಯಮ ಚೇತರಿಸಿಕೊಳ್ಳುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆಯೂ ಹೌದು. ಕಾನೂನು ಸುವ್ಯವಸ್ಥೆ ಕುಸಿದಿದಿರುವ, ನಾಗರಿಕ ಸಮಾಜ ದಿಗ್ಬಂಧನ ಎದುರಿಸುತ್ತಿರುವ ಅಥವಾ ಅಳಿವಿನ ಅಂಚಿನಲ್ಲಿರುವ ಕಡೆಗಳಲ್ಲಿ ಸ್ವತಂತ್ರ ಮಾಧ್ಯಮಗಳ ರಕ್ಷಣೆಗೆ ಇರುವ ಏಕೈಕ ಅಸ್ತ್ರ ಎಂದರೆ ಅವುಗಳ ವಿಶ್ವಾಸಾರ್ಹತೆ.

ಈ ಮೂರೂ ರಾಷ್ಟ್ರಗಳಲ್ಲಿ ಸರ್ವಾಧಿಕಾರಿ ಆಡಳಿತಗಳು ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಪರಾಧವನ್ನಾಗಿ ಮಾಡಿವೆ. ಪತ್ರಕರ್ತರು ತಾವು ಪತ್ರಕರ್ತರೆಂದು ಗುರುತಿಸಿಕೊಳ್ಳುವಂತಿಲ್ಲ. ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ, ತಮ್ಮ ಲೇಖನ, ವರದಿಗಳಲ್ಲಿ ಹೆಸರುಗಳನ್ನೂ ಪ್ರಕಟಿಸುವಂತಿಲ್ಲ.

ನಿಕರಾಗುವಾದಲ್ಲಿ ಪತ್ರಕರ್ತ ವಿಕ್ಟರ್‌ ಟಿಕೇ ಅವರು ಧಾರ್ಮಿಕ ಮೆರವಣಿಗೆಯ ಫೋಟೊವೊಂದನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಕಾರಣಕ್ಕೆ, ‘ಸಂಚು’ ರೂಪಿಸಿದ ಅಪರಾಧದಲ್ಲಿ 17 ತಿಂಗಳು ಜೈಲುವಾಸ ಅನುಭವಿಸಿದ್ದರು. ಕ್ಯೂಬಾ ಮತ್ತು ವೆನೆಜುವೆಲಾದಲ್ಲಿ ಸಾಮಾಜಿಕ ಪ್ರತಿಭಟನೆಗಳು ಅಥವಾ ಚುನಾವಣಾ ವಂಚನೆಯ ಬಗ್ಗೆ ವರದಿಗಳನ್ನು ಬರೆದಿದ್ದಕ್ಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಕಾರಣಕ್ಕೆ 10ಕ್ಕೂ ಹೆಚ್ಚು ಪತ್ರಕರ್ತರು ಜೈಲಿನಲ್ಲಿದ್ದಾರೆ.

ಈ ನಡುವೆ, ಇಲ್ಲಿನ ಸರ್ಕಾರಗಳು ಇಂಟರ್‌ನೆಟ್‌ ಸಂಪರ್ಕ ನೀಡುವುದಕ್ಕೆ ತಡೆ ಒಡ್ಡುವುದೂ ಸೇರಿದಂತೆ ಸ್ವತಂತ್ರ ಮಾಧ್ಯಮಗಳಿಗೆ ವಿವಿಧ ರೂಪಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಿರ್ಬಂಧ ವಿಧಿಸುತ್ತಿವೆ. ಇಂತಹ ಕಠಿಣ ನಿರ್ಬಂಧಗಳ ನಡುವೆಯೂ ದೇಶದಿಂದ ಹೊರದೂಡಲಾದ ಪತ್ರಿಕೋದ್ಯಮದ ಕಾರಣದಿಂದ ಸ್ವತಂತ್ರ ಮಾಧ್ಯಮಗಳು ಇನ್ನೂ ಉಳಿದುಕೊಂಡಿವೆ.

ಬಲವಂತವಾಗಿ ದೇಶ ತೊರೆದ ಅಥವಾ ಹಿಂಸಾಚಾರ, ಬೆದರಿಕೆ, ಸಮಾಜ ಘಾತುಕರು, ಭ್ರಷ್ಟ ಅಧಿಕಾರಿಗಳು ಮತ್ತು ಸರ್ವಾಧಿಕಾರಿ ಸರ್ಕಾರಗಳ ಕಿರುಕುಳ ತಾಳಲಾರದೆ ಅನಿವಾರ್ಯವಾಗಿ ವಲಸೆ ಹೋದ ಲ್ಯಾಟಿನ್‌ ಅಮೆರಿಕಾದ ಮಾಧ್ಯಮ ಸಹೋದ್ಯೋಗಿಗಳ ಗೌರವಾರ್ಥ ‘ಇಂಟರ್‌–ಅಮೆರಿಕನ್‌ ಪ್ರೆಸ್‌ ಅಸೋಸಿಯೇಷನ್‌’ (ಎಸ್‌ಐಪಿ) ಈ ವರ್ಷ ‘ಗ್ರೇಟ್‌ ಪ್ರೈಜ್‌ ಫಾರ್‌ ಪ್ರೆಸ್‌ ಫ್ರೀಡಂ–2024’ ಅನ್ನು ‘ದೇಶದಿಂದ ಗಡಿಪಾರು ಮಾಡಲಾದ ಪತ್ರಿಕೋದ್ಯಮ’ಕ್ಕೆ ನೀಡಿದೆ.

ನಿಕರಾಗುವಾ, ವೆನುಜುವೆಲಾ, ಗ್ವಾಟೆಮಾಲ, ಕ್ಯೂಬಾ ಮತ್ತು ಈಕ್ವೆಡಾರ್‌ನಂತಹ ರಾಷ್ಟ್ರಗಳಿಂದ ಗಡಿಪಾರುಗೊಳ್ಳುತ್ತಿರುವ ಪತ್ರಕರ್ತರು ಹಾಗೂ ಮೆಕ್ಸಿಕೊ ಮತ್ತು ಕೊಲಂಬಿಯಾ ರಾಷ್ಟ್ರಗಳಲ್ಲಿ ಆಂತರಿಕವಾಗಿ ಸ್ಥಳಾಂತರಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಇಂಟರ್‌ ಅಮೆರಿಕನ್‌ ಪ್ರೆಸ್‌ ಅಸೋಸಿಯೇಷನ್‌ ತನ್ನ ವರದಿಯಲ್ಲಿ ದಾಖಲಿಸಿದೆ.

ಗಡಿಪಾರುಗೊಂಡವರಲ್ಲಿ ಕ್ಯೂಬಾ, ನಿಕರಾಗುವಾ ಮತ್ತು ವೆನೆಜುವೆಲಾ ಮಾಧ್ಯಮ ಸಂಸ್ಥೆಗಳ ಸಂಪಾದಕೀಯ ಸಿಬ್ಬಂದಿಯೂ ಇದ್ದಾರೆ. ಇವರೆಲ್ಲರೂ ಈ ದೇಶಗಳಲ್ಲಿ ವ್ಯವಸ್ಥಿತವಾಗಿ ನೀಡಲಾಗುತ್ತಿದ್ದ ಕಿರುಕುಳದ ಸಂತ್ರಸ್ತರು. ಈ ಪೈಕಿ ಕೆಲವರು ವಿದೇಶದಿಂದ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

ದೇಶದಿಂದ ಹೊರದೂಡಿದ ಪತ್ರಿಕೋದ್ಯಮವನ್ನು ಮುಂದುವರಿಸಲು ಬೆಟ್ಟದಷ್ಟು ಸವಾಲುಗಳಿವೆ. ಅಪಾಯದಲ್ಲಿರುವ ಪತ್ರಕರ್ತರು ಮತ್ತು ಅವರ ಸಹವರ್ತಿಗಳು ಹಾಗೂ ಮಾಹಿತಿಯ ಮೂಲಗಳಿಗೆ ಭದ್ರತೆ ನೀಡುವ ಕೆಲಸ ತುರ್ತಾಗಿ ಆಗಬೇಕಿದೆ. ಇದರ ಜೊತೆಗೆ ಹೊರದೇಶಗಳಿಂದ ಕಾರ್ಯಾಚರಿಸುತ್ತಿರುವ ಮಾಧ್ಯಮ ಸಂಸ್ಥೆಗಳು ಆರ್ಥಿಕ ಸುಸ್ಥಿರತೆಯನ್ನು ಕಾಪಾಡುವುದು ಅತ್ಯಂತ ಜಟಿಲವಾದ ವಿಚಾರ.

ಈ ನಿರಂಕುಶ ಪ್ರಭುತ್ವಗಳ ಆಡಳಿತದಲ್ಲಿ ಮಾಧ್ಯಮಗಳು ಶಾಶ್ವತವಾಗಿ ದೇಶದಿಂದ ಹೊರಗುಳಿದೇ ಕಾರ್ಯನಿರ್ವಹಿಬೇಕಾಗಿದೆ ಎಂಬ ಪರಿಸ್ಥಿತಿ ಸದ್ಯಕ್ಕೆ ಇದೆ. ಮಾಧ್ಯಮಗಳ ಮೇಲೆ ಸರ್ವಾಧಿಕಾರಿ ಆಡಳಿತಗಳು ಮಾಡುತ್ತಿರುವ ಪ್ರಹಾರವು ಅಂತರರಾಷ್ಟ್ರೀಯ ಸಮುದಾಯಕ್ಕೂ ಸವಾಲೊಡ್ಡಿದೆ. ಇಂತಹ ಸನ್ನಿವೇಶದಲ್ಲಿ ಎಲ್ಲ ಸ್ವಾತಂತ್ರ್ಯಗಳಿಗಿಂತಲೂ ಮುಖ್ಯವಾಗಿರುವ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವುದು ಬಹಳ ಮುಖ್ಯವಾಗಿದೆ.

ಲೇಖಕ: ಕಾನ್ಫಿಡೆನ್ಶಿಯಲ್‌ ಸಂಪಾದಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.