ಶಿಲುಬೆಯ ಮೇಲೆ ನೇತಾಡುತ್ತಿದ್ದ ಯೇಸು ಇನ್ನೂ ಜೀವಂತವಾಗಿ ಇರುವರೋ ಇಲ್ಲವೋ ಎಂದು ಪರೀಕ್ಷಿಸಲು ಲಾಂಜಿನಸ್ ಎಂಬ ಸೈನಿಕ ತನ್ನ ಭರ್ಜಿಯಿಂದ ಅವರ ಎದೆಗೆ ಚುಚ್ಚುತ್ತಾನೆ. ಆಗ ಮರಣಮೂರ್ಛಿತರಾಗಿದ್ದ ಯೇಸು ಯಾತನೆಯಿಂದ ಕಣ್ತೆರೆದು ಅವನತ್ತ ನೋಡಿ ‘ನನ್ನೆದೆಯನ್ನು ತಲುಪಲು ಇನ್ನೂ ಸುಲಭದ ಮಾರ್ಗವೊಂದಿದೆ’ ಎಂದು ಹೇಳಿದ್ದರಂತೆ. ಹಾಗೊಂದು ಐತಿಹ್ಯ ಇದೆ. ಇದನ್ನು ಓಶೊ ಅವರೂ ದಾಖಲಿಸಿದ್ದಾರೆ (‘ಯೋಗ: ದಿ ಆ್ಯಲ್ಫ ಅಂಡ್ ದಿ ಓಮೆಗ, ಸಂಪುಟ 7, ಪುಟ 49–50, 1976).ಇಂದು, ಜಗತ್ತಿನಾದ್ಯಂತ ಧರ್ಮದ ಹೆಸರಿನಲ್ಲಿ, ಪ್ರಚಾರದ ಹೆಸರಿನಲ್ಲಿ ನಡೆಯುತ್ತಿರುವಷ್ಟು ಹಿಂಸೆ ಮತ್ತೊಂದರ ಹೆಸರಿನಲ್ಲಿ ನಡೆಯುತ್ತಿಲ್ಲ. ಆದರೆ, ಪ್ರಚಾರದ ಹುಚ್ಚು ಒಬ್ಬ ರಕ್ತಪಿಪಾಸುವಿಗೆ ಹೊಂದುತ್ತದೆಯಲ್ಲದೆ ಪ್ರಚಾರ, ಮಹತ್ವಾಕಾಂಕ್ಷೆಗಳು ಯಾವ ಅರ್ಥದಲ್ಲೂ ಧಾರ್ಮಿಕ ಮೌಲ್ಯಗಳಲ್ಲ.
ಯೇಸು ತನ್ನ ಒಳನೋಟಗಳನ್ನು ತನ್ನ ಆಪ್ತವರ್ಗದವರೊಂದಿಗೆ ಹಂಚಿಕೊಳ್ಳುತ್ತಿದ್ದರೇ ವಿನಾ ತನ್ನ ವಿಚಾರಗಳು ವಿಶ್ವವ್ಯಾಪಕವಾದುವೆಂಬ ಭ್ರಮೆ ಅವರಿಗಿರಲಿಲ್ಲ. ಆದರೆ ಅವರ ಅನುಯಾಯಿಗಳಿಗಾಗಲೀ ಅಥವಾ ಅಂದಿನ ಪ್ರಭುತ್ವಕ್ಕಾಗಲೀ ಇದು ಅರ್ಥವಾಗಲಿಲ್ಲ. ಅಂದು ಜನ ಹುಚ್ಚು ಹಿಡಿದವರಂತೆ ಅವರತ್ತ ಆಕರ್ಷಿತರಾಗುತ್ತಿದ್ದುದನ್ನು ಕಂಡ ರೋಮನ್ನರು ‘ಈತ ಪರ್ಯಾಯ ಪ್ರಭುತ್ವ ಸ್ಥಾಪಿಸುವ ಹುನ್ನಾರ ನಡೆಸುತ್ತಿದ್ದಾನೆ’ಎಂದು ಅನುಮಾನಿಸಿ ಶಿಲುಬೆಗೇರಿಸಿದರು. ಯೇಸು ಉಪದೇಶಗಳೂ ಅವರ ಅನುಮಾನಕ್ಕೆ ಪೂರಕವಾಗಿಯೇ ಇದ್ದವು. ತಾನು ದೇವಪುತ್ರನೆಂದು, ಲೋಕದ ಜನರನ್ನು ತನ್ನ ಸಾಮ್ರಾಜ್ಯಕ್ಕೆ ಕರೆದೊಯ್ಯಲು ಬಂದಿದ್ದೇನೆಂದು ಹೇಳಿಕೊಳ್ಳುತ್ತಿದ್ದರು (ಗಾಸ್ಪೆಲ್ ಆಫ್ ಸೇಂಟ್ ಮ್ಯಾಥ್ಯೂ 21).
ಆದರೆ, ಕಾವ್ಯದ ಧ್ವನಿಪೂರ್ಣ ಮಾತಿಗೂ ರಾಜಕಾರಣದ ಮಾತಿಗೂ ಅಜಗಜಾಂತರ ಇದೆ. ರಾಜಕಾರಣದ ಮಾತಿಗೆ ಸ್ಪಷ್ಟತೆ, ನಿಖರತೆ ಬೇಕು. ಆದರೆ ಕಾವ್ಯ ಹಾಗಲ್ಲ, ಅರ್ಥಸಂದಿಗ್ಧವೇ ಅದರ ಮೂಲಶಕ್ತಿಯಾಗಿದೆ. ಮಂಜಿನಿಂದ ಆವೃತವಾದ ಮುಂಜಾನೆಯ ಆಗಸದಲ್ಲಿ ಬಹುದೂರದ ವಸ್ತುಗಳು ಹೇಗೆ ಸ್ಪಷ್ಟವಾಗಿ ಗೋಚರಿಸುವುದಿಲ್ಲವೋ ಹಾಗೆಯೇ ಕಾವ್ಯ ಕೂಡ. ಬಹುದೂರದ ವಸ್ತುಗಳನ್ನು ಕಾಣುವ–ಕಾಣಿಸುವ ತುರ್ತು ಸಹ ಕಾವ್ಯಕ್ಕೆ ಇರುವುದಿಲ್ಲ.
ಯೇಸುವಿನ ರೂಪಕದ ಮಾತುಗಳನ್ನು ಗ್ರಹಿಸುವ ಕೌಶಲ ಅವರ ಶಿಷ್ಯಂದಿರಿಗಾಗಲಿ ಶತ್ರುಗಳಿಗಾಗಲಿ ಇಲ್ಲದೇ ಹೋದುದು ದುರಂತ. ಶಿಷ್ಯಂದಿರು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರಾದರೂ ‘ನಿನ್ನ ದೇವರ ಸಾಮ್ರಾಜ್ಯದಲ್ಲಿ ನಿನ್ನ ಸ್ಥಾನವೇನು? ಅಲ್ಲಿ ನೀನು ದೇವರ ಸಿಂಹಾಸನದ ಬಳಿ ನಿಂತಿರುವೆಯಾ? ಅಲ್ಲಿ ನಮ್ಮ ಸ್ಥಾನಮಾನವೇನು’ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರಂತೆ (ಗಾಸ್ಪೆಲ್ ಆಫ್ ಸೇಂಟ್ ಥಾಮಸ್ 113). ಅವರು ‘ದೇವರರಾಜ್ಯ’ ಎಂಬ ರೂಪಕದ ಭಾಷೆಯನ್ನು ಅರ್ಥ ಮಾಡಿಕೊಳ್ಳುವಷ್ಟು ಕೌಶಲ ಹೊಂದಿರಲಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಈ ಕಾರಣಕ್ಕೇ ಜರ್ಮನ್ ತತ್ವಜ್ಞಾನಿ ಫ್ರೆಡರಿಕ್ ನೀಷೆ, ಯೇಸು ಮೇಲೆ ವಾಗ್ದಾಳಿ ಮಾಡಿದ್ದು. ಯೇಸು ಬೋಧನೆ ಇಂಥವರಿಂದ ದುರ್ಬಳಕೆಯಾಗುತ್ತಿದೆಯಲ್ಲ ಎಂದು ಪರಿತಪಿಸಿದ್ದು. ಅವನು ಯೇಸು ಅವರನ್ನು ಎಷ್ಟೇ ಖಂಡಿಸುತ್ತಿದ್ದರೂ ಆಳದಲ್ಲಿ ಯೇಸು ಬಗ್ಗೆ ಇದ್ದ ಅಪಾರವಾದ ಪ್ರೀತಿ, ಸೆಳೆತವೇ ಅವನಲ್ಲಿ ಬೇರೆ ಮತ್ತೊಂದು ಬಗೆಯಲ್ಲಿ, ರಾಜಕೀಯ ಪ್ರತಿರೋಧದ ರೂಪದಲ್ಲಿ ವ್ಯಕ್ತವಾಗುತ್ತಿತ್ತು.
ಬೈಬಲ್ ಒಳಗೊಂಡಂತೆ ಎಲ್ಲ ಧಾರ್ಮಿಕ ಗ್ರಂಥಗಳೂ ಮೂಲದಲ್ಲಿ ಕಾವ್ಯಗ್ರಂಥಗಳಾಗಿವೆ. ಆದ್ದರಿಂದಲೇ ಶ್ರೇಷ್ಠಕಾವ್ಯಕ್ಕೆ ಯಾರು ಎಷ್ಟೇ ವ್ಯಾಖ್ಯಾನ ನೀಡಿದರೂ ಅದರೊಳಗಿನ ಅರ್ಥಸಂದಿಗ್ಧ ಎಂದೂ ಪೂರ್ತಿಯಾಗಿ ಬಯಲಾಗದು. ಕಾವ್ಯಶಕ್ತಿಯ ಈ ನಿಗೂಢವನ್ನು ಕುರಿತೇ ಯೇಸುಕ್ರಿಸ್ತ ‘ನನ್ನ ಪಿತನ ಮಹಲಿಗೆ ಹಲವು ಅಂತಸ್ತುಗಳಿವೆ’ ಎಂದು ರೂಪಕಾತ್ಮಕವಾಗಿ ನುಡಿದದ್ದು (ಗಾಸ್ಪೆಲ್ ಆಫ್ ಸೇಂಟ್ ಜಾನ್ 2.16). ಹೀಗೆ ಸತ್ವಶಾಲಿಯಾದ ಕಾವ್ಯಗಳು ಜನಮಾನಸದ ಪ್ರಜ್ಞೆಯನ್ನು ರೂಪಿಸುತ್ತ ಕಾಲಾಂತರದಲ್ಲಿ ಧರ್ಮಗ್ರಂಥಗಳಾಗಿ ಪರಿವರ್ತನೆಯಾದವು ಎನಿಸುತ್ತದೆ. ಧರ್ಮಗ್ರಂಥಗಳನ್ನು ಭಾಷಾಂತರಿಸುವಾಗ ಎದುರಾಗುವ ಸವಾಲುಗಳು ಸಹ ಅವುಗಳ ಕಾವ್ಯಗುಣಕ್ಕೆ ಮತ್ತೊಂದು ರುಜುವಾತಾಗಿವೆ. ಬೈಬಲ್ಲನ್ನು ಮೂಲದಿಂದ ಭಾಷಾಂತರಿಸಿದಾಗ ಅದರ ಅಂತಃಸತ್ವವೇ ನಷ್ಟವಾಯಿತು. ಯೇಸುವಿನ ವಿಚಾರಗಳ ವೈಶಾಲ್ಯ ಇಂಗ್ಲಿಷ್ ಬೈಬಲ್‌ಗೆ ಕೊನೆಗೂ ದಕ್ಕಲೇ ಇಲ್ಲ. ಹಿಂದಿನ ಕಾಲದ ವಿದ್ವಾಂಸರ ಮಡಿವಂತಿಕೆ ಧೋರಣೆಯ ಹಿಂದೆ ಅಸಲಿಗೆ ಕಾವ್ಯದ ಮೂಲಸತ್ವವನ್ನು ಕಾಪಾಡಬೇಕೆಂಬ ತೀವ್ರವಾದ ಕಾಳಜಿಯಿತ್ತು.
ಬೈಬಲ್ಲನ್ನು ಮೊದಲ ಸಲ ಜಪಾನ್, ಚೀನಾ, ಬರ್ಮಾ ಮುಂತಾದ ದೇಶಭಾಷೆಗಳಿಗೆ ಅನುವಾದಿಸುವಾಗ ಕೆಲವು ವಾಕ್ಯಗಳನ್ನು ಅನುವಾದಿಸಲಾಗದೆ ದೊಡ್ಡ ತಲೆನೋವಾಯಿತಂತೆ. ಒಂದು ವೇಳೆ ಅನುವಾದಿಸಿದರೂ ಮೂಲದ ಅರ್ಥವೇ ಸಂಪೂರ್ಣ ಮಾಯವಾಗಿ ಬಿಡುತ್ತಿತ್ತು. ಬುದ್ಧನ ಕ್ಷಣಿಕವಾದದಿಂದ ಪ್ರಭಾವಿತವಾದ ಆ ಭಾಷೆಗಳಲ್ಲಿ ‘ದೇವರಿದ್ದಾನೆ’ ಎಂಬ ಸರಳವಾದ ವಾಕ್ಯವನ್ನು ಸಹ ಅನುವಾದಿಸಲು ಬರುವುದಿಲ್ಲ. ಒಂದು ವೇಳೆ ಅನುವಾದಿಸಿದರೆ ಅದು ‘ದೇವರು ಉಂಟಾಗುತ್ತಿದ್ದಾನೆ’ ಎಂಬ ಅರ್ಥ ಕೊಡುತ್ತದೆ. ನಮ್ಮ ನುಡಿಗಳಲ್ಲೇ ವಿವರಿಸುವುದಾದರೆ ‘ಅಲ್ಲಿ ನದಿ ಇದೆ’ ಎನ್ನುವುದಕ್ಕಿಂತ ‘ಅಲ್ಲಿ ನದಿ ಹರಿಯುತ್ತಿದೆ’ ಎಂಬುದೇ ಹೆಚ್ಚು ಸಮಂಜಸವಲ್ಲವೇ? ದೇವರ ವಿಷಯದಲ್ಲೂ ‘ದೇವರು ಉಂಟಾಗುತ್ತಿದ್ದಾನೆ’ ಎಂದು ಅನುವಾದಿಸುವುದು ಸರಿಯೇ?
ಈ ಹಿನ್ನೆಲೆಯಲ್ಲಿ ಯೇಸು ಅವರಂತಹ ಅನುಭಾವಿಗಳನ್ನು ನಾವು ಧರ್ಮಗುರುವೆಂದಲ್ಲ ಒಬ್ಬ ಕವಿಯಂತೆ, ಕಲಾವಿದನಂತೆ ಕಾಣುವುದೇ ಸೂಕ್ತವೆನಿಸುತ್ತದೆ. ಚಿತ್ರಕಾರನು ಚಿತ್ರಕಲೆಯನ್ನು ಸೃಷ್ಟಿಸುವಂತೆ, ಕವಿಯು ಕಾವ್ಯಗಳಿಗೆ ಜನ್ಮ ನೀಡಿದಂತೆ ಯೇಸು ಅಂಥವರು ಮಾನವ ಹೃದಯಗಳಿಗೆ ಜನ್ಮ ನೀಡಿದರು. ಕಲಾವಿದನ ಕರಸ್ಪರ್ಶದಿಂದ ಒಂದು ನಿರ್ಜೀವವಾದ ಬಿಳಿ ಹಾಳೆ ಬೆಲೆಕಟ್ಟಲಾಗದ ಕಲೆಯಾಗಿ ಪರಿಣಮಿಸುವುದನ್ನು ಕಾಣಬಲ್ಲ ನಮಗೆ, ಯೇಸು ಕರಸ್ಪರ್ಶದಿಂದ ಒಬ್ಬ ಸಾಧಾರಣ ಹುಲುಮಾನವ- ಸೈಮನ್ ಎಂಬ ಮೀನುಗಾರ, ಪೀಟರ್ ಎಂಬ- ದೇವದೂತನಾಗಿ ಪರಿವರ್ತಿತನಾಗುವುದು ಕಾಣಿಸದೇ? ಭಾರತೀಯ ಪುರಾಣಗಳಲ್ಲಿ ಸ್ಪರ್ಶಮಣಿ ಎಂಬ ಕಾಲ್ಪನಿಕ ರತ್ನದ ವರ್ಣನೆ ಇದೆ. ಆ ಮಣಿಯನ್ನು ಸ್ಪರ್ಶಿಸಿದಾಗ ಒಂದು ತುಂಡು ಕಬ್ಬಿಣವೂ ಬಂಗಾರವಾಗಿ ಪರಿವರ್ತಿತವಾಗುವುದಂತೆ! ಯೇಸುವೂ ಅಂಥದ್ದೇ ಒಂದು ಸ್ಪರ್ಶಮಣಿಯಾಗಿದ್ದರು. ಅವರ ಸ್ಪರ್ಶದಿಂದ ಹುಲುಮಾನವರು ದಿವ್ಯಮಾನವರಾಗಿಬಿಡು
ತ್ತಿದ್ದರು. ಲೋಕದಲ್ಲಿ ಇದಕ್ಕಿಂತಲೂ ಮಿಗಿಲಿನ ಕಲಾಸೃಷ್ಟಿ, ಮಿಗಿಲಿನ ಪವಾಡ ಮತ್ತೊಂದಿದೆಯೇ?
ನಮ್ಮ ಸಾಮಾನ್ಯ ತರ್ಕ, ಲೆಕ್ಕಾಚಾರಗಳು ಅಸಾಧಾರಣ ಕಲಾವಿದರಿಗೆ ಅರ್ಥವಾಗದ ಕಾರಣ ಜನ ಅವರನ್ನು ಹುಚ್ಚರೆಂದು ತೀರ್ಮಾನಿಸಿರುವುದುಂಟು. ಯೇಸುಕ್ರಿಸ್ತ ಅವರನ್ನು ‘ನೀನು ನಿಜಕ್ಕೂ ದೇವರ ಏಕಮಾತ್ರ ಪುತ್ರನೇ?’ ಎಂದು ಕೇಳಿದಾಗ ಅವರು ಅಹುದೆನ್ನುತ್ತಿದ್ದರು, ಯಾವುದೇ ರುಜುವಾತುಗಳನ್ನು ಒದಗಿಸದೆ ಸ್ವಯಂ ಪ್ರಮಾಣದಿಂದ ಯಾರಿಗೂ ಅರ್ಥವಾಗದ ಬೆಡಗಿನ ಮಾತುಗಳನ್ನಾಡುತ್ತಿದ್ದರು (ಗಾಸ್ಪೆಲ್ ಆಫ್ ಸೇಂಟ್ ಜಾನ್ 8.48-59). ಶ್ರೀರಾಮಕೃಷ್ಣರೂ ಹೀಗೆಯೇ ಬೆಡಗಿನಲ್ಲಿ ನುಡಿಯುತ್ತಿದ್ದರು. ‘ಭವತಾರಿಣಿ ಇರುವಳು ಎಂಬುದಕ್ಕೆ ಪ್ರಮಾಣವೇನು’ ಎಂದು ವಿವೇಕಾನಂದರು ಕೇಳಿದಾಗ ‘ನಾನು ಬಲ್ಲೆ, ನನಗೆ ಪ್ರಮಾಣಗಳ ಅಗತ್ಯವಿಲ್ಲ. ಆ ಅಗತ್ಯ ನಿನಗಿರಬಹುದೇನೋ. ನಿನಗೆ ಪ್ರಮಾಣ ಬೇಕಿದ್ದರೆ ನೀನೇ ಹುಡುಕಿ ತಿಳಿ’ ಎಂದಿದ್ದರಂತೆ.
ರಾಮ, ಕೃಷ್ಣ, ಯೇಸು ಅವರಂತಹ ವಿಪರೀತ ಚರಿತರನ್ನು ನಶ್ವರ ಸಾಮ್ರಾಜ್ಯಗಳನ್ನು ಕಟ್ಟುವ ಕಟ್ಟಾಳುಗಳನ್ನಾಗಿ ಬಳಸಿಕೊಳ್ಳದೆ ಜೀವಂತ ವ್ಯಕ್ತಿಗಳನ್ನು, ಸಂವೇದನಾಶೀಲ ಹೃದಯಗಳನ್ನು ಸೃಷ್ಟಿಸಬಲ್ಲ ಕವಿಗಳಂತೆ ಪರಿಭಾವಿಸುವುದರಲ್ಲಿ ಲೋಕಹಿತವಿದೆ.
ಲೇಖಕ: ಸಹಾಯಕ ಪ್ರಾಧ್ಯಾಪಕ,ಜ್ಯೋತಿನಿವಾಸ್ ಕಾಲೇಜ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.