ADVERTISEMENT

ವಿಶ್ಲೇಷಣೆ | ರಾಜಕೀಯ ಚಿಂತನೆ: ಏಕೆ ನಿರ್ವಾತ?

ಯೋಗೇಂದ್ರ ಯಾದವ್
Published 12 ಸೆಪ್ಟೆಂಬರ್ 2024, 19:30 IST
Last Updated 12 ಸೆಪ್ಟೆಂಬರ್ 2024, 19:30 IST
   

ರಾಜಕೀಯ ಸಿದ್ಧಾಂತ ಎಂದರೇನು? ರಾಜಕೀಯ ಚಿಂತಕರೆಂದರೆ ಯಾರು? ರಾಜಕೀಯ ಚಿಂತನಾಕ್ರಮ ಸತ್ತುಹೋಗಿದೆ ಎಂದು ಯಾರೋ ಒಬ್ಬರು ಘೋಷಿಸುವುದು ಹೇಗೆ?... ‘ಹೋದರೆಲ್ಲಿ ನಮ್ಮ ರಾಜಕೀಯ ಚಿಂತಕರು?’ (ಪ್ರ.ವಾ., ಆ. 31) ಎಂಬ ಲೇಖನಕ್ಕೆ ಬಂದಂತಹ ಕುತೂಹಲಕಾರಿ ಪ್ರತಿಕ್ರಿಯೆಗಳಿವು. ಲೇಖನಗಳು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ವೈಯಕ್ತಿಕ ಮಾತುಕತೆ... ಈ ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕಿತ್ತು ಎಂಬುದನ್ನು ಈ ರೀತಿಯ ಪ್ರತಿಕ್ರಿಯೆಗಳು ದೃಢಪಡಿಸಿವೆ.

‘ರಾಜಕೀಯ ಚಿಂತನೆ’ ಎಂಬುದು ಸೊರಗುತ್ತಿರುವುದರ ಬಗ್ಗೆ ನನ್ನಲ್ಲಿ ಆಳವಾದ ಸಂತಾಪವಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಿಬಿಡುತ್ತೇನೆ. ಈಗ ಪ್ರತಿದಿನ ಸಂಭವಿಸುವ ರಾಜಕೀಯ ಚರ್ಚೆಗಳು, ಸೈದ್ಧಾಂತಿಕ ತರ್ಕಗಳು ಮತ್ತು ನೀತಿನಿರೂಪಣೆಗಳ ಬಹಳ ವಿಸ್ತಾರವಾದ ರಾಜಕೀಯ ಪ್ರತಿಬಿಂಬಗಳನ್ನು ಕುರಿತ ಮಾತು ಇದಾಗಿದೆ. ಈ ರೀತಿಯ ಯೋಚನಾ ಕ್ರಮಗಳು ಅಲ್ಲಿಇಲ್ಲಿ ಆರಂಭವಾಗುತ್ತವೆ ಮತ್ತು ರಾಜಕೀಯ ಚಿಂತನೆಗೆ ಸಂಬಂಧಿಸಿದ ಮೂರು ಬಹುದೊಡ್ಡ ಪ್ರಶ್ನೆಗಳು ಎದುರಾದಾಗ ಉತ್ತರಿಸದೇ ಹಿಂದಡಿ ಇಟ್ಟುಬಿಡುತ್ತೇವೆ.

ಮೊದಲನೆಯದಾಗಿ, ನಮ್ಮ ಗುರಿ ಏನು? ಯಾವ ಸ್ವರೂಪದ ರಾಜಕೀಯ ವ್ಯವಸ್ಥೆಯನ್ನು ರೂಪಿಸಲು ನಾವು ಬಯಸುತ್ತಿದ್ದೇವೆ? ರಾಜಕೀಯ ದೃಷ್ಟಿಕೋನವನ್ನು ಬೇಡುವ ಸಾಮಾನ್ಯ ಪ್ರಶ್ನೆ ಇದು. ಎರಡನೆಯದಾಗಿ, ನಾವು ನಮ್ಮ ಗುರಿಯ ಯಾವ ಹಂತದಲ್ಲಿದ್ದೇವೆ? ರಾಜಕೀಯ ವಿಶ್ಲೇಷಣೆ, ರಾಜಕಾರಣದಲ್ಲಿನ ಕಾರ್ಯಕಾರಣ ಸಂಬಂಧವನ್ನು ಅರ್ಥಮಾಡಿಕೊಳ್ಳುವಂತಹ ಶಕ್ತಿ ಬೇಡುವ ಅತ್ಯಂತ ಪ್ರಾಯೋಗಿಕ ಸ್ವರೂಪದ ‍ಪ್ರಶ್ನೆ ಇದು. ಮೂರನೆಯದಾಗಿ, ನಾವು ಮುಂದೇನು ಮಾಡಬೇಕು? ಈಗ ಇರುವಲ್ಲಿಂದ ನಾವು ಹೋಗಲು ಬಯಸುತ್ತಿರುವುದು ಎಲ್ಲಿಗೆ ಮತ್ತು ಅಲ್ಲಿಗೆ ಹೋಗುವುದು ಹೇಗೆ? ರಾಜಕೀಯ ತಂತ್ರಗಾರಿಕೆಯನ್ನು ರೂಪಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಬೇಡುವ, ನಿರ್ದೇಶನ ಸ್ವರೂಪದ ಪ್ರಶ್ನೆ ಇದು. 

ಈ ಎಲ್ಲ ಪ್ರಶ್ನೆಗಳಿಗೆ ತಮ್ಮದೇ ರೀತಿಯಲ್ಲಿ ಉತ್ತರಿಸಬಲ್ಲವರಾಗಿದ್ದ, ವೈವಿಧ್ಯಮಯ ಸಿದ್ಧಾಂತಗಳನ್ನು ಅನುಸರಿಸುವ ಅಪಾರ ಸಂಖ್ಯೆಯ ರಾಜಕೀಯ ಚಿಂತಕರು ನಮ್ಮ ನಡುವೆ ಇದ್ದರು. ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಗ್ರಹಿಸುವಲ್ಲಿ ಅವರ ಚಿಂತನಾ ಕ್ರಮಗಳು ನೆರವಾಗಿದ್ದವು. ರಾಜಕೀಯ ಚಿಂತನೆ ಎಂಬುದು ಪಾಶ್ಚಾತ್ಯರಲ್ಲಿ ಒಂದು ‘ಅಕಡೆಮಿಕ್‌’ ಶಿಸ್ತು ಅಷ್ಟೆ. ಆದರೆ ನಮ್ಮ ಬಹುತೇಕ ರಾಜಕೀಯ ಚಿಂತಕರು ರಾಜಕಾರಣದಲ್ಲಿ ಸಕ್ರಿಯರಾಗಿದ್ದರು.

‘ಆಧುನಿಕ ಭಾರತೀಯ ರಾಜಕೀಯ ಚಿಂತನೆ’ಯು ಹಲವು ಸಿದ್ಧಾಂತಗಳ ಒಂದು ಗುಚ್ಛವಾಗಿತ್ತು. ವಸಾಹತು ವಿರೋಧಿ ಹೋರಾಟ, ಸಂವಿಧಾನ ಮತ್ತು ವಸಾಹತೋತ್ತರ ರಾಜಕಾರಣಕ್ಕೆ ಅದು ಭದ್ರಬುನಾದಿ ಹಾಕಿಕೊಟ್ಟಿತ್ತು. 1870ರಿಂದ 1960ರವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಇಂತಹ ಚಿಂತನಾ ಕ್ರಮವು ನಿಧಾನಗತಿಯಲ್ಲಿ ಅಂತ್ಯದತ್ತ ಸರಿಯಲಾರಂಭಿಸಿತ್ತು. ಭಾರತದಲ್ಲಿನ ಇಂದಿನ ರಾಜಕೀಯ ಕಲ್ಪನೆ, ಗ್ರಹಿಕೆ ಮತ್ತು ನಿರ್ಧಾರದಲ್ಲಿನ ದಾರಿದ್ರ್ಯವು ಈ ಸೊರಗುವಿಕೆಯ ಪ್ರತಿಫಲ. ಇದಕ್ಕೂ ಅಪವಾದವಿದೆ. ಇಂತಹ ಚಿಂತನೆಯು ಸ್ತ್ರೀವಾದ, ಸಾಮಾಜಿಕ ನ್ಯಾಯ ಮತ್ತು ‘ಅಭಿವೃದ್ಧಿ’ ಮಾದರಿಯ ಕಟುವಿಮರ್ಶೆ ಎಂಬ ಮೂರು ಧಾರೆಗಳಲ್ಲಿ ಈಗಲೂ ಜೀವಂತವಾಗಿದೆ ಎಂದು ಈ ಹಿಂದೆಯೇ ಹೇಳಿದ್ದೆ.

ಸಾಮಾಜಿಕ ನ್ಯಾಯವು ಇನ್ನೂ ಬಾಬಾಸಾಹೇಬ್‌ ಅಂಬೇಡ್ಕರ್ ಅವರ ನೆರಳಿನಿಂದ ಹೊರಬರಬೇಕಿದೆ ಎಂಬುದು ಈ ಹೊತ್ತಿನ ಚರ್ಚೆ. ಈ ಚರ್ಚೆಗಳು ಜಾತಿ ಮತ್ತು ಜನಾಂಗದ ಅಸ್ಮಿತೆಯನ್ನು ಸಮೀಕರಿಸಿ ನೋಡುವ, ಜಾತೀಯ ಆರ್ಥಿಕ ರಾಜಕಾರಣ, ಮಹಾದಲಿತರು ಮತ್ತು ಅತ್ಯಂತ ಹಿಂದುಳಿದ ಮುಸ್ಲಿಮರನ್ನೂ ಒಳಗೊಳ್ಳುವ ಮೂಲಕ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಹೊಸ ದಿಕ್ಕುಗಳನ್ನು ತೋರಿಸುತ್ತಿವೆ. ‘ಅಭಿವೃದ್ಧಿ’ ಮಾದರಿಯ ಕಟುವಿಮರ್ಶಾ ಸಿದ್ಧಾಂತವು ಮಹಾತ್ಮ ಗಾಂಧಿ ಅವರ ಛಾಯೆಯಿಂದ ಈಗಾಗಲೇ ಹೊರಬಂದಿದೆ ಮತ್ತು ಹೊಸ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ರೂಪಿಸುವಲ್ಲಿ ನಮಗೆ ದಾರಿದೀಪವಾಗಿ ಕೆಲಸ ಮಾಡುತ್ತಿದೆ. ಇವೆಲ್ಲವನ್ನು ಒಗ್ಗೂಡಿಸಿದರೂ ‘ಆಧುನಿಕ ಭಾರತೀಯ ರಾಜಕೀಯ ಚಿಂತನೆ’ಯ ನಿರ್ವಾತವನ್ನು ತುಂಬಲಾರವು. 

ಈ ಕುರಿತಂತೆ ನಾನು ಮಂಡಿಸಿದ ವಾದಗಳನ್ನು ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದವರು ಒಪ್ಪುತ್ತಾರೆ. ಇದನ್ನು ಒಪ್ಪುತ್ತಲೇ ಇಂತಹ ಸ್ಥಿತಿ ಏಕೆ ಬಂದೊದಗಿತು ಎಂಬುದನ್ನು ವಿಶ್ಲೇಷಿಸುವ ಮತ್ತು ಜತೆಗೆ ಸಂವಾದಕ್ಕೆ ಕಿಡಿ ಹೊತ್ತಿಸುವ, ‘ಸ್ವತಂತ್ರ ಭಾರತವೇಕೆ ಮಹಾನ್‌ ರಾಜಕೀಯ ಚಿಂತಕರನ್ನು ರೂ‍ಪಿಸಲಿಲ್ಲ?’ ಎಂಬ ಲೇಖನವನ್ನು ನಿತಿನ್‌ ಪೈ ಬರೆದಿದ್ದಾರೆ. ರಾಜ್ಯಶಾಸ್ತ್ರದ ಬಗೆಗಿನ ನನ್ನ ನಿಲುವನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳುತ್ತಲೇ ರಾಜಕೀಯ ದೃಷ್ಟಿಕೋನವನ್ನು ರೂಪಿಸುವ ಹೊರೆಯನ್ನು ರಾಜ್ಯಶಾಸ್ತ್ರದ ಮೇಲೆ ಹೊರಿಸಬಾರದು ಎಂದು ಪ್ರೊ. ಅಶುತೋಷ್‌ ವರ್ಶ್ನೆ ವಿವರಿಸಿದ್ದಾರೆ. ರಾಜಕೀಯ ಪ್ರಜ್ಞೆ ಮತ್ತು ರಾಜಕೀಯ ಸೂಕ್ಷ್ಮವನ್ನು ರೂಪಿಸುವ ಕ್ರಿಯೆಗಳನ್ನು ರಾಜ್ಯಶಾಸ್ತ್ರ ಎಂದೂ ಮಾಡಲಾರದು ಎಂದು ಇದನ್ನು ನಾನು ಅರ್ಥೈಸುತ್ತೇನೆ. ‘ರಾಜಕೀಯ ಚಿಂತನೆ ಎಂಬುದು ಖಂಡಿತವಾಗಿಯೂ ಜೀವಂತವಾಗೇ ಇದೆ. ಆದರದು ಇಂದು ಎಲ್ಲಿ ಮತ್ತು ಹೇಗೆ ಇರಬೇಕಿತ್ತೋ ಹಾಗೆ ಇಲ್ಲ ಅಥವಾ ಅದೇ ಹಳೆಯ ಮಂದಿಯಿಂದಲೇ ತುಂಬಿದೆ’ ಎಂಬುದು ಪ್ರೊ. ಶ್ರುತಿ ಕಪಿಲಾ ಅವರ ಆಕ್ಷೇಪ. 

ಲೇಖನಕ್ಕೆ ಬಂದ ಬಹುತೇಕ ಪ್ರತಿಕ್ರಿಯೆಗಳು, ನನ್ನ ಪ್ರತಿಪಾದನೆಯನ್ನು ಮುಂದಿಡಲು ನಾನು ಆಯ್ಕೆ ಮಾಡಿಕೊಂಡ ಹೆಸರುಗಳನ್ನೇ ಕೇಂದ್ರೀಕರಿಸಿವೆ. ಹಲವು ಪ್ರತಿಕ್ರಿಯೆಗಳು ನಾನಿರಿಸಿದ ಉದಾಹರಣೆಗಳ ಸಾಧ್ಯತೆಗಳನ್ನು ತಪ್ಪಾಗಿ ಅರ್ಥೈಸಿಕೊಂಡದ್ದರ ಪ್ರತಿಫಲವಾಗಿವೆ. 1947ರ ಹೊತ್ತಿಗೆ ಜೀವಂತವಾಗಿದ್ದವರನ್ನಷ್ಟೇ ನಾನು ಆಯ್ಕೆ ಮಾಡಿಕೊಂಡಿದ್ದೆ. ಹೀಗಾಗಿಯೇ ಜ್ಯೋತಿಬಾಯಿ ಫುಲೆ, ಗೋ‍ಪಾಲ ಕೃಷ್ಣ ಗೋಖಲೆ ಅವರನ್ನು ಸೇರಿಸಲಿಲ್ಲ. ನನ್ನ ತಲೆಮಾರಿನ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಿಗಳನ್ನು ನಾನು ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿದ್ದೆ. ನನ್ನ ಪಟ್ಟಿ ಯಾವುದೇ ಸೈದ್ಧಾಂತಿಕ ಪಕ್ಷಪಾತವಿಲ್ಲದ ಪಟ್ಟಿಯಾಗಿತ್ತು, ನಾನು ತುಸು ಅನುಕಂಪ ಹೊಂದಿರುವ ಹಿಂದುತ್ವ ಮತ್ತು ಇಸ್ಲಾಮಿಕ್‌ ಪ್ರತಿಪಾದಕರನ್ನೂ ಒಳಗೊಂಡಿತ್ತು. 

ನಾನು ಕೂಡ ರಾಜಕೀಯ ಚಿಂತನೆ ಎಂಬುದಕ್ಕೆ ಒಂದು ನಿರ್ದಿಷ್ಟ ಗೆರೆ ಹಾಕಿಕೊಂಡೆ. ಹೀಗಾಗಿಯೇ ಆ್ಯಂಡ್ರೆ ಬೆಟೆಲ್ಲೆ, ಜೆ.ಪಿ.ಎಸ್‌.ಉಬೆರೋಯಿ, ಇಮ್ತಿಯಾಜ್‌ ಅಹಮದ್‌, ವೀಣಾ ದಾಸ್‌ರಂತಹ ಸಾಮಾಜಿಕ ಸಿದ್ಧಾಂತಿಗಳು, ತತ್ವಜ್ಞಾನದ ನೆಲೆಯ ದಯಾ ಕೃಷ್ಣ, ರಾಮಚಂದ್ರ ಗಾಂಧಿ, ನಿರ್ಮಲ್‌ ವರ್ಮಾ, ರಘುವೀರ್ ಸಹಾಯ್ ಅವರಂತಹವರನ್ನು ಒಳಗೊಳ್ಳಲಿಲ್ಲ. ಆದರೆ, ಕಮಲಾದೇವಿ ಚಟ್ಟೋಪಾಧ್ಯಾಯ, ಅರುಣಾ ಅಸಫ್‌ ಅಲಿ ಮತ್ತು ಸರೋಜಿನಿ ನಾಯ್ಡು ಅವರಂತಹ ಚಿಂತಕಿಯರನ್ನು ಕೈಬಿಟ್ಟಿದ್ದರ ಬಗ್ಗೆ ಪ್ರೊ. ನಂದಿನಿ ಸುಂದರ್ ಅವರು ಎತ್ತಿದ್ದ ಆಕ್ಷೇಪ ಸರಿಯಾದುದೇ ಆಗಿದೆ. ರಾಜಕೀಯ ಚಿಂತಕರ ನನ್ನ ಪಟ್ಟಿಯನ್ನು ಸರಿಪಡಿಸಲು ನೆರವಾಗಿದೆ. 

ಸ್ವಾತಂತ್ರ್ಯೋತ್ತರ ಚಿಂತಕರಲ್ಲಿ ಇ.ಎಂ.ಎಸ್‌. ನಂಬೂದಿರಿಪಾಡ್‌ ಅವರನ್ನು, ಅವರ ಮುಂದಿನ ತಲೆಮಾರಿನ ಡಿ.ಆರ್‌.ನಾಗರಾಜ್‌ ಮತ್ತು ಕ್ಲಾಡ್‌ ಆಲ್ವಾರೆಸ್‌ ಅವರನ್ನು ಪಟ್ಟಿಗೆ ಸೇರಿಸಬೇಕಿತ್ತು. ನಾನು ರಾಜಕೀಯ ಚಿಂತನೆ ಎಂದು ಕರೆದುದರ ಜೀವಂತ ಸಾಕ್ಷಿಗಳಾಗಿ ಅರುಣಾ ರಾಯ್‌, ದಿಲೀಪ್‌ ಸೈಮನ್‌, ವಂದನಾ ಶಿವ, ದೇವನೂರ ಮಹಾದೇವ ಮತ್ತು ಆನಂದ ತೇಲ್ತುಂಬ್ಡೆ ಇದ್ದಾರೆ. ರಾಜ್ಯಶಾಸ್ತ್ರದ ಬಗ್ಗೆ ಮಾತನಾಡುವಾಗ ಆರಂಭಿಕ ತಲೆಮಾರಿನ ರಾಜ್ಯಶಾಸ್ತ್ರಜ್ಞರಾದ ರಣಧೀರ್ ಸಿಂಗ್‌, ರಶೀದುದ್ದೀನ್‌ ಖಾನ್‌, ರಾಮ್ ಬಾಪಟ್‌, ಶಾಂತಿ ಸ್ವರೂಪ್‌, ರಾಘವೇಂದ್ರ ರಾವ್ ಮತ್ತು ಮನೋರಂಜನ್‌ ಮೊಹಂತಿ ರಾಜ್ಯಶಾಸ್ತ್ರ ಮತ್ತು ರಾಜಕೀಯ ಪ್ರಜ್ಞೆಯ ನಡುವಣ ಕೊಂಡಿಯನ್ನು ಜೀವಂತವಾಗಿ ಇರಿಸಿದ್ದರು ಎಂಬುದನ್ನು ಹೇಳಬೇಕು. 

ಹಲವು ಚಿಂತಕರನ್ನು, ಅದರಲ್ಲೂ ನನಗೆ ಓದಲು ಬಾರದೇ ಇರುವ ಭಾಷೆಯಲ್ಲಿ ಬರೆಯುವವರನ್ನು ನಾನು ಬಿಟ್ಟಿದ್ದೆ ಎಂಬುದರ ಅರಿವು ನನಗೆ ಇದ್ದೇ ಇದೆ. ಆದರೆ ಈ ಹೆಸರುಗಳನ್ನು ಬಿಟ್ಟಿದ್ದು ನನ್ನ ಮಿತಿಯೇ ವಿನಾ ನನ್ನ ಪ್ರತಿಪಾದನೆಯ ಮಿತಿಯಲ್ಲ. ರಾಜಕೀಯ ಚಿಂತನೆಯ ಸಾವನ್ನು ಗುರುತಿಸುವುದು ಮತ್ತು ಅದಕ್ಕಾಗಿ ಮರುಗುವುದು ಈ ಚರ್ಚೆ ಆರಂಭಿಸಿದುದರ ಉದ್ದೇಶವಾಗಿರಲಿಲ್ಲ. ಬದಲಿಗೆ ನಮ್ಮ ಇಂದಿನ ಸ್ಥಿತಿಗೆ ಕಾರಣಗಳನ್ನು ಹುಡುಕಲು ಮತ್ತು ನಮ್ಮ ಗಣರಾಜ್ಯವನ್ನು ಪುನಶ್ಚೇತನಗೊಳಿಸಲು ಏನು ಮಾಡಬೇಕು ಎಂಬುದನ್ನು ಸಾಮೂಹಿಕವಾಗಿ ವಿಶ್ಲೇಷಿಸಲು ನೀಡಿದ ಆಹ್ವಾನವಾಗಿತ್ತು. ಈಗಲಾದರೂ ಅತ್ತ ಗಮನ ಹರಿಸೋಣವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.