ಬೆಂಗಳೂರಿನ ನಮ್ಮ ಅಪಾರ್ಟ್‌ಮೆಂಟ್ ನಿವಾಸಿಗಳ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಕಳೆದ ಮಂಗಳವಾರ ಹರಿದುಬಂದ ಒಂದು ಸಂದೇಶದಲ್ಲಿ, ಬೆಳಗ್ಗೆ 10.15ರಿಂದ ಮಧ್ಯಾಹ್ನ 12.30ರವರೆಗೆ ಕನಕಪುರ ರಸ್ತೆಯಲ್ಲಿ ಯಾವ ಕಾರಣಕ್ಕೂ ಸಂಚರಿಸದಂತೆ ಎಚ್ಚರಿಸಲಾಯಿತು. ಈ ಹಾದಿಯ ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗಿತ್ತು. ಬಿಕೋ ಎನ್ನುವ ರಸ್ತೆಯ ಅಕ್ಕಪಕ್ಕದ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿ ನಿಡುಸುಯ್ಯುತ್ತ ಕುಳಿತರು. ಪೊಲೀಸರ ಕ್ರಮದಿಂದ ಸಾವಿರಾರು ಜನ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಡಚಣೆ ಅನುಭವಿಸಬೇಕಾಯಿತು.
ಅಧಿಕೃತ ಶಿಷ್ಟಾಚಾರ ಪಾಲಿಸಲು ಇಲಾಖೆಯ ಶ್ರೇಣೀಕೃತ ವ್ಯವಸ್ಥೆಯಲ್ಲಿ ಪೊಲೀಸರು ವಿವಿಧ ಹಂತಗಳಲ್ಲಿ ವಹಿಸಿದ ಪರಿಶ್ರಮ ಕಡಿಮೆಯೇನಲ್ಲ. ಇಷ್ಟಕ್ಕೆಲ್ಲಾ ಕಾರಣ, ವಸಂತಪುರದಲ್ಲಿ ಇಸ್ಕಾನ್ ನಿರ್ಮಿಸಿರುವ ರಾಜಾಧಿರಾಜ ಗೋವಿಂದ ದೇವಾಲಯ ಉದ್ಘಾಟಿಸಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೀಡಿದ ಭೇಟಿ!
ಯಾವುದೇ ಸಾರ್ವಜನಿಕ ವ್ಯಕ್ತಿ ಜವಾಬ್ದಾರಿಯುತ ಉನ್ನತ ಸ್ಥಾನ ಅಲಂಕರಿಸಿದ ಮಾತ್ರಕ್ಕೆ ತನ್ನ ವೈಯಕ್ತಿಕ ಧಾರ್ಮಿಕ ನಂಬಿಕೆ, ಆಚರಣೆ ಅಥವಾ ನಿರಾಕರಣೆಯಿಂದ ವಿಮುಖವಾಗಬೇಕೆಂದು ಅಪೇಕ್ಷಿಸಲಾಗದು. ಆದರೆ ಅದು ಖಾಸಗಿ ನೆಲೆಯಲ್ಲಿ ಅಭಿವ್ಯಕ್ತಿಗೆ, ಅನುಸರಣೆಗೆ ಅರ್ಹ. ಹೀಗಿರುವಾಗ, ಸೆಕ್ಯುಲರ್ ಆಶಯದ ಸಾಂವಿಧಾನಿಕ ಹುದ್ದೆಯಲ್ಲಿ ಇದ್ದುಕೊಂಡು ಸಾರ್ವಜನಿಕ ವೆಚ್ಚದಲ್ಲಿ, ಶಿಷ್ಟಾಚಾರದ ಚೌಕಟ್ಟಿನಲ್ಲಿ ಖಾಸಗಿ ನಂಬಿಕೆಗೆ ಅನುಗುಣವಾದ ಧಾರ್ಮಿಕ ಕೇಂದ್ರದ ಉದ್ಘಾಟನೆಗೆ ಮುಂದಾಗುವುದು ಎಷ್ಟು ಸರಿ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹುಬ್ಬಳ್ಳಿ ಕಡೆಗೆ ಸಂಚರಿಸುತ್ತಿದ್ದೆ. ಬೆಂಗಳೂರಿನಿಂದ ಹಿರಿಯೂರು ತನಕ ಹೆಜ್ಜೆಹೆಜ್ಜೆಗೂ ಪೊಲೀಸರು. ಅಲ್ಲಲ್ಲಿ ಬ್ಯಾರಿಕೇಡುಗಳ ಅಡೆತಡೆ. ಕೆಲವೆಡೆ ವಾಹನಗಳನ್ನು ಹೆದ್ದಾರಿಯಿಂದ ಕೆಳಗಿಳಿಸಿ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವಂತೆ ನಿರ್ದೇಶನ ನೀಡುತ್ತಿದ್ದರು.
ಅನನುಕೂಲಕ್ಕೆ ಈಡಾಗುವ ಜನರ ಹಿಡಿಶಾಪಗಳಿಗೆ ಕಿವಿಯಾಗುತ್ತಾ, ಬೇಸಿಗೆಯ ಬಿಸಿಲಿನಲ್ಲಿ ಬೆವರಿಳಿಸುತ್ತಾ, ದಾರಿಯುದ್ದಕ್ಕೂ ನಿಂತ ಕೆಳಹಂತದ ಪೊಲೀಸರಿಗೆ ಈ ಕರ್ತವ್ಯವು ಖುಷಿ ನೀಡುವಂತಹದ್ದಾಗಿರಲಿಲ್ಲ. ಸಾರ್ವಜನಿಕರು ತಮ್ಮ ಅಸಮಾಧಾನವನ್ನು ಸಿಡುಕಿಯೋ ಗೊಣಗಿಯೋ ಹೊರಹಾಕಬಹುದಿತ್ತು. ಆ ಸ್ವಾತಂತ್ರ್ಯವೂ ಇಲ್ಲದ ಪೊಲೀಸರ ಅಸಹಾಯಕತೆ ಮರುಕ ಹುಟ್ಟಿಸುವಂತಹದು. ಅಂದು ಅಲ್ಲಿ ಹಾದುಹೋಗಬೇಕಿದ್ದವರು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್.
ಮೊನ್ನೆ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಒಬ್ಬನೇ ನಡೆದು ಬರುತ್ತಿದ್ದೆ. ಖನಿಜ ಭವನದ ಎದುರಿನ ಮುಖ್ಯಮಂತ್ರಿ ಅಧಿಕೃತ ನಿವಾಸದ ಗೇಟ್ ಬಳಿ ಪೊಲೀಸರು ತುಂಬಾ ಗಡಿಬಿಡಿಯಲ್ಲಿದ್ದರು. ಬಹುಶಃ ಮುಖ್ಯಮಂತ್ರಿ ಹೊರಗೆ ಹೊರಡುವ ಸಮಯವಿರಬೇಕು. ನಾನೂ ಕುತೂಹಲದಿಂದ ಒಂದು ಬದಿಯಲ್ಲಿ ನಿಂತು ಸಂಚಾರ ಪೊಲೀಸರ ವರ್ತನೆ ಗಮನಿಸತೊಡಗಿದೆ. ನಡುವಯಸ್ಸಿನ ಎಎಸ್ಐ ಒಬ್ಬರು ಮುಖ್ಯ ರಸ್ತೆಗೆ ಇಳಿದು, ಮೈಮೇಲೆ ದೇವರು ಬಂದಂತೆ ಕುಣಿಯತೊಡಗಿದರು. ರಸ್ತೆ ಬದಿಗಿದ್ದ ಹರೆಯದ ಕಾನ್‌ಸ್ಟೆಬಲ್‌ಗಳನ್ನು ಗದರಿ ಕರ್ತವ್ಯಕ್ಕೆ ಅಣಿಗೊಳಿಸಿದರು.
ಯಾವುದೇ ಬ್ಯಾರಿಕೇಡುಗಳಿಲ್ಲದೆ ಪೊಲೀಸರು ಇದ್ದಕ್ಕಿದ್ದಂತೆ ರಸ್ತೆಗೆ ಅಡ್ಡಲಾಗಿ ನಿಂತು, ಸರಾಗವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದ ಕ್ರಮ ವಾಹನ ಚಾಲಕರಲ್ಲಿ ಗಲಿಬಿಲಿ ಉಂಟು ಮಾಡಿತ್ತು. ಅನಿರೀಕ್ಷಿತ ತಡೆಯಿಂದಾಗಿ ಘಕ್ಕನೆ ಬ್ರೇಕ್ ಹಾಕಿದ ದ್ವಿಚಕ್ರ ವಾಹನ ಚಾಲಕನೊಬ್ಬ ಅಸಹನೆಯಿಂದ ‘ಹೀಗೇಕೆ?’ ಎಂದು ಪ್ರಶ್ನಿಸಿದ. ಆದರೆ ಪ್ರಭುಗಳ ಸೇವೆಗೆ ನಿಷ್ಠರಾದ ಕಾನ್‌ಸ್ಟೆಬಲ್‌ಗಳಿಗೆ ಸಭ್ಯತೆಯಿಂದ ಉತ್ತರಿಸುವ ವ್ಯವಧಾನವಾಗಲೀ ನಾಗರಿಕರೊಂದಿಗಿನ ಸೌಜನ್ಯದ ವರ್ತನೆಯ ವೃತ್ತಿಪರ ತರಬೇತಿಯಾಗಲೀ ಇರಲಿಲ್ಲ!
ಅಷ್ಟರಲ್ಲಿ ಮುಖ್ಯಮಂತ್ರಿ ಹೊರಬರುವುದು ತಡವಾಗುತ್ತದೆಂದು ತಿಳಿದು, ನಿಲ್ಲಿಸಿದ ವಾಹನಗಳಿಗೆ ಸಂಚರಿಸಲು ದಾರಿ ಬಿಟ್ಟರು. ಒಂದೆರಡು ಬಾರಿ ಪುನರಾವರ್ತನೆಯಾದ ಪೊಲೀಸರ ಈ ‘ತಡೆ- ನಡೆ’ ಆಟ ಮುಖ್ಯಮಂತ್ರಿ ಅವರ ನಿರ್ಗಮನದ ನಂತರ ನಿಂತಿತು.
ಇಲ್ಲಿ ಪ್ರಸ್ತಾಪಿಸಿದ ರಾಷ್ಟ್ರಪತಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರ ಸಂಚಾರ ಶಿಷ್ಟಾಚಾರಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳು ವಿಶೇಷವಾದ ಪ್ರತ್ಯೇಕ ಘಟನೆಗಳೇನಲ್ಲ. ಬೆಂಗಳೂರಿನಲ್ಲಂತೂ ಮಂತ್ರಿಗಳ ರಸ್ತೆ ಸಂಚಾರದ ವೇಳೆ ನಾಗರಿಕರು ಅನುಭವಿಸುವ ಕಿರಿಕಿರಿ ಎಷ್ಟು ಸಾಮಾನ್ಯ, ಸಹಜ ಆಗಿದೆಯೆಂದರೆ, ಜನರು ಗೊಣಗುವುದನ್ನೂ ತ್ಯಜಿಸಿ ಈ ಅನಿವಾರ್ಯ ಸ್ಥಿತಿಗೆ ಹೊಂದಿಕೊಂಡಿದ್ದಾರೆ.
ಗಣ್ಯವ್ಯಕ್ತಿಗಳಿಗೆ ಸಂಬಂಧಿಸಿದ ಶಿಷ್ಟಾಚಾರ ಪಾಲನೆಯಲ್ಲಿ ಮೂಲತಃ ಎರಡು ಅಂಶಗಳು ಅಡಗಿರುತ್ತವೆ: ಒಂದು, ಗಣ್ಯರ ಸುರಕ್ಷತೆ. ಇನ್ನೊಂದು, ಸ್ಥಾನಗೌರವ. ಪ್ರಸಕ್ತ ಕಾಲಮಾನದಲ್ಲಿ ಚಾಲ್ತಿಯಲ್ಲಿರುವ ಶಿಷ್ಟಾಚಾರದ ನಡಾವಳಿಗಳು ಇವೆರಡೇ ಉದ್ದೇಶಗಳ ಪರಿಪಾಲನೆಗೆ ಸೀಮಿತವಾಗಿವೆಯೇ ಎಂಬ ಪ್ರಶ್ನೆಗೆ ‘ಹೌದು’ ಎಂದು ಸರಳವಾಗಿ ಗೋಣು ಹಾಕಲಾಗದು.
ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಭದ್ರತಾ ಸಿಬ್ಬಂದಿಯೇ ಬಂಧನಕ್ಕೆ ಒಳಗಾದ ನಿದರ್ಶನ ನಮ್ಮ ಮುಂದಿದೆ. ಗಣ್ಯರ ಭದ್ರತೆಯ ವಿಷಯದಲ್ಲಿ ನಮ್ಮ ವ್ಯವಸ್ಥೆಯ ಹುಳುಕನ್ನು, ಶಿಷ್ಟಾಚಾರ ಮತ್ತು ದಕ್ಷತೆಯ ಅಭಾವವನ್ನು ಇದು ನಿಚ್ಚಳವಾಗಿ ಪ್ರತಿಬಿಂಬಿಸುತ್ತದೆ.
ಇನ್ನು, ಅತಿ ಗಣ್ಯರ ಸ್ಥಾನಗೌರವದ ಪ್ರಶ್ನೆ. ಬಹುಪಾಲು ರಾಜಕಾರಣಿಗಳು ಆಡಳಿತ ನಡೆಸುವುದಕ್ಕಿಂತ ದರ್ಬಾರು ಮಾಡುವುದಕ್ಕಾಗಿಯೇ ಅಧಿಕಾರಕ್ಕೆ ಬರುತ್ತಾರೆ. ಅವರಿಗೆ ಈ ಶಿಷ್ಟಾಚಾರದ ನೀತಿನಿಯಮಗಳು ದರ್ಪ- ದೌಲತ್ತು ತೋರ್ಪಡಿಸುವ ಅವಕಾಶಗಳಾಗಿ ಒದಗಿಬರುತ್ತವೆ. ಅಷ್ಟೇ ಅಲ್ಲ, ಗಣ್ಯರು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗಲೂ ಶಿಷ್ಟಾಚಾರ ಸಂಭ್ರಮಿಸಲು ಹೇಸುವುದಿಲ್ಲ.
ಅತಿ ಗಣ್ಯರ ಆಗಮನದಿಂದ ಸಾರ್ವಜನಿಕರಿಗೆ ಕಿರಿಕಿರಿ, ಕಿರುಕುಳದ ಜೊತೆಗೆ ಒಂದು ಅನುಕೂಲವೂ ಆಗುತ್ತದೆ. ಗಣ್ಯರು ಸಂಚರಿಸುವ ದಾರಿ ರಾತ್ರೋರಾತ್ರಿ ಡಾಂಬರು ಹಾಕಿಸಿಕೊಂಡು ಸಿದ್ಧಗೊಳ್ಳುತ್ತದೆ, ಗೋಡೆಗಳು ಬಣ್ಣ ಬಳಿಸಿಕೊಂಡು ಸಿಂಗಾರಗೊಳ್ಳುತ್ತವೆ, ಬತ್ತಿಹೋದ ಬೀದಿ ದೀಪಗಳು ಬೆಳಗುತ್ತವೆ. ಈ ಕಾರಣಕ್ಕಾಗಿಯೇ ತಮ್ಮೂರಿಗೂ ತಮ್ಮ ಬಡಾವಣೆಗೂ ಅತಿ ಗಣ್ಯರು ಬರಲಿ ಎಂದು ಆಶಿಸುವ ಸನ್ನಿವೇಶದ ಸೃಷ್ಟಿಯಲ್ಲಿ ಪ್ರಜಾಪ್ರಭುತ್ವದ ವ್ಯಂಗ್ಯ ಮತ್ತು ದುರಂತ ಎರಡೂ ಬೆರೆತಿವೆ!
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ಪರಿ ‘ಗಣ್ಯವ್ಯಕ್ತಿ ಸಂಸ್ಕೃತಿ’ಯ ಪರಿಪಾಲನೆಯ ಅಗತ್ಯವಿದೆಯೇ? ಓಲ್ಡ್ ಬ್ರಿಟಿಷ್ ರಾಯರ ಕಾಲದ ಶಿಷ್ಟಾಚಾರಗಳು ಪ್ರಜಾಕೇಂದ್ರಿತವಾದ ಆಧುನಿಕ ಆಡಳಿತದ ಸಂದರ್ಭದಲ್ಲಿ ಎಷ್ಟು ಪ್ರಸ್ತುತ? ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬೀಳುವ ಹೊರೆ ಎಷ್ಟು? ಅನಗತ್ಯವಾಗಿ ವ್ಯಯವಾಗುವ ಪೊಲೀಸರು ಮತ್ತು ನಾಗರಿಕರ ‘ಮಾನವ ಸಮಯ- ಶಕ್ತಿ’ಯ ಲೆಕ್ಕ ಯಾರಲ್ಲಿದೆ?
ಈ ಹಿನ್ನೆಲೆಯಲ್ಲಿ ಗಣ್ಯವ್ಯಕ್ತಿಗಳ ಶಿಷ್ಟಾಚಾರ ನಿಯಮಗಳ ಪ್ರಾಥಮಿಕ ಉದ್ದೇಶವಾದ ಭದ್ರತೆ ಮತ್ತು ಸ್ಥಾನಗೌರವಗಳ ಆಮೂಲಾಗ್ರ ಪುನರ್‌ವ್ಯಾಖ್ಯಾನ, ಅವಲೋಕನ ಆಗಬೇಕಿದೆ. ಗಣ್ಯರ ಭದ್ರತೆಯ ಜೊತೆಗೆ ನಾಗರಿಕರ ಮುಕ್ತ ಸಂಚಾರ ಮತ್ತು ಸಮಾನತೆಯ ಸಂವಿಧಾನದತ್ತ ಹಕ್ಕಿನ ರಕ್ಷಣೆಯೂ ಆಗಬೇಕು. ಈ ಕಾರ್ಯಕ್ಕೆ ಬಹಳಷ್ಟು ಆಧುನಿಕ, ವೈಜ್ಞಾನಿಕ, ತಾಂತ್ರಿಕ ಪರಿಣತಿ ಲಭ್ಯವಿದೆ. ಇದಕ್ಕೆ ಅಮೆರಿಕ ‘ಸೀಕ್ರೆಟ್ ಸರ್ವಿಸ್’ ಮೂಲಕ ತನ್ನ ಅಧ್ಯಕ್ಷರ ಭದ್ರತೆಗೆ ಅಳವಡಿಸಿಕೊಂಡಿರುವ ಮಾದರಿಯನ್ನು ಪರಿಗಣಿಸಬಹುದು. ಅಲ್ಲಿನ ಅಧ್ಯಕ್ಷರು ಸಂಚರಿಸುವ ಮಾರ್ಗವನ್ನು ಸಂಪೂರ್ಣ ಸುಪರ್ದಿಗೆ ಪಡೆಯುವ ‘ಸೀಕ್ರೆಟ್ ಸರ್ವಿಸ್’ ಸ್ಥಳೀಯ ಪೊಲೀಸರನ್ನು ನಿರ್ದಿಷ್ಟ ಕಾರ್ಯಕ್ಕೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಸಿಕೊಳ್ಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ ನಮ್ಮಲ್ಲಿ ವಿಶೇಷ ತರಬೇತಿ ಇಲ್ಲದ ಪೊಲೀಸರನ್ನು ಅನಗತ್ಯವಾಗಿ ಸಾವಿರಾರು ಸಂಖ್ಯೆಯಲ್ಲಿ ವ್ಯರ್ಥವಾಗಿ ನಿಯೋಜಿಸಿ ಗೋಜಲೆಬ್ಬಿಸುತ್ತೇವೆ.
ಅತಿ ಗಣ್ಯರ ಅತಿ ಶಿಷ್ಟಾಚಾರ ನಿಯಮಗಳಿಗೆ ತಿದ್ದುಪಡಿ ಮಾಡಿ ಕನಿಷ್ಠ ಒಂದು ಮಿತಿಗಾದರೂ ಒಳಪಡಿಸಲು ಇದು ಸಕಾಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.