ADVERTISEMENT

ಎಲ್ಲಾ ಚೆನ್ನಾಗಿದೆ!

ಲಿಂಗರಾಜು ಡಿ.ಎಸ್
Published 30 ಸೆಪ್ಟೆಂಬರ್ 2019, 20:00 IST
Last Updated 30 ಸೆಪ್ಟೆಂಬರ್ 2019, 20:00 IST
   

‘ಆಲ್ ಈಸ್ ವೆಲ್, ಎಲ್ಲಾ ಚೆನ್ನಾಗಿದೆ, ಸಬ್ ಅಚ್ಛಾ ಹೈ, ಶೋಬ್ ಭಾಲೋ’ ಅಂತಾ ಪಕ್ಕವಾದ್ಯ ಬಾರಿಸುತ್ತಾ ಕೂತಿದ್ದರು ತುರೇಮಣೆ.

‘ಇದೇನ್ಸಾರ್, ಹೌಡಿ ವಶೀಕರಣ ಮಂತ್ರ ಹೇಳತಾ ಕೂತಿದ್ದೀರಿ’ ಅಂದೆ. ‘ನೋಡ್ಲಾ, ಈವತ್ತಿನ ರಾಜಕೀಯ ಕೈಮಾ ಪಲ್ಯ, ಬೋಟಿ ಗೊಜ್ಜಿಗೆ ಮಸಾಲೆ ಜಾಸ್ತಿ ಆದ ಥರಾ ಆಗೋಗದೆ. ಅದಕ್ಕೇ ರಾಜಕೀಯದಲ್ಲಿ ಯಾವುದು, ಯಾರಿಗೆ, ಎಲ್ಲಿ ಚೆನ್ನಾಗದೆ ಕೇಳುವಂತವನಾಗೆಲೆ ಸಾರಥಿ’ ಅಂದೋರೇ ಶುರು ಮಾಡಿದರು:

ಕಾಶಿಯ ಮೋದಿ ಮಹಾರಾಜರು ಬಾಲಾಕೋಟ್ ಮತ್ತು ಕಾಶ್ಮೀರದ ದಿಗ್ವಿಜಯವಾದ ಮೇಲೆ ಅಮೆರಿಕ ದೊಡ್ಡಣ್ಣನನ್ನು ಹೌಡೀ ಅಂದದ್ದು ಆಲ್ ಈಸ್ ವೆಲ್‌.

ADVERTISEMENT

ಸಾಂದರ್ಭಿಕ ಶಿಶು, ಪದವಿ ವಿರಹದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಕೂತಿದ್ರಂತೆ. ಪಕ್ಷದ ಹಿರಿಯ ತಲೆ, ಸರ್ಕಾರ ಕೆಡವಿದೋರನ್ನ ಬುಡಮಟ್ಟ ಬಡಿದು ಹಾಕಲು ಮೇಲೆದ್ದು ಪಢಾ ಪಢಾ ಎಂದು ತಲೆಗೆ ಕೈ ಕೊಟ್ಟು ‘ಎಲ್ಲಾ ಚೆನ್ನಾಗಿದೆ’ ಅಂತ ಪಂಚೆ ಎಳೆದು ಬಿಗಿಯಾಗಿ ಕಟ್ಟಿಕ್ಯಂಡರಂತೆ.

ಕಾಂಗ್ರೆಸ್‌ನ ಅಣ್ತಮ್ಮಗಳು, ಜೋಗಿ ಜೋಗಿ ಗುದ್ದಾಡಿ ಬುರುಡೆ ಒಡೀತು ಅಂದಂಗೆ, ಅಫೀಮು ತಿಂದ ಕೋತಿಗಳ ಥರಾ ಓಪನ್ ಫೈಟ್ ಮಾಡ್ತಾ ಪರಸ್ಪರ ಕಿಡಿಮದ್ದು ಹಾರಿಸಿಕೊಂಡು ಪುಕ್ಕಟೆ ಮನರಂಜನೆ ಕೊಡುತ್ತಿರುವಾಗ, ಪಕ್ಷದ ರಾಜ್ಯಾಧ್ಯಕ್ಷರು ‘ಎಲ್ಲಾ ಚೆನ್ನಾಗಿದೆ’ ಅನ್ನುತ್ತಿದ್ದಾರಂತೆ. ಮುಖ್ಯಮಂತ್ರಿಗಳು ತಮ್ಮ ಕಮಲನಯನಕ್ಕೆ ಮನಸೋತು ದುಂಬಿಗಳಂತೆ ಮನೆವಾಳ್ತನಕ್ಕೆ ಬಂದ ಅನರ್ಹ ಅಳಿಯಂದಿರಿಗೆ ಎಂಥಾ ಗತಿ ಬಂತಲ್ಲಾ ಅಂತ ಬೇಸರದಲ್ಲಿದ್ದರೂ ‘ಎಲ್ಲಾ ಚೆನ್ನಾಗಿದೆ’ ಅಂತ ಕಟೀಲು ದುರ್ಗೆಯನ್ನು ಸಂತೋಷವಾಗಿ ಬೇಡಿಕೊಂಡರಂತೆ.

ಅನರ್ಹ ಅಳಿಯಂದಿರು ರೆಸಾರ್ಟಿನಿಂದ ಆಚೆ ಬಿದ್ದ ಮೇಲೆ ಆಳಿಗೊಂದು ಮಾತು ಕೇಳಿ ಬೇಜಾರಾಗಿದ್ದವರು ‘ಅಲ್ಲಿ ಸಿದ್ಧ ಸೂತ್ರಗಳೇ ಜಾಸ್ತಿಯಾಗಿದ್ದವು. ಎಲೆಕ್ಷನ್ ಮುಂದಕ್ಕೆ ಹೋಗಿದ್ದರಿಂದ ನನ್ನ ಕ್ಷೇತ್ರ ನಂದೇ! ಎಲ್ಲಾ ಚೆನ್ನಾಗಿದೆ’ ಅಂದ್ರಂತೆ.

ಮತದಾರರು, ಪ್ರವಾಹ ಸಂತ್ರಸ್ತರು, ರೈತರು ಮಾತ್ರ ತಲೆ ಮೇಲೆ ಕೈ ಹೊತ್ತು ‘ಯಾವುದು ಎಲ್ಲಿ ಚೆನ್ನಾಗದೆ?’ ಅಂತವ್ರಂತೆ ಅಂದ್ರು ತುರೇಮಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.