ADVERTISEMENT

ಚುರುಮುರಿ | ವೋಟ್ ಫಾರ್...

ಮಣ್ಣೆ ರಾಜು
Published 13 ನವೆಂಬರ್ 2024, 0:05 IST
Last Updated 13 ನವೆಂಬರ್ 2024, 0:05 IST
   

ಉಪಚುನಾವಣೆ ಅಭ್ಯರ್ಥಿಗಳ ಪ್ರಣಾಳಿಕೆ, ಕರಪತ್ರ ಹರಡಿಕೊಂಡು ಶಂಕ್ರಿ, ಸುಮಿ ಮತ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ‘ಯೋಗ್ಯ ಅಭ್ಯರ್ಥಿಗೆ ವೋಟ್ ಹಾಕಬೇಕು, ಯೋಗ್ಯರನ್ನು ಗುರುತಿಸುವುದೇ ಕಷ್ಟವಾಗಿದೆ’ ಅಂದಳು ಸುಮಿ.

‘ಕಣದಲ್ಲಿ ಇರುವವರಲ್ಲಿ ಉತ್ತಮರನ್ನು ಆಯ್ಕೆ ಮಾಡಬೇಕಷ್ಟೇ. ಅಭ್ಯರ್ಥಿಗಳು ರೂಢಿಸಿಕೊಂಡಿರುವ ಸಿದ್ಧಾಂತ, ಮಾಡಿಕೊಂಡ ರಾದ್ಧಾಂತಗಳನ್ನು ಲೆಕ್ಕ ಹಾಕಿ, ಅವರ ಭರವಸೆಗಳನ್ನು ಅಳೆದು-ತೂಗಿ ನಿರ್ಧಾರ ಮಾಡಬೇಕು’ ಅಂದ ಶಂಕ್ರಿ.

‘ಒಬ್ಬ ಅಭ್ಯರ್ಥಿ ಕ್ಷೇತ್ರದ ಉದ್ದಕ್ಕೂ ನೀರಾವರಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ, ಇನ್ನೊಬ್ಬರು ಹಾಂಗ್‌ಕಾಂಗ್, ಸಿಂಗಪುರ ಮಾಡುತ್ತೇನೆಂದು ಹೇಳಿದ್ದಾರೆ, ಮತ್ತೊಬ್ಬರು ಪ್ರತಿ ಕುಟುಂಬಕ್ಕೂ ವಸತಿ, ಉದ್ಯೋಗ ನೀಡುವ ಮಾತು ಕೊಟ್ಟಿದ್ದಾರೆ. ಇವರಲ್ಲಿ ಯಾರಿಗೆ ಮತ ಹಾಕಬೇಕು?’

ADVERTISEMENT

‘ಕೊಟ್ಟ ಭರವಸೆ ಈಡೇರಿಸುವ ಸಾಮರ್ಥ್ಯ ಅವರಿಗಿದೆಯೇ ಎಂದು ಮಾಪನ ಮಾಡಬೇಕು’.

‘ಅಭ್ಯರ್ಥಿಗಳ ಗುಣಗಳನ್ನು ಗುಣಿಸಿ, ಭರವಸೆಗಳನ್ನು ಭಾಗಿಸಿ, ಸುಳ್ಳುಗಳನ್ನು ಕಳೆದು, ಸರಿಯನ್ನು ಕೂಡಿಸಿ ಉತ್ತರ ಕಂಡುಕೊಳ್ಳಬೇಕು’.

‘ಬರೀ ಗಣಿತದ ಲೆಕ್ಕಾಚಾರ ಸಾಲದು, ಅಭ್ಯರ್ಥಿಗಳ ಹಿಸ್ಟರಿ, ಎಕನಾಮಿಕ್ಸ್, ಲ್ಯಾಂಗ್ವೇಜ್‌, ಬಾಡಿ ಲ್ಯಾಂಗ್ವೇಜನ್ನೂ ಪರಿಗಣಿಸಬೇಕು. ಅವರು ಯಾರಿಗೆ ಎಷ್ಟು ಬೈದರು, ಯಾರ್‍ಯಾರಿಂದ ಬೈಸಿಕೊಂಡರು ಅನ್ನುವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು’.

‘ಚುನಾವಣಾ ಪ್ರಚಾರ ಸಭೆಯಲ್ಲಿ ಅತ್ತ, ಅಳಿಸಿದ ಅಭ್ಯರ್ಥಿಗಳನ್ನೂ ಪರಿಗಣಿಸಬೇಕೆ?’

‘ಹೌದು, ಅಳುವುದು ಸಹಜ ಧರ್ಮ, ಅಳಿಸುವುದು ಪರಧರ್ಮ’.

‘ಎಲ್ಲಾ ಅಂಶಗಳನ್ನು ಕ್ಯಾಲ್‌ಕ್ಯುಲೇಟ್ ಮಾಡಿ ಬೆಟರ್ ಅಭ್ಯರ್ಥಿಯನ್ನು ಗುರುತಿಸಿ, ವೋಟ್ ಹಾಕಿ, ಬೆರಳಿಗೆ ಅಳಿಸಲಾಗದ ಶಾಹಿ ಹಾಕಿಸಿಕೊಂಡರೆ ನಮ್ಮ ಕರ್ತವ್ಯ ಮುಗಿಯಿತು’.

‘ತಪ್ಪು ಅಭ್ಯರ್ಥಿಗೆ ವೋಟ್ ಹಾಕಿ ನಮ್ಮ ಮುಖಕ್ಕೆ ನಾವೇ ಅಳಿಸಲಾಗದ ಮಸಿ ಬಳಿದುಕೊಂಡೆವು ಎನ್ನುವ ಪಶ್ಚಾತ್ತಾಪ ಆಗದಂತೆ ಎಚ್ಚರ ವಹಿಸಬೇಕು’ ಎಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.