ADVERTISEMENT

ಚುರುಮುರಿ | ಚೊಂಬು–ಚಿಪ್ಪು! 

ಗುರು ಪಿ.ಎಸ್‌
Published 24 ಏಪ್ರಿಲ್ 2024, 19:49 IST
Last Updated 24 ಏಪ್ರಿಲ್ 2024, 19:49 IST
   

‘ಎದ್ದೇಳ್ರೀ ಬೇಗ, ಇವತ್ತಿನಿಂದಾದರೂ ಎದ್ದು ಮೊದಲಿನ ಕೆಲಸಕ್ಕೇ ಹೊರಡಿ’ ಹೆಂಡತಿ ಬೈಯುತ್ತಲೇ ಅವಸರಿಸತೊಡಗಿದಳು.

‘ಪೊಲಿಟಿಷಿಯನ್‌ಗಳ ಪ್ರಚಾರ ಕಾರ್ಯ ಈಗಷ್ಟೇ ಮುಗಿದಿದೆ. ಮತ್ತೆ, ಎರಡನೇ ಹಂತದಲ್ಲಿ ಪ್ರಚಾರ ಕೆಲಸ ಜೋರಾಗುತ್ತೆ. ಎಲೆಕ್ಷನ್ ಮುಗಿಯೋವರೆಗೂ ನಾನು ಕೆಲಸಕ್ಕೆ ಹೋಗಲ್ಲ’ ಹಾಸಿಗೆಯಲ್ಲಿ ಮಲಗಿಕೊಂಡೇ ಕೂಗಿ ಹೇಳಿದೆ.

‘ಅಲ್ಲಿವರೆಗೂ ಜೀವನಕ್ಕೆ ಏನ್ರೀ ಮಾಡೋದು? ಜೈ ಜೈ ಜೈ ಅಂದುಬಿಟ್ರೆ ಮನೆಯಲ್ಲಿ ಒಲೆ ಉರಿಯುತ್ತಾ ಹೇಳಿ’.

ADVERTISEMENT

‘ಏನೇ ಹೀಗಂತೀಯ, ಪ್ರಚಾರ ಮಾಡಿದ್ದಕ್ಕೆ ಕೊಟ್ಟ ದುಡ್ಡೆಲ್ಲ ನಿನ್ನ ಕೈಗೇ ತಂದುಕೊಟ್ಟಿದ್ದೀನಲ್ಲ’.

‘ಅಷ್ಟೇ ದುಡ್ಡಲ್ಲಿ ಜೀವನಪೂರ್ತಿ ಇರೋಕಾಗುತ್ತೇನ್ರೀ, ಹೊಟ್ಟೆಗೆ, ಬಟ್ಟೆಗೆ ಬೇಡ್ವಾ?’

‘ಆ ಪಾರ್ಟಿಯವರು ಕೊಟ್ಟಿದ್ದ ಸೀರೆ ಏನ್ ಮಾಡಿದೆ?’

‘ಅದಾಗಲೇ ಬಣ್ಣ ಹೋಗ್ತಿದೆ’.

‘ಈ ಪಾರ್ಟಿಯವರು ಬೆಳ್ಳಿ ದೀಪದ ಕಂಬ ಕೊಟ್ಟಿದ್ರಲ್ಲ ಅದೇನ್ ಮಾಡಿದೆ?’

‘ಅದೇನ್ ಬೆಳ್ಳೀದೋ ಪೇಪರ್‌ದೋ ರೀ... ಮಗಳು ಸ್ವಲ್ಪ ಜೋರಾಗಿ ಹಿಡಿದಿದ್ದಕ್ಕೇ ಡೊಂಕಾಗಿಬಿಡ್ತು’.

‘ಪಾಪ ನಮ್ ರಾಜಕಾರಣಿಗಳು ಕೊಟ್ಟಿದ್ದನ್ನೆಲ್ಲ ಹೀಗೆ ನೀನು ಹಾಳು ಮಾಡಿದ್ರೆ ನಾವು ಉದ್ಧಾರ ಆಗೋಕೆ ಹೇಗೆ ಸಾಧ್ಯ?’

‘ಗಿಫ್ಟ್ ಕೊಡೋರಿಂದ ನಾವು ಉದ್ಧಾರ ಆಗಲ್ರೀ, ಬದುಕು ಕಟ್ಟಿಕೊಡೋರು ಬೇಕು ನಮಗೆ. ಯಾರು ನಮಗೆಲ್ಲ ಒಂದೊಳ್ಳೆ ಕೆಲಸ ಕೊಡಿಸ್ತಾರೋ ನೆಮ್ಮದಿಯ ಪರಿಸರ ಕಲ್ಪಿಸ್ತಾರೋ ಅವರನ್ನ ಗೆಲ್ಲಿಸಬೇಕು’ ಎಂದು ಉಪದೇಶ ಮಾಡಿದಳು ಹೆಂಡತಿ.

ಮತದಾನದ ದಿನ ಬಂತು. ‘ಅಲ್ಲ ರೀ, ಯಾರು ಹೆಚ್ಚು ದುಡ್ಡು ಕೊಡುತ್ತಾರೋ ಅವರ ಪರ ಪ್ರಚಾರ ಮಾಡಿ ಬಂದಿದ್ರೀ, ವೋಟು ಯಾರಿಗೆ ಹಾಕ್ತೀರಿ?’  ಕೇಳಿದಳು ಪತ್ನಿ.

‘ಅದೇ ನನಗೂ ಗೊಂದಲ ಆಗ್ತಿದೆ. ಪಾರ್ಟಿ ಸಿಂಬಲ್‌ಗಳೇ ನೆನಪಾಗ್ತಿಲ್ಲ, ಕಣ್ಮುಂದೆ ಬರೀ ಚೊಂಬು, ಚಿಪ್ಪುಗಳೇ ಕಾಣಿಸ್ತಿವೆ’ ಎಂದೆ. ಹೆಂಡತಿಯೂ ನಗತೊಡಗಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.