ADVERTISEMENT

ಚುರುಮುರಿ | ಜೂಟ್ ಕವರ್!

ತುರುವೇಕೆರೆ ಪ್ರಸಾದ್
Published 24 ಮೇ 2024, 23:30 IST
Last Updated 24 ಮೇ 2024, 23:30 IST
   

‘ಲೇಯ್, ಹಳೇ ಪ್ಲಾಸ್ಟಿಕ್ ಕವರ್‌ನಾಗೆ ನಿಮ್ಮ ಅಜ್ಜಿ ಇದ್‌ಬದ್ ಖಾತೆ, ಎಲೆಅಡಕೆ, ಕಡ್ಡಿಪುಡಿ ಎಲ್ಲಾ ತುಂಬ್ಕಂಡು ಬಂದು, ಅದರ ಮಧ್ಯದಿಂದ ಆಧಾರ್ ಕಾರ್ಡ್‌ ಹುಡ್ಕಿ ತೆಗೆದು ವೋಟ್ ಮಾಡಿದ್ನ ಯಾರಾದ್ರೂ ಫೋಟೊ ತೆಗ್‌ದು ಸೋಷಿಯಲ್‌ ಮೀಡಿಯಾದಾಗೆ ಹಾಕಿದ್ರೇನ್ಲಾ?’ ಹರಟೆಕಟ್ಟೇಲಿ ಗುದ್ಲಿಂಗ ಮಾತಿನ ಗಂಟು ಬಿಚ್ಚಿದ.

‘ಇಲ್ಲ ಕಣಲೇ. ಅದೇನ್ ಆಪಾಟಿ ಕಿಮ್ಮತ್ತು, ಗಮ್ಮತ್ತಿನ ವಿಷ್ಯ ಅಲ್ಲ ಬುಡು. ದೊಡ್‌ದೊಡ್ ಮನುಷ್ಯರು ಬೆರಳಿಗೆ ಮಸಿ ಆಕಿಸ್ಕಂಡಿದ್ದ ಫೋಟೊ ಹಾಕಿದ್ರಲ್ಲ’ ಎಂದ ಮಾಲಿಂಗ.

‘ಫಿಂಗರ್‌ಗೆ ಮಸಿ ಹಾಕುದ್ರೆ ದೊಡ್ ವಿಷ್ಯ. ದೊಡ್ಡೋರು ತಮ್ ಫಿಗರ‍್ರೇ ಮಸಿ ಮಾಡ್ಕಂಡ್ರೂ ಎಷ್ಟೋ ಜನದ ಗಮನಕ್ ಬರಾದೇ ಇಲ್ಲ’.

ADVERTISEMENT

‘ಲೇಯ್, ಪ್ಲಾಸ್ಟಿಕ್ ಕವರ್ ಬಿಟ್ಟು ಫಿಂಗರ‍್ರು, ಫಿಗರ‍್ರು ಅಂತ ದಾರಿ ಬುಡ್ತಿದೀಯಲ್ಲ, ಮೊದ್ಲು ವಿಷಯಕ್ಕೆ ಬಾ’.

‘ಅದೇನಂದ್ರೆ, ನಮ್ ಮುಕೇಶ್ ಅಂಬಾನಿ ಸಾಹೇಬ್ರು ವೋಟು ಮಾಡಕ್ಕೆ ಆಧಾರ್ ಕಾರ್ಡ್‌ನ ನಮ್ಮ ಅಜ್ಜೀರ್ ತರ ಪ್ಲಾಸ್ಟಿಕ್ ಕವರ್ನಾಗೆ ಸುತ್ಕಂಡು ಬಂದಿದ್ರಂತೆ’.

‘ಅಯ್ಯೋ ಔದಾ? ಅಂತಾ ದೊಡ್ ಮನುಷ್ಯರು ಚಿನ್ನದ ಕವರ್‌ ಬಿಟ್ಟು ಪ್ಲಾಸ್ಟಿಕ್ ಕವರ್‌ನಾಗೆ ಆಧಾರ್ ಕಾರ್ಡ್
ಇಟ್ಕಂಡ್ ಬಂದವ್ರೆ ಅಂದ್ರೆ ಎಷ್ಟು ಸಿಂಪಲ್ಲು, ಮಾದರಿ ಕಾರ್ಯ ಅಲ್ವೇನ್ಲಾ’ ಶಹಭಾಶ್‍ಗಿರಿ ಕೊಟ್ಟ ಕಲ್ಲೇಶಿ.

‘ಮಾದರಿ ಎಂಗ್ಲಾ? ಅಂಬಾನಿ ಮಾಡವ್ರೆ ಅಂತ ಎಲ್ಲಾ ಪ್ಲಾಸ್ಟಿಕ್ ಕವರ್ ಒಳಗೆ ಆಧಾರ್ ಕಾರ್ಡ್ ಮಡಿಕ್ಕಂಡು, ಕಿತ್ತೋದ್ಮೇಲೆ ಎಲ್ಲಂದ್ರಲ್ಲಿ ಎಸ್ಯಕ್ಕೆ ಶುರು ಮಾಡುದ್ರೆ ಪರಿಸರ ಮಾಲಿನ್ಯ ಆಗಕಿಲ್ವಾ?’

‘ಅದೂ ನಿಜನೇ ಬಿಡು. ನಮ್ ಹೊನ್ನಮ್ಮಜ್ಜಿ ತರ ಈ ಆಧಾರು, ಪ್ಯಾನ್‍ಕಾರ್ಡು ಎಲ್ಲಾ ಮಡಿಕ್ಕಳಕೆ ಒಂದು ಸೆಣಬಿನ ಸಂಚಿ ಮಾಡ್ಕಂಬುಟ್ರೆ ಒಳ್ಳೇದು’.

‘ಅದೂ ಶ್ಯಾನೆ ಎಡವಟ್ಟಾಯ್ತದೆ. ಜೂಟ್ (ಸುಳ್ಳಿನ) ಕವರ್ ಅಂತ ಗುಲ್ಲಾಗಿ, ಒಳಗಡೆ ನೋಟೈತೆ ಅಂತ ಅನುಮಾನ ಬಂದ್ರೆ, ಫಿಂಗರ್ ಮಸಿ ಫಿಗರ್‌ಗೇ ಆಯ್ತದಲ್ಲ’ ಎಂದ ಪರ್ಮೇಶಿ.

ಎಲ್ಲಾ ಹೌದ್ಹೌದು ಅಂತ ತಲೆಯಾಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.