ಹಿಟ್ಲರನ ಪ್ರೇತಾತ್ಮಕ್ಕೆ ನರಕದಲ್ಲೇ ಅಡ್ಡಾಡಿ ಬೇಸರ ಬಂದು, ನಡುರಾತ್ರಿ ಭೂಲೋಕಕ್ಕೆ ಬಂದಿತು. ಜರ್ಮನಿಗೆ ಹೋಗುವ ಧೈರ್ಯವಾಗದೆ, ಭರತಖಂಡದಲ್ಲೊಂದು ಸುತ್ತುಹೊಡೆಯೋಣವೆಂದು ಬಂದಿಳಿಯಿತು. ನರಕದ ಟಿ.ವಿ.ಯಲ್ಲಿ ಭವ್ಯಭಾರತದ ಸುದ್ದಿಗಳನ್ನು ಕೇಳುತ್ತಿದ್ದ ಪ್ರೇತಾತ್ಮಕ್ಕೆ ಈಗ ಹಲವು ಪ್ರತಿಭಟನೆಗಳ ಜ್ವಾಲೆಯಲ್ಲಿ ಈ ಪರಿ ಬೆಳಗುತ್ತಿರುವ ಪುಣ್ಯಭೂಮಿ ಕಂಡು ಸಂತಸವೆನ್ನಿಸಿತು.
ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಒಂದೆಂಬ ಖ್ಯಾತಿವೆತ್ತ ನಾಡಿನಲ್ಲಿ ರಾತ್ರೋರಾತ್ರಿ ಎರಡು ನೋಟುಗಳ ಚಲಾವಣೆಯನ್ನೇ ನಿಲ್ಲಿಸಿಬಿಟ್ಟನಲ್ಲ, ಆಗ ಭಕ್ತಗಣಗಳ ಒಂದೇ ಒಂದು ರೋಮವೂ ಮಹಾಶಯನ ವಿರುದ್ಧ ನಿಗುರೆದ್ದು ಗೊಣಗಿರಲಿಲ್ಲವಲ್ಲ ಎಂಬುದನ್ನು ಕೇಳಿದಾಗಿನಿಂದ ಹಿಟ್ಲರಿನಿಗೆ ಅಭಿಮಾನವೆನ್ನಿಸಿತ್ತು. ಆಮೇಲೆ ಜಿಎಸ್‍ಟಿ ಗಧಾಪ್ರಹಾರ, ಅಸ್ಸಾಂನಲ್ಲಿ ಎನ್‍ಆರ್‌ಸಿ, ಕಾಶ್ಮೀರದ ವಿಶೇಷಾಧಿಕಾರ ರದ್ದು, ಇದೀಗ ಪೌರತ್ವ ಕಾಯ್ದೆ... ನಾತ್ಸಿಯಾಗುವ ಹರಕತ್ತಿಲ್ಲದೆ, ಸರ್ವಾಧಿಕಾರಿಯೆಂಬ ದೂಷಣೆಯಿಲ್ಲದೇ, ಸಂವಿಧಾನದ ಹೆಸರಿನಲ್ಲಿಯೇ ‘ನಾವು ಅವರು’ ಎಂದು ವಿಭಜಿಸಿಬಿಟ್ಟನಲ್ಲ ರೇಸ್‌ಕೋರ್ಸ್ ರಸ್ತೆಯ ನಂ. 7 ಬಂಗಲೆಯಾತ ಮತ್ತು ಆತನ ‘ಶಾ’ಣ್ಯಾ ಗೆಳೆಯ ಸೇರಿ... ಹೋಗಿ ನೋಡೋಣವೆನ್ನಿಸಿ, ರೇಸ್‌ಕೋರ್ಸ್ ರಸ್ತೆಯ ಬಂಗಲೆಯಲ್ಲಿ ಇಣುಕಿತು. ಒಳಗೆ ಸುಖನಿದ್ರೆ
ಯಲ್ಲಿದ್ದಾತನನ್ನು ನೋಡಿ ಪ್ರೇತಾತ್ಮಕ್ಕೆ ಅಚ್ಚರಿ. ಹಿಂದಿನ ಮತೀಯ ಗಲಭೆಗಳ, ಇತ್ತೀಚಿನ ಗುಂಪುಗಲಭೆಗಳ ಒಂದೇ ಒಂದು ಕಪ್ಪುಕಲೆಯಿಲ್ಲ... ‘ಸಬ್ ಕಾ ವಿಕಾಸ್’ಗೆ ಬಲಿಯಾದ ಜೀವಗಳ ರಕ್ತದ ಕಲೆಯಿಲ್ಲ... ಎಂತಹ ಬಿಳಿಯ ಹಾಸಿಗೆ ಮತ್ತು ಖಾದಿ ಅಂಗಿ... ಯೋಗಿಯ ಭಂಗಿ!
‘ನನ್ನ ಪುನರ್ಜನ್ಮವಾಗಿದೆಯೇ’ ಎಂದು ಪ್ರೇತಾತ್ಮಕ್ಕೆ ಅನುಮಾನ. ‘ಪುನರ್ಜನ್ಮವಲ್ಲ... ನೀನು ಮತ್ತೆ ನಿನ್ನ ಜೊತೆಗಾರರನ್ನೆಲ್ಲ ಸೇರಿಸಿ, ಕ್ಲೋನಿಂಗ್ ಮಾಡಿ ‘ಮೋಶಾಟ್ಲರ್’ ಸೃಷ್ಟಿಸಿದೀನಿ. ಅಡ್ಡಾಡಿದರೆ ಇನ್ನೂ ಅದ್ಭುತಗಳು ಕಾಣುತ್ತವೆ’ ಎಂದೊಂದು ಅದೃಶ್ಯ ದನಿ ಕೇಳಿತು. ಕುತೂಹಲ ತಡೆಯದೇ ದೆಹಲಿಗಂಟಿದ ಯೋಗಿನಾಡಿಗೆ, ಅಲ್ಲಿಂದ ಕರುನಾಡಿನ ಕರಾವಳಿ ನಗರಕ್ಕೆ ಹಾರಿತು. ಪ್ರತಿಭಟಿ
ಸುತ್ತಿದ್ದವರಿಗೆ ಕಂಡಲ್ಲಿ ಗುಂಡಾಡಿಸುತ್ತಿದ್ದ ಪೋಲೀಸು ಪುಂಡರನ್ನು ನೋಡಿದ್ದೇ ಅರೆ ಎಷ್ಟೆಲ್ಲ ಮರಿಹಿಟ್ಲರುಗಳ ಜನನವಾಗಿದೆಯಲ್ಲ, ಅಗದಿ ಪ್ರಜಾಸತ್ತಾತ್ಮಕವಾಗಿ, ಭಲೇ ನಾಜೂಕಾಗಿ ನವಮಾದರಿಯ ಹತ್ಯಾಕಾಂಡ ಆರ್ಯಾವರ್ತದಲ್ಲಿ ಮುನ್ನಡೆಯಲಿದೆ ಎಂದು ಸಂತೃಪ್ತಗೊಂಡ ಹಿಟ್ಲರ್ ಪ್ರೇತಾತ್ಮ ನರಕಕ್ಕೆ ಮರಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.