‘ಏನಿದು, ಏನ್ರೀ ಇದು’ ತಲೆ ಮೇಲಿರುವ ಕೆಲವೇ ಕೂದಲನ್ನು ಜಗ್ಗಿಕೊಳ್ಳುತ್ತಾ, ಸಿಟ್ಟಿನಿಂದ ಆಸ್ಪತ್ರೆ ಒಳಗೆ ಬಂದ ಡಾ. ಮುದ್ದಣ್ಣ.
‘ಆಪರೇಷನ್’ ತಣ್ಣಗೆ ಉತ್ತರಿಸಿದ ಗಡ್ಡಧಾರಿ ಡಾ. ವಿಜಿ.
‘ಅದು ಗೊತ್ತು, ನೀವ್ಯಾಕ್ರಿ ಆಪರೇಷನ್ ಮಾಡಿದ್ರಿ, ಅದೇನಿದ್ದರೂ ನಮ್ಮ ಕೆಲಸ ಅಂತ ಗೊತ್ತಿಲ್ವ?’
‘ಗೊತ್ತು. ಆ ಕಾರಣಕ್ಕಾಗಿಯೇ ನಿಮಗಿಂ ತಲೂ ಮುಂಚೆ ನಾನೇ ಆಪರೇಷನ್ ಮಾಡಿದ್ದು’.
‘ಇದೇ ಏನ್ರೀ ನಿಮ್ಮ ವೃತ್ತಿಧರ್ಮ?’
‘ನೋಡಿ, ನೀವು ಎಲ್ಲದರಲ್ಲಿಯೂ ಧರ್ಮ ತರಬೇಡಿ’.
‘ಆ ಧರ್ಮ ಅಲ್ಲ ರೀ, ಇದು ಬೇರೆ ಧರ್ಮ. ವೃತ್ತಿಯಲ್ಲಿ ನೈತಿಕತೆ ಇರಬೇಕು, ಕೊಟ್ಟ ಮಾತಿಗೆ ತಪ್ಪಿ ನಡೆಯದಂತೆ ಇರಬೇಕು ಅನ್ನೋದು ಗೊತ್ತಿಲ್ವ ನಿಮಗೆ? ಅಷ್ಟಕ್ಕೂ ಆಪರೇಷನ್ ಮಾಡೋದ್ರಲ್ಲಿ, ಆಪರೇಷನ್‌ಗೆ ಒಳಗಾಗೋದ್ರಲ್ಲಿ ನಿಮಗೇನ್ರೀ ಅನುಭವ ಇದೆ?’
ಮುದ್ದಣ್ಣನ ಮಾತಿಗೆ ಗಹಗಹಿಸಿ ನಕ್ಕ ವಿಜಿ, ‘ನನಗೆ ಅನುಭವ ಇಲ್ಲವೇ? ನನ್ನಷ್ಟು ಆಪರೇಷನ್ ಮಾಡಿದವರು, ಆಪರೇಷನ್‌ಗೆ ಒಳಗಾದವರು ಈ ದೇಶದಲ್ಲಿಯೇ ಯಾರೂ ಇರಲಿಕ್ಕಿಲ್ಲ’ ಸಾಧನೆ ಎನ್ನುವಂತೆ ಹೇಳಿದ.
‘ನಾನು ಆಸ್ಪತ್ರೆಗೆ ಬರೋವರೆಗಾದರೂ ನೀವು ಕಾಯಬೇಕಿತ್ತು ವಿಜಿ’ ಸಮಾಧಾನದಿಂದ ಹೇಳಿದ ಡಾ. ಮುದ್ದಣ್ಣ.
‘ಅಷ್ಟರಲ್ಲಿ, ನೀವೇ ಪೇಶೆಂಟ್‌ಗೆ ಆಪರೇಷನ್ ಮಾಡಿ, ನಿನ್ನ ಕೈಯಲ್ಲಿ ಏನೂ ಆಗಲ್ಲ ಅಂತ ಹೇಳಿ ಬೇರೆ ಡಾಕ್ಟರ್‌ನ ತಂದು ಕೂರಿಸ್ತಿದ್ರಿ...’ ಮತ್ತೆ ನಕ್ಕ ವಿಜಿ.
‘ಹೌದಾ… ನೋಡ್ತಾ ಇರಿ, ನಾವೂ ಟ್ರೀಟ್‌ಮೆಂಟ್ ಮುಂದುವರಿಸ್ತೀವಿ’.
‘ಗೊತ್ತು. ಸಿಬಿಐ ಅನ್ನೋ ಇಂಜೆಕ್ಷನ್, ಇ.ಡಿ. ಅನ್ನೋ ಟ್ಯಾಬ್ಲೆಟ್, ಐಟಿ ಅನ್ನೋ ಸಿರಪ್ ಕೊಡ್ತೀರಿ. ಹೈ ಡೋಸ್ ಔಷಧಿಗೆ ಪೇಶೆಂಟ್ ಪರ್ಮನೆಂಟ್ ಆಗಿ ಮೇಲೆಯೇ ಹೋಗೋ ರೀತಿ ಮಾಡ್ತೀರಿ ಅನ್ನೋದು ಗೊತ್ತಿದ್ದೇ, ಎಕ್ಸ್‌ಪರ್ಟ್ ಡಾಕ್ಟರ್‌ಗಳನ್ನೆಲ್ಲ ಅಡ್ಜಸ್ಟ್ ಮಾಡ್ಕೊಳ್ತಿದೀನಿ...’ ಗಡ್ಡ ನೀವಿಕೊಳ್ಳುತ್ತಾ ವಾರ್ಡ್ ಒಳಗೆ ಹೋದ ಡಾ. ವಿಜಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.