‘ರೀ, ತುಮಕೂರ್‌ಗೆ ಯಾವಾಗ ಕರಕೊಂಡು ಹೋಗ್ತೀರಿ?’
‘ಏನೇ ಇದು?! ಸ್ವಿಟ್ಜರ್ಲೆಂಡು, ನೆದರ್ಲ್ಯಾಂಡ್ಸು ಅಂತಿದ್ದೋಳು, ತುಮಕೂರ್‌ಗೆ ಅಂತಾಯಿದ್ದೀಯಲ್ಲ, ಏನು ಸಮಾಚಾರ?’
‘ಏನಿಲ್ಲಾರಿ, ಮಸಾಲೆ ದೋಸೆ ತಿನ್ಬೇಕು ಅನ್ನಿಸ್ತು ಅದಕ್ಕೆ’.
‘ಮಸಾಲೆ ದೋಸೆ ತಿನ್ನೋಕೆ ನೂರಾರು ಕಿಲೊಮೀಟರ್ ಹೋಗ್ಬೇಕೇ? ನೂರಡಿ ರಸ್ತೆಯಲ್ಲೇ ಸಿಗೋಲ್ವೆ?’
‘ಅಯ್ಯೋ, ನೀವು ಯಾವಾಗ್ಲೂ ಹೀಗೇ. ಮದುವೆ ಆದಾಗಿಂದ ಇದೇ ರಾಗ’ ಮುನಿಸಿಕೊಂಡಳು ಮಹಾರಾಯ್ತಿ.
‘ಸಾರಿ, ಚಿನ್ನಾ...’
‘ಹೀಗ್ಬನ್ನಿ ದಾರೀಗೆ, ತುಮಕೂರ ಹೋಟೆಲಲ್ಲಿ ಸಿಗೋದು ಚಿನ್ನದ ದೋಸೆನೇ!’
‘ನಾನೂ ದೋಸೆಗಳಲ್ಲಿ 99 ವೆರೈಟಿ ಅಂತ ಬೋರ್ಡ್ ನೋಡಿದ್ದೆ, ಅದರಲ್ಲಿ ಚಿನ್ನದ ಮಸಾಲೆ ಅಂತ ಇರಲಿಲ್ಲವಲ್ಲ?’
‘ನೀವು ನೋಡದೇ ಇರೋದನ್ನೇ ತೋರ್ಸಿ, ತಿನ್ನಿಸಿ ನಿಮ್ಮಿಂದ ಭೇಷ್ ಅನ್ನಿಸಿಕೊಬೇಕು, ಅದಕ್ಕೇ...’
‘ಚಿನ್ನಾನ ಆ ಥರ ಹೊಟ್ಟೆಗೆ ಸೇರಿಸ್ಕೊಳ್ಳೋಕೆ ನಾವೇನು ಗೋಲ್ಡ್ ಸ್ಮಗಲ್ ಮಾಡೋರಾ? ಮತ್ತೆ ಹೊಟ್ಟೆ ಗತಿ?’
‘ಹೊಟ್ಟೆಗೇನೂ ಅಪಾಯ ಇಲ್ಲವಂತೆ, ಪೇಪರಲ್ಲೇ ಬಂದಿದೆ. ಬೇಗ ರೆಡಿ ಆಗಿ’.
‘ಒಂದೇ ಕೊನೆಯ ಪ್ರಶ್ನೆ, ರೇಟೆಸ್ಟೊ?’
‘ಒಂದಕ್ಕೆ ಒಂದು ಸಾವಿರದಾ ಒಂದು, ಅಷ್ಟೇ’.
‘ಅಲ್ಲ ಕಣೆ, ಮೈ ಮೇಲೆ ಹಾಕ್ಕೊಂಡು ಮೆರೀಬೇಕಾದ್ದನ್ನ ಹೊಟ್ಟೇಲಿ ಹಾಕ್ಕೊಂಡು ಸಾವಿರ, ಸಾವಿರ ರೂಪಾಯಿನೂ ಕೊಟ್ಕೊಂಡು, ಈ ಟೆರಿಫಿಕ್ ಟ್ರಾಫಿಕ್ಕಿನಲ್ಲಿ ಯಾಕೆ ಅಂತ? ಕೇಳಿಲ್ಲವಾ ಗಾದೆನಾ ‘ಚಿನ್ನದ ಸೂಜಿ ಅಂತ ಮುತ್ತು ಕೊಡೋಕಾಗತ್ಯೇ?!’
‘ಮದ್ವೆ ಆಗಿ 30 ವರ್ಷ ಆದ್ರೂ ಮತ್ತೆ ವಾದಾನಾ?’
‘ಆಯ್ತು ಒಪ್ಪಿದೆ, ರೆಡಿಯಾದೆ. ಮಂಕುತಿಮ್ಮ ಸರಿಯಾಗೇ ಹೇಳಿದಾರೆ ‘ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ’!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.