ADVERTISEMENT

ಚುರುಮುರಿ: ಹಳೆಯ ಹೊಸ ಜಿಲ್ಲೆ!

‘ಎಲ್ಲಿಗೆ ಹೊರಟ್ರೀ…?’ ರಾಗ ಎಳೆದಳು ಹೆಂಡತಿ

ಗುರು ಪಿ.ಎಸ್‌
Published 10 ಜುಲೈ 2024, 22:14 IST
Last Updated 10 ಜುಲೈ 2024, 22:14 IST
   

‘ಎಲ್ಲಿಗೆ ಹೊರಟ್ರೀ…?’ ರಾಗ ಎಳೆದಳು ಹೆಂಡತಿ. 

‘ಒಂದೊಳ್ಳೆ ಕೆಲಸಕ್ಕೆ ಹೋಗಬೇಕಾದರೆ ಎಲ್ಲಿಗೆ ಅಂತ ಅಡ್ಡ ಬಾಯಿ ಹಾಕಿಬಿಡ್ತೀಯ, ಹೋದ ಕೆಲಸವೇ ಆಗಲ್ಲ’ ಸೋಫಾ ಮೇಲೆ ಕುಳಿತೆ. 

‘ಅಂಥ ಯಾವ ಘನಂದಾರಿ ಕೆಲಸಕ್ಕೆ ಹೋಗ್ತಿದ್ರೋ…’ ವ್ಯಂಗ್ಯವಾಗಿ ಕೇಳಿದಳು. 

ADVERTISEMENT

‘ರಾಮನಗರ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿ ಕಡೆಗೆ ಒಂದ್ ರೌಂಡ್ ಹಾಕಿ, ಖಾಲಿ ಸೈಟು, ಜಮೀನು ಇದೆಯಾ ಅಂತ ನೋಡ್ಕೊಂಡ್ ಬರೋಕೆ ಹೋಗ್ತಿದ್ದೆ’. 

‘ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಅಂತ ಮಾಡ್ತಾರೆ ಅನ್ನೋ ಕಾರಣಕ್ಕೆ ಅಲ್ಲಿ ಜಾಗ ಖರೀದಿ ಮಾಡೋಕೆ ಹೋಗ್ತಿದಿರಾ?’ ರೂಟ್‌ಗೆ ಬಂದಳು ಪತ್ನಿ.

‘ಹೌದೌದು…’ ಉತ್ಸಾಹದಲ್ಲಿ ಎದ್ದೆ. 

‘ಬೆಂಗಳೂರು ಸುತ್ತಮುತ್ತ ಇರೋ‌ 110 ಹಳ್ಳಿಗಳಿಗೇ ಸರಿಯಾಗಿ ಕುಡಿಯೋ ನೀರು ಸಿಗ್ತಿಲ್ಲ, ಇನ್ನು ಅಲ್ಲಿಯವರೆಗೂ ಸರಿಯಾಗಿ ಸೌಲಭ್ಯ ಕೊಡೋಕಾಗುತ್ತೇನ್ರೀ ಇವರ ಕೈಯಲ್ಲಿ...’ 

‘ಇದೆಲ್ಲ ಹೇಳಿ ನನ್ನ ಉತ್ಸಾಹ ಕಳೀಬೇಡ ನೀನು. ಈಗಲೇ ಜಾಗ ಖರೀದಿ ಮಾಡಿಟ್ಟುಕೊಂಡರೆ ಮುಂದೆ ಕೋಟಿ ಕೋಟಿ ದುಡ್ಡು ಮಾಡ್ಕೊಬಹುದು’ ಹೊರಡಲುನುವಾದೆ. 

‘ನೀವು ಖಾಲಿ ಕೈಯಲ್ಲಿ ಹೋಗಿ ಏನ್ ಮಾಡ್ತೀರಾ, ಬೆಳಿಗ್ಗೆಯೇ ಎದುರು ಮನೆ ಗುಜರಾತಿ ಅಂಕಲ್, ಪಕ್ಕದ್ಮನೆ ರಾಜಸ್ಥಾನಿ ಸೇಟು ಅಂಕಲ್ ಸೂಟ್‌ಕೇಸ್‌ನಲ್ಲಿ ದುಡ್ಡು ತುಂಬ್ಕೊಂಡೇ ರಾಮನಗರಕ್ಕೆ ಹೋದರು’ ನಕ್ಕಳು. 

‘ಬೆಂಗಳೂರಲ್ಲಂತೂ ಜಾಗದ ರೇಟ್‌ ಕೇಳೋಹಂಗಿಲ್ಲ. ಇನ್ನು, ರಾಮನಗರವೂ ದುಬಾರಿ ಆಗಿಬಿಡುತ್ತಾ… ಇರಲಿ ಬಿಡು. ಬೆಂಗಳೂರು ದಕ್ಷಿಣ ಅನ್ನೋ ಹೆಸರಿನಿಂದ ಕೈಗಾರಿಕೆಗಳೆಲ್ಲ ಬಂದು ಜನರಿಗೆ ಕೆಲಸ ಸಿಕ್ಕರೆ ಸಾಕು’ ಸಮಾಧಾನದ ದನಿಯಲ್ಲಿ ಹೇಳಿದೆ.

‘ಎಲ್ಲರಿಗೂ ಒಳ್ಳೆಯದಾದರೆ ಒಳ್ಳೆಯದೇ. ಆದರೆ, ಈ ವಿಷಯ ಮುಡಾ ಹಗರಣ ಮರೆಯುವವರೆಗೂ, ಚನ್ನಪಟ್ಟಣ ಬೈ ಎಲೆಕ್ಷನ್ ಮುಗಿಯುವವರೆಗೂ ಮಾತ್ರ ಚಾಲ್ತಿಯಲ್ಲಿ
ದ್ದರೆ ಯೂಸ್ ಇಲ್ಲ’ ವ್ಯಂಗ್ಯದ ದನಿಯಲ್ಲಿ ಸತ್ಯ ಹೇಳಿದಳು ಪತ್ನಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.