ಕೃಷಿ ಕಲ್ಚರ್ ಪರಿಚಯಿಸಲು ಶಂಕ್ರಿ, ಸುಮಿ ಮಕ್ಕಳನ್ನು ಕೃಷಿಮೇಳಕ್ಕೆ ಕರೆತಂದಿದ್ದರು. ಶಾಲೆಯ ವೇಷಭೂಷಣ ಸ್ಪರ್ಧೆಯಲ್ಲಿ ಮಗಳು ‘ರೈತ ಮಹಿಳೆ’ ವೇಷದಲ್ಲಿ ಬಹುಮಾನ
ವಂಚಿತಳಾಗಿದ್ದರಿಂದ ಸುಮಿಗೆ ಸಂಕಟವಾಗಿತ್ತು. ಕೃಷಿಮೇಳದಿಂದ ಮಗಳ ಭವಿಷ್ಯದ ಚಟುವಟಿಕೆಗೆ ಸಹಾಯವಾಗಬಹುದು ಎಂದುಕೊಂಡಳು.
ಕೃಷಿಮೇಳ ಮಕ್ಕಳಿಗೆ ಹೊಸ ಲೋಕದಂತೆ ಕಂಡಿತ್ತು. ಮನೆಗೆ ತರುತ್ತಿದ್ದ ಕೇಜಿ, ಅರ್ಧ ಕೇಜಿ ದವಸಧಾನ್ಯ ನೋಡಿದ್ದ ಮಕ್ಕಳು ಧಾನ್ಯದ ರಾಶಿಗಳನ್ನು ಕಂಡು ಅಚ್ಚರಿಪಟ್ಟರು. ಅಲಂಕರಿಸಿದ್ದ ದನಗಳ ಮೈ ಸವರಿದರು.
‘ಡ್ಯಾಡಿ, ಹಸು ಹಾಲು ಕೊಡುತ್ತೆ, ಎತ್ತು ಏನು ಕೊಡುತ್ತೆ?’ ಮಗ ಕೇಳಿದ.
‘ಎತ್ತುಗಳು ಹೊಲ ಉಳುತ್ತವೆ. ಗಾಡಿ ಎಳೆಯುತ್ತವೆ. ರೈತರ ಕುಟುಂಬದ ಸದಸ್ಯರಂತೆ ದನಕರುಗಳು ದುಡಿಯುತ್ತವೆ. ಕುಟುಂಬ ಸದಸ್ಯರಾದರೂ ದನಕರುಗಳ ಹೆಸರು ರೇಷನ್ ಕಾರ್ಡಿನಲ್ಲಿ, ವೋಟರ್ ಲಿಸ್ಟಿನಲ್ಲಿ ಇರೊಲ್ಲ’ ಅಂದ ಶಂಕ್ರಿ.
‘ಮಮ್ಮೀ, ಅಲ್ಲಿ ದೊಡ್ಡ ಒನಕೆ!’ ಮಗಳು ಗುರುತಿಸಿದಳು.
‘ಒನಕೆಯ ಉಪಯೋಗ ಗೊತ್ತಾ?’ ಸುಮಿ ಕೇಳಿದಳು.
‘ಗೊತ್ತು, ಒನಕೆಯು ಓಬವ್ವನ ಆಯುಧ. ಹೈದರಾಲಿಯ ಸೈನಿಕರನ್ನು ಕೊಲ್ಲಲು ಬಳಸಿದ್ದು’.
‘ಅಲ್ಲ, ಭತ್ತ ಕುಟ್ಟಲು ಒನಕೆ ಬಳಸ್ತಾರೆ, ಚಕ್ರದಂತೆ ಅಲ್ಲಿದೆಯಲ್ಲ, ಅದು ಬೀಸುವ ಕಲ್ಲು. ಧಾನ್ಯವನ್ನು ಹಿಟ್ಟು ಮಾಡಲು ಉಪಯೋಗಿಸ್ತಾರೆ’ ಸುಮಿ ಪರಿಚಯಿಸಿದಳು.
‘ಟ್ರಯಾಂಗಲ್ ರೀತಿ ಇದೆಯಲ್ಲ ಅದು ಏನು ಡ್ಯಾಡಿ?’ ಮಗ ಕೇಳಿದ.
‘ಅದು ನೇಗಿಲು. ಮನೆಗೆ ಹೋದ ಮೇಲೆ ನೇಗಿಲಿನ ಚಿತ್ರ ಬರೆದು ಭಾಗಗಳನ್ನು ಗುರುತಿಸಿ ಅದರ ಉಪಯೋಗ ತಿಳಿಸುತ್ತೇನೆ’ ಅಂದ ಶಂಕ್ರಿ.
‘ಕೃಷಿಮೇಳವನ್ನು ಜನ ಎಂಜಾಯ್ ಮಾಡ್ತಿದ್ದಾರೆ ಕಣ್ರೀ...’ ಸುಮಿ ಸಂಭ್ರಮಿಸಿದಳು.
‘ಕೃಷಿ ಬದುಕು ವಸ್ತುಪ್ರದರ್ಶನವಾಗಿ ಜನರ ಮನರಂಜನೆ ಆಗ್ತಿದೆಯಲ್ಲ ಎಂದು ದುಃಖವಾಗ್ತಿದೆ...’ ಅಂದ ಶಂಕ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.