‘ಭಕ್ತರಲ್ಲೀಗ ವಾರ್‌ನ ಉಮೇದು ಚಿಗುರ್ಕೊಂಡದೆ. ವಾರ್‌ಗಿಂತ ಪ್ಯಾರ್ ಮುಖ್ಯ, ವಾರ್‍ಗೆ ಹೋಗೋದಂದ್ರೆ ಬಾರ್‍ಗೆ ಹೋದಂಗಾ? ಸಿನಿಮಾದಾಗಷ್ಟೆ ವಾರ್ ನೋಡಿದ, ಪಟಾಕಿ ಸಿಡಿದರೂ ಪತರಗುಟ್ಟೋರಿಗೆಲ್ಲಾ ಪಾಕ್‍ಗೆ ಬಾಂಬ್ ಮಿಠಾಯಿ ತಿನ್ನಿಸೋ ಖಯಾಲಿ’– ಮಿತ್ರರು ಹನುಮಂತಿಯನ್ನು ಕೆಣಕಿದರು.
‘ದೇಶದ್ರೋಹಿಗಳಾ...’ ಚೀರಿದ ಹನುಮಂತಿ. ‘ಮೋದಿಯಣ್ಣನಿಂದ ಸಕಲವೂ ಸಾಧ್ಯ’ ಅಂದ. ‘ನಮ್ಮನ್ನು ಆಳಿದವರಲ್ಲಿ ಯಾರಾದ್ರೂ ಒಂದಪನಾರ ಪಾಕ್‍ಗೆ ಹೋಗಿ ಅವರನ್ನು ತಬ್ಬಿ ತಬ್ಬಿಬ್ಬುಗೊಳಿಸಿ ಬಿರಿಯಾನಿ ಕತ್ತರಿಸಿ ಬಂದ ಗಂಡುಂಟಾ?’ ಪ್ರಶ್ನೆಗಿಳಿದ.
‘ಇಂದಿರಜ್ಜಿ ಪಾಕ್‍ನೇ ಎಲ್ಡು ತುಂಡ್ಹಾಕಿ ನಿಮ್ಮ ವಾಜಪೇಯಿಯಿಂದ್ಲೇ ‘ದುರ್ಗಿ’ ಬಿರುದು ಪಡೀಲಿಲ್ವೆ? ನಿಮ್ಮವರು ಮನೆ ಮೇಲೆ ಧ್ವಜ ಹಾರಿಸಿದ್ದೇ ಬಂತು’ ಅಂತ ನಿಡುಸುಯ್ದ ಮಿತ್ರನೊಬ್ಬ.
‘ಸರ್ಜಿಕಲ್ ಸ್ಟ್ರೈಕ್ ಮಾಡಿದ್ದ್ಯಾರು? ‘ಉರಿ’ ಅಂಬೋ ಸಿನಿಮಾ ನೋಡ್ರಲೇ ಫಸ್ಟು’– ಉರ್ಕೊಂಡ ಹನುಮಂತಿ. ‘ನಲವತ್ತಕ್ಕೂ ಹೆಚ್ಚು ನೇಷನ್‍ದವರಿಗೆ ಪಾನ್ ಹಾಕ್ಸಿ ಪಾಕ್‍ಗೆ ಉಗ್ಸಿ ಏಕಾಂಗಿ ಮಾಡೀವಿ ಗೊತ್ತಾ’ ಅಬ್ಬರಿಸಿದ.
‘ನೋಡಯ್ಯಾ 56 ಇಂಚು ಚೆಸ್ಟ್ ಇದ್ದರೆ ಪಾಕ್‍ಗೇ ನುಗ್ಗಿ ಅಮೆರಿಕದೋರು ಬಿನ್ ಲಾಡೆನ್ನ ಬಡಿದರಲ್ಲ ಹಂಗೆ ಬಡೀಬೇಕಪ್ಪಾ’ ರೇಗಿಸಿದ ಗೆಳೆಯ. ‘ಪಾಕ್‍ನ ಸ್ಟಾರ್ಸು, ಸಾಂಗ್ಸು, ಕ್ಲಾಥ್ಸು, ಕ್ರಿಕೆಟ್ ಬ್ಯಾನ್ ಮಾಡಿಲ್ವಾ?’ ಬೀಗಿದ ಹನುಮಂತಿ. ‘ಯಲಕ್ಶನ್ ಗಿಮಿಕ್ಸಾ?’ ಕಿಂಡಲ್ ಮಾಡಿದನೊಬ್ಬ.
‘ವಾರ್ ಅಂದ್ರೆ ನಮ್ಮ ಮೋದಿಯಣ್ಣಂಗೆ ಕಡಲೆ ತಿಂದು ಕೈ ತೊಳ್ಕೊಂಡಂಗೆ. ಆರನೂರು ವರ್ಷ ಸಾಬರು, ಇನ್ನೂರು ವರ್ಷ ಬ್ರಿಟಿಷರು ನಮ್ಮನ್ನಾಳಿದರಲ್ಲ, ಯಾರಾರ ಒಗ್ಗಟ್ಟಾಗಿ ಯುದ್ಧ ಮಾಡಿದ್ರಾ ಹಿಸ್ಟರಿನಲ್ಲಿ?’ ಹನುಮಂತಿಯೂ ರೇಗಿಸಿದ. ‘ಯುದ್ಧ ಮಾಡ್ದೆ ಫ್ರೀಡಂ ತಂದುಕೊಟ್ರಲ್ಲಯ್ಯಾ ಗಾಂಧಿ. ನೀವೆಲ್ಲ ಸೌದಿರಾಜನ್ನ ತಬ್ಕೊಳ್ಳೋಕೆ ಲಾಯಕ್’ ಅಂದ ಮಿತ್ರ.
‘ಒಳಗಿರೋ ಶತ್ರುಗಳಯ್ಯಾ ನೀವು. ಗಂಡಸ್ತನ ಇದ್ದರೆ ಮಿಲಿಟ್ರಿಗೆ ಹೋಗಿ ಸೇರಿಕೊಳ್ರಯ್ಯ’ ಎಂದು ಗುಡುಗಿದ ಹನುಮಂತಿ, ಎದುರು ಬೀದಿಯಲ್ಲಿನ ಬಾರ್ ಅಂಡ್ ಮಿಲಿಟ್ರಿ ಹೋಟೆಲ್ ಸೇರಿಕೊಂಡು ಗುಂಡು ಏರಿಸತೊಡಗಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.