‘ಸಾರ್, ಮೂವರಿಗೆ ಡಿಸಿಎಂ ಪಟ್ಟವಂತೆ!’ ಅಂತ ಬ್ರೇಕಿಂಗ್ ನ್ಯೂಸ್ ಹೇಳಿದೆ.
‘ಅದು ಸಾಲದಿಲ್ಲ ಕಣೋ. ಏನಿಲ್ಲಾ ಅಂದ್ರೂ ಒಂದು ಮೂವತ್ತು ಹೊಸ ಹುದ್ದೆ ಮಾಡಬೇಕು’ ಅಂದ್ರು ತುರೇಮಣೆ.
‘ಎಂತಾ ಹುದ್ದೆ ಸಾರ್’ ಅಂತ ಕೇಳಿದೆ.
‘ನೋಡ್ಲಾ, ಜನರ ಸೇವೆ ಮಾಡಕ್ಕೆ ಭಾರಿ ದುಡ್ಡು ಬೇಕು. ಅದುಕ್ಕೇ ಹತ್ತು ಡಿಸಿಎಂ, ಇನ್ನೊಂದತ್ತತ್ತು ಎಸಿಎಂ ಮತ್ತು ಎಡಿಸಿಎಂ ಪೋಸ್ಟ್ ಇರಬೇಕು’ ಅಂತಂದ್ರು. ಎಸಿಎಂ, ಎಡಿಸಿಎಂ ಅಂದರೇನು ಅಂತ ನನಗೆ ಅರ್ಥ ಆಗಲಿಲ್ಲ, ಅದನ್ನೇ ಕೇಳಿದೆ.
‘ಲೋ ಆಡಳಿತ ನಡೆಸಕ್ಕೆ ಬರದೋರ ಥರಾ ಮಾತಾಡಬ್ಯಾಡ. ಎಸಿಎಂ ಅಂದ್ರೆ ಅಡಿಶನಲ್ ಚೀಫ್ ಮಿನಿಸ್ಟರ್, ಎಡಿಸಿಎಂ ಅಂದ್ರೆ ಅಡಿಶನಲ್ ಡೆಪ್ಯುಟಿ ಚೀಫ್ ಮಿನಿಸ್ಟರ್ ಕಣೋ’ ಅಂದ್ರು.
‘ಸಾರ್ ಅಡವಾಗಿರ ಖಾತೇನೇ ಬೇಕು ಅಂತ ಅಡರಗಾಲು ಹಾಕ್ತಾ ಇರೋರನ್ನ ಏನು ಮಾಡದು?’ ಅಂತ ಕೇಳಿದೆ.
‘ಅದೇ ಕಣೋ ಅಡವಾಗಿರದನ್ನೆಲ್ಲಾ ತುಂಡಾಕಬೇಕು. ಹಾಲು ಕರಕೊಂಡಿರು ಅಂತ ಕೆಎಂಎಫ್ ಅಧ್ಯಕ್ಷರನ್ನ ಮಾಡಬಹುದು’ ಅಂತ ಸಲಹೆ ಕೊಟ್ಟರು.
‘ಆದ್ರೆ ನಮ್ಮ ನಿಂಬೇ ಮಾಜಿ ಮಂತ್ರಿಗಳು ಸುಮ್ಮನಿದ್ದಾರಾ. ಕ್ಷೀರರುದ್ರ ಯಾಗ ಮಾಡಲ್ಲವೇನು?’ ಅಂದೆ.
‘ಮಾಡಲಿ ಬುಡು, ಈಗ ಮೈತ್ರಿ ಲಿವಿಂಗ್ ಟುಗೆದರ್ ಟೈಂ ಮುಗದೋಗಿ ಅವರ ಹಾಲಿಗೆ ಅವರೇ ನಿಂಬೇಹುಳಿ ಹಿಂಡಿಕಂಡು ಮೊಸರಾಗದೆ’ ಅಂದ್ರು.
‘ಸಾರ್, ವೃತ್ತಿಪರ ಅತೃಪ್ತರು ನಮ್ಮ ಪಾಲು ನಮಗೆ ನೈವೇದ್ಯ ಮಡಗಿಬುಡಿ ಅಂತ ಗೋಳು ಹುಯ್ಯತಾವರೆ. ಅವರಿಗೇನು ಮಾಡಬಹುದು?’ ಅಂತ ಕೇಳಿದೆ.
‘ನಮ್ಮ ಹಳ್ಳಿ ಕಡೆ ಕೃಷ್ಣಸಂಧಾನ, ಕುರುಕ್ಷೇತ್ರ ನಾಟಕದಲ್ಲಿ ನಾಟಕದ ಮೇಷ್ಟ್ರು ಮೊದಲ ಅರ್ಧ ನಾಟಕಕ್ಕೆ ಮೊದಲನೇ ಕೃಷ್ಣ, ಎರಡನೇ ಅರ್ಧಕ್ಕೆ ಎರಡನೇ ಕೃಷ್ಣ ಅಂತ ಪಾತ್ರ ಹಂಚತಿರಲಿಲ್ಲವೇ! ಹಂಗೇ ಈ ಸಂಪುಟ ಸಂಧಾನ ನಾಟಕದಲ್ಲಿ ಬಿಜೆಪಿ ಮಂತ್ರಿಗಳು ಮೊದಲನೇ ಕೃಷ್ಣರು, ಅತೃಪ್ತರು ಎರಡನೇ ಕೃಷ್ಣರು. ಇನ್ನು ಧೃತರಾಷ್ಟ್ರ ಯಾರು ಅಂತ ನಿನಗೇ ಗೊತ್ತು!’ ಅಂದ್ರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.