ADVERTISEMENT

ಗಾಂಧಿ ಕಂಪ್ಲೇಂಟು!

ಚುರುಮುರಿ

ಬಿ.ಎನ್.ಮಲ್ಲೇಶ್
Published 3 ಅಕ್ಟೋಬರ್ 2019, 20:00 IST
Last Updated 3 ಅಕ್ಟೋಬರ್ 2019, 20:00 IST
   

ಪೊಲೀಸ್ ಠಾಣೆಗೆ ತೀರಾ ವಯಸ್ಸಾದ ವೃದ್ಧರೊಬ್ಬರು ಕೋಲೂರಿಕೊಂಡು ಬಂದು ಠಾಣಾಧಿಕಾರಿಯ ಮುಂದೆ ನಿಂತರು.

‘ಸ್ವಾಮಿ, ನನ್ನದೊಂದು ಕಂಪ್ಲೇಂಟಿದೆ...’

‘ಏನು ನಿಮ್ಮ ಹೆಸರು?’ ಅಧಿಕಾರಿ ತಲೆ ಎತ್ತದೆ ಕೇಳಿದರು.

ADVERTISEMENT

‘ಗಾಂಧಿ’

‘ಏನು? ಗಾಂಧಿನಾ? ಯಾವ ಗಾಂಧಿ? ಕಾಂಗ್ರೆಸ್ ಗಾಂಧಿನೋ ಬಿಜೆಪಿ ಗಾಂಧಿನೋ ಅಥ್ವ ಸಿನಿಮಾ ನಟಿ ಒಬ್ರಿದಾರಲ್ಲ ಅವರ ಕಡೆ ಗಾಂಧಿನೋ?’ ಅಧಿಕಾರಿ ವೃದ್ಧನನ್ನು ನೋಡಿ ನಕ್ಕರು.

‘ನಾನು ಎಂ.ಕೆ. ಗಾಂಧಿ’.

‘ಓ, ಹೊಸ ಹೆಸರು, ಕೇಳಿರ್‍ಲಿಲ್ಲ. ಇರ‍್ಲಿ, ಏನು ನಿಮ್ಮ ಕಂಪ್ಲೇಂಟು?’

‘ನಾನು ಸಂಪಾದಿಸಿದ ಎಲ್ಲವೂ ಕಳೆದುಹೋಗಿವೆ...’

‘ಎಲ್ಲವೂ ಅಂದ್ರೆ? ಏನವು? ಎಷ್ಟು ಬೆಲೆಯವು?’

‘ನಾನು ಸಂಪಾದಿಸಿದ ಸತ್ಯ, ಅಹಿಂಸೆ, ಪರಧರ್ಮ ಸಹಿಷ್ಣುತೆ ಎಲ್ಲ ಕಳೆದುಹೋಗಿವೆ, ಅವಕ್ಕೆ ಬೆಲೆ ಕಟ್ಟಲಾಗದು...’

‘ರೀ ಸ್ವಾಮಿ, ಇದು ಪೊಲೀಸ್ ಸ್ಟೇಶನ್ನು. ನಿಮ್ಮ ಸತ್ಯ, ಅಹಿಂಸೆ ಹುಡುಕಿ ಕೊಡೋಕೆ ನಾವಿಲ್ಲಿ ಕೂತಿಲ್ಲ. ಅಷ್ಟಕ್ಕೂ ನೀವು ಯಾವ ಕಾಲದಲ್ಲಿದೀರಿ?’

‘ನನಗೆ ಕೊಟ್ಟಿದ್ದ ‘ರಾಷ್ಟ್ರಪಿತ’ ಅನ್ನೋ ಬಿರುದನ್ನೂ ಯಾರೋ ಕಳವು ಮಾಡಿದ್ದಾರೆ’.

‘ಅಯ್ಯೋ... ಅದ್ಯಾವ ದೊಡ್ಡ ವಿಷ್ಯ ಬಿಡ್ರಿ, ಬಿರುದುಗಳಿಗೇನು ನೂರೆಂಟು ಸಿಗ್ತಾವೆ. ರಾಷ್ಟ್ರಪಿತ ಹೋದ್ರೇನಂತೆ, ‘ವಿಶ್ವಪಿತ’ ಅಂತ ಕೊಡಿಸ್ಲಾ?’

‘ನೀವು ಎಲ್ಲದಕ್ಕೂ ವಿರೋಧವಾಗಿ ಮಾತಾಡ್ತೀರಿ. ನನ್ನ ಭಾವನೆಗಳಿಗೆ ಬೆಲೆ ಇಲ್ವ? ನೀವು ಹೀಗೆಲ್ಲ ಮಾತಾಡಿದ್ರೆ ನಿಮ್ಮ ನಾಡ ದೊರೆಗೆ ದೂರು ಕೊಡಬೇಕಾಗುತ್ತೆ...’

‘ಯಾರು ಮುಖ್ಯಮಂತ್ರಿಗಳಿಗಾ? ಅಯ್ಯೋ, ಕೊಟ್ಕಾ ಹೋಗ್ರಿ. ಅವರೇ ತಂತಿ ಮೇಲೆ ನಡೀತಿದಾರೆ. ನಿಮ್ ಕಡೆ ನೋಡೋಕಾದ್ರೂ ಟೈಮೆಲ್ಲಿದೆ ಅವ್ರಿಗೆ...’ ಅಧಿಕಾರಿ ನಕ್ಕರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.