ADVERTISEMENT

‘ರಾಮಾಯಣ ಎಕ್ಸ್‌ಪ್ರೆಸ್’ ಗುಂಡಜ್ಜಿ ಯಾತ್ರೆ...

ರೇಣುಕಾ ನಿಡಗುಂದಿ
Published 4 ಡಿಸೆಂಬರ್ 2018, 20:01 IST
Last Updated 4 ಡಿಸೆಂಬರ್ 2018, 20:01 IST
   

ಶ್ರೀರಾಮನ ಹೆಜ್ಜೆ ಗುರುತಿನ ಯಾತ್ರಾ ಸ್ಥಳಕ್‌ ಕರ್ಕೊಂಡ ಹೋಗೂ ‘ಶ್ರೀ ರಾಮಾಯಣ ಎಕ್ಸ್‌ಪ್ರೆಸ್’ ರೈಲು ಶುರುವಾಗೇತಂತ ಗುಂಡಜ್ಜಿಗೆ ಆಕಾಶ ಮೂರೇ ಗೇಣು!

ಮಗ ಬಂಡ್ಯಾಗ ‘ಕಾಶಿ ಯಾತ್ರಿ ಮಾಡಿಸು ಸಾಯೂದ್ರೊಳಗ ಅಂತೇಳಿ ಸಾಕಾಗಿತ್ತು. ಈಗ ಇಂಥಾ ಛಲೊ ಸರ್ಕಾರ ಬಂದೈತಿ, ಕಾಶಿಯೇನು ಮತ್ತೊಮ್ಮೆ ತ್ರೇತಾ ಯುಗನs ನೋಡಬಹುದು’ ಅಂತ ಗುಂಡಜ್ಜಿ ಹಿಗ್ಗತಿದ್ಲು.

ಅವ್ವಗ್ ಯಾತ್ರಾ ಆದ್ರ ಮೊಮ್ಮಕ್ಕಳ್ನ ನೋಡ್ಕೊಳ್ಳುವವರ‍್ಯಾರು, ಚಟ್ನಿಪುಡಿ ಮಾಡೋರ‍್ಯಾರು... ಮನೀಕೆಲಸಕ್ಕೂ ಯಾರೂ ಇಲ್ದಂಗ ಆಗ್ತೈತಿ ಅಂತ ಎದಿ ಧಸಕ್ಕಂತು. ‘ಯಾವ ಯಾತ್ರಿನೂ ಬ್ಯಾಡಾ. ಥಣ್ಣಗ ‘ರಾಮ, ರಾಮ’ ಅನಕೊಂತ ಮೊಮ್ಮಕ್ಕಳನ್‌ ಆಡಿಸ್ಕೊಂತ ಕುಂದ್ರು’ ಅಂದಬಿಟ್ಟಾ ಬಂಡ್ಯಾ.

ADVERTISEMENT

‘ನನ್‌ ಹೆಣಾ ಎತ್ತೂಮಟಾ ನೀ ಬಿಡಂಗಿಲ್ಲ. ನಾನs ದಿಲ್ಲಿ, ಅಯೋಧ್ಯಾ, ಸಿತಾಮಡಿ, ಜನಕಪುರಿ, ವಾರಾಣಸಿ, ಪ್ರಯಾಗ, ರಾಮೇಶ್ವರ... ನೋಡ್ಕೊಂಡ ಬರ್ತೀನಿ’ ಅಂತು ಮುದುಕಿ.

‘ಈಗ ಉತ್ತರ ಭಾರತದಾಗೆಲ್ಲ ಥಂಡಿ ಶುರುವಾಗ್ತೈತಿ. ಊಟಾ-ವಸತಿ ಹೆಂಗಿರ್ತದೋ ಯಾಂವ ಬಲ್ಲ. ಹದಿನೈದ್ ದಿನಾ ನಿನ್ನ ಜಳಕಾ, ಮಡಿ- ಹುಡಿ ಗತಿಯೇನು! ಹೊಲಸ ಹವಾ ಮಾಲಿನ್ಯದಾಗ ಉಸರುಗಟ್ಟಿ ಸತ್ ಗಿತ್ ಹೋದ್ರ ನಾವ್ ಹೆಂಗ ಹುಡಕೂಣು?’

‘ಉದ್ಯೋಗಿಲ್ಲದ ಹುಡುಗ್ರು ತಲ್ಯಾಗ ಹಿಂದೂ ರಾಷ್ಟ್ರದ ಹುಳಾ ಬಿಟ್ಗೊಂಡ್ ಹತ್ಯಾರ್‌ ಹಿಡ್ದಾರ. ಬಡವರು ಇನ್ನೂ ಬಡವರಾಗಿ ಶ್ರೀಮಂತರು ದೇಶಾನ ದೋಚಕೊಂಡು ಪರದೇಶಕ್ಕ ಓಡ್ಯಾರ. ರೈತನ ಸಂಕಟಾ ಕೇಳಾವ್ರಿಲ್ಲ. ದಿನಾ ಸಾಯಾವ್ರಿಗೆ ಅಳಾವ್ರ್ಯಾರು ಅಂದಂಗಾತು. ಚಿತ್ರಕೂಟದ ತನಕಾ ‘ರಾಮ ಪಥ ಗಮನ’; ನರ್ಮದೆಯ ಪ್ರದಕ್ಷಣೆ; ಆಕಳ ಸಚಿವಾಲಯ, ಪ್ರತಿಮೆ ಅಂತೇಳಿ ಕೋಟ್ಯಂತರ ರೊಕ್ಕಾ ಸುರಿಯೂ ಸರ್ಕಾರ, ರೇಲ್ವೆದವರ ಮೂಗಿಗೂ ತುಪ್ಪಾ ಹಚ್ಚಿರಬೇಕು. ಹೊಕ್ಕಿದ್ರ ಹೋಗ್ ಮೈಮ್ಯಾಲಿನ ಭಂಗಾರ ತಗದಿಟ್ ಹೋಗ್. ಏನರ ಆದ್ರ ನೀನs ಜವಾಬ್ದಾರಳು’ ಅಂದಬಿಟ್ಟಾ ಬಂಡ್ಯಾ.

ಗುಂಡಜ್ಜಿ ವಟಗುಡಕೊಂತ ಹೂಬತ್ತಿ ಹೊಸ್ಯಾಕತ್ಲು…

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.