ADVERTISEMENT

ಚುರುಮುರಿ: ಮಗಳ ಬೂಟು ಈಗೆಲ್ಲಿ?

ಪ್ರಜಾವಾಣಿ ವಿಶೇಷ
Published 24 ಡಿಸೆಂಬರ್ 2023, 23:54 IST
Last Updated 24 ಡಿಸೆಂಬರ್ 2023, 23:54 IST
   

‘ಮಗಳನ್ನು ಉಳಿಸಿ, ಮಗಳನ್ನು ಬೆಳೆಸಿ, ಮಗಳ ಬೂಟು ಮಾತ್ರ ಮೇಜಿನ ಮ್ಯಾಗೆ’ ಬೆಕ್ಕಣ್ಣ ರಾಗವಾಗಿ ತುಸು ಖೇದದಿಂದ ಹಾಡುತ್ತಿತ್ತು.

‘ಏನಲೇ… ಹೊಸಾ ಹಾಡು ಹಾಡಾಕೆ ಹತ್ತಿ?’ ಎಂದೆ ಅಚ್ಚರಿಯಿಂದ.

‘ಅದೇ ನಮ್ಮ ಮೋದಿ ಮಾಮಾರು ಬೇಟಿ ಬಚಾವೋ, ಬೇಟಿ ಪಢಾವೋ ಅಂದಿದ್ದರಲ್ಲ… ಅದಕ್ಕೆ, ನಮ್ಮ ಕುಸ್ತಿಯಾಡೋ ಬೇಟಿಗಳ ಸ್ಥಿತಿ ನೋಡಿ ನಾನು ಎರಡನೇ ಸಾಲು ಸೇರಿಸಿದೆ’ ಎನ್ನುತ್ತ ಕುಸ್ತಿಪಟು ಸಾಕ್ಷಿ ತಮ್ಮ ಶೂಗಳನ್ನು ಮೇಜಿನ ಮೇಲಿಟ್ಟು ಗಳಗಳನೆ ಅತ್ತಿದ್ದನ್ನು ತೋರಿಸಿತು.

ADVERTISEMENT

‘ಮತ್ತ ನಿಮ್ಮ ಮೋದಿ ಮಾಮಾರು ಅಷ್ಟೆಲ್ಲ ಬೇಟಿ ಅಂತ ಬಡಬಡಿಸೋರು ಹೀಂಗ ಆಕಿ ಬೂಟ್‌ ಕಳಚಿಟ್ಟಿದ್ದನ್ನು, ಕುರ್ಚಿ ಮ್ಯಾಗೆ ಆ ಸಂಸದನ ಆಪ್ತನನ್ನೇ ತಂದು ಕೂರಿಸಿದ್ದನ್ನು ನೋಡಿ ಎದಕ್ಕೆ ಸುಮ್ಮನೆ ಕುಂತಾರಲೇ?’

‘ಇದ್ರಾಗೆ ಮೋದಿಮಾಮನ ಎದಕ್ಕ ಎಳೆದು ತರ್ತೀ? ಪಾಪ… ಎಲ್ಲಾದಕ್ಕೆ ಅಂವಾ ಹೆಂಗೆ ಹೊಣೆಯಾಗತಾನ?’ ಬೆಕ್ಕಣ್ಣ ಮೋದಿಮಾಮನನ್ನು ಸುಲಭಕ್ಕೆ ಬಿಟ್ಟುಕೊಡುವುದುಂಟೇ?!

‘ಕುಸ್ತಿಪಟುಗಳು ಆವಾಗ ಧರಣಿ ಮಾಡೂ ಮುಂದ ನೀವೆಲ್ಲ ಹೆಣ್ಣುಮಕ್ಕಳು ಸುಮ್ಮನಿದ್ರಿ, ಉಳಿದ ಕ್ರೀಡಾಪಟುಗಳು ಸುಮ್ಮನಿದ್ದರು, ಕ್ರೀಡಾ ಪ್ರಾಧಿಕಾರಗಳು ಬಾಯಿಗೆ ಬೀಗ ಹಾಕ್ಕೊಂಡಿದ್ದವು. ಅದೇ ಆಕಿ ಒಲಿಂಪಿಕ್ ಕಂಚಿನ ಪದಕ ಗೆದ್ದಾಗ ಮಾತ್ರ ನೀವೇ ಗೆದ್ದೀರಿ ಅನ್ನೂಹಂಗ ಹೆಮ್ಮೆಯಿಂದ ಬೀಗಿದ್ರಿ’ ಎಂದು ನನ್ನ ಮೂತಿಗೆ ತಿವಿಯಿತು.

‘ಅದಕ್ಕೇ ನೋಡು… ಮಗಳನ್ನು ಉಳಿಸೂದು, ಓದಿಸೂದು, ಬೂಟು ತೊಡಿಸೂದು ಇಂಥಾ ಯಾವ ರಗಳೇನೇ ಬ್ಯಾಡ ಅಂತ ಮಂಡ್ಯಾದಾಗೆ ಹೆಣ್ಣು ಭ್ರೂಣಹತ್ಯೆಗೆ ಅಷ್ಟೆಲ್ಲ ಮಂದಿ ಟೊಂಕ ಕಟ್ಟಿ ನಿಂತಿದ್ರು’ ಎಂದೆ.

‘ನಿಮ್ಮ ಮನುಷ್ಯ ಪ್ರಾಣಿ ಜಾತಿವಳಗೆ ಗಂಡುಗಳು ಮಾಡೋ ಅಟಾಟೋಪ ನೋಡಿದ್ರೆ, ನೀವು ಹೆಣ್ಣುಮಕ್ಕಳು ಕಾಲಿಗೆ ಬೂಟು ಹಾಕದಿದ್ದರೂ ಪರವಾಗಿಲ್ಲ, ಕೈಯಾಗೆ ಸದಾ ಬೂಟು ಇಟ್ಟುಕೊಂಡಿರಬೇಕು ನೋಡು’ ಎನ್ನುತ್ತ ಬೆಕ್ಕಣ್ಣ ಮೂತಿ ತಿರುವುತ್ತಾ ಹೊರ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.