ADVERTISEMENT

ಚುರುಮುರಿ: ಪಾಸಿಟಿವ್ ಥಿಂಕಿಂಗ್! 

ಗುರು ಪಿ.ಎಸ್‌
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
   

‘ಥತ್, ಯಾವಾಗಲೂ ಇದೇ ಆಯ್ತು ಇವರದು’ ಬೈಯುತ್ತಾ ಟಿ.ವಿ. ಆಫ್ ಮಾಡಿದಳು ಹೆಂಡತಿ.

‘ಯಾಕ್ ಮಾರಾಯ್ತಿ ಏನಾಯ್ತು?’ ಕೇಳಿದೆ.

‘ಅಪರೂಪಕ್ಕೊಮ್ಮೆ ನ್ಯೂಸ್ ನೋಡೋಣ ಅಂದ್ರೆ ಏನ್ರೀ ಇದು, ಮೂರು ಹೊತ್ತೂ ಕೊಲೆ, ಕಿಡ್ನ್ಯಾಪ್, ರೇಪ್, ಡಿವೋರ್ಸ್... ಇಂಥ ನೆಗಟಿವ್ ಸುದ್ದಿಗಳನ್ನೇ ತೋರಿಸ್ತಿದ್ದಾರೆ, ಒಳ್ಳೆ ನ್ಯೂಸ್‌ಗಳೇ ಇಲ್ಲ. ಇದನ್ನೆಲ್ಲ ನೋಡಿ ನೋಡಿ ಮನಸ್ಸಲ್ಲಿ ಏನೋ ಒಂಥರಾ ತೊಳಲಾಟ’.

ADVERTISEMENT

‘ಅಯ್ಯೋ, ಇಷ್ಟಕ್ಕೆಲ್ಲ ಯಾಕೆ ಸಂಕಟಪಡ್ತೀಯ? ಯಾವಾಗಲೂ ಪಾಸಿಟಿವ್ ಥಿಂಕಿಂಗ್ ಇರಬೇಕು. ಜೀವನದಲ್ಲಿ ಎಲ್ಲಾ ತಪ್ಪುಗಳನ್ನು ನಾವೇ ಮಾಡಿ ತಿದ್ದಿಕೊಳ್ಳೋಣ ಅಂದ್ರೆ ಅಷ್ಟೊಂದು ಟೈಮ್ ಇರಲ್ಲ. ಬೇರೆಯವರ ತಪ್ಪುಗಳನ್ನ ನೋಡಿ ನೋಡಿ, ನಾವೂ ಅಂಥ ತಪ್ಪು ಮಾಡಬಾರದು ಅಂತ ದೃಢಸಂಕಲ್ಪ ಮಾಡಿಕೊಳ್ಳಬೇಕು’ ವೇದಾಂತಿಯಂತೆ ಹೇಳಿದೆ.

‘ಹಂಗೆಲ್ಲ ಯೋಚನೆ ಮಾಡಿದ್ರೆ ನಿಮ್ಮನ್ನ ಮದುವೆ ಆಗೋ ತಪ್ಪೇ ಮಾಡ್ತಿರಲಿಲ್ಲ ನಾನು’ ಎಂದು ನಕ್ಕ ಹೆಂಡತಿ ನ್ಯೂಸ್ ಪೇಪರ್ ಹಿಡಿದುಕೊಂಡು, ‘ನೋಡ್ರೀ, ಪೆಟ್ರೋಲ್ ರೇಟ್ ಕೂಡ ಜಾಸ್ತಿ ಮಾಡಿದಾರಂತೆ, ಇಲ್ಲೂ ನೆಗಟಿವ್ ಸುದ್ದಿ’.

‘ಅವರು 14 ಸಲ ಜಾಸ್ತಿ ಮಾಡಿದ್ರು, ಇವರಿನ್ನೂ ಈಗ ಒಂದು ಸಲ ಜಾಸ್ತಿ ಮಾಡಿದಾರೆ, ಇರಲಿ ಬಿಡು ಪರವಾಗಿಲ್ಲ’ ಎನ್ನುತ್ತಾ ಕುಡಿಯಲು ನೀರು ಕೇಳಿದೆ.

‘ಮುಂದಿನ ತಿಂಗಳಿಂದ ವಾಟರ್ ಬಿಲ್ ಕೂಡ ಜಾಸ್ತಿ ಮಾಡ್ತಾರಂತ್ರೀ’ ಮತ್ತೆ ನೆಗಟಿವ್ ಸುದ್ದಿ ಹೇಳಿದಳು ಹೆಂಡತಿ!

‘ನೀರು ಕೊಡ್ತಿರೋದೇ ದೊಡ್ಡದು, ಬಿಲ್ ಜಾಸ್ತಿ ಮಾಡಿದ್ರೂ ತೊಂದರೆ ಇಲ್ಲ ಬಿಡು’ ಎನ್ನುತ್ತಾ ಹೊರಟು ನಿಂತೆ. 

‘ಎಲ್ಲಿಗೆ ಹೊರಟ್ರಿ?’

‘ಕವಿಗೋಷ್ಠಿಗೆ’.

‘ಯಾವ ಸಮುದಾಯ ಭವನದಲ್ಲಿದೆರೀ ಕವಿಗೋಷ್ಠಿ?’

‘ನಮ್ ಪಾರ್ಟಿ ಆಫೀಸ್‌ನಲ್ಲಿದೆಯಮ್ಮ. ಬೇಗ ಹೊರಡಬೇಕು, ಇಲ್ಲದಿದ್ದರೆ ಎಮ್ಮೆಲ್ಲೆ, ಎಮ್ಮೆಲ್ಸಿ, ಪಾರ್ಟಿ ಲೀಡರ್ಸ್, ಕಾರ್ಯಕರ್ತರೆಲ್ಲ ಜಾಗ ಹಿಡ್ಕೊಂಡ್‌ಬಿಡ್ತಾರೆ’ ಸರಸರನೆ ಹೊರಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.