ADVERTISEMENT

ಚುರುಮುರಿ: ಜಾಹೀರಾತು ಕವಿ! 

ಗುರು ಪಿ.ಎಸ್‌
Published 13 ಅಕ್ಟೋಬರ್ 2024, 23:54 IST
Last Updated 13 ಅಕ್ಟೋಬರ್ 2024, 23:54 IST
   

ಜುಬ್ಬಾ, ಪೈಜಾಮ ಹಾಕಿಕೊಂಡು, ಜೋಳಿಗೆ
ಯಂಥ ಬ್ಯಾಗು ನೇತು ಹಾಕಿಕೊಂಡು ಎದುರು ಬಂದು ನಿಂತ ಮುದ್ದಣ್ಣ. ‘ಏನ್ ಮುದ್ದಣ್ಣ ಇದು ಹೊಸ ಅವತಾರ! ಥೇಟ್ ಸಾಹಿತಿಯಂತೆ
ಕಾಣ್ತಿದ್ದೀಯಲ್ಲ’ ಅಚ್ಚರಿಯಿಂದ ಕೇಳಿದ ವಿಜಿ. 

‘ಸಾಹಿತಿಯಂತೆ ಅಲ್ಲ, ಸಾಹಿತಿಯೇ’ ಹೆಮ್ಮೆಯಿಂದ ಹೇಳಿದ ಮುದ್ದಣ್ಣ. 

‘ಈಗ ಎಲ್ಲಿಗೆ ಪಯಣ?’ 

ADVERTISEMENT

‘ಚಾಮರಾಜಪೇಟೆಯಲ್ಲಿರೋ ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ, ಅಧ್ಯಕ್ಷರ ಹತ್ತಿರ ಸ್ವಲ್ಪ ಕೆಲಸ ಇದೆ’. 

‘ಏನ್ ಕೆಲಸವಪ್ಪ, ಅದೂ ಅವರ ಹತ್ತಿರ...’ 

‘ಮಂಡ್ಯದಲ್ಲಿ ನಡೀತಿರೋ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಅಧ್ಯಕ್ಷರನ್ನಾಗಿ ಮಾಡಿ ಅಂತ ಹೇಳಬೇಕಾಗಿದೆ’.

ಮುದ್ದಣ್ಣನನ್ನ ಮೇಲಿನಿಂದ ಕೆಳಗಿನವರೆಗೆ ನೋಡಿದ ವಿಜಿ, ಕೆಟ್ಟ ನಗುವನ್ನು ಮನದಲ್ಲೇ ತಡೆದುಕೊಂಡು ಹೇಳಿದ, ‘ಸಾಹಿತ್ಯಕ್ಕೂ, ನಿನಗೂ ಏನಣ್ಣ ಸಂಬಂಧ?’ 

‘ಸಮ್ಮೇಳನದ ಅಧ್ಯಕ್ಷರಾಗೋಕೆ ಸಾಹಿತಿಗಳೇ ಆಗಿರಬೇಕು ಅಂತೇನಿಲ್ಲ, ಯಾರಾದರೂ ಆಗಬಹುದು ಅಂತ ಕಸಾಪ ಅಧ್ಯಕ್ಷರೇ ಹೇಳಿಲ್ವ’.

‘ಹಾಗಾದರೆ, ಈಗ ಯಾವ ಕೆಟಗರಿ ಅಡಿ ಬರುವ ಅಧ್ಯಕ್ಷ ನೀನು?’ 

‘ಯಾರಾದರೂ ಆಗಿ ಅಂತ ಹೇಳಿಬಿಟ್ರೆ ಆಗಿಬಿಡೋಕಾಗುತ್ತಾ, ನಮಗೂ ಆತ್ಮಸಾಕ್ಷಿ ಬೇಡವಾ? ಅದಕ್ಕೆ ನಾನೂ ಸ್ವಲ್ಪ ಸಾಹಿತ್ಯ ಕೃಷಿ ಮಾಡಿದೀನಿ. ಮೊನ್ನೆ, ದಸರಾಗೆ ಸರ್ಕಾರದವರು ಕೊಟ್ಟ ಜಾಹೀರಾತು ಬರೆದಿದ್ದು ನಾನೇ!’ 

‘ನೀನಾ, ಅದರಲ್ಲೇನಿತ್ತು ಸಾಹಿತ್ಯ?’ 

‘ಒಬ್ಬ ಓದುಗನಿಗಿರಬೇಕಾದ ಒಳಗಣ್ಣು ನಿನಗಿಲ್ಲವೇ ಇಲ್ಲ ನೋಡು. ನಮ್ಮ ವೈಯಕ್ತಿಕ ತೊಳಲಾಟವನ್ನು ಸಾರ್ವಜನಿಕವಾಗಿ ಹೇಗೆ ಹೇಳಬೇಕು, ಪರೋಕ್ಷವಾಗಿ ಯಾರಿಗೆ ಚುಚ್ಚಬೇಕು, ಪ್ರತ್ಯಕ್ಷವಾಗಿ ಯಾರಿಗೆ ವಿಷ್‌ ಮಾಡಬೇಕು ಅನ್ನೋ ಎಲ್ಲ ಭಾವನೆಗಳೂ ಅದರಲ್ಲಿ ಅಡಗಿರಲಿಲ್ವ?’ 

‘ಓಹೋ, ಹಾಗೆ... ಅದು ಸರಿ, ಸಾಹಿತಿಗಳಲ್ಲಿ ನವ್ಯ, ನವೋದಯ, ಬಂಡಾಯ ಕವಿ ಅಂತೆಲ್ಲ ಇರ್ತಾರೆ. ಈಗ ನೀನ್ಯಾವ ಕವಿ ಮಾರಾಯ?’ 

‘ಜಾಹೀರಾತು ಕವಿ!’ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.