‘ನೋಡ್ರೀ, ಈ 21ರ ಸ್ಪೆಷಲ್ ವಿಷ್ಯಾನ! 2021ನೇ ಇಸವೀಲಿ, 21 ವರ್ಷಗಳಾದ್ಮೇಲೆ, ನಮ್ಮ ದೇಶದ 21 ವರ್ಷದ ಯುವತಿ ಹರ್ನಾಜ್ ಕೌರ್ ಸಂಧು ‘ಭುವನ ಸುಂದರಿ’ ಆದರಲ್ರೀ. ರಿಯಲಿ ಗ್ರೇಟ್! ಇನ್ಮೇಲೆ ನೀವು ನನ್ನನ್ನ ಸಣಕಲು, ಪೀಚಲು ಅನ್ನೋ ಹಾಗಿಲ್ಲ’ ಎಂದ ಶ್ರೀಮತಿ ಬೆಳ್ಳಂಬೆಳಗ್ಗೆ ಮೋಹಕ ನಗೆ ಬೀರಿದಳು.
‘ಯಾಕೆ, ಡಯಟಿಂಗ್ ಬಿಟ್ಟು ದಪ್ಪಗಾಗೋಣ ಅಂತಿದೀಯಾ?’ ಎಂದೆ.
‘ಹರ್ನಾಜ್, ಓದುವಾಗ ಸಹಪಾಠಿಗಳಿಂದ ಸಣಕಲು ಎಂದು ಟೀಕೆಗೊಳಗಾಗಿದ್ರಂತೆ!’
‘ಅವ್ರು ಹೆಣ್ಮಕ್ಕಳಿಗೆ ಏನು ಸಲಹೆ ಕೊಟ್ರು ಗೊತ್ತಾ? ನೀವು ನಿಮ್ಮನ್ನ ಮತ್ತೊಬ್ರಿಗೆ ಹೋಲಿಸಿ ಕೊಳ್ಳಬಾರದು ಅಂತ. ಇನ್ಮೇಲಾದ್ರೂ ನೀನು ನೆರೆಯವ್ರ ಕಾರು, ಬಂಗ್ಲೆ, ಒಡವೆ-ವಸ್ತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದನ್ನ ನಿಲ್ಲಿಸು’.
‘ನಾಳೆ ನಿಮ್ಮ ಆಫೀಸ್ ಅಟೆಂಡರ್ ಹೊಸ ಮನೆ ಗೃಹಪ್ರವೇಶ ಅಂದ್ರಿ... ನಾವು ಮನೆ ಕಟ್ಟಿಸೋದು ಯಾವಾಗ?’
‘ನಮ್ಮ ಆಫೀಸು ಹೌಸಿಂಗ್ ಸೊಸೈಟೀಲಿ ಷೇರು ಹಾಕೋಣಾಂತಿದೀನಿ. ಕಂತು ತುಂಬಿ ನಂಗೆ ಸೈಟು ಅಲಾಟ್ ಆಗೋವಷ್ಟರಲ್ಲಿ ಮನೆ ನಿರ್ಮಾಣ ವಸ್ತುಗಳ ಬೆಲೆಯನ್ನ ನಮ್ಮ ಮೋದೀಜಿ ಖಂಡಿತಾ ಇಳಿಸ್ತಾರೆ. ಆಗ ಕಟ್ಟಿಸೋಣ’.
‘ಹಾಗಾದ್ರೆ ಈ ಜನ್ಮದಲ್ಲಿ ನಂಗೆ ಸ್ವಂತ ಮನೇಲಿರೋ ಭಾಗ್ಯ ಬಂದಂತೆಯೇ!’
‘ಹಂಗ್ಯಾಕೆ ಹತಾಶಳಾಗ್ತೀಯ? ಹರ್ನಾಜ್ ಸಂದೇಶ ಪಾಲಿಸು’.
‘ಅವ್ರು ಹೇಳಿದ ‘ಚಕ್ ದೇ ಫತ್ತೇ ಇಂಡಿಯಾ’ ಎಂಬ ಮಾತು ನನಗೆ ಬಹಳ ಹಿಡಿಸಿತು’.
‘ಅಂದ್ರೆ?!’
‘ಬಡಿಗೆ ಹಿಡಿಯಿರಿ, ಬಿಡದೆ ಆಕ್ರಮಿಸೀಂತ!... ಬಂದೆ ತಡೀರಿ’ ಎಂದ ಮಡದಿ ತನ್ನ ಆಯುಧಾಗಾರದೊಳಕ್ಕೆ ಹೋಗಿ ಸಶಸ್ತ್ರಸಮೇತ ಪ್ರತ್ಯಕ್ಷ!
ಅಧೀರನಾದ ನಾನು ಬೇಡಿಕೊಂಡೆ (ನಾಟಕೀಯವಾಗಿ)- ‘ದೇವಿ ಶಾಂತಳಾಗು, ಆಜ್ಞೆ ಪಾಲಿಸಲು ಸಿದ್ಧ, ಆದೇಶವಾಗಲಿ’.
‘ಸರ್ಕಾರಿ ನೌಕರರಿಗೆ ಸರ್ಕಾರ ಇಪ್ಪತ್ತೈದು ಸಾವಿರಕ್ಕೆ ಹೆಚ್ಚಿಸಿರುವ ಹಬ್ಬದ ಮುಂಗಡ ಮುಕ್ಕಾಗದೆ ಮನೆ ಸೇರಲಿ’.
‘ಅಪ್ಪಣೆ’ ಎಂದ ನಾನು ಜಾಗ ಖಾಲಿ ಮಾಡಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.