ADVERTISEMENT

ಚುರುಮುರಿ: ಆಯವೋ ವ್ಯಯವೋ!

ಚಂದ್ರಕಾಂತ ವಡ್ಡು
Published 26 ಜುಲೈ 2024, 22:54 IST
Last Updated 26 ಜುಲೈ 2024, 22:54 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ನೀವು ಹೆಸರಿಗಷ್ಟೇ ಸಂಪಾದಕ, ನಿಮ್ಮ ಸಂಪಾದನೆ ನಂಬಿಕೊಂಡಿದ್ದರೆ ನಮ್ಮ ಜೀವನ ರದ್ದಿಪೇಪರ್ ಆಗುತ್ತಿತ್ತು. ಏನೋ ಮಾವನವರ ಪಿಂಚಣಿ ಬರುತ್ತೇಂತ ಬದುಕಿದ್ದೇವೆ…’ ಬೆಳಗಿನ ಸಮಾಚಾರ ಓದತೊಡಗಿದಳು ತಿಂಗಳೇಶನ ಪೂರ್ಣಾಂಗಿ!

‘ಆಯ್ತು ಮಾರಾಯ್ತಿ… ಜೀವನವನ್ನು ಮುಂಜಾವಿನ ತಾಜಾ ಪೇಪರ್ ಥರ ಮಾಡುವುದು ಹೇಗೆ ಹೇಳುವಂತವಳಾಗು’.

ADVERTISEMENT

‘ನಿಮಗಿಂತ ನಿಮ್ಮ ಕಚೇರಿಯ ಜವಾನನೇ ಮೇಲು. ಆತ ಎಷ್ಟೊಂದು ಉಪಸಂಪಾದನೆ ಮಾಡಿಕೊಂಡು ಅದಾಯ ತೆರಿಗೆ ಕಟ್ಟುವಷ್ಟು ಬೆಳೆದಿದ್ದಾನೆ’.

‘ಅಂದ್ರೆ… ನಾನು ‘ಉಪ-ಸಂಪಾದಕ’ ಆಗಬೇಕು ಅನ್ನೋದೇ ನಿನ್ನಾಸೆ’.

‘ಏನಾದ್ರೂ ಆಗಿ, ಶೂನ್ಯ ಸಂಪಾದಕ ಮಾತ್ರ ಆಗೋದು ಬೇಡ’.

‘ಹೇರಳ ಸಂಪಾದನೆ ಮಾಡಿದರೆ ಆದಾಯ ತೆರಿಗೆ ಲೆಕ್ಕ ಹಾಕುವುದು ರಗಳೆ ಕಣೇ… ಸುಮ್ಮನೆ ಆದಾಯ ಮಿತಿಯೊಳಗೆ ಇರುವುದು ನೆಮ್ಮದಿ’.

‘ಹನೀಫಣ್ಣ ಲೆಕ್ಕ ಹಾಕಿದ್ದಾರಲ್ಲ, ಆದಾಯ ಗಳಿಕೆಗಿಂತ ಹಣ ಖರ್ಚು ಮಾಡಿದಾಗ ಹೆಚ್ಚು ತೆರಿಗೆ ಬೀಳೋದು. ನೂರು ರೂಪಾಯಿ ಖರ್ಚಿಗೆ 63 ರೂಪಾಯಿ ತೆರಿಗೆ ನಿರ್ಮಲಕ್ಕನ ಖಾತೆಗೆ ಜಮಾ ಆಗುತ್ತದಂತೆ. ನೀವು ತೆರಿಗೆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಆದಾಯದ ಬಗ್ಗೆ ಯೋಚಿಸಿ’. 

‘ನಿನ್ನ ಮಾತು ಯಾವತ್ತೂ ‘ಆಯ’ ತಪ್ಪುವುದಿಲ್ಲ ಬಿಡು. ನಿನ್ನಂಥವರು ಸರ್ಕಾರದ ‘ಆಯ’ಕಟ್ಟಿನ ಜಾಗದಲ್ಲಿ ಇದ್ದರೆ ಗ್ಯಾರಂಟಿ ಜೊತೆಗೇನೇ ಶಾಸಕರ ಅನುದಾನದ ಬರ ಕೂಡ ನೀಗಿಸಬಹುದಿತ್ತು’.

‘ಹೌದಲ್ಲವೇ ಮತ್ತೆ, ಅನುದಾನವಿಲ್ಲದೆ ಶಾಸಕರ ಕ್ಷೇತ್ರ ಅಭಿವೃದ್ಧಿ ಆಗುವುದಾದರೂ ಹೇಗೆ, ಅವರು ಚುನಾವಣೆಗೆ ಮಾಡಿದ ಸಾಲ ತೀರಿಸುವುದಾದರೂ ಹೇಗೆ?’

‘ಅನುದಾನದಿಂದ ಸರ್ಕಾರಕ್ಕೂ ಸಕತ್ ಆದಾಯ! ‘ವ್ಯಯ’ ಎಲ್ಲಾ ‘ಆಯ’ ಎಂದು ಹಣಕಾಸು ಇಲಾಖೆ ಸಂಭ್ರಮಿಸಬಹುದು’.

‘ಅನುಮಾನವೇ ಇಲ್ಲ ಬಿಡಿ. ಅಭಿವೃದ್ಧಿಗೆ ಅನುದಾನ ಸಿಕ್ಕಷ್ಟೂ ಶಾಸಕರ ಕುಟುಂಬಸ್ಥರ ‘ವ್ಯಯ’ ಸಾಮರ್ಥ್ಯಕ್ಕೆ ಶಕ್ತಿ, ಸರ್ಕಾರಕ್ಕೆ ‘ಆಯೋಮಯ’ ಸ್ಥಿತಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.