ADVERTISEMENT

ಚುರುಮುರಿ | ನೆಂದಕಾಳೂರು

ಮಣ್ಣೆ ರಾಜು
Published 23 ಅಕ್ಟೋಬರ್ 2024, 0:30 IST
Last Updated 23 ಅಕ್ಟೋಬರ್ 2024, 0:30 IST
   

‘ಎಡೆಬಿಡದೆ ಸುರಿಯುವ ಮಳೆಯಿಂದ ಬೆಂಗಳೂರು ನೆಂದು, ನೊಂದುಬಿಟ್ಟಿದೆ ಕಣ್ರೀ, ಪಾಪ...’ ಸುಮಿ ಸಂಕಟಪಟ್ಟಳು.

‘ಬೆಂಗಳೂರು ಬೇಸಿಗೆಯಲ್ಲಿ ಬೆವರುತ್ತದೆ, ಚಳಿಗಾಲದಲ್ಲಿ ನಡುಗುತ್ತದೆ, ಮಳೆಗಾಲದಲ್ಲಿ ನೆಂದು ತೊಪ್ಪೆಯಾಗುತ್ತದೆ. ಕಾಲಕಾಲದ ಕಷ್ಟವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಬೆಂಗಳೂರು ಬೆಳೆಸಿಕೊಳ್ಳಬೇಕು’ ಅಂದ ಶಂಕ್ರಿ.

‘ರಾಜಧಾನಿಯೇ ಮಳೆಯಲ್ಲಿ ನೆಂದು, ನೊಂದು, ನರಳಿದರೆ ರಾಜ್ಯ ನೆಮ್ಮದಿಯಾಗಿರಲು ಸಾಧ್ಯವೆ? ಬೆಂಗಳೂರಿನ ಜಲಬಾಧೆಗೆ ಚಿಕಿತ್ಸೆ ನೀಡಿ, ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು. ನಗರ ಮಹಾಪೂರದ ಫಜೀತಿಯಿಂದ ಕಾಪಾಡಬೇಕು’.

ADVERTISEMENT

‘ಹಾಗಂತ ಇಡೀ ಊರಿಗೆ ಕೊಡೆ ಹಿಡಿಯಲಾಗುತ್ತಾ? ಬಕೆಟ್ ಹಿಡಿದು ಮಳೆಯನ್ನು ನಿಯಂತ್ರಿಸಲಾಗುತ್ತಾ?’

‘ಹಿಂದಿನವರು ಕೆರೆ ಕಟ್ಟಿ ಆಮೇಲೆ ಊರು ಕಟ್ಟುತ್ತಿದ್ದರಂತೆ. ಈಗಿನ ನಾವು ಕೆರೆ, ರಾಜ
ಕಾಲುವೆ ಮುಚ್ಚಿ ಕಟ್ಟಡ ಕಟ್ಟುತ್ತಿದ್ದೇವೆ. ‘ಕಟ್ಟುಪಾಡು’ಗಳನ್ನು ಬದಲಾಯಿಸಿಕೊಂಡು ನಾವು ಬೆಂಗಳೂರು ಬಾಧೆಯನ್ನು ನಿವಾರಿಸಬೇಕು’.

‘ಇಷ್ಟೊಂದು ಮಳೆ ಸುರಿದರೂ ಬೆಂಗಳೂರಿನ ಕುಡಿಯುವ ನೀರಿನ ದಾಹ ಇಂಗಿಲ್ಲ’.

‘ಇಂಗಿಸುವುದು ಸುಲಭವಲ್ಲ. ಮಳೆನೀರನ್ನು ಕುಡಿದು ಕೂಡಿಡುವ ಶಕ್ತಿ ಬೆಂಗಳೂರಿಗಿಲ್ಲ, ಹೀಗಾಗಿ ಗುಟುಕು ನೀರಿಗೂ ಕಾವೇರಿ ನೀರನ್ನು ನಂಬಿಕೊಳ್ಳುವಂತಾಗಿದೆ’.

‘ಬೆಂಗಳೂರು ಬೆಳೆದಂತೆ ಕಾವೇರಿಯ ನೀರಿನ ಪ್ರಮಾಣ ಹೆಚ್ಚುವುದಿಲ್ಲ. ನೀರು ಕೊಡಲು ಕಾವೇರಿಗೂ ಕಷ್ಟವಾಗುತ್ತದೆ’.

‘ಅಷ್ಟೇ ಅಲ್ಲ, ಬೆಂಗಳೂರಿಗೆ ನೀರು ಕೊಡುವ ಕಾವೇರಿಗೆ ಬೆಂಗಳೂರು ಏನು ಕೊಟ್ಟಿದೆ ಎಂದು ಯಾರೂ ಪ್ರಶ್ನೆ ಮಾಡಬಾರದು’.

‘ಹಾಗಾಗಬಾರದು, ಕುಡಿಯುವ ನೀರು ಸರಬರಾಜಿನ ಜಲಮಂಡಳಿಯಂತೆ ಸರ್ಕಾರ ಮಳೆಮಂಡಳಿ ಸ್ಥಾಪಿಸಿ ಬೆಂಗಳೂರಿನ ಮಳೆ ನೀರನ್ನು ಕಾವೇರಿಗೆ ಹರಿಸುವ ಯೋಜನೆ ರೂಪಿಸಬೇಕು. ನೀರನ್ನು ಕೊಟ್ಟು-ಪಡೆಯುವ ಸಹಕಾರಿ ವ್ಯವಹಾರದಿಂದ ಕಾವೇರಿಗೂ ಖುಷಿ ಆಗಬಹುದು’ ಅಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.