ADVERTISEMENT

ಚುರುಮುರಿ: ಬೋರ್ಡ್ ಭವಿಷ್ಯ

ಚುರುಮುರಿ: ಬೋರ್ಡ್ ಭವಿಷ್ಯ

ಸಿ.ಎನ್.ರಾಜು
Published 8 ಜನವರಿ 2024, 19:24 IST
Last Updated 8 ಜನವರಿ 2024, 19:24 IST
<div class="paragraphs"><p>ಚುರುಮುರಿ: ಬೋರ್ಡ್ ಭವಿಷ್ಯ.</p></div>

ಚುರುಮುರಿ: ಬೋರ್ಡ್ ಭವಿಷ್ಯ.

   

ಅನು, ಗಿರಿ ಸಂಕಟ ಹೇಳಿಕೊಂಡು ಫ್ಯಾಮಿಲಿ ಜ್ಯೋತಿಷಿ ಬಳಿಗೆ ಬಂದರು.

‘ಗುರೂಜಿ, ನನ್ನ ಗಂಡನ ಜಾತಕದಲ್ಲಿ ಬೋರ್ಡ್ ಚೇರ್ಮನ್ ಆಗುವ ಯೋಗ ಇದೆಯೇ ನೋಡಿ...’ ಎಂದಳು ಅನು.

ADVERTISEMENT

‘ಹೈಕಮಾಂಡ್‍ಗೆ ಕಳಿಸಿರುವ ನಿಗಮ, ಮಂಡಳಿ ನೇಮಕಾತಿ ಶಿಫಾರಸು ಪಟ್ಟಿಯಲ್ಲಿ ನನ್ನ ಹೆಸರಿದೆಯೇ ಅಂತ ಚೆಕ್ ಮಾಡಿ ಗುರೂಜಿ’ ಗಿರಿ ಕೇಳಿಕೊಂಡ.

ಜಾತಕ ನೋಡಿ, ಕೂಡಿ, ಕಳೆದು, ಗುಣಿಸಿ, ಭಾಗಿಸಿದ ಜ್ಯೋತಿಷಿ, ‘ಯೋಗವೂ ಇದೆ, ಪಟ್ಟಿಯಲ್ಲಿ ಹೆಸರೂ ಇದೆ. ಆದರೆ ಹೈಕಮಾಂಡ್‍ಗೆ ಪಾರ್ಲಿಮೆಂಟ್ ಕಾಟ ಇರುವುದರಿಂದ ಪಟ್ಟಿ ಬಿಡುಗಡೆ ವಿಳಂಬ ಆಗ್ತಿದೆ’ ಎಂದರು.

‘ಸಂಕ್ರಾಂತಿ ವೇಳೆಗೆ ನಿಗಮ, ಮಂಡಳಿಗಳಿಗೆ ನೇಮಕವಾಗುತ್ತದೆ, ಅಧ್ಯಕ್ಷರಾದವರು ಆನಂದವಾಗಿ ಎಳ್ಳು ಬೆಲ್ಲ ಹಂಚಬಹುದು ಅಂತ ದೊಡ್ಡ ನಾಯಕರು ಹೇಳಿದ್ದಾರೆ ಗುರೂಜಿ’.

‘ಆಗುತ್ತೆ, ಸಂಕ್ರಾಂತಿಗೆ ಆಗದಿದ್ದರೆ ಶಿವರಾತ್ರಿ ಕಳೆದು ಯುಗಾದಿ ವೇಳೆಗೆ ನೇಮಕವಾಗಿ ನೀವು ಬೇವು ಬೆಲ್ಲ ಹಂಚಬಹುದು’.

‘ಇದೇನು ಗುರೂಜಿ, ಬೋರ್ಡ್ ಚೇರ್ಮನ್ ಅನ್ನೋದು ಹಬ್ಬದ ಆಫರ್ ಅನ್ನುವಂತೆ ಹೇಳ್ತಿದ್ದೀರಿ?!’ ಎಂದಳು ಅನು.

‘ಹೌದಮ್ಮ, ಹೈಕಮಾಂಡ್ ಕೃಪಾಕಟಾಕ್ಷ ದೊರೆಯುವವರೆಗೂ ಕಾಯಲೇಬೇಕು’.

‘ಹೋಮ, ಹವನ, ಪೂಜೆಪುನಸ್ಕಾರದಿಂದ ಹೈಕಮಾಂಡನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲವೇ ಗುರೂಜಿ?’ ಕೇಳಿದ ಗಿರಿ.

‘ಪೂಜೆಗೀಜೆಗೆ ಹೈಕಮಾಂಡ್ ಜಗ್ಗುವುದಿಲ್ಲ. ‘ನನ್ನ ಬಂಧಿಸಿ’ ಅಂತ ಬೋರ್ಡ್ ಇಟ್ಟುಕೊಂಡು ಕೆಲವರು ಹೋರಾಟ ಮಾಡಿದಂತೆ, ‘ನನ್ನನ್ನು ಗುರುತಿಸಿ’ ಎಂಬ ಬೋರ್ಡ್ ಪ್ರದರ್ಶಿಸಿ ಹೈಕಮಾಂಡ್ ಗಮನ ಸೆಳೆದರೆ ಫಲ ಸಿಗಬಹುದು’.

‘ಈ ಬಾರಿ ಬೋರ್ಡ್ ಚೇರ್ಮನ್ ಸ್ಥಾನ ಸಿಗದಿದ್ದರೆ ನಾನು ರಾಜಕಾರಣ ತ್ಯಜಿಸ್ತೀನಿ. ನಿಮ್ಮ ಶಿಷ್ಯನಾಗಿ ಜ್ಯೋತಿಷ ಕಲಿತು, ರಾಜಕಾರಣಿಗಳೇ ನನ್ನ ಬಳಿಗೆ ಬಂದು ತಮ್ಮ ಭವಿಷ್ಯ ಕೇಳುವಂತಹ ಪ್ರಭಾವಿ ಜ್ಯೋತಿಷಿಯಾಗುತ್ತೇನೆ’ ಎಂದ ಗಿರಿ. ಹೌದೆಂದು ಅನು ತಲೆಯಾಡಿಸಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.