‘ನೀನಾರಿಗಾದೆಯೋ... ಎಲೆ ಮಾನವಾ... ಹರಿ, ಹರಿ ಗೋವು ನಾನು’.
‘ಏನ್ರೀ? ನಾಲ್ಕನೇ ಕ್ಲಾಸಿನಲ್ಲಿ ಓದಿದ ಪದ್ಯ ಈಗ್ಯಾಕೆ ಗುನುಗುನಿಸ್ತಾ ಇದ್ದೀರಿ?’
‘ಇಲ್ ನೋಡಮ್ಮ, ವಿದೇಶಗಳಲ್ಲಿ ಹಸುವನ್ನು ತಬ್ಬಿಕೊಳ್ಳಲು ಕ್ಯೂ!’
‘ಎಲ್ಲಿ?’
‘ಮನುಷ್ಯ ಸ್ವಲ್ಪ ಸಮಯ ಪ್ರಾಣಿಗಳೊಂದಿಗೆ ಆತ್ಮೀಯವಾಗಿ, ಸಲಿಗೆಯಿಂದ ಕಳೆಯುವುದ ರಿಂದ ಅವನ ಮಾನಸಿಕ ಒತ್ತಡ ಕಡಿಮೆಯಾ ಗುತ್ತೆ. ಲಾಸ್ ಏಂಜಲೀಸ್‌ನ ಪ್ರಾಣಿಪ್ರಿಯೆ ಎಲ್ಲಿ-ಲೇಕ್ಸ್ ಗೋವುಗಳೊಂದಿಗೆ ಸಮಯ ಕಳೆಯುತ್ತಾ ಮಾನಸಿಕ ಒತ್ತಡ ಪರಿಹಾರಕ್ಕಾಗಿ ಒಂದು ಕೇಂದ್ರವನ್ನೇ ತೆರೆದಿದ್ದಾಳಂತೆ’.
‘ಅಂತೂ ಹಸುಗಳಿಗೀಗ ಶುಕ್ರದೆಸೆ’.
‘ಒಂದು ಗಂಟೆ ಹಸುವಿನ ಜೊತೆ ಕಾಲಕಳೆಯೋಕೆ ಇನ್ನೂರು ಡಾಲರ್ ಕೊಡ ಬೇಕಂತೆ! ಈಗ ಅಲ್ಲಿ ಹಸುಗಳಿಗೆ ತುಂಬಾ ಬೇಡಿಕೆಯಂತೆ’.
‘ಅಷ್ಟೇ ಅಲ್ಲರೀ, ಹೆಂಗಸರೇ ಹೆಚ್ಚಿನ ಸಂಖ್ಯೆಯಲ್ಲಿ ಇಂಥ ಕೇಂದ್ರಗಳಿಗೆ ಬರ್ತಿದಾರಂತೆ. ಮುಂದಿನ ವರ್ಷದ ಜುಲೈವರೆಗೂ ಬುಕಿಂಗ್ ಫುಲ್ ಅಂತೆ. ನ್ಯೂಯಾರ್ಕ್‌ನ ಪ್ರಸಿದ್ಧ ಮೌಂಟನ್ ಹೌಸ್ ಫಾರ್ಮ್‌ಗೆ ಈಗ ಭಾರೀ ಡಿಮ್ಯಾಂಡ್, ಹಸುಗಳಿಗೆ ಎಲ್ಲಿಲ್ಲದ ಬೇಡಿಕೆ’.
‘ಇಂಥಾ ಕೇಂದ್ರ ನಡೆಸೋರಿಗೆ ಹಸು ನಿಜವಾದ ಕಾಮಧೇನುವೇ ಸರಿ. ಬಂಪರ್ ದುಡ್ಡು, ಭರ್ಜರಿ ಆದಾಯ. ನಮ್ಮ ದೇಶದ ಹಸುಗಳಿಗೂ ಈ ಭಾಗ್ಯ ಬೇಗ ಬರಲಿ, ಅವೂ ಇಂಡಿಗೋ ವಿಮಾನ ಏರಿ ಷಿಕ್ಯಾಗೋ, ನ್ಯೂಯಾರ್ಕ್‌ಗೆ ಹಾರಿ, ಡಾಲರ್ ಸಂಪಾದನೆ ಮಾಡಲಿ. ಕೌ ಸಾಕಿದವರಿಗೆ ‘ಕೌ ಭಾಗ್ಯ’ ಒದಗಿಬರಲಿ!’
‘ಪಾಪ, ನಮ್ಮ ಹಸುಗಳು ಮತ್ತು ಹಸುಳೆಗಳು ಬಡಪಾಯಿಗಳು. ಅವುಗಳಿಗೆಲ್ಲಿ ಈ ಭಾಗ್ಯ?!’
‘ಹಾಗನ್ನಬೇಡ. ನಮ್ಮ ದೇಶದ ಹಳ್ಳಿಗಳಲ್ಲಿ ಚಿಕ್ಕಂದಿನಲ್ಲೇ ದನ ಕಾಯೋದು, ಮೈತೊಳೆದು ಸವರೋದು, ‘ಎಮ್ಮೇ ನಿನಗೆ ಸಾಟಿಯಿಲ್ಲ’ ಅಂತ ತಬ್ಬಿಕೊಂಡು ಸವಾರಿ ಮಾಡೋದ್ರಿಂದ ಮಾನಸಿಕ ಒತ್ತಡ ಬಾಲ್ಯದಲ್ಲೇ ಮಾಯವಾಗಿ ಬಿಟ್ಟಿರುತ್ತೆ. ನಮಗೇನು ಇದೆಲ್ಲ ಸಮಸ್ಯೆನೇ ಅಲ್ಲ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.