ADVERTISEMENT

ಚುರುಮುರಿ: ನನ್ನ ಬಜೆಟ್...

ಚುರುಮುರಿ

ಪ್ರಜಾವಾಣಿ ವಿಶೇಷ
Published 18 ಫೆಬ್ರುವರಿ 2024, 19:43 IST
Last Updated 18 ಫೆಬ್ರುವರಿ 2024, 19:43 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

ಸಂಸಾರದ ಪ್ರಿಯ ಸದಸ್ಯರೆ, ನಮ್ಮ ಸಂಸಾರದ ಆರ್ಥಿಕ ಪರಿಸ್ಥಿತಿ ಎಂದಿನಂತೆ ತೀವ್ರವಾದ ಸಂಕಟವನ್ನು ಎದುರಿಸುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಪರಿಸ್ಥಿತಿ ಸುಧಾರಿಸಿಯೇ ಇಲ್ಲ. ಆದಾಯ ಅಷ್ಟೇ ಇದೆ, ಆದರೆ ಖರ್ಚು ಏರುತ್ತಲೇ ಇದೆ. ಹೀಗಾಗಿ, ಈ ವರ್ಷ ಸಹ ಖರ್ಚುವೆಚ್ಚ ಸರಿದೂಗಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಲೇ ಇದೆ.

ಹೊಸ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದು ಆದಾಯ ಸುಮಾರಾಗಿ ಸಾಕಷ್ಟು ಏರಿ ಈ ವರ್ಷ ಖೋತಾರಹಿತ ಬಜೆಟ್ ಮಂಡಿಸಿ, ಸಂಸಾರದ ಎಲ್ಲ ವಿಭಾಗಗಳಿಗೂ ಹೆಚ್ಚೆಚ್ಚು ಅನುದಾನ ಮಂಜೂರು ಮಾಡಿ, ನಿಮ್ಮೆಲ್ಲರನ್ನೂ ಸುಪ್ರೀತಗೊಳಿಸಲು ಸಾಧ್ಯ ಎಂದು ಭಾವಿಸಿದ್ದೆ. ಆದರೆ ಅದು ಹಾಗಾಗುವಂತೆ ಕಾಣುತ್ತಿಲ್ಲ. ವಾರ್ಷಿಕ ಇನ್‍ಕ್ರಿಮೆಂಟ್‍ನಿಂದ ಬರುವ ಹಣವಷ್ಟೇ ಈ ವರ್ಷದ ಹೆಚ್ಚುವರಿ ಆದಾಯ. ಹಣದುಬ್ಬರ ವಿಪರೀತವಾಗುತ್ತಿರುವುದರಿಂದ ಆರ್ಥಿಕ ಶಿಸ್ತನ್ನು ಎಲ್ಲರೂ ಪಾಲಿಸಬೇಕಾಗಿದ್ದು, ನಿಮ್ಮೆಲ್ಲರ ಸಹಕಾರ ತೀರಾ ಅತ್ಯಗತ್ಯವಾಗಿದೆ.

ADVERTISEMENT

ಈ ವರ್ಷ ನಾನು ವಾಪಸ್ ಮಾಡಬೇಕಿದ್ದ ಎಲ್ಲ ಸಾಲಗಳ ಮರುಪಾವತಿಯನ್ನು ಮುಂದಕ್ಕೆ ಹಾಕಿದ್ದೇನೆ. ಇದಕ್ಕಾಗಿ ಸಾಲಿಗರ ಸಹಕಾರ ಕೋರುತ್ತಿದ್ದೇನೆ. ಅನವಶ್ಯಕ ಖರ್ಚುಗಳನ್ನು ತಪ್ಪಿಸಲು ಕೆಲವು ಕ್ರಮಗಳು ಅತ್ಯವಶ್ಯ. ಅತಿಥಿಗಳನ್ನು ಊಟಕ್ಕೆ ಎಬ್ಬಿಸದೆ ಕಾಫಿ ಅಥವಾ ಜ್ಯೂಸ್‍ನಿಂದ ಸತ್ಕರಿಸಿದರೆ ಗ್ಯಾಸ್ ಸಹ ಉಳಿತಾಯ ಮಾಡಬಹುದು. ಮದುವೆ ಮುಂಜಿ ಪೂಜೆಗಳನ್ನು ತಪ್ಪಿಸದೆ ಅಲ್ಲೇ ಊಟ ಮುಗಿಸಿ, ಬರುವಾಗ ತೆಂಗಿನಕಾಯಿ ತಾಂಬೂಲ ಕಡ್ಡಾಯವಾಗಿ ತರಬೇಕಿದೆ. ವಿದ್ಯುತ್ ಬಿಲ್ ರಿಯಾಯಿತಿಯ ಸಂಪೂರ್ಣ ಉಪಯೋಗ ಮಾಡಿಕೊಳ್ಳಬೇಕಿದೆ. ಸರಳ ಜೀವನವನ್ನು ಎಲ್ಲರೂ ಪಾಲಿಸಿದರೆ ಶೃಂಗಾರ ಸಾಮಗ್ರಿಗಳ ವೆಚ್ಚವನ್ನು ಉಳಿಸಲು ಸಾಧ್ಯ. ಪಾಕೆಟ್‌ಮನಿ ಹೆಚ್ಚಿಸಲು ಈ ವರ್ಷ ಸಾಧ್ಯವಿಲ್ಲ. ಇಂತಹ ಉಪಾಯಗಳಿಂದ ಎಲ್ಲರಿಗೂ ಕ್ಷೇಮ.

ಗಮನಿಸಿ: ಇದು ಜಸ್ಟ್‌ ಅಬವ್ ದಿ ಪಾವರ್ಟಿ ಲೈನ್‍ನಲ್ಲಿರುವ ಸಂಸಾರದ ಬಜೆಟ್ ಆಗಿದ್ದರೆ ಅದು ಕಾಕತಾಳೀಯವೂ ಆಕಸ್ಮಿಕವಾಗಿಯೂ ಆಗಿರದೆ ತೀರಾ ಸಹಜ ಎಂದೇ ಭಾವಿಸತಕ್ಕದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.