‘ನೂರು, ಸಾವಿರಗಳು ನಗುವಂತೆ ಕೋಟಿಗಳು ಸುಲಭವಾಗಿ ನಗುವುದಿಲ್ಲ ಅಲ್ವೇನ್ರೀ?’ ಅನು ಕೇಳಿದಳು.
‘ಹೌದು, ನೂರು, ಸಾವಿರದಂತೆ ಚಿಲ್ಲರೆ ನಗು ನಕ್ಕರೆ ಕೋಟಿಯ ಗತ್ತು, ಗಾತ್ರ, ಘನತೆಗೆ ಧಕ್ಕೆಯಾಗುತ್ತದೆ. ಕೋಟಿಗಳು ಬೇಕಾಬಿಟ್ಟಿ ನಗದೆ ಗಾಂಭೀರ್ಯ ಕಾಪಾಡಿಕೊಳ್ಳಬೇಕು’ ಅಂದ ಗಿರಿ.
‘ನೂರು, ಸಾವಿರಗಳಂತೆ ಜನಸಾಮಾನ್ಯರ ಜೊತೆ ಸಹಜವಾಗಿ ಬೆರೆಯಲು ಹೆದರುವ ಕೋಟಿ ಗಳು ವಿವಿಐಪಿಗಳಂತೆ ಅಂಗರಕ್ಷಕರ ರಕ್ಷಣೆ
ಯಲ್ಲಿರುತ್ತವೆ, ಕೋಟಿಗಳು ಮಹಾ ಪುಕ್ಕಲು!’
‘ಕೋಟಿಗಳ ಬಗ್ಗೆ ಹಗುರವಾಗಿ ಮಾತನಾಡ ಬೇಡ, ಅವಕ್ಕೆ ರಾಜಮರ್ಯಾದೆ ಇದೆ’.
‘ವ್ಯಾಪಾರ, ವ್ಯವಹಾರದಲ್ಲಿ ದುಡಿಯುವ ಶ್ರಮಜೀವಿ ಕೋಟಿಗಳಿಗೆ ಸಮಾಜದಲ್ಲಿ ಗೌರವವಿದೆ. ಆದರೆ ಎಲ್ಲವಕ್ಕೂ ಇಂಥಾ ಭಾಗ್ಯವಿಲ್ಲ. ಕೆಲವು ಕೋಟಿಗಳು ಕತ್ತಲೆ ಕೋಣೆಯಲ್ಲಿ, ಬೀಗ ಹಾಕಿದ ಪೆಟ್ಟಿಗೆಯಲ್ಲಿ ಬೆಳಕು, ಬದುಕು ಕಾಣದೆ ಸೆರೆಯಾಳಿನಂತೆ ನರಳುತ್ತಿವೆ, ಪಾಪ!...’
‘ಹೌದು, ಕೋಟಿ ವಿದ್ಯೆಗಿಂತ ಲೂಟಿ ವಿದ್ಯೆ ಮೇಲು ಎಂದುಕೊಂಡಿರುವ ಕೆಲವು ಲೂಟಿ ವಿದ್ಯಾ ಪಾರಂಗತರು ಸಿಕ್ಕಸಿಕ್ಕಲ್ಲಿ ಕೋಟಿಗಳನ್ನು ಸೆರೆಹಿಡಿದು ತಂದು ಬಂಧಿಸಿ ಇಟ್ಟುಕೊಳ್ಳುತ್ತಾರೆ. ಕೋಟಿಯ ಘನತೆಗೆ ಮಸಿ ಬಳಿದು ಕಪ್ಪುಹಣವೆಂಬ ಕಳಂಕ ಅಂಟಿಸುತ್ತಾರೆ’.
‘ಕಪ್ಪುಕೋಟಿ ಕೂಡಿಡುವುದು ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತೆ. ಯಾವಾಗ ಯಾವ ಗ್ರಹಚಾರ ವಕ್ಕರಿಸುವುದೋ ಎಂದು ಇಂತಹ ಕೋಟಿ ಕುಳಗಳು ಸುಖಶಾಂತಿ, ನಿದ್ರೆನೆಮ್ಮದಿ ಇಲ್ಲದೆ ಸದಾ ಆತಂಕದಲ್ಲಿರುತ್ತಾರೆ. ಆದರೂ ಕೋಟಿ ಕೂಡಿಸುವುದನ್ನು ಬಿಡುವುದಿಲ್ಲ’.
‘ಒತ್ತೆಯಾಳಾಗಿರುವ ಕೋಟಿಗಳ ಬಿಡುಗಡೆಗೆ ದೇವರೇ ಕರುಣೆ ತೋರಬೇಕು’.
‘ಕೋಟಿಯನ್ನು ಕೊರಗಿಸಿದವರ ಪಾಪದ ಕೊಡ ತುಂಬಿದಾಗ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ, ಕೋಟಿಗಳನ್ನು ಬಂಧಮುಕ್ತಗೊಳಿಸಿ ಬೆಳಕಿಗೆ ತರುತ್ತಾರೆ’.
‘ಕಪ್ಪುಕೋಟಿಗಳ ಕಷ್ಟ ಯಾರಿಗೂ ಬೇಡ. ಕತ್ತಲಿನಲ್ಲಿ ನರಳುತ್ತಿರುವ ಅದೆಷ್ಟು ಕೋಟಿಗಳು ಬೆಳಕಿಗೆ ಬರಲು ಹಾತೊರೆಯುತ್ತಿವೆಯೋ ಅಯ್ಯೋ ಪಾಪ!’ ಅನು ಸಂಕಟಪಟ್ಟಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.