ADVERTISEMENT

ಚುರುಮುರಿ: ನೀರಿಲ್ಲದ ಬಾವಿಯಲ್ಲಿ...

ಚುರುಮುರಿ

ಲಿಂಗರಾಜು ಡಿ.ಎಸ್
Published 11 ಡಿಸೆಂಬರ್ 2023, 19:20 IST
Last Updated 11 ಡಿಸೆಂಬರ್ 2023, 19:20 IST
ಚುರುಮುರಿ
ಚುರುಮುರಿ   

ನಾವೆಲ್ಲ ಸುವರ್ಣ ವಿಧಾನಸೌಧದ ಮುಂದೆ ನಿಂತುಗಂಡು ‘ಅಹಾ! ಯಂಗೈತೆ!’ ಅಂತ ಮಾತಾಡಿಕ್ಯತಿದ್ದೋ. ಅಸೆಂಬ್ಲಿ ಸುರುವಾಗಿ ಏಟೊತ್ತಾದ್ರೂ ಮಂತ್ರಿಗಳು, ಶಾಸಕರು ಬರಲೇ ಇಲ್ಲ.

‘ಎಲ್ಲೋದ್ರುಲಾ ಇವರೆಲ್ಲಾ? ಕೋಟಿ ಕಾರುಗಳು ಒಂದೂ ಕಾಣತಿಲ್ಲ. ನೆನ್ನೆ ಕಮಲದವು ಬೇಜಾರು ಮಾಡಿಕ್ಯಂದು ಅಧ್ಯಕ್ಸರ ಮುಂದೆ ಇರೋ ಬಾವಿಗೆ ಬಿದ್ದವಂತೆ. ಏಟು ಜನಕ್ಕೆ ಏಟು ಬಿತ್ತೋ ಗೊತ್ತಿಲ್ಲ’ ಯಂಟಪ್ಪಣ್ಣ ಲೊಚಗುಟ್ಟಿತು.

‘ಅಣೈ, ಅದು ನೀರಿನ ಬಾವಿ ಅಲ್ಲ, ಅಧ್ಯಕ್ಸರ ಪೀಠದ ಮುಂದಿರೋ ಖಾಲಿ ಜಾಗ. ಅಲ್ಲಿ ನಿಂತುಗಂಡು ಗಲಾಟೆ ಮಾಡಿ ಸ್ವಂತ ಕಾಯಕಕ್ಕೆ ಕಡೆದು ಹೊಂಟೋಗ್ಯವ್ರೆ. ಇಲ್ಲಿ ಕಾಣ್ತಿರೋ ಕಾರುಗಳು ಶಾಸಕರು, ಮಂತ್ರಿಗಳ ಚೋಟಾಳು, ಮೋಟಾಳುಗಳದ್ದು’ ಅಂದ ಚಂದ್ರು.

ADVERTISEMENT

‘ಅಸೋಕಣ್ಣ ‘ನಮ್ಮ ಹಲ್ಲಂಡೆಕೋರರು ಪಕ್ಸಾನೇ ಕೊಲ್ತಾವ್ರೆ. ಅಧಿಕಾರ ಇದ್ರೂ ಕಷ್ಟ, ಇಲ್ಲದಿದ್ರೂ ಕಷ್ಟ. ಇವುಕ್ಕೆ ಬಾಯಿಬೀಗ ಹಾಕದು ಯಂಗೆ?’ ಅಂತ ತಲೆ ಮ್ಯಾಲೆ ಕೈಹೊತುಗಂಡು ಕೂತದೆ. ಕೈ ಪಕ್ಸದ್ದೂ ಇದೇ ಕಥೆ’ ನಾನು ವಿಷಾದ ವ್ಯಕ್ತಪಡಿಸಿದೆ.

‘ಅಲ್ಲ ಕನ್ರೊ, ಅಧಿವೇಶನದಲ್ಲಿ ಮಂತನಸ್ಥರು ಒಪ್ಪಂಗೆ ನಾಕು ಮಾತಾಡನ ಅನ್ನೋ ಬುದ್ಧಿ ಬರಲೇ ಇಲ್ಲವಲ್ಲ ಇವುಕ್ಕೆ. ಸದನದಲ್ಲಿ ಸಂತೆ ಮಾಡತವಲ್ಲೋ’ ಯಂಟಪ್ಪಣ್ಣನಿಗೆ ಸಿಟ್ಟು ಬಂದಿತ್ತು.

‘ಅಣೈ, ಮೂಗಿಡಕಂದು ಸಂತೆ ಅನ್ರಿ’ ಚಂದ್ರು ಹಳೆ ವರಸೆ ತೆಗೆದ.

ಮೂಗು ಹಿಡಕಂದ ಯಂಟಪ್ಪಣ್ಣ ‘ಸತ್ತೆ, ಸತ್ತೆ’ ಅಂದು ಸುಮ್ಮಗಾಯ್ತು... ‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹಿತ ಸತ್ತೋಯ್ತು ಕನಣೈ’ ಅಂತಂದರು ತುರೇಮಣೆ.

‘ಅಲ್ಲ ಕನಣೈ, ಸುಳ್ಳು ಪತ್ತೆ ಮಾಡಕ್ಕೆ ಸರ್ಕಾರ ಐದು ಸಂಸ್ಥೆ ನೇಮಕ ಮಾಡ್ಯದಂತೆ. ಅವ್ಯಾಕೆ ಬೇಕಿತ್ತು? ಯಾವತ್ತೂ ಸತ್ಯ ನುಡಿದೇ ಇರೋ ರಾಜಕೀಯದವುಕ್ಕೆ ಏನೆನ್ನಬೈದು?’ ಚಂದ್ರು ವಿಷಯಾಂತರ ಮಾಡಿದ.

‘ಅವುಕ್ಕೆ ಇನ್ನೇನಂದರ್‍ಲಾ? ಅನಾಯಕತ್ವದ ನಾಯಕರು ಅನ್ನಬೈದಷ್ಟೀಯೆ!’ ತುರೇಮಣೆ ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.