ADVERTISEMENT

ಚುರುಮುರಿ: ಭಾಷಾಂತರ ಬಿಸಿ!

ಚುರುಮುರಿ

ಗುರು ಪಿ.ಎಸ್‌
Published 3 ಸೆಪ್ಟೆಂಬರ್ 2024, 19:19 IST
Last Updated 3 ಸೆಪ್ಟೆಂಬರ್ 2024, 19:19 IST
<div class="paragraphs"><p>Churumuri&nbsp;</p></div>

Churumuri 

   

‘ಪ್ರಾಸಿಕ್ಯೂಷನ್‌, ರಿಪೋರ್ಟ್‌ ಅಂತೆಲ್ಲ ಎಷ್ಟು ಹಿಂಸೆ ಕೊಡ್ತಿದಾರಪ್ಪ ಇವರೆಲ್ಲ’ ಕೈ ಹಿಸುಕಿಕೊಳ್ಳುತ್ತಾ ಹೇಳಿದ ಪೊಲಿಟಿಷಿಯನ್‌ ವಿಜಿ. 

‘ಯಾವುದೇ ಸವಾಲಿಗೂ ‘ರೆಡಿ’ ಅನ್ನೋ ನೀವು ಇವತ್ತೇಕೆ ಇಷ್ಟು ಟೆನ್ಷನ್‌ನಲ್ಲಿದೀರಿ ಸರ್?’ ಕೇಳಿದ ಪಿ.ಎ ಮುದ್ದಣ್ಣ. 

ADVERTISEMENT

‘ನನ್ನ ವಿರುದ್ಧದ ವರದಿಯನ್ನು ತರ್ಜುಮೆ ಮಾಡಿಕೊಡಿ ಅಂತ ರಾಜ್ಯಪಾಲರು ಕೇಳಿದ್ದಾರಂತೆ’. 

‘ಅಯ್ಯೋ ಹೌದೆ !’ ಕೇಳಿದ ಮುದ್ದಣ್ಣ.

ಇದ್ದಕ್ಕಿದ್ದಂತೆ ಮೇಲೆದ್ದ ವಿಜಿ, ‘ಕೆಪಿಎಸ್‌ಸಿ ಎಕ್ಸಾಮ್‌ ಕ್ವಶ್ಚನ್‌ ಪೇಪರ್‌ನ ಟ್ರಾನ್ಸ್‌ಲೇಟ್‌ ಮಾಡಿದವನನ್ನ ಬೇಗ ಕರೆದುಕೊಂಡು ಬಾ’ ಎಂದ. 

‘ಹೋಗಲಿ ಬಿಡಿ ಸರ್, ಈಗ ರಿ ಎಕ್ಸಾಮ್‌ ಮಾಡೋಕೆ ಸರ್ಕಾರ ಆರ್ಡರ್‌ ಮಾಡಿದೆಯಲ್ಲ, ಮತ್ತ್ಯಾಕೆ ಆ ಟ್ರಾನ್ಸ್‌ಲೇಟರ್‌ ಜೀವ ತಿಂತೀರಿ?’ 

‘ಹೇಳಿದಷ್ಟು ಕೇಳು, ತಲೆಹರಟೆ ಮಾಡಬೇಡ’ ಸಿಡುಕಿದ ವಿಜಿ. ಎರಡೇ ತಾಸಿನಲ್ಲಿ ಟ್ರಾನ್ಸ್‌ಲೇಟರ್‌ ಬಂದು ವಿಜಿ ಮುಂದೆ ನಿಂತ! 

‘ಬನ್ನಿ, ಬನ್ನಿ’ ನಗುಮೊಗದಿಂದ ಭಾಷಾಂತರಕಾರನನ್ನು ಸ್ವಾಗತಿಸಿ ಹಾರ ಹಾಕಿದ ವಿಜಿ. 

ಬೈಗುಳದ ನಿರೀಕ್ಷೆಯಲ್ಲಿದ್ದ ಟ್ರಾನ್ಸ್‌ಲೇಟರ್‌ ಅಚ್ಚರಿಯಲ್ಲಿಯೇ, ‘ಏನೋ ತಪ್ಪಾಗಿದೆ, ನನ್ನ ಬಿಟ್ಟುಬಿಡಿ ಸರ್’ ಎಂದು ಬೇಡಿಕೊಂಡ. 

‘ನಿಮ್ಮ ಪ್ರತಿಭೆ ಬಗ್ಗೆ ನಿಮಗೆ ಗೊತ್ತಿಲ್ಲ. ಈಗ ನಿಮ್ಮಿಂದ ನನಗೊಂದು ಸಹಾಯ ಆಗಬೇಕು’. 

‘ನನ್ನಿಂದನಾ?! ಅದೇನು ಕೇಳಿ ಸರ್’.

‘ಏನಿಲ್ಲ, ನನ್ನ ವಿರುದ್ಧದ ಪ್ರಾಸಿಕ್ಯೂಷನ್‌ಗೆ
ನೀಡಿರುವ ವರದಿಯನ್ನು ಟ್ರಾನ್ಸ್‌ಲೇಟ್‌ ಮಾಡಿಕೊಡುವಂತೆ ರಾಜ್ಯಪಾಲರು ಕೇಳಿದ್ದಾರಂತೆ. ಅದನ್ನು ನೀವೇ ಮಾಡಿಕೊಡಬೇಕು?’ 

‘ನಾನೇ ಏಕೆ ಸರ್?’ 

‘ನೀವು ಭಾಷಾಂತರ ಮಾಡಿದ್ದು, ಎಕ್ಸಾಮ್‌ ಬರೆಯೋ ಅಭ್ಯರ್ಥಿಗಳಿಗೇ ಅರ್ಥ ಆಗಿಲ್ಲ. ಇನ್ನು, ನನ್ನ ಪ್ರಾಸಿಕ್ಯೂಷನ್‌ಗೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ಪುಟಗಳನ್ನ ನೀವು ಟ್ರಾನ್ಸ್‌ಲೇಟ್‌ ಮಾಡಿ, ಅದನ್ನು ಗವರ್ನರ್‌ ಅವರು ಅರ್ಥ ಮಾಡಿಕೊಳ್ಳೋದಕ್ಕೆ ಹತ್ತು ವರ್ಷಗಳೇ ಆಗಬಹುದು. ಅಷ್ಟರಲ್ಲಿ ಎಲ್ಲರಿಗೂ ಈ ಕೇಸ್‌ ಮರೆತೇ ಹೋಗಿರುತ್ತೆ’ ನಕ್ಕ ವಿಜಿ. 

ನಗಬೇಕೋ, ಅಳಬೇಕೋ ತಿಳಿಯದೆ ನಿಂತ ಟ್ರಾನ್ಸ್‌ಲೇಟರ್‌! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.