ADVERTISEMENT

ಚುರುಮುರಿ | ಕೆಸರೊಳಗೆ ಕಾಲು

ಸುಮಂಗಲಾ
Published 16 ಏಪ್ರಿಲ್ 2023, 23:00 IST
Last Updated 16 ಏಪ್ರಿಲ್ 2023, 23:00 IST
   

‘2018ರಿಂದ ಈಗಿನವರೆಗೆ ಅಂದರೆ ಈ ಐದು ವರ್ಸದಾಗೆ ನಿನ್ನ ಆಸ್ತಿ ಎಷ್ಟ್ ಹೆಚ್ಚು ಆಗೈತೆ’ ಬೆಕ್ಕಣ್ಣ ಬಲು ಗಂಭೀರವಾಗಿಯೇ ಕೇಳಿತು.

‘ಆಸ್ತಿ ಹೆಚ್ಚಾಗೂದು ಬಿಡು, ನನ್ನಂಥೋರು ಸಾಲಸೋಲ ಮಾಡದೇ, ಹಾಸಿಗೆ ಇದ್ದಷ್ಟು ಕಾಲುಚಾಚಿ ಬದುಕೋದೆ ದೊಡ್ಡದು’ ಎಂದೆ.

‘ನಮ್ ಬೊಮ್ಮಾಯಿ ಅಂಕಲ್ಲು ತಮ್ಮ ಆಸ್ತಿ ಐದು ವರ್ಸದ ಹಿಂದೆ ಹತ್ತು ಕೋಟಿ ಇದ್ದಿದ್ದು ಈಗ ಸುಮಾರು ಮೂವತ್ತು ಕೋಟಿ ಆಗೈತಂತ ಅಂತ ಡಿಕ್ಲೇರ್ ಮಾಡ್ಯಾರ. ಅದಕ್ಕೇ ಕೇಳಿದೆ’ ಎಂದಿತು ಮುಗುಮ್ಮಾಗಿ.

ADVERTISEMENT

‘ಅವರೊಬ್ಬರೇ ಅಲ್ಲಲೇ... ಈಗ ಚುನಾವಣೆಗೆ ನಿಂತ ಎಲ್ಲಾ ಅಭ್ಯರ್ಥಿಗಳ ಆಸ್ತಿ ಐದು ವರ್ಸದಾಗೆ ಎಷ್ಟ್ ಹೆಚ್ಚಾಗೈತಿ ನೋಡು. ಹೋದ ಚುನಾವಣೆ ಟೈಮಿನಾಗೆ ಲಕ್ಷಾಧಿಪತಿ ಇದ್ದವರೂ ಈಗ ಕೋಟ್ಯಧಿಪತಿ ಆಗ್ಯಾರೆ’.

‘ನಮ್ಮ ಎಲ್ಲಾ ಶಾಸಕರು, ಮಂತ್ರಿಗಳು, ಮರಿಪುಢಾರಿಗಳು ಎಷ್ಟ್ ಕಷ್ಟಪಟ್ಟು ಹಗಲೂ ರಾತ್ರಿ ದುಡಿದು, ಐದೇ ವರ್ಸದಾಗೆ ಮೂರು-ನಾಕು ಪಟ್ಟು ಆಸ್ತಿ ಹೆಚ್ಚಿಸಿಗೋತಾರ. ನೀವು ಅದೀರಿ ಶ್ರೀಸಾಮಾನ್ಯರು, ಮೂರೂ ಹೊತ್ತು ರೊಕ್ಕ ಇಲ್ಲ ಅಂತ ಅಳೂದೆ ನಿಮ್ಮ ಹಣೇಬರಹ’ ಎಂದು ನನ್ನ ಮೂತಿಗೆ ತಿವಿಯಿತು.

‘ಅದೇ ನಾನೂ ಹೇಳದು... ಶ್ರೀಸಾಮಾನ್ಯರು ಬೆವರುಸುರಿಸಿ ಹಗಲೂರಾತ್ರಿ ದುಡಿದರೂ ರೊಕ್ಕ ಮಾಡಾಕೆ ಆಗಂಗಿಲ್ಲ. ಯಾಕಂದ್ರ ಈ ಎಲ್ಲಾ ರಾಜಕಾರಣಿಗಳ ಹಿತ್ತಿಲಿನಾಗೆ ಇರೋ ಮಾಡಾಳ್ ತಳಿ ಅಡಿಕೆಮರಗಳು ನಮ್ಮ ಬಳಿ ಇಲ್ಲ’.

‘ಕಮಲಕ್ಕನ ಮನಿಯವರು ನನಗೇ ಭ್ರಷ್ಟ ಅಂದರೆ, ಇಡೀ ಪ್ರಪಂಚದಾಗೆ ಇನ್ಯಾರೂ ಪ್ರಾಮಾಣಿಕರು ಇಲ್ಲ ಅಂತ ನಮ್ಮ ಕೇಜ್ರಿ ಅಂಕಲ್ಲು ಗುರುಗುಟ್ಟಿದಾರ. ನಮ್ಮ ಕೇಜ್ರಿ ಅಂಕಲ್ಲು ಒಬ್ಬರೇ ಮಾಡಾಳ್ ತಳಿ ಅಡಿಕೆಮರ ಬೆಳೆಸಿಲ್ಲ ಅಂತ ಕಾಣತೈತಿ’.

‘ಆಹಾ… ಬಾಯಿಮಾತಿನಾಗೆ ಎಲ್ಲರೂ ಪ್ರಾಮಾಣಿಕರೇ…’ ನಾನು ನಕ್ಕೆ.

‘ಹೌದೌದು… ಬಾಯಿಮಾತಿನಾಗೆ ಎಲ್ಲರೂ ಕೆಸರೇ ಅಂಟದ ಕಮಲಪತ್ರದ ಹಂಗೆ… ಆದರೆ ಎಲ್ಲರ ಕಾಲು ಮಾತ್ರ ಭ್ರಷ್ಟಾಚಾರದ ಕೆಸರೊಳಗೆ’ ಎಂದು ಬೆಕ್ಕಣ್ಣನೂ ಹ್ಹೆಹ್ಹೆಗುಟ್ಟಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.