‘ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆರೋಪದ ತನಿಖೆ ಎದುರಿಸಿ ಅಂತ ವಿರೋಧ ಪಕ್ಷದವರು ಎಡೆಬಿಡದೆ ಒತ್ತಾಯ ಮಾಡ್ತಿದ್ದಾರೆ ಕಣ್ರೀ’ ಅಂದಳು ಸುಮಿ.
‘ಕುರ್ಚಿ ಖಾಲಿ ಮಾಡಿ ಎನ್ನಲು ಸಿ.ಎಂ. ಕುರ್ಚಿಯನ್ನು ವಿರೋಧ ಪಕ್ಷದವರು ಕೊಟ್ಟಿಲ್ಲ. ರಾಜ್ಯದ ಜನ, ಅವರ ಪಕ್ಷದ ಶಾಸಕರು, ಅವರ ಹೈಕಮಾಂಡ್ ಕೊಟ್ಟಿದೆಯಂತೆ. ತಾವು ತಪ್ಪೂ ಮಾಡಿಲ್ಲ, ಕುರ್ಚಿಯನ್ನೂ ಬಿಡುವುದಿಲ್ಲ ಎಂದಿದ್ದಾರೆ ಸಿ.ಎಂ’ ಅಂದ ಶಂಕ್ರಿ.
‘ಅಧಿಕಾರದಲ್ಲಿದ್ದರೆ ತನಿಖೆ ಮೇಲೆ ಪ್ರಭಾವ ಬೀರಬಹುದು, ನಿಷ್ಪಕ್ಷಪಾತ ತನಿಖೆ ಸಾಧ್ಯವಾಗುವುದಿಲ್ಲ, ತಪ್ಪು ಮಾಡಿಲ್ಲ ಎಂಬುದು ಸಾಬೀತಾದರೆ ಮತ್ತೆ ಸಿ.ಎಂ. ಕುರ್ಚಿ ಹತ್ತಿ ಅಂತ ಹೇಳ್ತಿದ್ದಾರೆ’.
‘ಈಗಾಗಲೇ ಸಿ.ಎಂ. ಕುರ್ಚಿ ಮೇಲೆ ಹಲವರು ಟವೆಲ್ ಹಾಕಿದ್ದಾರಂತೆ. ತನಿಖೆಗಾಗಿ ಕುರ್ಚಿ ಖಾಲಿ ಮಾಡಿದರೆ ಇನ್ಯಾರೋ ಬಂದು ಕುಳಿತುಬಿಡುತ್ತಾರೆ ಅನ್ನೋ ಭಯ ಇರಬಹುದೇನೊ’.
‘ಇದೊಳ್ಳೆ ರಾಮಾಯಣ ಆಯ್ತಲ್ಲ!’
‘ರಾಮಾಯಣ ಅಲ್ಲ, ‘ಕೊಡುವುದಿಲ್ಲವೋ ರಾಜ್ಯವ, ಬಿಡುವುದಿಲ್ಲವೋ ಕುರ್ಚಿಯ’ ಎನ್ನುವ ಮಹಾಭಾರದ ಕಥಾ ಪ್ರಸಂಗ’.
‘ಇಲ್ಲಿ ಕುರ್ಚಿ ಖಾಲಿ ಮಾಡೊಲ್ಲ ಅನ್ನುತ್ತಿದ್ದಾರೆ. ದೆಹಲಿಯಲ್ಲಿ ಸಿ.ಎಂ. ಕುರ್ಚಿ ಮೇಲೆ ಕೂರದೆ ಅಲ್ಲಿನ ಸಿ.ಎಂ. ರಾಜ್ಯಭಾರ ಮಾಡ್ತಿದ್ದಾರಂತೆ. ಸಿ.ಎಂ. ಕುರ್ಚಿ ಖಾಲಿ ಬಿಡಬೇಡಿ, ಕುರ್ಚಿ ಮೇಲೆ ಕುಳಿತುಕೊಳ್ಳಿ ಅಂತ ಅಲ್ಲಿನ ಸಿ.ಎಂಗೆ ವಿರೋಧ ಪಕ್ಷದವರು ಒತ್ತಾಯ ಮಾಡ್ತಿದ್ದಾರೆ!’
‘ಅದು ರಾಮಾಯಣ ಪ್ರಸಂಗದಂತೆ. ಕಾಡಿಗೆ ಹೋದ ರಾಮನ ಪಾದುಕೆ ತಂದು ಸಿಂಹಾಸನದ ಮೇಲಿಟ್ಟು ಸೋದರಪ್ರೇಮ ಮೆರೆದು ರಾಜ್ಯವಾಳಿದ ಭರತನಂತೆ, ದೆಹಲಿ ಸಿ.ಎಂ.ಗಾಗಿ ಇರುವ ಕುರ್ಚಿ ಮೇಲೆ ಕೂರದೆ ಮಾಜಿ ಸಿ.ಎಂ. ಮೇಲಿನ ಗುರುಭಕ್ತಿ ಪ್ರದರ್ಶಿಸಿದ್ದಾರಂತೆ’.
‘ಇತಿಹಾಸ ಮರುಕಳಿಸುತ್ತದೆ ಎನ್ನುತ್ತಾರೆ, ನಮ್ಮಲ್ಲಿ ಪುರಾಣ ಪ್ರಸಂಗಗಳೂ
ಮರುಕಳಿಸುತ್ತಿವೆಯಲ್ರೀ!’ ಎಂದಳು ಸುಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.