ADVERTISEMENT

ಚುರುಮುರಿ | ಗಾಂಧೀಜಿ ಇದ್ದಿದ್ದರೆ...

ಗುರು ಪಿ.ಎಸ್‌
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
Churumuri 
Churumuri    

‘ಇವತ್ತು ಗಾಂಧೀಜಿ ಇದ್ದಿದ್ರೆ ತುಂಬಾ ಸಂತೋಷಪಡ್ತಿದ್ರು’ ಎಂದರು ಕಮಲ ಪಕ್ಷದ ಮುಖಂಡರೊಬ್ಬರು.

‘ನಿಮ್ಮ ಪಕ್ಷ ಹೋಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆಯಲ್ಲ, ಅದಕ್ಕಾ?’ ನಗುತ್ತಲೇ ವ್ಯಂಗ್ಯವಾಡಿದರು ಕೈ ಪಕ್ಷದ ರಾಜಕಾರಣಿಯೊಬ್ಬರು. 

‘ಅದಕ್ಕಲ್ಲ, ಈಗಿನ ಕಾಲದಲ್ಲಿ ಸರ್ಕಾರದಿಂದ ಸೈಟ್‌ ಪಡೆದುಕೊಳ್ಳೋದೇ ಅಪರೂಪ. ಅಂಥದ್ದರಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನ ನನಗೆ ಬೇಡ ಅಂತ ಸರ್ಕಾರಕ್ಕೇ ವಾಪಸ್ ಕೊಡ್ತಾರೆ ಅಂದ್ರೆ ಸುಮ್ನೇನಾ! ಈಗಿನ ರಾಜಕೀಯ ಕುಟುಂಬದವರಲ್ಲಿಯೂ ಇಂತಹ ‘ತ್ಯಾಗ’ ಮನೋಭಾವ ಇರೋದನ್ನು ಕಂಡು‌ ಗಾಂಧೀಜಿ ಹೆಮ್ಮೆಪಡುತ್ತಿದ್ದರು’ ಕಮಲ ನಾಯಕನ ಧ್ವನಿಯಲ್ಲಿ ವ್ಯಂಗ್ಯ ಅಡಗಿತ್ತು.

ADVERTISEMENT

ಮುಂದುವರಿದು, ‘ನಮ್ಮ ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಗೂ ಗಾಂಧೀಜಿ ಫಿದಾ ಆಗುತ್ತಿದ್ದರು. ಎಷ್ಟು ಶರವೇಗದಲ್ಲಿ ಕೆಲಸ ಮಾಡ್ತಿದಾರೆ ನೋಡಿ! 24 ತಾಸಿನೊಳಗೇ ‘ಕೆಲಸಗಳು’ ಮುಗಿಯುತ್ತಿವೆ. ‘ನನ್ನ ರಾಮರಾಜ್ಯದ ಕನಸು ನನಸಾಗುತ್ತಿದೆ’ ಅಂತ ಮಹಾತ್ಮರು ಗ್ಯಾರಂಟಿ ಕುಣಿದಾಡಿರೋರು’ ಎಂದರು.

‘ಅಂದ್ರೆ, ದೇಶದ ಆಡಳಿತ ನೋಡಿ ಗಾಂಧೀಜಿ ದುಃಖಪಡ್ತಿದ್ದರು ಅಂತ ನಿಮ್ಮ ಮಾತಿನ ಅರ್ಥವೇ?’ ಎಂದು ಕೇಳಿದ ‘ಕೈ’ ನಾಯಕ, ‘ಮನಸ್ಸು ಮಾಡಿದರೆ ನೀವೂ ಮಹಾತ್ಮರ ಮನಸ್ಸು ಉಲ್ಲಸಿತವಾಗುವಂತೆ ಮಾಡಬಹುದು’ ಎಂದರು‌. 

‘ಹೌದಾ! ಹೇಗೆ?’ 

‘ಚುನಾವಣಾ ಬಾಂಡ್ ಹೆಸರಿನಲ್ಲಿ ನಿಮ್ಮ ಪಕ್ಷ ಸಂಗ್ರಹಿಸಿದ ದೇಣಿಗೆ ಹಣವನ್ನ ಸರ್ಕಾರಕ್ಕೆ ಅಂದ್ರೆ ದೇಶಕ್ಕೆ ವಾಪಸ್ ಕೊಟ್ಟು ನೋಡಿ, ಗಾಂಧೀಜಿ ಫುಲ್ ಖುಷಿಯಾಗಿಬಿಡ್ತಾರೆ’. 

ಇದ್ಯಾಕೋ ತಮ್ಮ ಬುಡಕ್ಕೇ ಬರ್ತಿದೆ ಅಂದ್ಕೊಂಡು, ‘ಸರ್ಕಾರದಿಂದ ಪಡೆದ ಸೌಲಭ್ಯವನ್ನೆಲ್ಲ ಎಲ್ಲ ರಾಜಕಾರಣಿಗಳೂ ವಾಪಸ್ ಕೊಟ್ಟರೆ ಮಹಾತ್ಮರಿಗೇನೋ ಖುಷಿ ಆಗಬಹುದು, ಆದರೆ ನಮಗೆ ದುಃಖ ಆಗುತ್ತಲ್ಲ’ ಎಂದರು ಕಮಲ ಪಕ್ಷದ ನಾಯಕ. 

‘ಮಹಾತ್ಮರೇ, ನಿಮ್ಮ ಹೆಸರಲ್ಲಿ ತಮಾಷೆ ಮಾಡಿಕೊಂಡಿದ್ದಕ್ಕೆ ಕ್ಷಮೆ ಇರಲಿ’ ಎಂದು ಬೇಡಿಕೊಂಡು ಇಬ್ಬರೂ ನಾಯಕರು ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.