ADVERTISEMENT

ಚುರುಮುರಿ | ಕನಸಲ್ಲಿ ಗಾಂಧಿ!

ಬಿ.ಎನ್.ಮಲ್ಲೇಶ್
Published 3 ಅಕ್ಟೋಬರ್ 2024, 23:30 IST
Last Updated 3 ಅಕ್ಟೋಬರ್ 2024, 23:30 IST
   

ದಿನಪತ್ರಿಕೆ ಕಾರ್ಯಾಲಯಕ್ಕೆ ಕೋಲೂರಿಕೊಂಡು ಬಂದ ವೃದ್ಧರೊಬ್ಬರು ಪತ್ರಕರ್ತ ತೆಪರೇಸಿ ಮುಂದೆ ನಿಂತು ‘ಒಂದು ಜಾಹೀರಾತು ಹಾಕಿಸಬೇಕಿತ್ತು’ ಎಂದರು.

‘ಏನು ನಿಮ್ಮ ಹೆಸರು?’ ತೆಪರೇಸಿ ತಲೆಯೆತ್ತದೆ ಕೇಳಿದ.

‘ಗಾಂಧಿ’ ವೃದ್ಧರು ಹೇಳಿದರು.

ADVERTISEMENT

‘ಯಾವ ಗಾಂಧಿ? ನಮ್ಮಲ್ಲಿ ಬಹಳ ಜನ ಗಾಂಧಿಗಳಿದ್ದಾರೆ’.

‘ನನ್ನನ್ನು ಮಹಾತ್ಮ ಗಾಂಧಿ ಅಂತ ಕರೀತಾರೆ’.

ಶಾಕ್! ತೆಪರೇಸಿ ತಕ್ಷಣ ತಲೆ ಎತ್ತಿ ನೋಡಿದ.

‘ನೀವಾ? ಮೊನ್ನೆ ಗಾಂಧಿ ಜಯಂತಿ ಆಯ್ತಲ್ಲ, ಮತ್ತೇನು? ವರ್ಷಕ್ಕೆ ಒಮ್ಮೆ ಮಾತ್ರ ನಾವು ನಿಮ್ಮನ್ನು ನೆನಪು ಮಾಡ್ಕೊಳ್ಳೋದು’.

‘ಪರವಾಗಿಲ್ಲ, ನನ್ನ ಕನ್ನಡಕ ಕಳೆದಿದೆ, ಒಂದು ಜಾಹೀರಾತು ಹಾಕಿ’.

‘ಕನ್ನಡಕಕ್ಕೆ ಜಾಹೀರಾತಾ? ಅದೇನು ಬೆಳ್ಳಿ ಬಂಗಾರವಾ? ಸಿಕ್ಕರೂ ಯಾರೂ ತಂದುಕೊಡಲ್ಲ’.

‘ಅದಿಲ್ಲದೆ ನನಗೆ ಏನೂ ಕಾಣಿಸಲ್ಲ’.

‘ಒಳ್ಳೇದಾಯ್ತು, ನೀವು ನೋಡಬಾರದ್ದನ್ನೆಲ್ಲ ನೋಡೋದು ತಪ್ಪಿತು’.

‘ನಾನು ಪತ್ರಿಕೆ ಓದುವುದು, ಟಿ.ವಿ ನೋಡುವುದು ಬೇಡವೆ?’

‘ಬೇಡ, ನಿಮ್ಮ ತಲೆ ಕೆಡುತ್ತೆ’.

‘ಹೌದೆ? ರಾಮ ರಾಮ’.

‘ರಾಮ ಎನ್ನಬೇಡಿ, ರಾಜಕೀಯ ಆಗುತ್ತೆ’.

‘ಈ ರಾಜಕೀಯ ಅಂದ್ರೇನು?’

‘ಅಧಿಕಾರ, ದುಡ್ಡಿಗಾಗಿ ಮಾಡಬಾರದ್ದನ್ನ ಮಾಡೋದು’.

‘ಮತ್ತೆ ಸತ್ಯ, ಅಹಿಂಸೆ, ಸತ್ಯಾಗ್ರಹ ಇವೆಲ್ಲ?’

‘ಅವೆಲ್ಲ ನಿಮ್ಮ ಜೊತೆಗೇ ಹೋದವಲ್ಲ?’

‘ಹೋಗಲಿ ಬಿಡಿ, ಇವತ್ತಿನ ಸುದ್ದಿ ಏನು?’

‘ಕೇಳಬೇಡಿ ಅಂದೆನಲ್ಲ?’

‘ಪರವಾಗಿಲ್ಲ ಹೇಳಿ, ಕೇಳಿ ಹೋಗುತ್ತೇನೆ’.

‘ನಿಮ್ಮ ಕರ್ಮ ಕೇಳಿ... ಮುಡಾ, ಲೋಕಾಯುಕ್ತ, ಇ.ಡಿ, ಸಿಬಿಐ, ಎಫ್ಐಆರ್, ಮನಿಲಾಂಡ್ರಿಂಗ್, ಸೈಟು, ಕೋರ್ಟು, ಯೂ ಟರ್ನ್, ಆತ್ಮಸಾಕ್ಷಿ, ಸಾಕ್ಷ್ಯನಾಶ, ಜೈಲು, ಬೇಲು, ಬಕೆಟ್ಟು, ಟವೆಲ್ಲು... ಸಾಕಾ, ಬೇಕಾ?’

‘ಸಾಕು ಸಾಕು, ನಾನಿನ್ನು ಬರುತ್ತೇನೆ’.

‘ಮತ್ತೆ ಕನ್ನಡಕ?’

‘ಬೇಡ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.