ADVERTISEMENT

ಚುರುಮುರಿ | ಡೌನ್ ಡೌನ್ ಬದನೆಕಾಯಿ!

ತುರುವೇಕೆರೆ ಪ್ರಸಾದ್
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
   

‘ಏನಣ್ಣ, ಪೇಪರ್ ಓದುದ್ಯಾ? ನಮ್ ಬಗ್ಗೆ ಬರ್ದವ್ರೆ’ ತರ್ಲೆಕ್ಯಾತನಹಳ್ಳಿ ಸಂತೇಲಿ ಸೇಲಾಗದೆ ಉಳಿದ ಹಾಗಲಕಾಯಿ, ಮರದ ಮೇಲಿದ್ದ ಬೇವಿನಕಾಯನ್ನು ಕೇಳಿತು.

‘ಊ ಕಣಪ್ಪ, ನೋಡ್ದೆ. ನೀನು ನಂಗೆ ಸಾಕ್ಷಿ ಯೋಳ್ದಂಗೆ ಅಂತ ಕುಮಾರಣ್ಣ ಯೋಳವ್ರಲ್ಲ’ ಎಂದಿತು ಬೇವಿನಕಾಯಿ.

‘ಇದು ಶಾನೆ ಅನ್ಯಾಯ ಬುಡು, ನಾವು ಯಾವ ಮಹಾ ಕಹಿ? ಕಾಲಿಂದ ತಲೆವರೆಗೆ ಕಾರ್ಕೋಟಕ ವಿಷ ತುಂಬ್ಕಂಡಿರೋರು ಅವ್ರೆ’.

ADVERTISEMENT

‘ಹೂನ್ರಪ್ಪಾ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡ ಅಂತಾರೆ. ನಾನು ಅಷ್ಟು ಸದರಕ್ಕೆ ಸಿಕ್ಕಿದೀನಾ? ಟವಲ್ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡ, ಭೂಮಿ ಕಳ್ಳ ಅಂದ್ರೆ ಭುಜ ಮುಟ್ಕಂಡ, ಮಂಡಳಿ ಕಳ್ಳ ಅಂದ್ರೆ ಮಂಡಿ ಮುಟ್ಟಿ ನೋಡ್ಕಂಡ ಅಂತ ಏನಾದ್ರೂ ಮಾಡ್ಬಹುದಲ್ವಾ?’ ಅಂದಿತು ಕುಂಬಳಕಾಯಿ.

‘ಅದಿರ್‍ಲಿ, ಈ ರಾಜಕೀಯದೋರು ಕುರ್ಚಿ ಮೇಲೆ ವರುಷಗಟ್ಲೆ ಕುಂತು ಕುಂತು ಮೊಳೆ ರೋಗ ಬರುಸ್ಕಂಡಿರ್ತಾರೆ. ಮೂಲಂಗಿ ತಿಂದು ಮೊಳೆ ರೋಗ ಬರುಸ್ಕಂಡಂಗೆ ಅಂತ ಸಲೀಸಾಗ್ ಹೇಳ್ಬಿಡ್ತಾರೆ. ಇದು ಸರಿನಾ?’ ಮುಖ ಹಿಂಡಿತು ಮೂಲಂಗಿ.

‘ಅಯ್ಯೋ! ನಿಮ್ಮದು ಹಂಗಿರ್‍ಲಿ, ಯಾರ್ ಏನೇ ಒಳಗೊಳಗೇ ಕಿತಾಪತಿ ಮಾಡಿದ್ರೂ ಅವನು ನಸುಗುನ್ನಿ ನನ್ಮಗ ಅಂತ ನನ್ ಹೆಸರು ಹೇಳ್ಕಂಡು ಉಗೀತಾರೆ. ನನಗ್ಯಾವ ಕರ್ಮ ಅಂತ? ನನ್ನ ಮುಟ್ಟುದ್ರೆ ಒಂದೆರಡು ಗಂದೆ ಆಗ್ಬೋದು ನಿಜ, ಆದರೆ ಈ ರಾಜಕೀಯದವ್ರ ದಂಧೆಗಿಂತ ಅದು ಹೆಚ್ಚು ತುರಿಕೆ ಬರುತ್ತಾ?’ ಎಂದು ಸಿಟ್ಟಿನಲ್ಲೇ ಕೇಳಿತು ನಸುಗುನ್ನಿ.

‘ಇದಕ್ಕೆಲ್ಲಾ ಕಾರಣ ನಮ್ ರಾಜ ಬದ್ನೆಕಾಯಿ. ಕುಲಾಂತರಿಯಾದ್ಮೇಲೆ ಮೂರು ಹೊತ್ತೂ ತನ್ನ ಸೀಟು, ಕಿರೀಟದ ಬಗ್ಗೆ ತಲೆ ಕೆಡಿಸ್ಕೊಂಡು ನಮ್ ಯೋಚ್ನೆ ಮಾಡೋದೇ ಬಿಟ್ಟಿದಾನೆ. ಮೊದ್ಲು ಅವನಿಗೆ ರಾಜೀನಾಮೆ ಕೊಡು ಅಂತ ಹೇಳ್ಬೇಕು’ ಹುಳಿ ಹಿಂಡಿತು ಹುಣಸೇಕಾಯಿ. ಹೌದೌದು, ‘ಡೌನ್ ಡೌನ್ ಬದನೆಕಾಯಿ’ ಎಂದು ಸಂತೆಯಲ್ಲಿದ್ದ ತರಕಾರಿಗಳೆಲ್ಲಾ ಕೂಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.