ADVERTISEMENT

ಚುರುಮುರಿ | ಬೆಕ್ಕಣ್ಣನ ಬೇಸರ

ಸುಮಂಗಲಾ
Published 29 ಸೆಪ್ಟೆಂಬರ್ 2024, 23:30 IST
Last Updated 29 ಸೆಪ್ಟೆಂಬರ್ 2024, 23:30 IST
   

ಬೆಕ್ಕಣ್ಣ ತನ್ನ ಹತ್ತಿಪ್ಪತ್ತು ಚುರುಮುರಿ ಕಟಿಂಗ್ಸ್‌ ಹರಡಿಕೊಂಡು ಘನಗಂಭೀರವಾಗಿ ನೋಡುತ್ತಿತ್ತು.

‘ಏನಲೇ… ನಿನ್ನ ಚುರುಮುರಿ ಮ್ಯಾಲೆ ನೀನೇ ಪಿಎಚ್‌.ಡಿ ಮಾಡತೀಯೇನು?’ ಎಂದು ಕುಟುಕಿದೆ.

‘ಈ ಸಲದ ದಸರಾ ಕವಿಗೋಷ್ಠಿವಳಗೆ ಹಾಸ್ಯ-ಕಾವ್ಯ ಜುಗಲಬಂದಿ ಐತಂತೆ. ಹಾಸ್ಯ ವಿಭಾಗಕ್ಕೆ ದುಬ್ಬೀರಣ್ಣ, ತುರೇಮಣೆ ಅಂಕಲ್ಲು, ಮತ್ತೆ ನನ್ನ ಹೆಸ್ರೂ ಸೇರಿಸ್ರಿ ಅಂತ ಕೇಳೀವಿ. ಅಲ್ಲಿ ಓದಕ್ಕೆ ಒಂದೆರಡು ಛಲೋ ಚುರುಮುರಿ ಆರಿಸಾಕೆಹತ್ತೇನಿ’ ಬೆಕ್ಕಣ್ಣ ಭಲೇ ಸಂಭ್ರಮದಿಂದ ವಿವರಿಸಿತು.

ADVERTISEMENT

‘ಮಂಗ್ಯಾನಂಥವ್ನೇ! ಅದಕ್ಕೆ ಹಾಸ್ಯ ಭಾಷಣಕಾರರಿನ್ನ ಕರೀತಾರಂತ. ರಗಡ್‌ ಮಂದಿ ಈಗಾಗ್ಲೇ ಅದಕ್ಕೆ ಕ್ಯೂ ನಿಂತಾರಂತ. ಈ ಚುರುಮುರಿಗಳು ಹಾಸ್ಯ ಅಲ್ಲಲೇ, ವಿಡಂಬನೆ’ ಎಂದು ತಿದ್ದಿದೆ.

‘ಹಂಗಾರೆ ನಾವು ಯಾವ ಪಟ್ಟಿವಳಗೂ ಇಲ್ಲ, ಯಾವ ಸಮ್ಮೇಳನಕ್ಕೂ ಇಲ್ಲ’ ಬೆಕ್ಕಣ್ಣ ಮೂತಿಯುಬ್ಬಿಸಿತು.

‘ಅಷ್ಟ್ಯಾಕೆ ಬ್ಯಾಸರಕಿ ಮಾಡಿಕೊಳ್ತಿ… ಭಾಳ ಮಂದಿ ಪೇಪರಿನಾಗೆ ನಿಮ್ಮನ್ನು ಓದ್ತಾರೇಳು’ ಎಂದು ಸಮಾಧಾನಿಸಿದೆ.

‘ಈ ಸುದ್ದಿ ಕೇಳಿಲ್ಲಿ… ಹೋದ ವರ್ಷ ಟರ್ಕಿವಳಗೆ ಭೂಕಂಪ ಆದಾಗ, 46 ವರ್ಷದ ಹಳೇ ಬಿಲ್ಡಿಂಗು ಬಿದ್ದು 96 ಮಂದಿ ಸತ್ತಿದ್ದರಂತ. ಈಗ ಆ ಬಿಲ್ಡರ್‌ನ ಹಿಡಿದು, ಅಲ್ಲಿನ ನ್ಯಾಯಾಲಯದಿಂದ ಬರೋಬ್ಬರಿ 865 ವರ್ಷ ಜೈಲುಶಿಕ್ಷೆ ವಿಧಿಸ್ಯಾರಂತೆ’ ಎಂದೆ.

‘ಹಂಗಾರೆ ಅಂವ ಜೈಲುಶಿಕ್ಷೆ ಮುಗಿಸಕ್ಕೆ ಎಷ್ಟು ಸಲ ಟರ್ಕಿವಳಗೆ ಪುನರ್ಜನ್ಮ ಎತ್ತಿಬರಬಕು! ಪ್ರತಿಸಲ ಪುನರ್ಜನ್ಮ ಎತ್ತಿದಾಗಲೂ ದೇವರು ಅವನನ್ನ ಅದೇ ಬಿಲ್ಡರ್ ಮಾಡಿ ಹುಟ್ಟಿಸಬಕು!’

‘ಬಿಹಾರದಾಗೆ ಜುಲೈ ತಿಂಗಳಲ್ಲಿ 17 ದಿನದಾಗೆ 12 ಸೇತುವೆ ಕುಸೀತು. ಎರಡು ವರ್ಸದ ಹಿಂದೆ ಗುಜರಾತಿನ ಮೊರ್ಬಿ ಸೇತುವೆ ಕುಸೀತು. ಈ ಸೇತುವೆ ಬಿಲ್ಡರುಗಳನ್ನು ಹಿಡಿದು ಕೊನೇಪಕ್ಷ ಐವತ್ತು ವರ್ಷ ಜೈಲುಶಿಕ್ಷೆ ವಿಧಿಸಬೇಕು’ ಎಂದೆ.

‘ಜೈಲುಶಿಕ್ಷೆ ಎಲ್ಲಿ ಕೊಡತಾರೆ? ಇನ್ನಾ ಐವತ್ತು ಹೊಸಾ ಸೇತುವೆ ಕಾಂಟ್ರಾಕ್ಟ್‌ ಉಡುಗೊರೆ ಅವ್ರಿಗೇ ಕೊಡತಾರೆ’ ಬೆಕ್ಕಣ್ಣ ಸಿಟ್ಟಿನಿಂದ ಗುರುಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.