‘ಏನ್ ಮುದ್ದಣ್ಣ ನವರಾತ್ರಿ ಮುಗಿದು ವಾರವೇ ಆಯ್ತು, ಇನ್ನೂ ಈ ಗೊಂಬೆಗಳನ್ನ ಪ್ರದರ್ಶನಕ್ಕೆ ಇಟ್ಟಿದ್ದೀಯಲ್ಲ’ ಕೇಳಿದ ವಿಜಿ.
‘ಇವು ಚನ್ನಪಟ್ಟಣದ ಆಲ್ ಸೀಜನ್ಡ್ ಗೊಂಬೆಗಳು ಸರ್. ಒಂದೇ ಹಬ್ಬಕ್ಕೆ ಇವುಗಳನ್ನ ಸೀಮಿತ ಮಾಡಬೇಡಿ’ ಹೇಳಿದ ಮುದ್ದಣ್ಣ.
‘ಅಂದರೆ, ಯಾವಾಗಲೂ ಬೇಡಿಕೆಯಲ್ಲಿರೋ ಗೊಂಬೆಗಳು ಅನ್ನು...’
‘ಹೌದು ಸರ್, ಇವುಗಳಿಗೆಲ್ಲ ಒಂದೊಂದು ಹೆಸರೂ ಕೊಟ್ಟಿದ್ದೀನಿ’.
‘ಓಹ್ ಚೆನ್ನಾಗಿದೆ... ಏನೇನು ಹೆಸರು?’.
‘ಆ ದೇವಮೂಲೆಯಲ್ಲಿ ಶಿವನ ರೂಪದಲ್ಲಿದೆ ಯಲ್ಲ ಸರ್, ಅದರ ಹೆಸರು ‘ಅಭಿವೃದ್ಧಿ’.
‘ಗೊತ್ತಾಯ್ತು, ಲೋಕಸಭಾ ಎಲೆಕ್ಷನ್ ನಂತರ ಒಳ್ಳೆಯ ಪ್ರದರ್ಶನ ನೀಡ್ತಿರೋ ಗೊಂಬೆಯಲ್ವ ಅದು’.
‘ಹೌದು ಸರ್. ಇನ್ನು, ಜೊತೆಗಿರೋ ಗೊಂಬೆಯನ್ನ ಕಳೆದುಕೊಂಡು ಏನು ಮಾಡಬೇಕೆಂದು ತಿಳಿಯದೇ ಶೋಕಿಸುತ್ತಿರುವ ಈ ಗೊಂಬೆ ಹೆಸರು ‘ಮೈತ್ರಿ ಧರ್ಮ’.
‘ಅಕ್ಕ–ಪಕ್ಕ ಯಾರನ್ನೂ ಬಿಟ್ಟುಕೊಳ್ಳದೆ, ಹೆಗಲ ಮೇಲೆ ಟವೆಲ್ ಹಾಕಿಕೊಂಡು ದೂರ ನಿಂತಿದೆಯಲ್ಲ, ಅದರ ಹೆಸರು?’.
‘ಬೇಕಾದಾಗ ಹತ್ತಿರವಿಟ್ಟುಕೊಂಡು, ಬೇಡವಾದಾಗ ದೂರ ಮಾಡೋ ಗೊಂಬೆ ಸರ್ ಅದು, ಅದರ ಹೆಸರು ಸ್ವಾಭಿಮಾನ’.
‘ಕೆಳಗಿನ ಸಾಲಿನಲ್ಲಿ ಕುಳಿತು ಕಿಲಕಿಲ ನಗುತ್ತಿದೆ
ಯಲ್ಲ, ಆ ಗೊಂಬೆ ಹೆಸರೇನು ಮುದ್ದಣ್ಣ?’
‘ಜನರ ಬಯಕೆ’.
‘ಇದೆಂಥಾ ಹೆಸರು?’
‘ತನ್ನ ಬಯಕೆಯೇ ಜನರ ಬಯಕೆ ಅಂತ ಹೇಳುವ ಅಭ್ಯಾಸದ ಗೊಂಬೆ ಸರ್ ಅದು, ಅದಕ್ಕೆ ಆ ಹೆಸರಿಟ್ಟಿದ್ದೇನೆ’ ನಕ್ಕ ಮುದ್ದಣ್ಣ.
‘ಫ್ಲ್ಯಾಟ್ ಕ್ಯಾಪ್ ಹಾಕ್ಕೊಂಡು, ಉದ್ದಕ್ಕೆ ಇದೆಯಲ್ಲ, ಆ ಗೊಂಬೆ ಹೆಸರೇನು? ಒಂದ್ ಕಡೆ ನಿಲ್ತಿಲ್ಲವಲ್ಲ ಅದು, ಅದರ ಕೈಯಲ್ಲಿ ಬೇರೆ ಬೇರೆ ಪಕ್ಷದ ಬಾವುಟಗಳನ್ನ ಬೇರೆ ಸಿಕ್ಕಿಸಿದ್ದೀಯ’
‘ಚನ್ನಪಟ್ಟಣಕ್ಕೆ ಈ ಗೊಂಬೆಯೇ ಈಗ ಕೇಂದ್ರಬಿಂದು ಸರ್?’
‘ಅದರ ಹೆಸರು?’
‘ತತ್ವ ಸಿದ್ಧಾಂತ’!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.