ಆನಂದ
ಹಿಂದೆಲ್ಲ ಯಾರನ್ನಾದರೂ ಊಟಕ್ಕೆ ಕರೆದರೆ ಮೆನು ನಿರ್ಧರಿಸುವುದು ಎಷ್ಟು ಸುಲಭ ಇರ್ತಿತ್ತು ಎಂದು ಮೊನ್ನೆ ನೆನಪಿಸಿಕೊಂಡೆ, ಊಟಕ್ಕೆ ಆಹ್ವಾನಿಸಿದ್ದ ಗೆಳೆಯರಿಗೆ ಏನೇನು ಅಡುಗೆ ಮಾಡುವುದು ಎಂದು ಚರ್ಚಿಸಲು ಮಡದಿಯ ಜತೆ ಕೂತಾಗ.
‘ಅಯ್ಯೋ ಬಿಡ್ರಿ. ಮಾಡಿದರಾಯಿತು, ಇದೇನು ಹೊಸತೆ? ಎರಡು ಪಲ್ಯ, ಹುಳಿ, ಒಂದು ಗೊಜ್ಜು, ಚಿತ್ರಾನ್ನ, ಪಾಯಸ, ಒಂದು ಸ್ವೀಟು ತಾನೆ?’ ಎಂದು ಲೈಟಾಗಿ ತಗೊಂಡಳು.
ಆಗ ಗೆಳೆಯ ನಂ. 1ನ ಫೋನ್– ‘ಥ್ಯಾಂಕ್ಸ್ ಮಗಾ ಊಟಕ್ಕೆ ಕರೆದಿದ್ದು. ನಾನು ಸಕ್ಕರೆ ತಿನ್ನಲ್ಲಪ್ಪಾ, ಗಮನದಲ್ಲಿರಲಿ, ಮೇಡಂಗೂ ಹೇಳು’ ಎಂದ. ಈಗ ಸ್ವೀಟೂ ಬೆಲ್ಲದ್ದು ಮಾತ್ರ ಎಂದಾಯಿತು.
‘ಸರಿ ಬಿಡಿ, ಹೋಳಿಗೆ ಡಿಸೈಡೆಡ್. ಅದು ಪೂರ್ತಿ ಬೆಲ್ಲದ್ದು ತಾನೆ’ ಎಂದಳು ಮಡದಿ.
ಮತ್ತೆ ಮೊಬೈಲ್ ಸದ್ದು. ಕಿಟ್ಟೂ ಉವಾಚ– ‘ನಾನು ಅನ್ನ ತಿನ್ನಲ್ಲಪ್ಪ. ಮೆಡಿಕಲ್ ಅಡ್ವೈಸ್’.
ಸರಿ, ಇವನಿಗೆ ಚಪಾತಿ ಲಟ್ಟಿಸಬೇಕು ಅಂದುಕೊಳ್ಳುತ್ತಿದ್ದಂತೆ ಇನ್ನೊಂದು ಫೋನ್.
‘ಏನಪ್ಪಾ ನಿಂದೇನು ಕಂಡೀಷನ್?’ ಎಂದು ಡೈರೆಕ್ಟಾಗಿ ಕೇಳಿಯೇಬಿಟ್ಟೆ.
‘ನಾನು ಏನು ಬೇಕಾದರೂ ತಿಂತೀನಿ. ಆದರೆ ಒಂದು ಕಂಡೀಷನ್. ಅದು ಸಂಜೆ 6ರ ಒಳಗೆ’ ಎಂದಾಗ, ಇವನಿಗೆ ಮೊದಲು ಬಡಿಸಿ ನಂತರ ನಿಧಾನವಾಗಿ ಉಳಿದವರಿಗೆ ಎಲೆ ಹಾಕಬೇಕು ಅಂದುಕೊಂಡೆ.
‘ಅಲ್ರೀ ನಿಮ್ಮ ಗೆಳೆಯರಲ್ಲಿ ಯಾರೂ ಕೀಟೊ ಡಯಟ್ ಮಾಡ್ತಿಲ್ಲವೇನು?’ ಎಂದು ಕೇಳಿದಳು.
‘ಕೀಟೊ?’
‘ಮೊನ್ನೆ ನಮ್ಮ ಮಹಿಳಾ ಸಮಾಜದಲ್ಲಿ ಅದರ ಬಗ್ಗೆ ಚರ್ಚೆ ನಡೆಯಿತು. ನನಗಂತೂ ಅರ್ಥವಾಗಲಿಲ್ಲ. ಅದೇನೋ ನೋಡಿ. ನಿಮ್ಮಲ್ಲಿ ಯಾರೂ ಕೀಟೊದಾರಿಗರು ಇಲ್ಲ ತಾನೆ?’
‘ಇದುವರೆಗೂ ಯಾರೂ ಘೋಷಿಸಿಕೊಂಡಿಲ್ಲ’.
‘ಆಮೇಲೆ ಕೆಲವರು ಪ್ಯೂರ್ ಸ್ಟ್ರಿಕ್ಟ್ ವೆಗಾನ್ ಅಂತೆ, ಇನ್ನು ಕೆಲವರು ಡೈರಿ ಪದಾರ್ಥ ಮುಟ್ಟೊಲ್ಲವಂತೆ. ಅದೇನು ಡಯಟ್ ಪ್ರಜ್ಞೆನೋ ಏನೋ’ ಎಂದಳು.
ಹೊರಗಡೆ ಊಟಾನೇ ಮಾಡೋಲ್ಲ ಅಂತ ಎಲ್ಲರೂ ನಿರ್ಧರಿಸಿದರೆ ಸಲೀಸು ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.