ADVERTISEMENT

ಚುರುಮುರಿ | ಮಂತ್ರಿಗಳ ಮ್ಯಾರಥಾನ್!

ತುರುವೇಕೆರೆ ಪ್ರಸಾದ್
Published 26 ಅಕ್ಟೋಬರ್ 2024, 0:23 IST
Last Updated 26 ಅಕ್ಟೋಬರ್ 2024, 0:23 IST
   

‘ಲೇಯ್, ಪೇಪರ್ ನೋಡುದ್ರಾ? ಜಮ್ಮು ಕಾಶ್ಮೀರ ಸೀಎಂ ಒಮರ್ ಅಬ್ದುಲ್ಲಾ ಸಾಹೇಬ್ರು 54ನೇ ವಯಸ್ಸಲ್ಲಿ 21 ಕಿ.ಮೀ. ಮ್ಯಾರಥಾನ್ ಓಡಿ ಸೈ ಅನಿಸ್ಕೊಂಡವ್ರೆ’ ಎಂದ ಹರಟೆಕಟ್ಟೇಲಿ ಗುದ್ಲಿಂಗ.

‘ಊ ಕಣ್ಲಾ, ಎಲ್ಲಾ ಅಧಿಕಾರ ಸಿಕ್ಲಿ ಅಂತ ಓಡ್ತಾರೆ. ಆದ್ರೆ ಇವರು ಅಧಿಕಾರ ಬಂದ್ಮೇಲೆ ಮ್ಯಾರಥಾನ್ ಓಡವ್ರಲ್ಲ ಅದೇ ಗ್ರೇಟು ಕಣ್ಲಾ’ ಎಂದ ಮಾಲಿಂಗ.

‘ಬಹಳಷ್ಟು ಜನ ರಾಜಕೀಯದೋರ್ಗೆ ಇದೆಲ್ಲಾ ಆಗದಲ್ಲ ಹೋಗದಲ್ಲ ಬಿಡು. ಸಂಧಿವಾತ, ಮೂಳೆ ಸವೆತ, ಮೊಳೆ ಕೊರೆತ ಅಂತ ಪ್ರಕೃತಿ ಚಿಕಿತ್ಸಾ ಕೇಂದ್ರ ಸೇರ್ಕಂಡಿರ್ತಾರೆ’.

ADVERTISEMENT

‘ಅಂಗೆಲ್ಲ ನಮ್ ರಾಜಕೀಯದೋರನ್ನ ಅಂಡರ್ ಎಸ್ಟಿಮೇಟ್ ಮಾಡ್ಬೇಡ. ನಮ್ಮೋರು ಮೈಲಿಗಟ್ಲೆ ಪಾದಯಾತ್ರೆ ಮಾಡಕಿಲ್ವಾ?’ ಎಂದ ಕಲ್ಲೇಶಿ.

‘ಆಮೆ ನಡ್ದಂಗೆ ನಡ್ಕಂಡು ಓಗಾದು ದೊಡ್ದಲ್ಲ ಕಣ್ಲಾ? ಓಮರ್ ಅಂಗೆ ಮೊಲದ ತರ ಓಡ್ಬೇಕು’.

‘ಟಾರೇ ಇಲ್ಲದ ರಸ್ತೇಲಿ ಟಾರ್‍ಟಾಯ್ಸ್ ತರ ಓಡಕ್ಕಾಯ್ತದೇ ಹೊರತು ಮೊಲದ್ ತರ ಎಂಗ್ಲಾ ಓಡಕ್ಕಾಯ್ತದೆ’.

‘ಅದೂ ಅಲ್ದೆ ನಮ್ಮೋರು ನಿಧಾನವೇ ಪ್ರಧಾನ ಅಂತ ತಿಳ್ಕಂಡವ್ರೆ. ಅಂಗೆಲ್ಲಾ ಓಡಿ ಸುಮ್ನೆ ಗಾಳಿಗ್ ಗುದ್ ಮೈ ಯಾಕ್ ನೋವ್ ಮಾಡ್ಕಬೇಕು ಅಂತ’.

‘ಇರ್ಬೋದೇನೋ? ನಮ್ಮಲ್ಲಿ ಕೆಲವರು ಮ್ಯಾರಥಾನ್ ಓಡದೇ ಇದ್ರೂ ‘ಮ್ಯಾರಿ’ಥಾನ್ ಮಾಡವ್ರೆ ಕಣ್ಲಾ’.

‘ಮ್ಯಾರಿಥಾನ್ ಅಂದ್ರೆ ಏನ್ಲಾ?’

‘ಹೆಂಡ್ತಿ ಹಿಂದೆ ಓಡಾದು. ಅದ್ರಲ್ಲೂ ಕೆಲವರು ಇಬ್ರಿಬ್ಬ ಹಿಂದೆ ಓಡಿ ಹೈರಾಣಾಗಿರ್ತಾರೆ’.

‘ನೋಡಿ, ನಾನು ಯೋಳ್ತೀನಿ ಕೇಳಿ. ರಾಜಕೀಯದಲ್ಲಿ ತುಂಬಾ ಜನ ಭಾರ ಹಿಡ್ಕೊಂಡು ಓಡ್ಬೇಕು. ಆ ಜವಾಬ್ದಾರಿ ಇರುತ್ತಲ್ಲ!’

‘ಭಾರನಾ?’

‘ಅದೇ, ರಾಜಕೀಯ ಅಂದ್ಮೇಲೆ ನೋಟಿನ ಕಂತೆ ಇರೋ ಸೂಟ್ಕೇಸು, ಬ್ಯಾಗು ಎಲ್ಲಾ ಇರುತ್ವಲ್ಲ, ಅಂಥ ಭಾರ ಹೊತ್ಕಂಡು ಮ್ಯಾರಥಾನ್ ಓಡಕ್ಕಾಗುತ್ತಾ?’

‘ಅದೂ ನಿಜನೇ, ಅದಕ್ಕಿಂತ ದೊಡ್ದು ಒಂದಿದೆ. ಇಲ್ ತೊಡ್ರುಗಾಲ್ ಕೊಡೋರೂ ಜಾಸ್ತಿ. ಮ್ಯಾರಥಾನ್ ಇರ್‍ಲಿ, ವಿಧಾನಸೌಧದ ಕಾರಿಡಾರ್ ರನ್ನಿಗೂ ಬಿಡಲ್ಲ. ಏನಿದ್ರೂ ಟೆಂಪಲ್ ರನ್ ಅಷ್ಟೇ’ ಎಂದ ಪರ್ಮೇಶಿ. ಎಲ್ಲಾ ತಲೆಯಾಡಿಸಿ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.