ADVERTISEMENT

ಚುರುಮುರಿ: ಮತದಾರನ ಮೂಗುದಾರ

ಪ್ರಜಾವಾಣಿ ವಿಶೇಷ
Published 19 ಮೇ 2023, 20:35 IST
Last Updated 19 ಮೇ 2023, 20:35 IST
   

ನಾರಾಯಣ ರಾಯಚೂರ್

‘ಇವನಾರವ, ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ...’

‘ಏನ್ರೀ, ಇವತ್ತು ವಚನ ವಾಚನ ನಡೆಸಿದ್ದೀರಿ? ಇನ್ನೂ ನ್ಯೂಸ್ ಪೇಪರ್ ಬಂದಿಲ್ಲವೋ?’ ಕೈಹಿಡಿದವಳು ಕಾಲೆಳೆದಳು.

ADVERTISEMENT

‘ಇವತ್ತು ‘ಪ್ರಮಾಣವಚನ’ ಮುಹೂರ್ತದ ದಿನ ಕಣೇ. ಕಂಠೀರವ ಕ್ರೀಡಾಂಗಣ ಕಿಕ್ಕಿರಿದು ತುಂಬಲಿದೆ. ನಾಲ್ಕು ದಿವಸ ನಡೆದ ಕುಸ್ತಿ, ಹಗ್ಗ ಜಗ್ಗಾಟ, ಡಿಶುಂ ಡಿಶುಂ ಎಲ್ಲ ಮುಗಿದು, ಕಗ್ಗಂಟು, ಕಗ್ಗಂಟು ಅಂತ ಟೀವಿಲಿ ತೋರಿಸ್ತಾ ಇದ್ದರಲ್ಲ, ಆ ಕಗ್ಗಂಟೀಗ ಕರಗಿ ಕರದಂಟು ಆಗಿದೆ’.

‘ಇನ್ನೇನು ಉಚಿತ ಕರೆಂಟು ಹರಿಯೋದು ಬಾಕಿ!’

‘ಅದೂ ಆಗೋದು ಗ್ಯಾರಂಟಿ, ಪ್ರಮಾಣವಚನ ಮುಗೀತಿದ್ದಂಗೇ ಕ್ಯಾಬಿನೆಟ್ ಮೀಟಿಂಗ್‌ ಮಾಡಿ ಆದೇಶ ಹೊರಡಿಸಿಯೇ ಬಿಡ್ತಾರಂತೆ’.

‘ಅಂತೂ ಮತದಾರ ಎಷ್ಟು ‘ಪವರ್‌’ಫುಲ್ ಅಂತ ತೋರಿಸಿಯೇ ಬಿಟ್ಟ ನೋಡಿ. ಅವನು ನೋಡ್ತಾನೆ, ಅಧಿಕಾರ ಚೆನ್ನಾಗಿ ನಡೆಸಿದರೆ ಇನ್ನೊಂದು ಅವಕಾಶ, ಇಲ್ಲಾಂದ್ರೆ ಇನ್ನೊಬ್ಬರಿಗೆ ಅವಕಾಶ, ಅಂತೂ ಚೇಂಜ್ ಮಾಡ್ತಾನೇ ಇರ್ತಾನೆ, ಹೆಂಚಿನ ಮೇಲಿನ ದೋಸೆ ಮಗುಚಿ ಹಾಕಿದ ಹಾಗೆ’.

‘ಈಗ ಜ್ಞಾಪಕ ಬಂತು, ಪಕ್ಷದ ಸ್ಟಾರ್‌ ಪ್ರಚಾರಕರೊಬ್ಬರು ಮೈಸೂರಿನ ಹೋಟೆಲ್ಲಿಗೆ ಹೋಗಿ ದೋಸೆ ಮಗುಚಿ ಹಾಕೋ ದೃಶ್ಯ ಟೀವಿಲಿ, ಸಾಮಾಜಿಕ ಜಾಲತಾಣದಲ್ಲಿ ಬಂದಿತ್ತಲ್ಲ’.

‘ಓಹ್, ಹಾಗೋ ಇದು?!’

‘ಲಕ್ಷಾಂತರ ಜನ ಸೇರಿಬಿಟ್ಟರು ಅಂತ ಮೈಮರೆಯೋಹಾಗಿಲ್ಲ, ಮತದಾರನ ಮನಸ್ಸು ಗೆಲ್ಲಬೇಕು. ಅವನ ಅಂತರಂಗ ಅರಿಯೋದೇ ಕಷ್ಟ. ಅವನ ಬೆರಳ ತುದಿಗೆ ಇರೋ ತಾಕತ್ತು, ದಮ್ಮು ಫಲಿತಾಂಶ ಬಂದಾಗ ಕಣ್ಣಿಗೇ ರಾಚುತ್ತೆ. ಮತದಾರ ಅಂದ್ರೆ ಅವನ ಬಳಿ ಇರೋದು ಸಾಮಾನ್ಯ ದಾರ ಅಲ್ಲ, ಅದು ಆಳುವವರನ್ನ ನಿಯಂತ್ರಿಸೋ ಮೂಗುದಾರ. ಅದು ಎಳೆದಲ್ಲಿಗೆ ಹೋಗಬೇಕು, ಹೇಳಿದ್ದು ಕೇಳಬೇಕು. ಎಂಥ ಶಕ್ತಿ ಅಲ್ಲವಾ ಪ್ರಜಾಪ್ರಭುತ್ವದ್ದು?!

‘ಹೊಸಬರೂ ಅಷ್ಟೇ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇವತ್ತಿನ ಮತದಾರ, ಅಮೃತ ಮಹೋತ್ಸವ ಆಚರಿಸ್ಕೊಂಡಿರೋ ಪ್ರಬುದ್ಧ. ಅವನು ಒತ್ತುವ ಬಟನ್, ‘ಆನ್ ಆ್ಯಂಡ್ ಆಫ್’ ಎರಡನ್ನೂ ಮಾಡಬಲ್ಲದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.