‘ಪಾಕಿಸ್ತಾನದಲ್ಲಿ ರೆಸಾರ್ಟ್‌ಗಳಿಲ್ಲವ ಬಾಸೂ?’ ಎಂದ ಗೆಳೆಯ. ‘ಏಕಯ್ಯಾ, ಪ್ರವಾಸ ಹೊರಟಿದ್ದೀಯೇನು?’ ಎಂದು ಕೇಳಿದೆ.
‘ಇಲ್ಲ ಬಾಸೂ. ರೆಸಾರ್ಟ್ ನನಗಲ್ಲ. ಇಮ್ರಾನ್, ನವಾಜ್ ಷರೀಫ್ ಮುಂತಾದವರಿಗೆ’ ಎಂದಾಗ ಅವನ ತರ್ಕ ಅರ್ಥವಾಗಲಿಲ್ಲ. ಹುಬ್ಬೇರಿಸಿದೆ.
‘ಅದೇ ಬಾಸೂ. ಅಲ್ಲಿ ಚುನಾವಣೆ ನಡೆದಿದೆ. ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಎಲ್ಲರೂ ನಮ್ಮದೇ ಮೆಜಾರಿಟಿ ಅಂತಿದಾರೆ...’
‘ಸರಿ. ಅದಕ್ಕೆ ರೆಸಾರ್ಟ್ ಯಾಕೆ ಬೇಕು?’
‘ಏನ್ ಬಾಸೂ ಹೀಗೆ ಕೇಳ್ತಿದೀರ? ನಮ್ಮಲ್ಲಿ ಆಗುವ ಹಾಗೆ ಅಲ್ಲೂ ರೆಸಾರ್ಟ್ ರಾಜಕಾರಣ ನಡೆಯೋಲ್ಲವೆ?’ ಎಂದು ಕೇಳಿದಾಗ ನನಗೆ ಅವನ ಮಾತಿನ ಅರ್ಥವಾಯಿತು.
‘ನಮ್ಮಲ್ಲಿ ಪಕ್ಷಗಳು ಚುನಾವಣೇಲಿ ಗೋಲ್‍ಮಾಲ್ ನಡೆದಿದೆ ಎಂದು ಬೊಬ್ಬಿರಿಯುವಂತೆ ಅಲ್ಲೂ ದೂರುಗಳು ಕೇಳಿಬರುತ್ತಿವೆ. ಗೆದ್ದವರನ್ನು ಒಂದು ಕಡೆ ಕೂಡಿಹಾಕಲು ರೆಸಾರ್ಟ್‌ಗಳು ಬೇಡವೇ? ಅದಕ್ಕೇ ಕೇಳಿದೆ’.
‘ಛೆಛೆ ನಾವು ಮಾಡಿದ್ದೇ ಅವರೂ ಮಾಡ್ತಾರೆ ಅಂತ ಹೇಗೆ ಹೇಳ್ತೀಯ?’
‘ನಮ್ಮಿಂದ ಕಲಿಯುವುದು ಸುಲಭ. ಪರಿಸ್ಥಿತಿ ನೆಟ್ಟಗಿದ್ದಿದ್ದರೆ ನಮ್ಮಿಂದ ಕೆಲವು ಎಕ್ಸ್‌ಪರ್ಟ್‌ಗಳು ಈಗಾಗಲೇ ಅಲ್ಲಿಗೆ ಹೋಗಿ, ಯಾರು ಬೇಕೋ ಅವರನ್ನು, ಹೇಗೆ ಬೇಕೋ ಹಾಗೆ ನಿಭಾಯಿಸಿ ಸರ್ಕಾರ ರಚಿಸಲು ಸಹಾಯ ಮಾಡುತ್ತಿದ್ದರು. ಕರ್ನಾಟಕ, ಬಿಹಾರ ಇಲ್ಲೆಲ್ಲ ಇಂತಹ ಪರಿಣತರು ಇಲ್ವೆ?’ ಎಂದಾಗ ಮುಂಬೈ ಪಂಚತಾರಾ ಹೋಟೆಲ್, ಈಗಲ್‍ಟನ್ ರೆಸಾರ್ಟ್ ಮುಂತಾದವೆಲ್ಲ ನೆನಪಿಗೆ ಬಂದವು.
‘ಸೈನ್ಯದವರು ಇದಕ್ಕೆಲ್ಲ ಅವಕಾಶ ಕೊಡಲ್ಲ’.
‘ಅಂದರೆ, ಗೆದ್ದ ಸಂಸದರಲ್ಲಿ ತಮಗೆ ಬೇಕಾದವರನ್ನು ಸೈನ್ಯದವರೇ ಬ್ಯಾರಕ್‍ಗಳಲ್ಲಿ ಹಿಡಿದು ಇಟ್ಟುಕೊಳ್ತಾರೇನು?’
‘ಅದಿನ್ನೂ ಆದ ಹಾಗೆ ಕಾಣ್ತಿಲ್ಲ. ಆದರೆ ಅಲ್ಲಿ ಸೈನ್ಯವೇ ಚುನಾವಣಾ ಆಯೋಗ...’
‘ಅದ್ಹೇಗೆ ಸಾಧ್ಯ ಬಾಸೂ?’
‘ನೀನು ಕೇಳಿಲ್ಲವೇನು? ಆಲ್ ಕಂಟ್ರೀಸ್ ಹ್ಯಾವ್ ಆ್ಯನ್ ಆರ್ಮಿ, ಬಟ್ ಇನ್ ಪಾಕಿಸ್ತಾನ್ ಆರ್ಮಿ ಹ್ಯಾಸ್ ಎ ಕಂಟ್ರಿ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.